3

ಘಮಘಮಿಸಿದ ತರಹೇವಾರಿ ಖಾದ್ಯಗಳು

Published:
Updated:

ಕಾರವಾರ: ಕರಾವಳಿ ಉತ್ಸವದ ನಿಮಿತ್ತ ತಾಲ್ಲೂಕು ಆಡಳಿತ ವತಿಯಿಂದ ಮಂಗಳವಾರ ತಾಲ್ಲೂಕು ಮಟ್ಟದ ಅಡುಗೆ ಹಾಗೂ ರಂಗೋಲಿ ಸ್ಪರ್ಧೆ ನಡೆಯಿತು. ಅಡುಗೆ ಸ್ಪರ್ಧೆಗೆ 14 ಮಂದಿ ಹಾಗೂ ರಂಗೋಲಿ ಸ್ಪರ್ಧೆಗೆ 45 ಮಂದಿ ಭಾಗವಹಿಸಿದ್ದರು.

ಶಾಖಾಹಾರಿ ಹಾಗೂ ಮಾಂಸಹಾರಿ ಖಾದ್ಯಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಿತು. ಚುಕ್ಕೆ ಸಹಿತ ಹಾಗೂ ರಹಿತ ವಿಭಾಗದಲ್ಲಿ ರಂಗೋಲಿ ಸ್ಪರ್ಧೆ ನಡೆಯಿತು. ಮಾಂಸ ಆಹಾರದಲ್ಲಿ ಚಿಕನ್ ಮಂಚೂರಿ, ಚಿಕನ್ ಗ್ರೀನ್ ಮಸಾಲ, ಕಾಶ್ಮೀರಿ ಧಮ್ ಬಿರಿಯಾನಿ, ಬಾಂಗಡಾ ಪಾನಿ ಪುರಿ, ಬಾಂಗಡಾ ಸುಕ್ಕಾ, ಚಿಕನ್ ಪಿಕಲ್ಸ್‌ (ಉಪ್ಪಿನಕಾಯಿ) ವಿಶೇಷ ರುಚಿ ನೀಡಿದರೆ, ಶಾಖಾಹಾರದಲ್ಲಿ ಆಲೂಗಡ್ಡೆ ಸ್ಯಾಂಡ್‌ವಿಚ್, ಅಣಬೆ ಬಜ್ಜಿ ಹಾಗೂ ಅಣಬೆ ಪಕೋಡಾ ಘಮ ಘಮಿಸಿತು.

‘ಕಳೆದ ಬಾರಿ ಶಾಖಾಹಾರ ವಿಭಾಗದಲ್ಲಿ ಭಾಗವಹಿಸಿ ತೃತೀಯ ಬಹುಮಾನ ಪಡೆದಿದ್ದೆ. ಈ ಬಾರಿ ಮಾಂಸ ಆಹಾರ ವಿಭಾಗದಲ್ಲಿ ಸ್ಪರ್ಧಿಸಿದ್ದೇನೆ. ಅಡುಗೆ ತಯಾರಿಗೆ ಎರಡು ಗಂಟೆ ಕಾಲವಕಾಶ ನೀಡಲಾಗಿತ್ತು. 35 ತೆರನಾದ ಹೊಸ ರುಚಿ ಅಡುಗೆಗಳನ್ನು ತಯಾರಿಸಲು ಸಿದ್ಧವಾಗಿ ಬಂದಿದ್ದೆ. ಆದರೆ ಸಮಯದ ಅಭಾವದಿಂದಾಗಿ 21 ತರಹದ ಖಾದ್ಯಗಳನ್ನು ತಯಾರಿಸಿದೆ’ ಎಂದು ನಿವೇದಿತಾ ನಾಯ್ಕ ತಿಳಿಸಿದರು.

‘ಇದು ಕರಾವಳಿ ಉತ್ಸವದ ತಾಲ್ಲೂಕುಮಟ್ಟದ ಸ್ಪರ್ಧೆಯಾಗಿದೆ. ಅಡುಗೆ ಸ್ಪರ್ಧೆಯಲ್ಲಿ ಎರಡೂ ವಿಭಾಗದ ಒಟ್ಟು ನಾಲ್ಕು ವಿಜೇತರನ್ನು ಜಿಲ್ಲಾ ಮಟ್ಟದ ‘ಕಿಚನ್ ಕ್ವೀನ್’ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ತಾಲ್ಲೂಕು ಮಟ್ಟದಲ್ಲಿ ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ’ ಎಂದು ತಹಶೀಲ್ದಾರ್ ಜಿ.ಎನ್.ನಾಯ್ಕ ತಿಳಿಸಿದರು.

ಬಹುಮಾನಿತರು: ಅಡುಗೆ ಸ್ಪರ್ಧೆಯ ಶಾಖಾಹಾರಿ ವಿಭಾಗದಲ್ಲಿ ನಂದನಗದ್ದಾದ ಶ್ವೇತಾ ಹೇಮಗಿರಿ ಪ್ರಥಮ, ಕಾರವಾರದ ದೀಪಾಲಿ ಪೆಡ್ನೇಕರ್ ದ್ವಿತೀಯ, ಹಳೇಶಿಟ್ಟಾದ ಅಶ್ವಿನಿ ರೇವಣಕರ್ ತೃತೀಯ ಬಹುಮಾನ ಪಡೆದರು. ಮಾಂಸಾಹಾರಿ ವಿಭಾಗದಲ್ಲಿ ಮಾಳಸವಾಡದ ಅರ್ಚನಾ ನಾಯ್ಕ ಪ್ರಥಮ, ದೇವತಿಶಿಟ್ಟಾದ ಪ್ರಸಾದ್ ಸಾಳುಂಕೆ ದ್ವಿತಿಯ, ಮುರುಳೀಧರ ಮಠದ ಸುಭಾಂಗಿ ಶಿರೋಡಕರ್ ತೃತೀಯ ಬಹುಮಾನ ಪಡೆದರು.

ರಂಗೋಲಿಯ ಚುಕ್ಕೆ ಸಹಿತ ಸ್ಪರ್ಧೆಯಲ್ಲಿ ತ್ರಿವೇಣಿ ಅಂಕೋಲೆಕರ್ ಪ್ರಥಮ, ಪೂಜಾ ಅಂಕೋಲೆಕರ್ ದ್ವಿತೀಯ, ಪದ್ಮಾ ತಾಂಡೇಲ ತೃತೀಯ, ಚುಕ್ಕೆ ರಹಿತದಲ್ಲಿ ದೀಕ್ಷಿತ ಗುನಗಿ ಪ್ರಥಮ, ಸಂತೋಷಿ ಪಾಲೇಕರ್ ದ್ವಿತೀಯ, ಶೀತಲ್ ಮಿಶ್ರಾ ತೃತೀಯ ಬಹುಮಾನ ಪಡೆದರು. 

ಅಡುಗೆ ಸ್ಪರ್ಧೆಯ ಮಾಂಸಾಹಾರಿ ವಿಭಾಗಕ್ಕೆ ಕೆ.ಎಸ್‌ ಎಂಟರ್‌ ಪ್ರೈಸಸ್‌ನ ವ್ಯವಸ್ಥಾಪಕ ನಿರ್ದೇಶಕ ಫಿರೋಜ್ ಸೊಲ್ಲಾಪುರ, ಶಾಖಾಹಾರಿ ವಿಭಾಗಕ್ಕೆ ಆನಂದ ಥಾಮ್ಸೆ, ರಂಗೋಲಿ ಸ್ಪರ್ಧೆಗೆ ಬಾಡ ನ್ಯೂಹೈಸ್ಕೂಲ್‌ನ ಆನಂದ ಘಟಕಾಂಬ್ಳೆ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry