ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಖಿ ಶಾಂತ: ಗುಜರಾತ್‌ ನಿರಾಳ

Last Updated 6 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌/ ಚೆನ್ನೈ/ತಿರುವನಂತಪುರ : ಒಖಿ ಚಂಡಮಾರುತವು ಮಂಗಳವಾರ ಮಧ್ಯರಾತ್ರಿ ದಕ್ಷಿಣ ಗುಜರಾತ್‌ ಕರಾವಳಿಗೆ ಅಪ್ಪಳಿಸುವುದಕ್ಕೂ ಮುನ್ನ ಅರಬ್ಬಿ ಸಮುದ್ರದಲ್ಲಿ ಸಂಪೂರ್ಣವಾಗಿ ದುರ್ಬಲಗೊಂಡಿದೆ.

ಇದರಿಂದಾಗಿ ವಿಧಾನಸಭಾ ಚುನಾವಣೆ ಸಿದ್ಧತೆಯಲ್ಲಿರುವ ಗುಜರಾತ್‌ನ ಜನರು ನಿರಾಳರಾಗಿದ್ದಾರೆ. ಆಡಳಿತವೂ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

ದೇಶದ ದಕ್ಷಿಣ ಕರಾವಳಿಯಲ್ಲಿ ರುದ್ರ ಪ್ರತಾಪ ತೋರಿದ್ದ ಚಂಡಮಾರುತ ಮಂಗಳವಾರ ಮಧ್ಯಾಹ್ನ ಮುಂಬೈ ಕರಾವಳಿಯನ್ನು ದಾಟಿ ಗುಜರಾತ್‌ನತ್ತ ಮುಖ ಮಾಡಿತ್ತು. ಮಧ್ಯರಾತ್ರಿ ದಕ್ಷಿಣ ಗುಜರಾತ್‌ನ ಕರಾವಳಿಯನ್ನು ಅಪ್ಪಳಿಸಲಿದೆ ಎಂದು ಅಂದಾಜಿಸಲಾಗಿತ್ತು.

ಆದರೆ ಸೂರತ್‌ಗೆ ಇನ್ನೂ 240 ಕಿ.ಮೀ ದೂರದಲ್ಲಿರುವಾಗಲೇ, ತೀವ್ರ ವಾಯುಭಾರ ಕುಸಿತವಾಗಿ ಮಾರ್ಪಟ್ಟ ಒಖಿಯು ನಂತರ ವಾಯುಭಾರ ಕುಸಿತ
ವಾಗಿ ಪರಿವರ್ತನೆಗೊಂಡು ಅಂತಿಮವಾಗಿ ದುರ್ಬಲಗೊಂಡಿತು ಎಂದು ಹವಾಮಾನ ಇಲಾಖೆ ಹೇಳಿದೆ.

ಆದರೂ, ಮುಂದಿನ ಕೆಲವು ಗಂಟೆಗಳ ಕಾಲ ಸಮುದ್ರ ಪ್ರಕ್ಷುಬ್ಧವಾಗಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಹಾನಿಗೆ ಪರಿಹಾರ: ಒಖಿಯಿಂದಾಗಿ ತಮಿಳುನಾಡಿನಲ್ಲಿ 4,501 ಮನೆಗಳಿಗೆ ಹಾನಿಯಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ
ಇದುವರೆಗೆ ₹41 ಲಕ್ಷ ಪರಿಹಾರ ನೀಡಿದೆ.

1,687 ಮನೆಗಳು ಸಂಪೂರ್ಣ ಧ್ವಂಸಗೊಂಡಿದ್ದರೆ, 2,814 ಮನೆಗಳು ಭಾಗಶಃ ಹಾನಿಗೀಡಾಗಿವೆ ಎಂದು ಕಂದಾಯ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ

ಭುವನೇಶ್ವರ: ಬಂಗಾಳ ಕೊಲ್ಲಿಯ ಆಗ್ನೇಯ ದಿಕ್ಕಿನಲ್ಲಿ ಮಂಗಳವಾರ ಕಂಡು ಬಂದಿದ್ದ ಕಡಿಮೆ ಗಾಳಿಯ ಒತ್ತಡವು ಬುಧವಾರ ವಾಯುಭಾರ ಕುಸಿತವಾಗಿ ಮಾರ್ಪಟ್ಟಿದೆ.  ಇದರಿಂದಾಗಿ ಒಡಿಶಾದಲ್ಲಿ ಶುಕ್ರವಾರದಿಂದ (ಡಿ.8) ಬಿರುಗಾಳಿಯಿಂದ ಕೂಡಿದ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಡಿಸೆಂಬರ್‌ 8ರ ವೇಳೆಗೆ ವಾಯುಭಾರ ಕುಸಿತವು ವಾಯವ್ಯ ದಿಕ್ಕಿನಲ್ಲಿ ಸಾಗಿ ಆಂಧ್ರ ಕರಾವಳಿಯನ್ನು ತಲುಪುವ ಸಾಧ್ಯತೆ ಇದೆ. ನಂತರದ 48 ಗಂಟೆಗಳಲ್ಲಿ ಇದು ತೀವ್ರ ವಾಯುಭಾರ ಕುಸಿತವಾಗಿ ಪರಿವರ್ತನೆಯಾಗಲಿದೆ.

ಕೇರಳ: ಸಮಗ್ರ ಪ್ಯಾಕೇಜ್‌ ಘೋಷಣೆ

ಚಂಡಮಾರುತದಿಂದಾಗಿ ಸಂತ್ರಸ್ತರಾದವರಿಗೆ ಕೇರಳ ಸರ್ಕಾರ ಬುಧವಾರ ಸಮಗ್ರ ಪುನರ್ವಸತಿ ಪ್ಯಾಕೇಜ್‌ ಘೋಷಿಸಿದೆ. ಇದರ ಅಡಿಯಲ್ಲಿ ಮೃತಪಟ್ಟ ಮೀನುಗಾರರ ಕುಟುಂಬದವರಿಗೆ ₹20 ಲಕ್ಷ ಪರಿಹಾರ ನೀಡುವುದಾಗಿ ಹೇಳಿದೆ.

‘ಗಂಭೀರವಾಗಿ ಗಾಯಗೊಂಡಿರುವ ಮೀನುಗಾರರಿಗೆ ₹5 ಲಕ್ಷ ಪರಿಹಾರ ಪ್ಯಾಕೇಜ್‌ ನೀಡಲಾಗುವುದು’ ಎಂದು ಮುಖ್ಯಮಂತ್ರಿ ‍ಪಿಣರಾಯಿ ವಿಜಯನ್ ಹೇಳಿದ್ದಾರೆ.

ಇದಲ್ಲದೇ ಮೃತಪಟ್ಟ ಅಥವಾ ನಾಪತ್ತೆಯಾಗಿರುವ ಮೀನುಗಾರರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವೃತ್ತಿಪರ ತರಬೇತಿಯನ್ನು ಸರ್ಕಾರ ಉಚಿತವಾಗಿ ನೀಡಲಿದೆ.

ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಪುನರ್‌ ರಚಿಸುವುದರ ಜೊತೆಗೆ, ಮೀನುಗಾರರಿಗಾಗಿ ಮೀನುಗಾರಿಕಾ ಇಲಾಖೆಯಲ್ಲಿ ನೋಂದಣಿ ಕಚೇರಿ ಸ್ಥಾಪಿಸಲಿದೆ.

ಮೀನುಗಾರಿಕಾ ದೋಣಿಗಳಿಗೆ ಜಿಪಿಎಸ್‌ ಅಳವಡಿಕೆ ಮತ್ತು ಮೊಬೈಲ್‌ ಫೋನ್‌ಗಳ ಮೂಲಕ ಮೀನುಗಾರರಿಗೆ ನೇರವಾಗಿ ಹವಾಮಾನ ಮುನ್ಸೂಚನೆ ನೀಡುವ ವ್ಯವಸ್ಥೆ ಒದಗಿಸಲೂ ಇಲಾಖೆ ಕ್ರಮ ಕೈಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT