7

ಜೀರ್ಣವಾಗದ ಆಸೆಗಳು

Published:
Updated:

ವೈರಾಗ್ಯಶತಕದ ಪದ್ಯವೊಂದು ಹೀಗಿದೆ:

ಭೋಗಾ ನ ಭುಕ್ತಾ ವಯಮೇವ ಭುಕ್ತಾ

ತಪೋ ನ ತಪ್ತಂ ವಯಮೇವ ತಪ್ತಾಃ |

ಕಾಲೋ ನ ಯತೋ ವಯಮೇವ ಯಾತಾಃ

ತೃಷ್ಣಾ ನ ಜೀರ್ಣಾ ವಯಮೇವ ಜೀರ್ಣಾಃ ||

‘ಸುಖಗಳನ್ನು ಅನುಭವಿಸಿ ಮುಗಿಸಲಿಲ್ಲ; ನಾವೇ ಮುಗಿದು ಹೋದೆವು! ತಪಸ್ಸನ್ನು ಆಚರಿಸಲಿಲ್ಲ; ನಾವೇ ಕಷ್ಟ ಪಟ್ಟೆವು! ಕಾಲವು ಕಳೆಯಲಿಲ್ಲ; ನಾವೇ ಸಾಗಿದೆವು. ಆಸೆ ಜೀರ್ಣವಾಗಲಿಲ್ಲ; ನಾವೇ ಜೀರ್ಣರಾದೆವು!’ ಜೀವನದ ಸಾರ್ಥಕತೆ ಎಂದರೆ ಏನು – ಎಂದು ಅವಲೋಕಿಸಲು ಇದು ತುಂಬ ಮಾರ್ಮಿಕವಾದ ಪದ್ಯ.

ನಮ್ಮ ಕಾಲದ ದೊಡ್ಡ ಆಕರ್ಷಣೆ, ಶಕ್ತಿ, ಮಿತಿ, ಚಟ, ಅಲಂಕಾರ, ಅನಿವಾರ್ಯ  –ಹೀಗೆ ಹತ್ತಾರು ಆಯಾಮಗಳನ್ನು ಒಳಗೊಂಡಿರುವ ವಸ್ತು ಎನಿಸಿರುವ ಮೊಬೈಲ್‌ನ ಉದಾಹರಣೆ ಯನ್ನು ಇಲ್ಲಿ ತೆಗೆದುಕೊಳ್ಳಬಹುದು.

ಮೊಬೈಲ್‌ಗಳಲ್ಲಿ ಹತ್ತಾರು ಕಂಪನಿಗಳ, ನೂರಾರು ಮಾಡೆಲ್‌ಗಳಿರುವುದು ನಮಗೆ ತಿಳಿದಿರುವ ಸತ್ಯವೇ. ನಮ್ಮ ಹಣ, ಅನಿವಾರ್ಯಗಳನ್ನು ಆಧರಿಸಿ ಅವುಗಳ ಆಯ್ಕೆ ನಡೆಯುತ್ತದೆ. ಆದರೆ ಈ ಆಯ್ಕೆ ಎಂದಿಗೂ ಸಮಾಧಾನಕ್ಕಾಗಲೀ ತೃಪ್ತಿಗಾಗಲೀ ಕಾರಣವಾಗುವುದೇ ಇಲ್ಲ. ಇದಕ್ಕೆ ಕಾರಣ ಎಂದರೆ ನಮ್ಮ ಮುಂದಿರುವ ಆಯ್ಕೆಗಳು.

ಇಂದು ನಮ್ಮ ಅನಿವಾರ್ಯಕ್ಕೂ ಬಜೆಟ್‌ಗೂ ಸರಿಹೊಂದುವ ಯಾವುದೋ ಒಂದು ಮಾಡೆಲ್‌ನ ಮೊಬೈಲ್‌ ಅನ್ನು ಕೊಂಡೆವು ಎಂದು ಇಟ್ಟುಕೊಳ್ಳೋಣ. ನಾವು ಅದನ್ನು ಕೊಂಡು, ಮನೆಯನ್ನು ತಲುಪುವ ಮೊದಲೇ ಇನ್ನೊಂದು ಹೊಸ ವಿನ್ಯಾಸದ ಸೆಟ್‌ ಮಾರುಕಟ್ಟೆಯನ್ನು ಪ್ರವೇಶಿಸಿರುತ್ತದೆ! ಸರಿ, ಅದನ್ನೂ ಕೊಂಡೆವು ಎಂದಿಟ್ಟುಕೊಳ್ಳೋಣ; ಮರುದಿನ ಇನ್ನೊಂದು ಮಾಡೆಲ್‌ ಪ್ರತ್ಯಕ್ಷವಾಗಿರುತ್ತದೆ.

‘ಅಯ್ಯೋ! ಇನ್ನೊಂದು ದಿನ ಕಾದಿದ್ದರೆ ಇದನ್ನೇ ಕೊಳ್ಳಬಹುದಿತ್ತಲ್ಲ’ ಎಂದು ಸಂಕಟಪಡುತ್ತೇವೆ. ಈ ಸಂಕಟ ಎಂದಿಗೂ ಮುಗಿಯುವಂಥದ್ದಲ್ಲ. ಜೀವನದುದ್ದಕ್ಕೂ ಈ ಮೊಬೈಲ್‌ನ ಗೊಣಗಾಟ ನಿಲ್ಲುವುದೇ ಇಲ್ಲ. ನಮ್ಮ ಗೊಣಗಾಟ ಮೊಬೈಲ್‌ಗೆ ಮಾತ್ರವೇ ಸೀಮಿತವಾಗಿರುವುದಲ್ಲ. ಇಲ್ಲಿ ಮೊಬೈಲ್‌ ಒಂದು ರೂಪಕವಷ್ಟೆ!

ಬಟ್ಟೆ, ಕಾರು, ಮನೆ – ಯಾವುದೂ ನಮ್ಮ ತೃಪ್ತಿಯನ್ನು ಕೊಡುತ್ತಿಲ್ಲ. ಇದಕ್ಕೆ ಕಾರಣ, ನಾವು ಜೀವನದಲ್ಲಿ ವಸ್ತುಗಳ ಹಿಂದೆ ಓಡುತ್ತಿರುವುದೇ ಹೌದು. ಈ ವಸ್ತುಗಳು ಪ್ರತಿನಿಧಿಸುವ ಮೌಲ್ಯಗಳು ನಮಗೆ ಮುಖ್ಯವಾಗಬೇಕಿದ್ದವು. ಆದರೆ ನಮಗಿಂದು ಇವು ನಮ್ಮ ಆಸೆಗೆ, ಪ್ರತಿಷ್ಠೆಗೆ ವಸ್ತುಗಳಾಗುತ್ತಿವೆಯಷ್ಟೆ.

ಮನೆ ನಮ್ಮ ವಾಸಕ್ಕೆ ಅನುಕೂಲವಾಗಿರಬೇಕು ಎನ್ನುವುದಕ್ಕಿಂತ ಅದು ನೋಡುವವರ ಕಣ್ಣುಗಳನ್ನು ಕುಕ್ಕುವಂತಿರಬೇಕು ಎಂದು ಬಯಸುತ್ತೇವೆ. ನಾವು ಹಾಕುವ ಬಟ್ಟೆ ಶರೀರಕ್ಕೆ ಹಿತವಾಗಿರಬೇಕು ಎನ್ನುವುದಕ್ಕಿಂತಲೂ ನಾವೆಷ್ಟು ಶ್ರೀಮಂತರು ಎನ್ನುವುದನ್ನು ಅವು ಸಾರುವಂತಿರಬೇಕು ಎಂದು ನಿರೀಕ್ಷಿಸುತ್ತೇವೆ. ಕೊನೆಗೆ ನಾವು ತಿನ್ನುವ ಆಹಾರ ಕೂಡ ನಮ್ಮ ಹಸಿವನ್ನು ದೂರಮಾಡಬೇಕು, ಆರೋಗ್ಯವನ್ನು ಕಾಪಾಡಬೇಕೆಂದು ಬಯಸುವುಕ್ಕಿಂತಲೂ ಶ್ರೀಮಂತಿಕೆಯ ಸಂಕೇತವಾಗುತ್ತಿದೆ.

ಹೀಗೆ ನಮ್ಮ ಜೀವನದ ಎಲ್ಲ ವಿವರಗಳೂ ಅವುಗಳ ದಿಟವಾದ ಉದ್ದೇಶದಿಂದ ದೂರ ಸರಿದು ಅಡ್ಡದಾರಿಯನ್ನು ಹಿಡಿಯಲು ತೊಡಗಿದರೆ ಜೀವನದ ಸಾರ್ಥಕತೆಯಾದರೂ ಹೇಗೆ ದಕ್ಕೀತು? ಹೀಗೆ ವಸ್ತುಗಳ ಹಿಂದೆ ಓಡಿ ಓಡಿ ದಣಿದು, ಕೊನೆಗೆ ಒಂದು ದಿನ ಸುಸ್ತಾಗಿ ಸೋಲುತ್ತೇವೆ, ಅಷ್ಟೆ. ಆಗ ನಮ್ಮ ಜೀವನವನ್ನು ಹಿಂದಿರುಗಿ ನೋಡಿದರೆ ನಮಗೆ ನಾವು ಸುಖ ಸಿಗುತ್ತದೆ ಎಂದು ಯಾವೆಲ್ಲ ವಸ್ತುಗಳ ಹಿಂದೆ ಓಡಿದೆವೋ ಅವು ಯಾವುವು ಕೂಡ ಸುಖವಾಗಲೀ ನೆಮ್ಮದಿಯನ್ನಾಗಲೀ ಕೊಟ್ಟಿರುವುದಿಲ್ಲ ಎನ್ನುವುದು ತಿಳಿಯುತ್ತದೆ; ನಮಗೆ ದಕ್ಕಿದ ಪ್ರಯೋಜನ ಎಂದರೆ ಕೇವಲ ಓಟ ಓಟ ಮಾತ್ರವೇ! ಇಡಿಯ ಜೀವನವನ್ನು ಯಾವುದಕ್ಕಾಗಿ ವ್ಯಯಿಸಿರುತ್ತೇವೆಯೋ ಅದು ಸಿಕ್ಕಿರುವುದಿಲ್ಲ – ನಮ್ಮ ಆಯುಸ್ಸು ಮಾತ್ರ ಕಳೆದಿರುತ್ತದೆಯಷ್ಟೆ!

ಹಾಗಾದರೆ ನಾವು ಏನು ಮಾಡಬೇಕು?

ನಮ್ಮ ಜೀವನಕ್ಕೂ ಬಯಕೆಗಳಿಗೂ ವಸ್ತುಗಳಿಗೂ ಇರುವ ನಂಟಿನ ಸ್ವರೂಪವನ್ನೂ ಸಾಧ್ಯತೆಯನ್ನೂ ಅರಿತುಕೊಳ್ಳಬೇಕು. ಆಸೆಗಳು ಎಂದಿಗೂ ಬರಿದಾಗುವಂಥದಲ್ಲ; ಈ ಸತ್ಯವನ್ನು ತಿಳಿದುಕೊಳ್ಳಬೇಕಿದೆ. ಆಸೆ ಪಡುವುದು ತಪ್ಪಲ್ಲ; ಆದರೆ ಅದು ನಮ್ಮ ಜೀವನವನ್ನೇ ಕಬಳಿಸುವಷ್ಟು ಮಾರಕವಾಗಬಾರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry