ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳವರಿಗೆ ಆಶ್ರಯ ಮನೆ: ಕ್ರಮದ ಎಚ್ಚರಿಕೆ

Last Updated 6 ಡಿಸೆಂಬರ್ 2017, 8:40 IST
ಅಕ್ಷರ ಗಾತ್ರ

ಸೋಮವಾರಪೇಟೆ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆಶ್ರಯ ಯೋಜನೆಯಲ್ಲಿ ಉಳ್ಳವರಿಗೆ ಮನೆ ನೀಡಿ ಲಂಚ ಪಡೆಯುತ್ತಿರುವ ದೂರುಗಳು ಬಂದಿದ್ದು, ಇಂತಹ ಪ್ರಕರಣಗಳು ತನಿಖೆಯಿಂದ ದೃಢಪಟ್ಟರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಅಪ್ಪಚ್ಚು ರಂಜನ್‌ ಎಚ್ಚರಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಹೆಚ್ಚಿನವರು ಮನೆಗಳನ್ನು ಪಡೆದು ಕಾರಿಗೆ ಷೆಡ್‌ ನಿರ್ಮಿಸಿಕೊಳ್ಳುತ್ತಿದ್ದಾರೆ ಎಂದು ಹಲವು ದೂರುಗಳು ಬರುತ್ತಿವೆ. ಕಾನೂನಿನ ಅಡಿಯಲ್ಲಿ ಸೂಕ್ತ ಫಲಾನುಭವಿಗಳನ್ನು ಗ್ರಾಮಸಭೆಗಳಲ್ಲಿ ಆಯ್ಕೆ ಮಾಡುವ ಮೂಲಕ ವಿತರಿಸುವಂತೆ ಸೂಚಿಸಿದರು.

ತಾಲ್ಲೂಕಿನಲ್ಲಿ ಸಿ ಮತ್ತು ಡಿ ಜಾಗದಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವವರಿಗೆ ತಕ್ಷಣವೇ ಮನೆಕಟ್ಟಲು ಹಕ್ಕುಪತ್ರ ನೀಡಬೇಕು. 94ಸಿ ಮತ್ತು 94ಸಿಸಿ ಯಲ್ಲಿ 60X40 ಜಾಗವನ್ನು ನೀಡಲು ಅವಕಾಶವಿದೆ. ಅದೇ ರೀತಿ ಸಿ ಮತ್ತು ಡಿ ಜಾಗದಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿರುವವರಿಗೆ ಹಕ್ಕುಪತ್ರ ನೀಡಬೇಕು. ಆರ್ಹರಿಗೆ ಹಕ್ಕುಪತ್ರ ನೀಡಲು ಅನವಶ್ಯಕವಾಗಿ ಕಾನೂನಿನ ತಗಾದೆ ತೆಗೆಯುವ ಅವಶ್ಯಕತೆ ಇಲ್ಲ. ಕಂದಾಯ ಸಚಿವರೇ ಸ್ಪಷ್ಟವಾದ ಅದೇಶವನ್ನು ನೀಡಿದ್ದಾರೆ. ಆದರೆ, ಅಧಿಕಾರಿಗಳು ತೊಂದರೆ ಉಂಟುಮಾಡುತ್ತಿರುವುದು ಸರಿಯಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸದ ತಹಶೀಲ್ದಾರ್ ಮಹೇಶ್ ಈಗಾಗಲೇ ಕಂದಾಯ ಇಲಾಖೆಯಲ್ಲಿ 2,377 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. 1,797 ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಶೀಘ್ರದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

‘ನರೇಗಾ’ ಯೋಜನೆಯ ಅಡಿ ಕುಂಬೂರು ಪಂಚಾಯಿತಿ ವ್ಯಾಪ್ತಿಯ ಪರಿಶಿಷ್ಟ ಪಂಗಡದ ಕಾಲೊನಿ ಅಭಿವೃದ್ಧಿಗೆ ₹ 3,40,000 ಬಿಡುಗಡೆಯಾಗಿದ್ದು ಇಲ್ಲಿ ಕಾಮಗಾರಿಯನ್ನು ನಡೆಸದೇ ಹಣ ದುರುಪಯೋಗವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್ ಆರೋಪಿಸಿದರು. ಅಲ್ಲಿನ ಪಿಡಿಒ ವಿರುದ್ಧ ಕ್ರಮಜರುಗಿಸಬೇಕು ಎಂದು ಒತ್ತಾಯಿಸಿದರು.

ಅದಕ್ಕೆ ಪಿಡಿಒ ಶ್ಯಾಮ್, ಕಾಮಗಾರಿಯಲ್ಲಿ ಹಣ ದುರುಪಯೋಗವಾಗಿಲ್ಲ ಎಂದರು. ಪರಿಶೀಲನೆ ನಡೆಸುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಅವರಿಗೆ ಶಾಸಕರು ಸೂಚಿಸಿದರು.

ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಡಿಒಗಳು ವೈಜ್ಞಾನಿಕ ಕಸವಿಲೇವಾರಿಗೆ ಸೂಕ್ತ ಕ್ರಮಕೈಗೊಳ್ಳಬೇಕು. ಉತ್ತಮ ಕಾರ್ಯ ನಿರ್ವಹಣೆಗೆ ವೈಯಕ್ತಿಕವಾಗಿ ಬಹುಮಾನ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಅಳುವಾರದಲ್ಲಿ ಮದ್ಯದಂಗಡಿ ಕಾರ್ಯನಿರ್ವಹಿಸುತ್ತಿದ್ದು, ಸಮೀಪ ದಲ್ಲಿಯೇ ಮಂಗಳೂರು ವಿಶ್ವವಿದ್ಯಾಯದ ಸ್ನಾತಕೋತ್ತರ ಕೇಂದ್ರವಿದೆ. ತಕ್ಷಣವೇ ಮದ್ಯದಂಗಡಿಯನ್ನು ತೆರವುಗೊಳಿಸುವಂತೆ ಅಬಕಾರಿ ಇಲಾಖೆಯ ಅಧಿಕಾರಿಗೆ ಸೂಚಿಸಿದರು.

ಮೀನುಗಾರಿಕೆ ಇಲಾಖೆಯ ವತಿಯಿಂದ ಕೃಷಿಕರಿಗೆ ಮೀನುಮರಿಗಳನ್ನು ವಿತರಿಸಿರುವ ಕುರಿತು ಯಾವುದೇ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದು ನಾಮನಿರ್ದೇಶಿತ ಸದಸ್ಯರಾದ ಬಾಲಕೃಷ್ಣ ರೈ ಆರೋಪಿಸಿದರು. ಮೀನುಮರಿಗಳನ್ನು ವಿತರಿಸಿರುವ ಸಂಪೂರ್ಣ ಮಾಹಿತಿಯನ್ನು ಮುಂದಿನ ಸಭೆಗೆ ತಿಳಿಸುವಂತೆ ಇಲಾಖೆಗೆ ಕ್ಷೇತ್ರಾಧಿಕಾರಿಗೆ ತಿಳಿಸಿದರು. ಅಧ್ಯಕ್ಷೆ ಪುಷ್ಪಾ ರಾಜೇಶ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬಿ.ಎ.ಧರ್ಮಪ್ಪ, ಡಿವೈಎಸ್‌ಪಿ ಮುರಳೀಧರ್ ಹಾಜರಿದ್ದರು.

* * 

ಅರ್ಹರಿಗೆ ಹಕ್ಕುಪತ್ರ ನೀಡಲು ತೊಂದರೆ ನೀಡಬಾರದು. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರೇ ಸ್ಪಷ್ಟವಾದ ಅದೇಶವನ್ನು ನೀಡಿದ್ದಾರೆ. ಅದರಂತೆ ಹಕ್ಕುಪತ್ರ ವಿತರಿಸಿ
ಎಂ.ಪಿ. ಅಪ್ಪಚ್ಚು ರಂಜನ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT