ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರೈವಿಂಗ್ ಕಲಿಕೆಗೆ ನನ್ನಣ್ಣನೇ ಉಸ್ತಾದ್‌

Last Updated 6 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಆರೇಳು ವರ್ಷಗಳ ಹಿಂದಿನ ಮಾತು. ಅಣ್ಣ ಸಚಿನ್ ಐ ಟೆನ್ ಕಾರು ತಂದಿದ್ದ. ದೊಡ್ಡ ಪೈಲ್ವಾನ್ ಆಗುವವಳು ನೀನು. ಈ ಪುಟ್ಟ ಕಾರು ಡ್ರೈವ್ ಮಾಡುವುದನ್ನು ಕಲಿ, ಮುಂದೆ ಉಪಯೋಗಕ್ಕೆ ಬರುತ್ತೆ ಅಂದಿದ್ದ.

ನನ್ನ ಕಾರು ಡ್ರೈವಿಂಗ್ ಕಲಿಕೆಗೆ ನೀನೇ ಉಸ್ತಾದನಾಗು ಎಂದಿದ್ದೆ. ಅದೇ ಕ್ಷಣ ನನ್ನಣ್ಣ ಸ್ಟೀರಿಂಗ್ ಬಿಟ್ಟುಕೊಟ್ಟಿದ್ದ. ತಾನು ಪಕ್ಕದ ಸೀಟಿನಲ್ಲಿ ಕುಳಿತು ಕನ್ನಡಿಯನ್ನು ನೋಡುವ, ಕ್ಲಚ್, ಗೇರ್, ಎಕ್ಸಿಲರೇಟರ್ ಬಳಸುವ ಮೂಲಪಾಠವನ್ನು ಹೇಳಿಕೊಟ್ಟಿದ್ದ. ನಂತರ ಇಗ್ನಿಷನ್ ಆನ್ ಮಾಡುವ ಬಗೆಯನ್ನು ತೋರಿಸಿದ. ಅವನು ಹೇಳಿದಂತೆಯೇ ಮಾಡಿದೆ. ಗಾಡಿ ಶುರುವಾಯಿತು.

ಗೇರ್ ಚೇಂಜ್ ಮಾಡಿ ಕ್ಲಚ್ ನಿಧಾನವಾಗಿ ಬಿಟ್ಟು ಎಕ್ಸಿಲರೇಟರ್ ತುಳಿದೆ. ಗಾಡಿ ಭರ್‍ರನೆ ಮುನ್ನುಗ್ಗಿತು. ನಿಧಾನವಾಗಿ ಎಕ್ಸಿಲರೇಟರ್ ತುಳಿ, ಕ್ಲಚ್ ಬಿಡು ಎನ್ನುತ್ತಿದ್ದ ಅಣ್ಣನ ಸೂಚನೆಯನ್ನು ಸಂಪೂರ್ಣ ಪಾಲಿಸಲಾಗಿರಲಿಲ್ಲ! ಆದರೆ ಪುಣ್ಯಕ್ಕೆ ಯಾವುದೇ ಅನಾಹುತವೂ ಆಗಲಿಲ್ಲ.

ಅಲ್ಲಿಂದ ಮುಂದೆ ಕೇವಲ ಎರಡು, ಮೂರು ದಿನಗಳಲ್ಲಿ ರೋಹ್ಟಕ್‌ನ ತಿರುವಿನ ರಸ್ತೆಗಳಲ್ಲಿ ಸಲೀಸಾಗಿ ಕಾರು ಓಡಿಸತೊಡಗಿದೆ. ಅಖಾಡದಲ್ಲಿ ಎದುರಾಳಿ ಕುಸ್ತಿಪಟುಗಳೊಂದಿಗೆ ಸೆಣಸಾಡಿ ಬೆಳೆಸಿಕೊಂಡಿದ್ದ ಆತ್ಮಬಲದ ಮುಂದೆ ಡ್ರೈವಿಂಗ್ ಕಷ್ಟವೇ ಆಗಲಿಲ್ಲ. ಚಿಕ್ಕವಳಿದ್ದಾಗ ಸೈಕಲ್ ಸವಾರಿ ಅಭ್ಯಾಸ ಮಾಡಿದ್ದೆ. 15ನೇ ವಯಸ್ಸಿನಲ್ಲಿಯೇ ಸ್ಕೂಟಿ ಹೊಡೆಯಲು ಆರಂಭಿಸಿದ್ದೆ. ಅಖಾಡದಲ್ಲಿ ಅಭ್ಯಾಸಕ್ಕಾಗಿ ಹೆಚ್ಚು ಹೊತ್ತು ಕಳೆಯುತ್ತಿದ್ದೆ.

ಆಗೋ ಈಗೋ ಸಮಯ ಸಿಕ್ಕಾಗ ಓಡಾಡಲು ಸ್ಕೂಟಿ ಇತ್ತು. ಆದರೆ ಅಣ್ಣ ಕಲಿಸಿಕೊಟ್ಟ ಮೇಲೆ ಕಾರು ಡ್ರೈವಿಂಗ್ ನೆಚ್ಚಿನ ಹವ್ಯಾಸವೇ ಆಗಿದೆ.
ನನಗೆ ಕಾರು ಚಾಲನೆ ಮಾಡುವುದೆಂದರೆ ಭಾಳ ಇಷ್ಟ. ಆದರೆ ತರಬೇತಿ, ಸ್ಪರ್ಧೆಗಳ ಒತ್ತಡದಲ್ಲಿ ಸಮಯವೇ ಸಿಗುತ್ತಿಲ್ಲ. ರಜೆ ಸಿಕ್ಕರೆ ನಾನು ಮಾಡುವ ಮೊದಲ ಕೆಲಸವೆಂದರೆ ಅದು ಕಾರು ಓಡಿಸುವುದು. ಹಲವು ಬಗೆಯ ಕಾರುಗಳನ್ನು ಚಾಲನೆ ಮಾಡಿದ್ದೇನೆ.

ಹೋದ ವರ್ಷ ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್‌ ಕೂಟದಲ್ಲಿ ಕಂಚಿನ ಪದಕ ಗೆದ್ದ ನಂತರ ನನಗೆ ಕಾಣಿಕೆಯಾಗಿ ಬಂದಿರುವ ಬಿಎಂಡಬ್ಲ್ಯೂ ಕಾರು ಈಗ ನನ್ನ ಬಳಿ ಇದೆ. ಅದರಲ್ಲಿ ಓಡಾಡುವ ಖುಷಿಯೇ ಬೇರೆ.

ನಮ್ಮ ಹರಿಯಾಣದಲ್ಲಿ ಹೆದ್ದಾರಿಯ ಮೇಲೆ ಕಾರು ಚಾಲನೆ ಮಾಡುತ್ತಿದ್ದರೆ ಇಕ್ಕೆಲಗಳಲ್ಲಿ ಗೋಧಿ, ಸಾಸಿವೆ ಸಸಿಗಳು ತುಂಬಿದ ಹಸಿರು ಹೊಲಗದ್ದೆಗಳು, ಎಮ್ಮೆ, ದನಗಳನ್ನು ಮೇಯಿಸುವ ನೋಟಗಳು ಕಣ್ಣಿಗೆ ಕಟ್ಟುತ್ತವೆ. ಕೆಲವು ತಿಂಗಳುಗಳ ಹಿಂದೆ ನಾನು ಮದುವೆಯಾದೆ. ಪತಿ ಸತ್ಯವ್ರತ್ ಕಡಿಯಾನ್ ಅವರಿಗೂ ಕಾರು ಡ್ರೈವಿಂಗ್ ಇಷ್ಟ. ಆದರೆ, ನಾನಿದ್ದರೆ ಅವರು ಪಕ್ಕದ ಸೀಟಿನಲ್ಲಿ ಕೂರುವುದೇ ಹೆಚ್ಚು. ಕಾರು ಓಡಿಸುವ ಕೆಲಸ ನನ್ನದು.

ಒಬ್ಬ ಕ್ರೀಡಾಪಟುವಾಗಿ ನಿಯಮಗಳ ಪಾಲನೆ ಬಗ್ಗೆ ಹೆಚ್ಚು ಗಮನ ನೀಡುತ್ತೇನೆ. ಯಾರೇ ಇರಲಿ ಸಂಚಾರಿ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಅದರಲ್ಲೂ ವಿಶ್ವಮಟ್ಟದ ಸಾಧನೆ ಮಾಡಿ ಬಂದ ಮೇಲೆ ನಮ್ಮ ಜವಾಬ್ದಾರಿ ಇನ್ನೂ ಹೆಚ್ಚುತ್ತದೆ. ಇನ್ನೊಬ್ಬರಿಗೆ ಮಾದರಿಯಾಗುವಂತೆ ಬದುಕಬೇಕು. ಸಂಚಾರಿ ನಿಯಮಗಳು ನಮ್ಮ ಸುರಕ್ಷತೆಗೆ ಇರುವುದರಿಂದ ಅವುಗಳನ್ನು ನಿರ್ಲಕ್ಷಿಸಬಾರದು. ಅವುಗಳನ್ನು ಪಾಲಿಸುತ್ತ ಡ್ರೈವಿಂಗ್ ಮಾಡಿದರೆ ಸಿಗುವ ಆನಂದ ಅಮೂಲ್ಯವಾದದ್ದು.

ಸಾಕ್ಷಿ ಮಲಿಕ್ ಬಗ್ಗೆ...
ಹರಿಯಾಣದ ರೋಹ್ಟಕ್ ಜಿಲ್ಲೆಯ ಮೋಖ್ರಾದಲ್ಲಿ 1992ರಲ್ಲಿ ಸಾಕ್ಷಿ ಜನಿಸಿದರು. ಅವರಿಗೆ ಕುಸ್ತಿಯಲ್ಲಿ ಈಶ್ವರ್ ದಹಿಯಾ, ಕುಲದೀಪ್ ಮಲಿಕ್, ಕೃಪಾಶಂಕರ್ ಮತ್ತು ಮಂಜೀತ್ ಅವರು ತರಬೇತಿ ನೀಡಿದರು. ಹೋದವರ್ಷ ರಿಯೊ ಡಿ ಜನೈರೊದಲ್ಲಿ ನಡೆದಿದ್ದ ಒಲಿಂಪಿಕ್‌ ಕೂಟದಲ್ಲಿ ಅವರು 58 ಕೆ.ಜಿ. ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚಿನ ಪದಕ ಗಳಿಸಿದ್ದರು.

ಈ ಸಾಧನೆ ಮಾಡಿದ ಭಾರತದ ಮೊಟ್ಟಮೊದಲ ಮಹಿಳಾ ಕುಸ್ತಿಪಟು ಅವರು. 2014ರಲ್ಲಿ ಗ್ಲಾಸ್ಗೊದಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ, 2015ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು, ದೆಹಲಿಯಲ್ಲಿ ಇದೇ ವರ್ಷ ನಡೆದಿದ್ದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT