ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ವಿನ್ಯಾಸದ ‘ಕುರ್ಲಿ’ ಕಥನ

Last Updated 6 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕಿರುಚಿತ್ರ ತಯಾರಿಕೆಯನ್ನು ಸಿನಿಮಾ ಮಾಧ್ಯಮಕ್ಕೆ ಇಳಿಯುವ ಪೂರ್ವತಯಾರಿಯಾಗಿ ಪರಿಗಣಿಸುವವರೇ ಹೆಚ್ಚು. ಒಂದೆರಡು ಕಿರುಚಿತ್ರ ಮಾಡಿದ ಅನುಭವ ಇದ್ದರೆ ಅದನ್ನು ತೋರಿಸಿ ಸಿನಿಮಾರಂಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬಹುದೇನೋ ಎಂಬ ಹಂಬಲದಲ್ಲಿ ತಯಾರಾದ ಬಹುತೇಕ ಕಿರುಚಿತ್ರಗಳು, ಆ ಹಂಬಲದ ಕಾರಣಕ್ಕಾಗಿಯೇ ಮಹತ್ವಾಕಾಂಕ್ಷೆ ಇಲ್ಲದೇ ಪೇಲವವಾಗಿರುತ್ತವೆ.

ಆದರೆ ಕಿರುಚಿತ್ರ ಸಿನಿಮಾಗಿಂತ ಭಿನ್ನವಾದ ಮಾಧ್ಯಮ. ಅದರ ಆತ್ಮ– ಅಭಿವ್ಯಕ್ತಿ ಕ್ರಮಗಳೇ ಬೇರೆ. ಇದನ್ನು ಅರ್ಥಮಾಡಿಕೊಂಡು ಮಾಡಿದ ಕಿರುಚಿತ್ರಗಳು ಯಶಸ್ಸು– ವೈಫಲ್ಯಗಳ ಲೆಕ್ಕಾಚಾರದ ಆಚೆಗೂ ಗಮನ ಸೆಳೆಯುತ್ತವೆ.

ನಟೇಶ ಹೆಗಡೆ ನಿರ್ದೇಶನದ ‘ಕುರ್ಲಿ’ ಕಿರುಚಿತ್ರ ಮಾಧ್ಯಮದ ಚೌಕಟ್ಟನ್ನು ಅರಿತುಕೊಂಡು ಅದರ ಮೂಲಕವೇ ಕಥನವನ್ನು ಹೇಳುವ ಕ್ರಮದಿಂದ ಗಮನಸೆಳೆಯುತ್ತದೆ. ಹಲವು ಆಯಾಮಗಳುಳ್ಳ ಒಂದು ಗಟ್ಟಿಯಾದ ಕಥನವೇ ಈ ಕಿರುಚಿತ್ರದ ಆತ್ಮ ಎಂಬುದೂ ಗಮನಾರ್ಹ ಸಂಗತಿಯೇ. ತಮ್ಮ ಮೊದಲ ಪ್ರಯತ್ನದಲ್ಲಿಯೇ ಒಳಿತು– ಕೆಡುಕು, ಸರಿ– ತಪ್ಪುಗಳ ಸುಲಭ ಮತ್ತು ಜನಪ್ರಿಯ ಮಾದರಿಗಳನ್ನು ಬಿಟ್ಟು, ಸಮಸ್ಯೆಯನ್ನು ಅದರೆಲ್ಲ ಸಂಕೀರ್ಣತೆಯೊಟ್ಟಿಗೇ ಕಾಣಿಸುವ ರಿಸ್ಕಿನ ದಾರಿ ಹಿಡಿದಿರುವ ಕಾರಣಕ್ಕಾಗಿಯೇ ನಟೇಶ ಅಭಿನಂದನಾರ್ಹರು.

ಈ ಚಿತ್ರದ ಕಥೆ ಮೇಲ್ನೋಟಕ್ಕೆ ಸರಳವಾಗಿಯೇ ಇದೆ. ಹೆಗಡೆಯವರ ಕಲ್ಲಳ್ಳಿ ತೋಟಕ್ಕೆ ಮೂವರು ಸಿದ್ದಿ ಹುಡುಗರು ಕುರ್ಲಿ (ಉತ್ತರ ಕನ್ನಡ ಜಿಲ್ಲೆಯಲ್ಲಿ ಏಡಿಗೆ ಕುರ್ಲಿ ಎಂದೂ ಕರೆಯುತ್ತಾರೆ) ಹಿಡಿಯಲು ಹೋಗುತ್ತಾರೆ.

ಒಂದು ಬಾಳೆಗೊನೆ ಕಳುವಾಗಿರುತ್ತದೆ. ಆ ಬಾಳೆಗೊನೆ ಕದ್ದ ಆರೋಪ ಆ ಹುಡುಗರ ಮೇಲೆ ಬರುತ್ತದೆ. ಅವರಲ್ಲಿ ಒಬ್ಬನಾದ ಮಾರುತಿಯನ್ನು ಹೆಗಡೆಯವರ ಮಗ ಮರಕ್ಕೆ ಕಟ್ಟಿಹಾಕಿ ಹಿಂಸೆ ಕೊಟ್ಟು ಹೆದರಿಸಿ ತಾನೇ ಕದ್ದಿದ್ದು ಎಂದು ಒಪ್ಪಿಸುತ್ತಾರೆ.

ಚಿತ್ರದ ಕಥೆ ಇಷ್ಟೆ. ಆದರೆ ಇಷ್ಟು ಹೇಳಿದರೆ ಆ ಚಿತ್ರದ ಬಗ್ಗೆ ಏನನ್ನೂ ಹೇಳಿದಂತಾಗುವುದಿಲ್ಲ. ಯಾಕೆಂದರೆ ದೃಶ್ಯಮಾಧ್ಯಮದ ಮುಖ್ಯ
ಶಕ್ತಿ ಹೇಳುವ ಕಥೆಯನ್ನು ಕಾಣಿಸುವುದು. ಹಾಗೆ ಕಾಣಿಸುವ ಕ್ರಮದಲ್ಲಿಯೇ ಅದಕ್ಕಿರುವ ಹಲವು ಸಂಕೀರ್ಣ ಆಮಾಯಗಳನ್ನು ಹೇಳದೆಯೇ ಮನಸಲ್ಲಿ ಅನುರಣಿಸುವಂತೆ ತೋರಿಸುವುದು ಚಿತ್ರದ ಆತ್ಮವನ್ನು ಕಟ್ಟಿಕೊಡುತ್ತದೆ.

ಇದು ಸಂಪೂರ್ಣವಾಗಿ ನಿರ್ದೇಶಕನ ಸೃಜನಶೀಲತೆಯ ಮೇಲೆ ಅವಲಂಬಿತವಾಗುತ್ತದೆ. ‘ಕುರ್ಲಿ’ಯಲ್ಲಿ ನಟೇಶ ಅವರು ಸರಳ
ಕಥೆಯನ್ನು ಬರೆಯುತ್ತಲೇ ನಮ್ಮ ಸಮಾಜದಲ್ಲಿ, ನಮ್ಮದೇ ಬದುಕಿನ ಭಾಗವಾಗಿರುವ ಹಲವು ಸಂಗತಿಗಳನ್ನು ಕಾಣಿಸುತ್ತಾ ಹೋಗುತ್ತಾರೆ. ಹಾಗೆ ಕಾಣಿಸುವ ಕ್ರಮದಲ್ಲಿ ತಲೆಮಾರುಗಳ ನಡುವಿನ ಸಂಘರ್ಷ, ಜಾತಿ ತಾರತಮ್ಯ, ಮಕ್ಕಳ ಮುಗ್ಧ ಜಗತ್ತಿನ ಮೇಲೆ ‘ದೊಡ್ಡವರು’ ನಡೆಸುವ ಪ್ರಹಾರಗಳು, ಬಡವರ ಒಳಬದುಕಿನ ದಾರಿಗಳು, ಹಿಂಸೆಯ ಹಲವು ಮುಖಗಳು ಹೀಗೆ ಅನೇಕ ಸಂಗತಿಗಳನ್ನು ಎಲ್ಲಿಯೂ ವಾಚ್ಯಗೊಳಿಸದೇ ಕಾಣಿಸುತ್ತ ಹೋಗುತ್ತಾರೆ. ಚಿತ್ರದ ಅಂತಿಮ ದೃಶ್ಯವೂ ಅಷ್ಟೇ ಧ್ವನಿಪೂರ್ಣವಾಗಿದೆ.

ತಮ್ಮ ಪ್ರಯತ್ನದಲ್ಲಿ ಅವರು ಪೂರ್ತಿಯಾಗಿ ಯಶಸ್ವಿಯಾಗಿದ್ದಾರೆ ಎಂದಲ್ಲ, ಆದರೆ ಈ ದಾರಿಯನ್ನು ಆಯ್ಕೆ ಮಾಡಿಕೊಂಡ ಕಾರಣಕ್ಕೆ ಕಥನವೇ ಮುನ್ನೆಲೆಗೆ ಬಂದು ತಾಂತ್ರಿಕತೆ ಅದರ ಸಣ್ಣಪುಟ್ಟ ದೋಷಗಳೊಟ್ಟಿಗೇ ಹಿನ್ನೆಲೆಗೆ ಸರಿದುಬಿಡುತ್ತದೆ. ಒಳ್ಳೆಯ ಸಿನಿಮಾ ಆಗಬೇಕಾಗಿದ್ದು ಹೀಗೆಯೇ.

ಉತ್ತರ ಕನ್ನಡದ ಒಂದು ಹಳ್ಳಿಯಲ್ಲಿ ನಡೆಯುವ ಈ ಕಿರುಚಿತ್ರದಲ್ಲಿ ಕಾಣುವ ಭಾಷೆ ಮತ್ತು ಪ್ರಾದೇಶಿಕ ಅಧಿಕೃತೆಯೂ ಗಮನಾರ್ಹ.
ಆ ಭಾಗದಲ್ಲಿ ದಿನನಿತ್ಯ ಬಳಸಿಕೊಳ್ಳುವ ಭಾಷೆಯನ್ನೇ ಯಥಾವತ್‌ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಅದು ‘ಕುರ್ಲಿ’ಗೆ ಅಂತಃಸತ್ವ ನೀಡಿದೆ.

ಇಡೀ ಚಿತ್ರ ಕಪ್ಪು ಬಿಳುಪು ಬಣ್ಣಗಳಲ್ಲಿ ಚಿತ್ರೀಕರಣಗೊಂಡಿದೆ. ಈ ಪ್ರಯೋಗಕ್ಕೆ ತಾಂತ್ರಿಕ ಗುಣಮಟ್ಟದ ಕೊರತೆಯನ್ನು ಮರೆಮಾಚುವ ಜಾಣತನದ (ಇದು ಸಾಮಾನ್ಯ ಡಿಎಸ್‌ಎಲ್‌ಆರ್‌ ಕ್ಯಾಮೆರಾದಲ್ಲಿ ಚಿತ್ರೀಕರಣ ಮಾಡಿದ ಸಿನಿಮಾ) ಹೊರತಾಗಿ ಇನ್ಯಾವುದೇ ಕಾರಣ ಇರುವುದು ತಿಳಿಯುವುದಿಲ್ಲ. ಕೆಲವು ಅನಗತ್ಯ ಸ್ಲೋ ಮೋಷನ್‌ ಎಫೆಕ್ಟ್‌ಗಳು, ಎಕ್ಸ್‌ಟ್ರಾಕ್ಲೋಸಪ್‌ಗಳು ಪರಿಣಾಮವನ್ನು ತೀವ್ರಗೊಳಿಸುವ ತಂತ್ರವಾಗಿ ಕಾಣಿಸಿದರೂ ಅವು ಹಲವು ಕಡೆ ಯಶಸ್ವಿಯಾಗಿಲ್ಲ. ಒಂದು ಜಾನಪದ ಹಾಡೂ ಅನಗತ್ಯವಾಗಿ ತುರುಕಿದಂತೆ ತೋರುತ್ತದೆ.

ಇಂಥ ಸಣ್ಣಪುಟ್ಟ ಕೊರತೆಗಳನ್ನು ಹೊರತುಪಡಿಸಿಯೂ ಈ ತಂಡದ ಸದಸ್ಯರಲ್ಲಿರುವ ಅತೀವ ಸಿನಿಮಾ ವ್ಯಾಮೋಹ ಮತ್ತು ಅದನ್ನು ಗಂಭೀರವಾಗಿ ಅಭ್ಯಸಿಸುವ ಪ್ರಯೋಗಶೀಲತೆ ಎರಡಕ್ಕೂ ಈ ಕಿರುಚಿತ್ರದಲ್ಲಿ ಸಾಕಷ್ಟು ಪುರಾವೆಗಳು ದೊರಕುತ್ತವೆ. ಹಾಗೆಯೇ ನಟೇಶ್‌ ಮತ್ತು ಅವರ ತಂಡದ ಮುಂದಿನ ಹೆಜ್ಜೆಯ ಕುರಿತು ಕುತೂಹಲವನ್ನೂ ಹುಟ್ಟಿಸುತ್ತದೆ.

*


–ನಟೇಶ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT