ಗುರುವಾರ , ಮಾರ್ಚ್ 4, 2021
30 °C

ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಪಟ್ಟಣ ಸಜ್ಜು

ಸಿದ್ದರಾಜು Updated:

ಅಕ್ಷರ ಗಾತ್ರ : | |

ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಪಟ್ಟಣ ಸಜ್ಜು

ಚನ್ನರಾಯಪಟ್ಟಣ: ಮಕ್ಕಳಲ್ಲಿರುವ ಸಾಹಿತ್ಯ ಅಭಿರುಚಿ, ಆಸಕ್ತಿ ಮೂಡಿಸುವ ದೃಷ್ಟಿಯಿಂದ ಡಿ. 6, 7ರಂದು ಹಮ್ಮಿಕೊಂಡಿರುವ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಪಟ್ಟಣ ಸಜ್ಜುಗೊಂಡಿದೆ.

ಸಮ್ಮೇಳನ ನಡೆಯುವ ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ 3 ಸಾವಿರ ಜನ ಕುಳಿತುಕೊಳ್ಳಲು ಅವಕಾಶವಾಗುವಂತೆ ಪೆಂಡಾಲ್‌ ನಿರ್ಮಿಸಲಾಗಿದೆ. ದೂಳು ಏಳದಂತೆ ನೆಲಕ್ಕೆ ಕಾರ್ಪೆಟ್‌ ಹಾಸಲಾಗಿದೆ.

80 ಪುಸ್ತಕ ಮಳಿಗೆಗಳನ್ನು ನಿರ್ಮಿಸಲಾಗಿದೆ. ಚಿತ್ರಕಲೆ, ಕರಕುಶಲ ಪ್ರದರ್ಶನಕ್ಕೆ ಮಳಿಗೆ ನೀಡಲಾಗಿದೆ. ಮಾಧ್ಯಮಿಕ ಶಾಲಾ ಆವರಣದ ಬಲಭಾಗದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಪಟ್ಟಣದ ಮುಖ್ಯರಸ್ತೆ ಹಾಗೂ ಕೆ.ಆರ್‌. ವೃತ್ತದಲ್ಲಿ ಕನ್ನಡ ಬಾವುಟಗಳು ರಾರಾಜಿಸುತ್ತಿವೆ.

ಸಮ್ಮೇಳನದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಸಾಹಿತಿಗಳಾದ ಡಾ.ಸಿದ್ದಲಿಂಗಯ್ಯ, ದೊಡ್ಡರಂಗೇಗೌಡ, ಸುಬ್ಬು ಹೊಲೆಯಾರ್, ಶಾಸಕರಾದ ಸಿ.ಎನ್‌.ಬಾಲಕೃಷ್ಣ, ಎಂ.ಎ. ಗೋಪಾಲಸ್ವಾಮಿ ಭಾಗವಹಿಸುವರು.

ಬುಧವಾರ ಬೆಳಿಗ್ಗೆ ಸಮ್ಮೇಳನಾಧ್ಯಕ್ಷೆ ಎಚ್‌.ವಿ.ಚಂದನಾ ಅವರನ್ನು ಜಾನಪದ ಕಲಾತಂಡಗಳೊಂದಿಗೆ ಪಟ್ಟಣದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಗುವುದು. ಸಮ್ಮೇಳನದ ಸಹ ಅಧ್ಯಕ್ಷರಾಗಿ ಜಿ.ಜೆ.ಯಶವಂತ್‌, ಬಿ.ಜಿ. ಸುಹಾಸ್‌, ಸಿ.ಎಚ್‌.ಕಾವ್ಯಾಶ್ರೀ, ಡಿ.ಎಸ್‌.ನಿಸರ್ಗಾ ಆಯ್ಕೆಯಾಗಿದ್ದಾರೆ. ಮೆರವಣಿಗೆಯಲ್ಲಿ 10 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ.

ಒಒಡಿ ಸೌಲಭ್ಯ: ಸಮ್ಮೇಳನದಲ್ಲಿ ಭಾಗವಹಿಸುವ ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು, ಪ್ರೌಢಶಾಲಾ ಶಿಕ್ಷಕರಿಗೆ ಎರಡು ದಿನಗಳ ಒಒಡಿ ಸೌಲಭ್ಯ ನೀಡಲಾಗುವುದು ಎಂದು ಸಂಘಟಕರು ತಿಳಿಸಿದರು.

ಗಣ್ಯರು, ಅತಿಥಿಗಳಿಗೆ ಕೊಬ್ಬರಿ, ಬೆಲ್ಲ : ಸಮ್ಮೇಳನದಲ್ಲಿ ಭಾಗವಹಿಸಲಿರುವ ಗಣ್ಯರು, ಅತಿಥಿಗಳಿಗೆ ಕಲ್ಪತರು ನಾಡಿನ ಸಂಪ್ರದಾಯದಂತೆ ಕೊಬ್ಬರಿ, ಬೆಲ್ಲ, ಕಬ್ಬನ್ನು ಉಡುಗೊರೆಯಾಗಿ ನೀಡಲಾಗುವುದು. ಇದಕ್ಕಾಗಿ ಎಪಿಎಂಸಿ ವತಿಯಿಂದ 300 ಬುಟ್ಟಿಗಳನ್ನು ತಯಾರಿಸಲಾಗಿದೆ. ವೇದಿಕೆಯಲ್ಲಿನ ಗಣ್ಯರಿಗೆ, ಅತಿಥಿಗಳಿಗೆ ನೆನಪಿನ ಕಾಣಿಕೆ ಜತೆಗೆ ಸಸಿಗಳನ್ನು ವಿತರಣೆ ಮಾಡುವ ಮೂಲಕ ಪರಿಷತ್ತು ಪರಿಸರ ಕಾಳಜಿ ಮೆರೆಯಲಿದೆ. 2ನೇ ದಿನದ ಸಮ್ಮೇಳದಲ್ಲಿ ಭಾಗವಹಿಸುವ ಎಲ್ಲ ಮಕ್ಕಳಿಗೆ ಉಚಿತವಾಗಿ ಸಸಿ ವಿತರಣೆ ಮಾಡಲಾಗುವುದು ಎಂದು ಪರಿಸರವಾದಿ, ಮಕ್ಕಳ ಸಾಹಿತ್ಯ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎನ್‌.ಅಶೋಕ್‌ ಹೇಳಿದರು.

ಎರಡು ದಿನ ಸಾಹಿತ್ಯ ಕ್ಷೇತ್ರದ ದಿಗ್ಗಜರ ಜೊತೆಗೆ ಮಕ್ಕಳ ಕಲರವ ಕಂಡುಬರಲಿದೆ. ಸಾಹಿತ್ಯಾಸಕ್ತರಿಗೆ ಸಾಹಿತ್ಯದ ರಸದೌತಣ ಸಿಗಲಿದೆ. ಪ್ರಧಾನ ವೇದಿಕೆಗೆ ರಾಷ್ಟ್ರಕವಿ ಕುವೆಂಪು, ಮುಖ್ಯದ್ವಾರಕ್ಕೆ ಬಾಹುಬಲಿ ಹೆಸರಿಡಲಾಗಿದೆ.

ಮಕ್ಕಳ ಸಾಹಿತ್ಯ ಪರಿಷತ್ತಿಗೆ ಭದ್ರ ಬುನಾದಿ : ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಲು 2012ರಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತನ್ನು ಚನ್ನರಾಯಪಟ್ಟಣದಲ್ಲಿ ಆರಂಭಿಸಲಾಯಿತು. ಮನೆ–ಮನ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳಲ್ಲಿರುವ ಸಂಗೀತ, ಸಾಹಿತ್ಯ, ಕಲೆ ಹೊರಹೊಮ್ಮಲು ಸೂಕ್ತ ವೇದಿಕೆ ಕಲ್ಪಿಸಲಾಯಿತು. ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಶಾಲೆಗಳಲ್ಲಿ ಮಕ್ಕಳ ಚಾವಡಿ ಕಾರ್ಯಕ್ರಮ ಹಮ್ಮಿಕೊಂಡು ದೇಸಿ ಆಟಗಳಾದ ಚಿನ್ನಿದಾಂಡು, ಲಗೋರಿ, ಹಗ್ಗಜಗ್ಗಾಟ ಸೇರಿ ಅನೇಕ ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ನೀಡಲಾಯಿತು. ಜಾನಪದ ಕಲೆಗೆ ಮಹತ್ವ ನೀಡಲಾಯಿತು. 2014 ಫೆಬ್ರುವರಿಯಲ್ಲಿ ಚನ್ನರಾಯಪಟ್ಟಣದಲ್ಲಿ ತಾಲ್ಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು. ರಾಜ್ಯಮಟ್ಟದ ಸಮ್ಮೇಳನದಂತೆ ಇದು ಭಾಸವಾಯಿತು. ಸಾಹಿತ್ಯಾಸಕ್ತರ ಮೆಚ್ಚುಗೆ ಗಳಿಸಿತು.

2017 ಫೆಬ್ರುವರಿಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಹಯೋಗದೊಂದಿಗೆ ಹಾಸನದಲ್ಲಿ ಎರಡು ದಿನಗಳ ಕಾಲ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ ಜರುಗಿತು.

ಕಳೆದ ಆಗಸ್ಟ್‌ ತಿಂಗಳಲ್ಲಿ ತುಮಕೂರು ನಗರದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಿದ ಕೀರ್ತಿ ಮಕ್ಕಳ ಸಾಹಿತ್ಯ ಪರಿಷತ್ತಿಗೆ ಸಲ್ಲುತ್ತದೆ. ಎಲ್ಲ 30 ಜಿಲ್ಲೆಗಳಲ್ಲಿ ಜಿಲ್ಲಾ ಘಟಕಗಳು ಅಸ್ತಿತ್ವಕ್ಕೆ ಬಂದಿವೆ. 175 ತಾಲ್ಲೂಕುಗಳ ಪೈಕಿ ಬಹುತೇಕ ಕಡೆಗಳಲ್ಲಿ ತಾಲ್ಲೂಕು ಘಟಕಗಳನ್ನು ರಚಿಸಲಾಗಿದೆ ಎನ್ನುತ್ತಾರೆ ಮಕ್ಕಳ ಸಾಹಿತ್ಯ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎನ್‌.ಅಶೋಕ್.

ಚನ್ನರಾಯಪಟ್ಟಣ: ‘ನನ್ನ’ ಅಚ್ಚುಮೆಚ್ಚಿನ ಸಾಹಿತಿ ಜೊತೆ ವೇದಿಕೆ ಹಂಚಿ ಕೊಳ್ಳುತ್ತಿರುವುದು ಸಂತಸ ನೀಡಿದೆ. 2015ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಸಾಹಿತಿ ಡಾ.ಸಿದ್ದಲಿಂಗಯ್ಯ ಅವರ ಭಾಷಣ ಕೇಳಿದ್ದೆ. ಆದರೆ ಇಂದು ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆಯಾಗಿ ಅವರ ಜತೆ ಚನ್ನರಾಯಪಟ್ಟಣದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವುದು ನನ್ನ ಸೌಭಾಗ್ಯ ಎಂದು ಎಚ್‌.ವಿ. ಚಂದನಾ ಮಂಗಳವಾರ ಪ್ರಜಾವಾಣಿಯೊಂದಿಗೆ ಸಂತಸ ಹಂಚಿಕೊಡರು.

ಅವರು ಹಾಸನದಲ್ಲಿರುವ ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 7ನೇ ತರಗತಿಯಲ್ಲಿದ್ದಾಗಲೇ ಕವನ ರಚಿಸುವುದನ್ನು ಕಲಿತೆ. ಪ್ರೌಢಶಾಲೆಯಲ್ಲಿದ್ದಾಗ ಶಿಕ್ಷಕರು ನೀಡಿದ ಪ್ರೋತ್ಸಾಹದಿಂದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನದಂದು ಭಾಷಣ ಮಾಡುವುದನ್ನು ಕಲಿತುಕೊಂಡೆ. ‘ನಾನು’ ಸಮ್ಮೇಳಾಧ್ಯಕ್ಷೆಯಾಗಿ ಆಯ್ಕೆಯಾಗಲು ಇವೆರಡು ಪ್ರಮುಖ ಪಾತ್ರ ವಹಿಸಿತು ಎಂದರು.

ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರೂ ಸಾಹಿತ್ಯದಲ್ಲಿ ಆಸಕ್ತಿ ಇದೆ. ಭವಿಷ್ಯದಲ್ಲಿ ಯಾವುದೇ ಹುದ್ದೆ ಸಿಕ್ಕಿದರೂ ಸಾಹಿತ್ಯ ಸೇವೆ ಮುಂದುವರಿಸುವೆ ಎಂದು ಹೇಳಿದ ಅವರು, ಈ ನಿಟ್ಟಿನಲ್ಲಿ ತಂದೆ ಎಚ್‌.ಎಸ್‌.ವೆಂಕಟೇಶ್‌, ತಾಯಿ ಪೂರ್ಣಿಮಾ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಕುವೆಂಪು ವೇದಿಕೆ): ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ; ಧ್ವಜಾರೋಹಣ– ಶಾಸಕ ಸಿ.ಎನ್‌.ಬಾಲಕೃಷ್ಣ, ಕನ್ನಡ ಧ್ವಜಾರೋಹಣ– ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌. ನಾಗರಾಜು, ಮಕ್ಕಳ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ– ರಾಜ್ಯ ಘಟಕ ಅಧ್ಯಕ್ಷ ಸಿ.ಎನ್‌.ಅಶೋಕ್‌. ಮಾಧ್ಯಮಿಕ ಶಾಲಾ ಆವರಣ. ಬೆಳಿಗ್ಗೆ 8.30.

ಸಮ್ಮೇಳನಾಧ್ಯಕ್ಷರ ಮೆರವಣಿಗೆ: ಚಾಲನೆ– ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ. ಎಪಿಎಂಸಿ ಆವರಣ. ಬೆಳಿಗ್ಗೆ 9.30. ಉದ್ಘಾಟನಾ ಸಮಾರಂಭ: ಸಾನ್ನಿಧ್ಯ– ಆದಿಚುಂಚನಗಿರಿ ಮಠಾಧೀಶ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ. ಸ್ಮರಣ ಸಂಚಿಕೆ ಬಿಡುಗಡೆ– ಆದಿಚುಂಚನಗಿರಿ ಶಾಖಾಮಠಾಧೀಶ ಶಂಭುನಾಥ ಸ್ವಾಮೀಜಿ, ಕವನ ಸಂಕಲನ ಬಿಡುಗಡೆ– ಸಾಹಿತಿ ಡಾ.ಸಿದ್ದಲಿಂಗಯ್ಯ. ಚಿತ್ರಕಲಾ ಪ್ರದರ್ಶನದ ಉದ್ಘಾಟನೆ– ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಸಮ್ಮೇಳನಾಧ್ಯಕ್ಷರ ಭಾಷಣ– ಎಚ್‌.ವಿ.ಚಂದನಾ. ಅತಿಥಿಗಳು– ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಡಾ.ಆರ್‌.ಕೆ.ನಲ್ಲೂರು ಪ್ರಸಾದ್‌, ಸಮ್ಮೇಳನದ ಸಹ ಅಧ್ಯಕ್ಷರು ಜಿ.ಜೆ.ಯಶವಂತ್‌, ಬಿ.ಜಿ.ಸುಹಾಸ್‌, ಸಿ.ಎಚ್‌.ಕಾವ್ಯಾ, ಡಿ.ಎಸ್‌.ನಿಸರ್ಗಾ. ಅಧ್ಯಕ್ಷತೆ–ಶಾಸಕ ಸಿ.ಎನ್‌.ಬಾಲಕೃಷ್ಣ. ಮಾಧ್ಯಮಿಕ ಶಾಲಾ ಆವರಣ. ಬೆಳಿಗ್ಗೆ 11

ವಿಚಾರಗೋಷ್ಠಿ 1: ಪರಿಸರ ಸಂರಕ್ಷಣೆಯಲ್ಲಿ ಶಿಕ್ಷಣ ಮತ್ತು ಯುವಜನತೆ, ಮಕ್ಕಳ ಸೃಜನಶೀಲತೆಯಲ್ಲಿ ಸಮೂಹ ಮಾಧ್ಯಮಗಳ ಮಹತ್ವ. ವಿಷಯ ಮಂಡನೆ– ಉಲ್ಲಾಸ್‌, ಮಧುಶ್ರೀ, ಹಿಮಾ ಎ.ಬಿ, ಸಾನ್ವಿ, ಅತಿಥಿಗಳು – ಪತ್ರಕರ್ತ ಆರ್‌.ಪಿ. ವೆಂಕಟೇಶಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್‌.ಎಸ್‌.ವಿಜಯಕುಮಾರ್‌. ಅಧ್ಯಕ್ಷತೆ– ಸಿ.ಎಚ್‌. ಕಾವ್ಯಾಶ್ರೀ, ಮಧ್ಯಾಹ್ನ 2.

ವಿಚಾರಗೋಷ್ಠಿ 2: ಮಕ್ಕಳ ಸಾಹಿತ್ಯ ಮತ್ತು ಮೌಲ್ಯಗಳು: ವಿಷಯ ಮಂಡನೆ– ಟಿ.ಎಸ್‌.ಕಾವ್ಯಾ, ವಿ. ಪದ್ಮಪ್ರಿಯಾ. ಅತಿಥಿಗಳು– ಸಾಹಿತಿ ಸುಬ್ಬು ಹೊಲೆಯಾರ್‌. ಹೊಳೆನರಸೀಪುರ ಕ್ಷೇತ್ರಶಿಕ್ಷಣಾಧಿಕಾರಿ ಹೊನ್ನೇಶ್‌. ಅಧ್ಯಕ್ಷತೆ– ಬಿ.ಜಿ.ಸುಹಾಸ್‌ ಮಧ್ಯಾಹ್ನ 3.30. ಸಾಂಸ್ಕೃತಿಕ ಕಾರ್ಯಕ್ರಮ: ಡ್ರಾಮಾ ಜೂನಿಯರ್ಸ್‌ ಕಲಾವಿದರಿಂದ ಹಾಗೂ ಕಿರುತೆರೆ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ. ಸಂಜೆ 5.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.