ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19ಕ್ಕೆ ‘ನಮ್ಮ ಕಾಂಗ್ರೆಸ್’ ಪಕ್ಷ ಉದ್ಘಾಟನೆ

Last Updated 6 ಡಿಸೆಂಬರ್ 2017, 7:21 IST
ಅಕ್ಷರ ಗಾತ್ರ

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ವರ್ಗವನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಶಾಸಕ ವರ್ತೂರು ಪ್ರಕಾಶ್‌ ಆರೋಪಿಸಿದರು. ‘ಕಾಂಗ್ರೆಸ್ ಅಧಿಕಾರಕ್ಕೆ ತಂದವರನ್ನು ಮರೆತು, ಶೋಷಿತ ಸಮುದಾಯದ ನಾಯಕರಾದ ಎಚ್‌.ವಿಶ್ವನಾಥ್‌, ಶ್ರೀನಿವಾಸ ಪ್ರಸಾದ್‌, ಸತೀಶ್‌ ಜಾರಕಿಹೊಳಿ ಅವರನ್ನು ಮೂಲೆ ಗುಂಪು ಮಾಡಿದರು. ಅವರ ನಡವಳಿಕೆ ಅಹಿಂದ ವಿರುದ್ಧ ಇದೆ. ರಾಜ್ಯದ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಕುರುಬ ಸಮಾಜದವರಿಗೆ ಸಚಿವ ಸ್ಥಾನ ನೀಡಲಿಲ್ಲ. ಸರ್ಕಾರದ ಆಡಳಿತ ಅವಧಿ ಮುಗಿಯವಾಗ ಎಚ್‌.ಎಂ.ರೇವಣ್ಣ ಅವರಿಗೆ ಸಚಿವ ಸ್ಥಾನ ನೀಡಿ, ಪ್ರಮುಖವಲ್ಲದ ಸಾರಿಗೆ ಖಾತೆ ನೀಡಲಾಗಿದೆ. ನೀರಾವರಿ ಅಥವಾ ನಗರಾಭಿವೃದ್ಧಿ ಖಾತೆ ನೀಡಬೇಕಿತ್ತು’ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಚುನಾವಣಾ ಪೂರ್ವ ಭರವಸೆ ಈಡೇರಿಸಿದ್ದೇವೆ, ನುಡಿದಂತೆ ನಡೆದಿದ್ದೇವೆ ಎಂದು ಕಾಂಗ್ರೆಸ್‌ ನಾಯಕರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಕುರುಬ ಸಮಾಜವನ್ನು ಎಸ್‌.ಟಿ ಗೆ ಸೇರಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಈಗ ಮನವಿ ಕೊಡಲು ಬಂದವರನ್ನೇ ಬೆದರಿಸುತ್ತಿದ್ದಾರೆ. ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಮುಳುಗಲಿದೆ. ಕೋಮುವಾದಿ ಪಕ್ಷ ಬಿಜೆಪಿ ಸಹ ಅಧಿಕಾರಕ್ಕೆ ಬರುವುದಿಲ್ಲ’ ಎಂದು ವ್ಯಂಗ್ಯವಾಡಿದರು.

ಡಿ. 19 ರಂದು ಕೂಡಲಸಂಗಮದಲ್ಲಿ ‘ನಮ್ಮ ಕಾಂಗ್ರೆಸ್’ ಪಕ್ಷ ಉದಯವಾಗಲಿದೆ. ರಾಜ್ಯದ 6 ಲಕ್ಷ ಜನರು ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಜಿಲ್ಲೆಯಿಂದ 20 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ. ಮುಂದಿನ ಚುನಾವಣೆಯಲ್ಲಿ 30 ಕಡೆ ಸ್ಪರ್ಧೆ ಮಾಡಲಾಗುವುದು. ಹಾಸನ ಜಿಲ್ಲೆಯಲ್ಲಿ ಅರಕಲಗೂಡು ಮತ್ತು ಹೊಳೆನರಸೀಪುರ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. 15 ಕ್ಕೂ ಹೆಚ್ಚು ಕಡೆ ಗೆಲ್ಲುವ ವಿಶ್ವಾಸ ಇದೆ. ಹೊಸ ಸರ್ಕಾರ ರಚನೆಯಲ್ಲಿ ಪಕ್ಷ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಭವಿಷ್ಯ ನುಡಿದರು.

ಬಿಜೆಪಿಗೆ ಅಭಿವೃದ್ಧಿ ಬೇಕಿಲ್ಲ. ದೇವಸ್ಥಾನ, ಧರ್ಮಗಳ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಆದ್ದರಿಂದ ಹೊಸ ಪಕ್ಷ ಕಟ್ಟಲು ಮುಂದಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

‘ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಅನೇಕ ರಾಜಕೀಯ ಪಕ್ಷಗಳು ಹುಟ್ಟುತ್ತಿವೆ. ಆದರೆ, ಅವು ನಾಲ್ಕು ಗೋಡೆಯ ಮಧ್ಯೆ ಉದ್ಘಾಟನೆ ಆಗಿವೆ. ನಮ್ಮದು ಕೂಡಲಸಂಗಮದ ಬಯಲು ಪ್ರದೇಶದಲ್ಲಿ ಪಕ್ಷ ಉದ್ಘಾಟನೆ ಮಾಡುತ್ತಿದ್ದೇನೆ’ ಎಂದರು.

‘ಆರಂಭದಲ್ಲಿ ಬಿಜೆಪಿ 2 ಮತ್ತು ಜೆಡಿಎಸ್ 1 ಸ್ಥಾನ ಗೆದ್ದು ರಾಜಕೀಯ ಪ್ರವೇಶಿಸಿದವು. ನಮ್ಮ ಪಕ್ಷವು ಕೂಡ ಕಡಿಮೆ ಸಂಖ್ಯೆಯಿಂದ ಭವಿಷ್ಯದಲ್ಲಿ ಬೃಹದಾಕಾರವಾಗಿ ಬೆಳೆಯಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

* * 

ಜಾತಿ ಬೆಂಬಲ ಇಲ್ಲದೆ ಪಕ್ಷ ಕಟ್ಟಿದ ಬಹುತೇಕ ನಾಯಕರು ಸೋತು ಹೋದರು
ವರ್ತೂರು ಪ್ರಕಾಶ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT