3

ಅಂಗವಿಕಲರ ನೋವಿಗೆ ಸ್ಪಂದನೆ ಅಗತ್ಯ

Published:
Updated:

ಮಡಿಕೇರಿ: ‘ಅಂಗವಿಕಲರ ನೋವಿಗೆ ವೈದ್ಯರು ಸ್ಪಂದಿಸಬೇಕು; ಅಂಗವಿಕಲ ಮಕ್ಕಳಿಗೆ ಸಾಧನೆ ಮಾಡಲು ಪ್ರೇರಣೆ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌ ಕರೆ ನೀಡಿದರು. ನಗರದ ಓಂಕಾರ ಸದನದಲ್ಲಿ ಮಂಗಳವಾರ ನಡೆದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಅಂಗವಿಕಲ ಮಕ್ಕಳನ್ನು ಸಂಘ– ಸಂಸ್ಥೆಗಳು ಪೋಷಿಸುತ್ತಿರುವುದು ಹೆಮ್ಮೆಯ ವಿಷಯ; ಅಂಗವಿಕಲ ಮಕ್ಕಳು ಶಾರೀರಿಕವಾಗಿ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆಯೇ ಹೊರತು ಮಾನಸಿಕವಾಗಿ ಅಲ್ಲ. ಕಣ್ಣಿರುವ ನಾವೇ ಕಷ್ಟಪಡುತ್ತೇವೆ. ಕಣ್ಣಿಲ್ಲದ ಅದೆಷ್ಟೋ ಮಂದಿ ಸಾಧನೆ ಮಾಡಿದ್ದಾರೆ. ಆತ್ಮಸ್ಥೈರ್ಯವಿದ್ದರೆ ಏನು ಬೇಕಾದರೂ ಸಾಧನೆ ಮಾಡಲು ಸಾಧ್ಯವಿದೆ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಹಾಗೂ ಸಿವಿಲ್‌ ನ್ಯಾಯಾಧೀಶ ಆರ್‌ಕೆಜಿಎಂಎಂ ಮಹಾಸ್ವಾಮೀಜಿ ಮಾತನಾಡಿ, ಅಂಗವಿಕಲರು, ಸರ್ಕಾರದ ಸೌಲಭ್ಯ ಪಡೆದುಕೊಂಡು ಬದುಕು ಕಟ್ಟಿಕೊಳ್ಳಬೇಕು. ಮಾಸಶಾಸನ, ಉಚಿತ ಬಸ್‌ಪಾಸ್, ಸಾಲ ಸೌಲಭ್ಯ, ವಸತಿ ಯೋಜನಾ ಸೌಲಭ್ಯವಿದೆ. ಉದ್ಯೋಗದಲ್ಲಿ ಶೇ 3ರಷ್ಟು ಮೀಸಲಾತಿ ಹೊಂದಿದ್ದಾರೆ; ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು. ಅದಕ್ಕೆ ಅಧಿಕಾರಿಗಳು ಸಹ ಸ್ಪಂದಿಸಬೇಕು ಎಂದು ಹೇಳಿದರು.

ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಅಂಗವಿಕಲರು ಹಲವರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಇತರರಿಗೂ ಅದು ಮಾದರಿ; ಅಂಗವಿಕಲರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದು ಅಂತಹ ವ್ಯಕ್ತಿಗಳಿಗೆ ಸಹಕಾರ ನೀಡಬೇಕು ಎಂದು ಕೋರಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಜಯಕುಮಾರ್, ಅಂಗವಿಕಲರಿಗೆ ವಿಶೇಷ ಸೌಲಭ್ಯಗಳನ್ನು ನೀಡಬೇಕು. ವಾಹನ ನಿಲ್ದಾಣ, ಬಸ್‌ನಲ್ಲಿ ಕಾಯ್ದಿರಿಸಿದ ಸೀಟುಗಳು ಅವರಿಗೇ ಬಿಟ್ಟುಕೊಡಬೇಕು. ಅಂಗವಿಕಲತೆ ಶೇ 80ರಷ್ಟು ಇದ್ದರೆ ಸರ್ಕಾರದ

ಸೌಲಭ್ಯ ಪಡೆಯಬಹುದು ಎಂದು ತಿಳಿಸಿದರು.

ಸಮಾಜದಲ್ಲಿ ಅಂಗವಿಕಲರ ಪ್ರತಿಭೆ ಗುರುತಿಸಿ ಜಗತ್ತಿಗೆ ತೋರಿಸಬೇಕು. ಹೆಚ್ಚಿನ ಗೌರವಧನ ನೀಡುವಂತಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ವಿಜು ಸುಬ್ರಮಣಿ ತಿಳಿಸಿದರು.

ವಕೀಲರಾದ ವೈ. ಮನೋಜ್ ಬೋಪಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಮುಮ್ತಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್‌

ಕುಮಾರ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಅಧಿಕಾರಿ ಟಿ.ಪಿ. ದೇವರಾಜ್, ಚಿಗುರು ವಿಕಲ ಚೇತನರ ಸಂಘದ ಅಧ್ಯಕ್ಷ ಮಹೇಶ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry