ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಠಕ್ಕೂ ಸಹಾಯಕರ ನೇಮಿಸಿಕೊಂಡ ಶಿಕ್ಷಕರು!

Last Updated 6 ಡಿಸೆಂಬರ್ 2017, 9:24 IST
ಅಕ್ಷರ ಗಾತ್ರ

ಶಿವಮೊಗ್ಗ: ಸರ್ಕಾರಿ ಶಾಲೆಗಳ ಕೆಲವು ಶಿಕ್ಷಕರು ತಮ್ಮ ಪರವಾಗಿ ಪಾಠ ಮಾಡಲು ನಿರುದ್ಯೋಗಿ ಪದವೀಧರರನ್ನು ನಿಯೋಜನೆ ಮಾಡಿಕೊಂಡು, ತಾವು ಅನ್ಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪ್ರಕರಣಗಳು ಜಿಲ್ಲೆಯಲ್ಲಿ ಬೆಳಕಿಗೆ ಬಂದಿವೆ.

ಕೈತುಂಬಾ ಸರ್ಕಾರದ ಸಂಬಳ ಪಡೆದರೂ, ತಗರತಿಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ಪಾಠ ಮಾಡದ ಶಿಕ್ಷಕರ ಪಟ್ಟಿ ಸಿದ್ಧಪಡಿಸಿ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯ್ತಿ ಸಿಇಒ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಶಿವಮೊಗ್ಗ ನಗರದ ಸಮೀಪ ಇರುವ ನಿಧಿಗೆ, ಹೊಳೆಹಟ್ಟಿ, ಮಳಲಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದ ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ಕ್ಷೇತ್ರ ಸಂಪನ್ಮೂಲ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳ ಮೂಲಕ ಜಿಲ್ಲೆಯ ಎಲ್ಲ ಶಾಲೆಗಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಆಯಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ 931 ಕಿರಿಯ, 942 ಹಿರಿಯ ಪ್ರಾಥಮಿಕ ಶಾಲೆಗಳು ಸೇರಿ ಒಟ್ಟು 1,873 ಶಾಲೆಗಳಿವೆ. 170 ಉರ್ದು ಪ್ರಾಥಮಿಕ ಶಾಲೆಗಳಿವೆ. ಜಿಲ್ಲೆಯಲ್ಲಿ 7,181 ಮಂಜೂರಾದ ಶಿಕ್ಷಕರ ಹುದ್ದೆಗಳಿವೆ. ಪ್ರಸ್ತುತ 6,844 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 337 ಖಾಲಿ ಹುದ್ದೆಗಳು ಇದ್ದು, ಅಗತ್ಯ ಇರುವ ಶಾಲೆಗಳಲ್ಲಿ ಪಾಠ ಮಾಡಲು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ 306 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ.

ಜಿಲ್ಲೆಯ ಯಾವ ಶಾಲೆಗಳಲ್ಲೂ ಶಿಕ್ಷಕರ ಕೊರತೆ ಇಲ್ಲ. ಆದರೂ, ಕೆಲವು ಶಾಲೆಗಳಲ್ಲಿ ನಿರುದ್ಯೋಗಿ ಪದವೀಧರರನ್ನು ಅನಧಿಕೃತವಾಗಿ ನೇಮಿಸಿಕೊಳ್ಳಲಾಗಿದೆ. ತಮ್ಮ ಪರವಾಗಿ ತರಗತಿಗಳಿಗೆ ಹೋಗಿ ಮಕ್ಕಳಿಗೆ ಕಲಿಸುವ ಅವರಿಗೆ ಆ ಶಿಕ್ಷಕರೇ ಪುಡಿಗಾಸಿನ ಸಂಭಾವನೆ ನೀಡುತ್ತಿದ್ದಾರೆ.

ಶಿವಮೊಗ್ಗ ತಾಲ್ಲೂಕು ಮತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಳಲಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 130 ವಿದ್ಯಾರ್ಥಿಗಳು ಇದ್ದಾರೆ. ವಿದ್ಯಾರ್ಥಿ–ಶಿಕ್ಷಕರ ಅನುಪಾತಕ್ಕೆ ಅನುಗುಣವಾಗಿಯೇ ಮುಖ್ಯ ಶಿಕ್ಷಕಿ ಸೇರಿ ಐವರು ಶಿಕ್ಷಕಿಯರು ಇದ್ದಾರೆ. ಆದರೂ, ಸ್ಥಳೀಯ ಬಿ.ಇಡಿ ಪದವೀಧರರಿಂದ ಅನಧಿಕೃತವಾಗಿ ಪಾಠ ಮಾಡಿಸಲಾಗುತ್ತಿದೆ.

ನಿಧಿಗೆ ಸರ್ಕಾರಿ ಶಾಲೆಯಲ್ಲಿ 164 ವಿದ್ಯಾರ್ಥಿಗಳಿದ್ದಾರೆ. ಅಲ್ಲೂ ಅನುಪಾತದ ಪ್ರಕಾರ 8 ಶಿಕ್ಷಕರು ಇದ್ದಾರೆ. ಆದರೂ, ಸ್ಥಳೀಯ ಪದವೀಧರರನ್ನು ಪಾಠ ಮಾಡಲು ಅಕ್ರಮವಾಗಿ ನಿಯೋಜಿಸಿಕೊಳ್ಳಲಾಗಿದೆ.

‘ಶಾಲಾಭಿವೃದ್ಧಿ ಸಮಿತಿಯ ಅನುಮತಿ ಪಡೆದು ಸ್ಥಳೀಯ ವಿದ್ಯಾವಂತರಿಗೆ ಪಾಠ ಮಾಡಲು ಅವಕಾಶ ನೀಡಲಾಗಿದೆ. ಅವರಿಗೆ ಯಾವ ಸಂಭಾವನೆಯನ್ನೂ ನೀಡುತ್ತಿಲ್ಲ. ಕಚೇರಿ ಕೆಲಸದ ನಿಮಿತ್ತ ಬಿಇಒ ಕಚೇರಿಗೆ ಹೋದಾಗ, ಶಿಕ್ಷಕರು ರಜೆಯ ಮೇಲೆ ತೆರಳಿದಾಗ ಮಕ್ಕಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ನಿಯೋಜನೆ ಸಮರ್ಥಿಸಿಕೊಳ್ಳುತ್ತಾರೆ ಮಳಲಕೊಪ್ಪ ಶಾಲೆಯ ಮುಖ್ಯ ಶಿಕ್ಷಕಿ ಟಿ.ಜಿ. ಶೈಲಜಾ.

ಪ್ರಕರಣ ಕುರಿತು ಮಾಹಿತಿ ಪಡೆಯಲು ಶಾಲಾ ವೇಳೆಯಲ್ಲಿ ನಿಧಿಗೆ ಸರ್ಕಾರಿ ಶಾಲೆಗೆ ಭೇಟಿ ನೀಡಿದರೂ, ಮುಖ್ಯ ಶಿಕ್ಷಕ ಕೆಂಚಪ್ಪ ಕೊಡಗಿಮನಿ ಸಿಗಲಿಲ್ಲ. ‘ಕೆಲಸದ ನಿಮಿತ್ತ ಶಿವಮೊಗ್ಗಕ್ಕೆ ಹೋಗಿದ್ದಾರೆ’ ಎಂದು ಹಿರಿಯ ಶಿಕ್ಷಕಿ ಶಶಿಕಲಾ ಪ್ರತಿಕ್ರಿಯಿಸಿದರು.

‘ಕೆಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ಪರಿಶೀಲನೆ ನಡೆಸುವಂತೆ ಈಗಾಗಲೇ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅನಧಿಕೃತವಾಗಿ ಶಿಕ್ಷಕರನ್ನು ನೇಮಿಸಿಕೊಂಡು, ತಾವು ಪಾಠ ಮಾಡದೇ ಕಾಲಹರಣ ಮಾಡುವ ಶಿಕ್ಷಕರನ್ನು ಅಮಾನತು ಮಾಡಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ. ರಾಕೇಶ್ ಕುಮಾರ್ ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT