ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋಮುವಾದಿ ಬಿಜೆಪಿ ಪರಿವರ್ತನೆಗೊಳ್ಳಲಿ’

Last Updated 6 ಡಿಸೆಂಬರ್ 2017, 7:31 IST
ಅಕ್ಷರ ಗಾತ್ರ

ಹಿರೇಕೆರೂರ: ಪರಿವರ್ತನಾ ಯಾತ್ರೆಯ ಮೂಲಕ ಕೋಮುವಾದಿ ಬಿಜೆಪಿಯು ಜನಪರ ಹಾಗೂ ಜಾತ್ಯತೀತವಾಗಿ ಪರಿವರ್ತನೆಗೊಳ್ಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇಲ್ಲಿ ಮಂಗಳವಾರ ಕಾಂಗ್ರೆಸ್‌ ಕಾರ್ಯಕರ್ತರ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹಾಗೂ ಸಂಸದ ಪ್ರತಾಪ ಸಿಂಹನ ಪರಿವರ್ತನೆಗೊಳ್ಳಬೇಕು. ಯಡಿಯೂರಪ್ಪ ಮೂರೇ ವರ್ಷದಲ್ಲಿ ರಾಜೀನಾಮೆ ನೀಡಿದ ವಿಚಾರ ಜನರಿಗೆ ತಿಳಿಸಬೇಕು. ಅದರ ಬದಲಾಗಿ, ಢೋಂಗಿ ಪರಿವರ್ತನಾ ರ‍್ಯಾಲಿ ಹಮ್ಮಿಕೊಂಡು ಪ್ರಯೋಜನ ಇಲ್ಲ’ ಎಂದು ಕುಟುಕಿದರು.

‘ಗಣಿಗಾರಿಕೆ ಲೂಟಿ ಹೊಡೆದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಜೈಲಿಗೆ ಹೋದರು. ಇದು ಕರ್ನಾಟಕದ ಇತಿಹಾಸದಲ್ಲೇ ಮೊದಲು’ ಎಂದ ಅವರು, ‘ಅವರೀಗ ಸೈಕಲ್‌ ಕೊಟ್ಟೆ, ಸೀರೆ ಕೊಟ್ಟೆ ಎನ್ನುತ್ತಾರೆ. ಅದನ್ನು ಬಿಟ್ಟರೆ ಜೈಲಿಗೆ ಹೋಗಿದ್ದಾರೆ’ ಎಂದರು.

‘ಮುಖ್ಯಮಂತ್ರಿಯಾಗಿ ಸದಾನಂದ ಗೌಡ ಮತ್ತು ಜಗದೀಶ ಶೆಟ್ಟರ್‌ ಏನೂ ಮಾಡಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರ ಕಾರಣ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಇವರ ಸಾಧನೆ ಏನೂ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ’ ಎಂದರು.

‘ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಜೈಲಿಗೆ ಹೋಗಿ ಬಂದವರು. ಅವರಿಗೆ ನಮ್ಮ ಸರ್ಕಾರದ ವಿರುದ್ಧ ಮಾತನಾಡಲು ಅರ್ಹತೆ ಇಲ್ಲ. ಇವರಿಗೆಲ್ಲ ಮೂರು ಕಾಸಿನ ಮಾನ ಮರ್ಯಾದೆ ಇದೆಯಾ?’ ಎಂದರು.

‘ರೈತರ ಸಾಲ ಮನ್ನಾ ಮಾಡಲು, ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಬಳಿ ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪನವರು ಮನವಿ ಮಾದ್ದರು. ಅದಕ್ಕೆ, ‘ಸರ್ಕಾರದಲ್ಲಿ ನೋಟು ಮುದ್ರಿಸುವ ಯಂತ್ರ ಇದೆಯೇ’ ಎಂದು ಪ್ರಶ್ನಿಸಿದ್ದರು. ಬೀಜ ಗೊಬ್ಬರ ಕೇಳಿದ ಹಾವೇರಿಯ ರೈತರಿಗೆ ಗುಂಡು ಹಾಕಿಸಿದರು’ ಎಂದು ದೂರಿದರು.

‘ಈಗ ರೈತರ ಸಾಲ ಮನ್ನಾ ಮಾಡಿಸಲು ಮೋದಿಯ ಮುಂದೆ ಇವರು ತುಟಿಪಿಟಿಕ್‌ ಅನ್ನುತ್ತಿಲ್ಲ. ‘ಸಾಲ ಮನ್ನಾ ಮಾಡುವ ಮೂಲಕ ಸಿದ್ದರಾಮಯ್ಯ ರೈತರ ಬಾಯಿಗೆ ಲಾಲಿ ಪಪ್‌ ಇಟ್ಟಿದ್ದಾರೆ’ ಎಂದು ಕೇಂದ್ರ ಸಚಿವ ಜಾವಡೇಕರ್ ಹೇಳಿದ್ದಾರೆ. ಇದೇನಾ ಬಿಜೆಪಿಯ ರೈತರ ಕಾಳಜಿ ? ಎಂದು ಪ್ರಶ್ನಿಸಿದ ಅವರು, ‘ಯಡಿಯೂರಪ್ಪ ಅವರಿಗೆ ರೈತರ ಪರ ಕಾಳಜಿ ಇದ್ದರೆ, ಸಂಸತ್ತಿಗೆ ಮುತ್ತಿಗೆ ಹಾಕಿಸಿ ರೈತರ ಸಾಲ ಮನ್ನಾ ಮಾಡಿಸಲಿ’ ಎಂದರು.

‘ಶಾಸಕ ಯು.ಬಿ. ಬಣಕಾರ ಯಾವತ್ತು ಬಂದೂ ಕ್ಷೇತ್ರದ ಕೆಲಸ ಮಾಡಿಸಿಕೊಡಿ ಎಂದು ಹೇಳಿಲ್ಲ. ಈ ಬಾರಿ ಮನೆಗೆ ಹೋಗುತ್ತಾರೆ. ಧರ್ಮಗಳ ಮಧ್ಯೆ ಬೆಂಕಿ ಹಚ್ಚುವುದು, ಸಂಘರ್ಷ ಉಂಟು ಮಾಡುವುದೇ ಬಿಜೆಪಿ ಕಾರ್ಯ. ಸಮಾಜದಲ್ಲಿ ಶಾಂತಿ ಕದಡುವುದು ಬಿಟ್ಟು ಬೇರೆ ಯಾವುದೇ ಕೆಲಸ ಮಾಡುವುದಿಲ್ಲ’ ಎಂದರು.
ನರೇಂದ್ರ ಮೋದಿ ಅವರ ಅಚ್ಛೇ ದಿನ್‌ ಬರಲೇ ಇಲ್ಲ. ಇವರು ಅಧಿಕಾರದಲ್ಲಿ ಇರುವ ತನಕ ಅಚ್ಚೇ ದಿನ್‌ ಕಬಿ ನಹೀ ಆಯೇಗಾ. ಇವರ ಕಾಲದಲ್ಲಿ ರೈತರು, ಬಡವರು, ಮಹಿಳೆಯರು, ಹಿಂದುಳಿದವರು, ಶೋಷಿತರು ಸೇರಿದಂತೆ ಯಾರಿಗೂ ಅಚ್ಛೇದಿನ್‌ ಬರಲಿಲ್ಲ. ಬದಲಾಗಿ ಅಂಬಾನಿ, ಅದಾನಿ, ಬಾಬಾ ರಾಮದೇವ್‌ ಅವರಿಗೆ ಅಚ್ಚೇದಿನ್‌ ಬಂದಿದೆ ಎಂದರು.

ದೇಶದ ಎಲ್ಲರನ್ನು ಸಮಾನತೆಯಿಂದ ಕಂಡಾಗ ಮಾತ್ರ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಸಾಧ್ಯ. ಆದರೆ, ಬಿಜೆಪಿ ಟಿಕೆಟ್‌ ಪಡೆಯಬೇಕಾದರೆ ಮುಸ್ಲಿಮರು ಆರ್ಎಸ್‌ಎಸ್‌ ಕಚೇರಿಯಲ್ಲಿ ಕೆಲಸ ಮಾಡಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ. ಇದೇ ಸಬ್‌ ಕಾ ವಿಕಾಸ್‌ ಎಂದು ಪ್ರಶ್ನಿಸಿದರು.

ದೇಶದ 16 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದ್ದು, ಎಲ್ಲಿಯೂ ಬಡವರಿಗೆ ಉಚಿತ ಅಕ್ಕಿ ನೀಡಿಲ್ಲ. ಇವರ ಮಿಷನ್ 150 ಈಗ 50ಗೆ ಇಳಿದಿದೆ. ಈ ಬಾರಿ ಬಿ.ಸಿ. ಪಾಟೀಲ ಗೆಲ್ಲಿಸಿ, ಕೋಮುವಾದಿ ಗಳಿಗೆ ಪಾಠ ಕಲಿಸಿ ಎಂದರು.

ಅಳಿವು, ಉಳಿವು ಜನರಿಂದಲೇ

‘ಪಕ್ಷವನ್ನು ಮುಗಿಸುವುವವರು ಮತ್ತು ಶಕ್ತಿ ನೀಡುವವರು ಜನತೆ. ಯಾವುದೇ ನಾಯಕನಲ್ಲ’ ಎಂದು ಜೆಡಿಎಸ್‌ ವರಿಷ್ಠ ದೇವೇಗೌಡ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ‘ವರ್ತೂರು ಪ್ರಕಾಶ್‌ಗೆ ಅಹಿಂದ, ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ಇಲ್ಲ. ಹೀಗಾಗಿ ಅವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.

‘ಕಾಂಗ್ರೆಸ್‌ನಲ್ಲಿ ಇರುವಷ್ಟು ಆಂತರಿಕ ಪ್ರಜಾಪ್ರಭುತ್ವ ಬೇರೆ ಪಕ್ಷದಲ್ಲಿ ಇರಲು ಸಾಧ್ಯವಿಲ್ಲ. 132 ವರ್ಷಗಳ ಇತಿಹಾಸದ ಪಕ್ಷದಲ್ಲಿ ಮಹಾತ್ಮ ಗಾಂಧಿಯಿಂದ ರಾಹುಲ್ ಗಾಂಧಿ ತನಕ ಅನೇಕರು ಅಧ್ಯಕ್ಷರು ಆಗಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ಪರ್ಧಿಸಲು ಸಿದ್ದರಾಮಯ್ಯಗೆ ಸ್ವಾಗತ

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರೇಕೆರೂರ ಕ್ಷೇತ್ರದಿಂದ ಸ್ಪರ್ಧಿಸಬೇಕು’ ಎಂದು ಮಾಜಿ ಶಾಸಕ ಬಿ.ಸಿ. ಪಾಟೀಲ ಆಹ್ವಾನ ನೀಡಿದರು. ಬಳಿಕ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌. ಆರ್. ಪಾಟೀಲ, ‘ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ, ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್‌ ಜಯ ಸಾಧಿಸಲಿದೆ’ ಎಂದರು. ‘ಅಂದು ಬ್ರಿಟಿಷರನ್ನು ಓಡಿಸಿದ ಕಾಂಗ್ರೆಸ್‌ಗೆ ಬಿಜೆಪಿಯನ್ನು ಸೋಲಿಸುವುದು ಯಾವುದೇ ಸಮಸ್ಯೆಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT