ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಡಿ ನೋಡಲು ಹೋದಾಗ...

Last Updated 6 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಗಂಡು ಯಾರೆಂಬ ಗಲಿಬಿಲಿ!
ಆಗಷ್ಟೇ ಓದು ಮುಗಿದಿತ್ತು. ಶುಭ ಮಾಸದ ಮುಹೂರ್ತದಲ್ಲಿ ಜಾತಕ ಹೊರಹಾಕಿದ್ದರು. ಅಂದು ನನ್ನನ್ನು ನೋಡಲು ಗಂಡಿನ ಕಡೆಯವರು ಬರುವವರಿದ್ದರು. ಮೊದಲ ಅನುಭವ. ಸಲ್ವಾರ್ ಕಮೀಜ್‌ನಲ್ಲೇ ಕಾಲೇಜಿಗೆ ಹೋಗುತ್ತಿದ್ದರಿಂದ ಐದೂವರೆ ಮೀಟರ್ ಸೀರೆ ಉಡುವುದು (ಸುತ್ತುವ) ದರ್ದೆನ್ನಿಸಿದ್ದರೂ ಉಟ್ಟಾಗಿತ್ತು.

ಮನೆಯಲ್ಲಿ ಅಪ್ಪ ಅಮ್ಮ ಮತ್ತು ನಾನು ಮಾತ್ರ. ಅಮ್ಮನೋ ಶಿರಾ, ಉಪ್ಪಿಟ್ಟಿನ ತಯಾರಿ ಸಂಭ್ರಮದಲ್ಲಿದ್ದರೆ, ಅಪ್ಪ ಬರುವವರ ಹಾದಿ ಕಾಯುತ್ತಿದ್ದರು. ಗೆಳತಿಯರ ಅನುಭವ ಕೇಳಿ ತಿಳಿದಿದ್ದ ನನಗೆ ಇದು ಮೊದಲ ಅನುಭವವಾದ್ದರಿಂದ ಏನೋ ಒಂದು ರೀತಿ ಕುತೂಹಲ. ಕೋಣೆಯಲ್ಲಿ ಕುಳಿತು ಕಲ್ಪನಾಲೋಕದಲ್ಲಿ ವಿಹರಿಸುತ್ತಿದ್ದೆ.

ಗೇಟಿನ ಶಬ್ದದೊಡನೆ ಅಪ್ಪನ ಸ್ವಾಗತ ಕೇಳಿಸಿತ್ತು. ಶಿಷ್ಟಾಚಾರದ ಮಾತುಗಳು ಮುಗಿದು ಶಿರಾ-ಉಪ್ಪಿಟ್ಟಿನ ಸರಬರಾಜಿನ ನೆಪದಲ್ಲಿ ನನ್ನನ್ನು ಪರೀಕ್ಷಾ ಕೋಣೆಗೆ ಕಳಿಸಲಾಯಿತು. ಎದೆಬಡಿತವೋ ನಗಾರಿಯಾಗಿತ್ತಾದರೂ ಕಿವಿಯಲ್ಲಿ ಪಿಸುಗುಟ್ಟ ಅಮ್ಮನ ಆಣತಿಯಂತೆ ಮುಖದಲ್ಲಿ ಮೆಲುನಗೆ ಕಡ್ಡಾಯಗೊಳಿಸಿದ್ದೆ. ಜೊತೆಗೆ ಸೀರೆ ಕಾಲಿಗೆ ತೊಡಕದಂತೆ, ಕೈಯಲ್ಲಿ ಹಿಡಿದ ತಿಂಡಿಯ ಟ್ರೇ ಅಲುಗದಂತೆ ಎಚ್ಚರ ವಹಿಸುತ್ತಾ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ನಡೆದದ್ದು ಹಗ್ಗದ ಮೇಲೆ ನಡೆಯುವ ದೊಂಬರಾಟದ ಹುಡುಗಿಯನ್ನು ನೆನಪಿಸಿತ್ತು.

‘ಇವಳು ನನ್ನ ಮಗಳು ಲತಾ...’ ನನ್ನ ಗೆಟಪ್ ನೋಡೇ ಗೊತ್ತಿರುತ್ತೆ ನಾನೇ ಹುಡುಗಿ ಅಂತ. ಮತ್ತಿದು ಬೇಕಿತ್ತೇ? ಅಪ್ಪನ ಮಾತಿಗೆ ನಗುಬಂದಿತ್ತು. ನಗುತ್ತಲೇ ಮುಖವೆತ್ತಿ ನಿರುಕಿಸಿದ್ದೆ. ಪರಿಚಯಸ್ಥೆ ಚಂಪಕ್ಕಳ ಜೊತೆಗೆ ಇಬ್ಬರು ಗಂಡುಗಳು ವಿರಾಜಮಾನರಾಗಿದ್ದರು! ಇಬ್ಬರ ಮುಖದಲ್ಲೂ ಮುಗುಳುನಗೆ ರಾಚಿತ್ತು. ಸಮವಯಸ್ಕರಂತೆ ಕಂಡಿದ್ದ ಇಬ್ಬರೂ ಚೆಂದದ ಗಂಡುಗಳೇ ಹೌದು, ಆದರೆ ಇಬ್ಬರಲ್ಲಿ ನನ್ನನ್ನು ನೋಡಲು ಬಂದ ಗಂಡು ಯಾರಿರಬಹುದು?

ಅಪ್ಪ ಗುರುತು ಮಾಡಿಸಬಾರದೇ? ನಾ ಯಾರನ್ನು ನೋಡಲಿ? ನನ್ನ ಸಮಸ್ಯೆ ತೋರಗೊಡದೇ ತಿಂಡಿ ತೀರ್ಥದ ವಿತರಣೆ ಮಾಡಿದ್ದೆ. ಅಷ್ಟರಲ್ಲಿ ಅಪ್ಪ ಕುಳಿತುಕೊಳ್ಳಲು ಹೇಳಿದ್ದರಿಂದ ಪರೀಕ್ಷೆ ಎದುರಿಸಲು ಸನ್ನದ್ಧಳಾಗಿ ಕುಳಿತೆ.
ಎಲ್ಲವನ್ನೂ ತಿಳಿದುಕೊಂಡು ಬಂದಿದ್ದರೂ ‘ಏನ್ ಕಲಿತದ್ದು, ಯಾವ ಕಾಲೇಜು, ಅಡುಗೆ ಮಾಡೋಕೆ ಬರುತ್ತಾ ... ' ಮುಂತಾದ ಪ್ರಶ್ನಾವಳಿಗಳ ಸರಮಾಲೆ ಶುರುವಾಗಿತ್ತು. ಪ್ರಶ್ನೆಗಳ ರೂವಾರಿಯೇ ಗಂಡು ಎಂಬುದನ್ನು ಊಹಿಸಿ ಆತನನ್ನು ಸಿಕ್ಕಷ್ಟು ಸಮಯದಲ್ಲಿ ಅಲ್ಪ ಸ್ವಲ್ಪ ನೋಡಿದ್ದೆ. ತಲೆಯೆತ್ತಿ ನಿರ್ಭಿಡೆಯಿಂದ ನೋಡುವಂತಿರಲಿಲ್ಲ. ‘ಹುಡುಗಿ ತುಂಬಾ ಬೋಲ್ಡ್, ಗಂಡುಬೀರಿ - ನಯನಾಜೂಕು ಇಲ್ಲದವಳು...’ ಮುಂತಾದ ಬಿರುದಾವಳಿಗಳ ಜೊತೆಗೆ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗುವ ಆತಂಕ!

ಫಲಿತಾಂಶ ತಿಳಿಸುತ್ತೇವೆಂದು ಹೋದರು. ಹುಡುಗ ಹಾಲುಬಣ್ಣದ ಸುಂದರ. ಮಾಸಲು ಬಣ್ಣದ ನನ್ನನ್ನು ಒಪ್ಪಲಾರ, ವಧುಪರೀಕ್ಷೆ ಎದುರಿಸಲು ತಾಲೀಮು ಸಿಕ್ಕಂತಾಯಿತು ಎಂದುಕೊಂಡೆ. ಆದರೆ ಪರೀಕ್ಷೆ ಪಾಸಾಗಿ ಆ ಹೀರೋನೇ ನನ್ನ ಬಾಳ ಸಂಗಾತಿಯಾಗಿ ಬಂದದ್ದಾಯಿತು.
– ಲತಾ ಹೆಗಡೆ ಹುಬ್ಬಳ್ಳಿ

*
ಆಕೆಯೂ ನನ್ನನ್ನು ನೋಡುತ್ತಿದ್ದಳು

ಭಾನುವಾರ ಬಂತಂದ್ರೆ ಹಲ್ಲುಗಳಿಗೂ ರಜೆ ಕೊಡೋ ನಾನು ಆ ಭಾನುವಾರ ಮಾತ್ರ ಹಲ್ಲು ತಿಕ್ಕಿ, ಕೊಳೆ ಇಲ್ಲದ ಬಟ್ಟೆ ಹಾಕೊಂಡು 9 ಗಂಟೆಗೆ ರೆಡಿಯಾಗಿ ಫ್ರೆಂಡಿಗೆ ಫೋನ್ ಮಾಡಿದ್ರೆ ಅವ ನನಗಾಗಿಯೇ ಕಾಯ್ತಿದ್ದ. ನನ್ನ ನಂಬಿ ಒಂದು ಹುಡುಗಿ ಕೊಡ್ತಾರಾ ಅನ್ನೋ ಗೊಂದಲದಲ್ಲೇ ಹುಡುಗಿ ಮನೆ ಗೃಹಪ್ರವೇಶವಾಯಿತು.

ಮೂಲೆಲಿದ್ದ ಸ್ಪೀಕರಲ್ಲಿ ಬರ್ತಿದ್ದ ಹಾಡನ್ನು ಅವರಮ್ಮ ಆಫ್ ಮಾಡಿ ಸನ್ನಿವೇಶನ ಪ್ರಶಾಂತಗೊಳಿಸಿದರು.

ಹುಡುಗಿಯ ರೆಪ್ರೆಸೆಂಟೇಟಿವ್ ಆಗಿ ಒಬ್ಬ ತಾತ ಬಂದು ಕುಳಿತರು. ಅವರ ಪ್ರಶ್ನೆಗಳಿಗೆ ಉತ್ತರಿಸದಿದ್ರೆ ಎಲ್ಲಿ ಬೈಸಿಕೊಳ್ಳಬೇಕಾಗುತ್ತೋ ಅನ್ನೋ ಭಯದಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿಯಾಯಿತು.

ಈ ನಡುವೆ ಹುಡುಗಿ ನೀರುತಂದು ಮೊದಲು ನನ್ನ ಫ್ರೆಂಡ್‌ಗೆ ನಂತರ ಹಿರಿಯರೊಬ್ಬರಿಗೆ, ಅಂತಿಮವಾಗಿ ನಂಗೆ ಕೊಟ್ಟಳು. ಹುಡುಗಿ ಮುಖ ನೋಡೋಣ ಅನ್ನೋವಷ್ಟರಲ್ಲಿ ತಾತನಿಂದ ಪ್ರಶ್ನೆಯೊಂದು ತೂರಿಬಂತು, ಕಿರಿಕಿರಿ ಅನಿಸಿದ್ರು ನಗದೇ ವಿಧಿಯಿರಲಿಲ್ಲ, ಸರಿ ತಿಂಡಿ ಕೊಡೋಕೆ ಬರೋವಾಗ ಹುಡುಗೀನ ದೂರದಿಂದಲೇ ನೋಡಬೇಕು ಅಂತ ತೀರ್ಮಾನಿಸಿ ಬಾಗಿಲಿಗೆ ಸಂಪೂರ್ಣ ಗಮನ ಕೇಂದ್ರೀಕರಿಸಿದೆ.

ಹುಡುಗಿ ಬಂದ್ಲು. ಆಕೆಯನ್ನೇ ದೃಷ್ಟಿಇಟ್ಟು ನೋಡಿದೆ. ಮಜ ಅಂದ್ರೆ, ಆ ಹುಡುಗೀನೂ ಹಾಗೇ ನೋಡುತ್ತಿದ್ದಳು. ನನ್ನ ಮನದಲ್ಲಿ ಹೊಸ ಭಾವ ಮೂಡಿ ಹುಡುಗಿ ಫಸ್ಟ್ ಕ್ಲಾಸ್‌ನಲ್ಲಿ ಪಾಸ್‌ ಆಗ್ಬಿಟ್ಲು. ತಿಂಡಿ ತೊಗೊಳೋ ಸಮಯದಲ್ಲಿ ಫೇಸ್‌ ಟು ಫೇಸ್ ಥ್ಯಾಂಕ್ಸ್ ಹೇಳ್ದೆ. ಆದ್ರೆ ಆ ಥ್ಯಾಂಕ್ಸ್ ಏನಕ್ಕೂ ಉಪಯೋಗಕ್ಕೆ ಬರಲಿಲ್ಲ.

ನಾನು ಆಕೆಯ ಮನಸ್ಸಿನಲ್ಲಿ ಹೊಸ ಭಾವ ಮೂಡಿಸುವಲ್ಲಿ ವಿಫಲನಾಗಿ ಮತ್ತಷ್ಟು ಅಧ್ಯಾಯ ಬರೆಯುವ ಅವಕಾಶ ಪಡೆದೆ. ಮತ್ತೆ ಮತ್ತೆ ಜೋಡಿ ನೋಡಲು ಹೋಗುತ್ತಿದ್ದೆ.‌
–ನಾಗೇಶ್ ಎಚ್‌. ಪಿ.

*
ಒಲ್ಲೆ ಎಂದವನೇ ನಲ್ಲನಾದ
ಆಗಷ್ಟೇ ಪದವಿಯ ಪ್ರಾಯೋಗಿಕ ಪರೀಕ್ಷೆಗಳು ಮುಗಿದಿದ್ದವು. ಅಪ್ಪ ಅಮ್ಮ ಮದುವೆ ಏಜೆಂಟರಿಗೆ, ವಧು-ವರರ ಸಮಾಜದಲ್ಲಿ ನನ್ನದೊಂದು ಫೋಟೊ ಕೊಟ್ಟು ಹೆಸರನ್ನು ನೋಂದಣಿ ಮಾಡಿಸಿಯಾಗಿತ್ತು. ಮುಂದೆ ಓದಿ, ಕೆಲಸಕ್ಕೆ ಸೇರುತ್ತೇನೆ ಎಂದರೂ ಬಿಡದೆ, ಮದುವೆ ಆದ ಮೇಲೂ ಓದಬಹುದು. ಈಗಿನ್ನೂ ಹುಡುಕಲು ಶುರು ಮಾಡಿದ್ದೇವೆ, ಮದುವೆ ಫಿಕ್ಸ್ ಆಗಲು ಕನಿಷ್ಠ ಎರಡು ವರ್ಷವಾದರೂ ಆಗಬಹುದು, ಆ ಗ್ಯಾಪ್‍ನಲ್ಲಿ ಓದು, ಕೆಲಸಕ್ಕೂ ಹೋಗುವೆಯಂತೆ ಎಂಬುದು ಅಪ್ಪನ ಆಲಾಪ.

ವರನೊಬ್ಬ ಮನೆ ಮಂದಿಯನ್ನೆಲ್ಲಾ ಕರೆದುಕೊಂಡು ಬಂದು ತಿಂಡಿ ಮೆದ್ದು ಹೋದರೆ, ಇನ್ನೊಬ್ಬ ವರ ಸ್ನೇಹಿತರೊಟ್ಟಿಗೆ ಬಂದು ಕಾಫಿಗಷ್ಟೇ ಖರ್ಚು ಮಾಡಿಸಿದರು. ಇನ್ನೊಬ್ಬರು ನನ್ನಿಂದ ಹಾಡನ್ನೂ ಹಾಡಿಸಿ ಕಾಮೆಂಟ್ ಮಾಡಿದರು. ಮತ್ತೊಬ್ಬರು ಸ್ವಂತ ಅಳಿಯನಂತೆ ದೇವರ ಪೂಜೆಯನ್ನೂ ನೆರವೇರಿಸಿ ಅಜ್ಜಿಯರ ಮೆಚ್ಚುಗೆ ಗಳಿಸಿದರು.

ಹೀಗೆ ನಾಲ್ಕೈದು ವಧುಪರೀಕ್ಷೆಗಳು ಮುಗಿದ ಮೇಲೆ ಬಂದವರೇ ನನ್ನವರು. ತಂಗಿ ಬಾಮೈದನ ಜೊತೆ ಬಂದಿದ್ದ ಅವರನ್ನು ನೋಡಿದ್ದು ಮಟ ಮಟ ಮಧ್ಯಾಹ್ನ ಕರೆಂಟ್ ಹೋದಾಗ, ಹಗಲಲ್ಲೂ ಕತ್ತಲೆನಿಸುವ ನಮ್ಮ ಮನೆಯಲ್ಲಿ. ಬೇರೆ ಹುಡುಗರನ್ನು ನೋಡಿ ನೋಡಿ ಸಾಕಾಗಿ, ಇವರನ್ನು ಕಣ್ಣೆತ್ತಿಯೂ ನೋಡಿರಲಿಲ್ಲ. ಬಂದ ಹುಡುಗ ನನ್ನನ್ನು ಒಪ್ಪಲೇಬಾರದೆಂದು ನನ್ನ ಅಮ್ಮನ ಹಳೇ ಸೀರೆಯೊಂದನ್ನು ಸುತ್ತಿಕೊಂಡು, ತಲೆಗೊಂದಿಷ್ಟು ಎಣ್ಣೆ ಹಚ್ಕೊಂಡಿದ್ದೆ. ಕಾಫಿ, ಬಿಸ್ಕೆಟ್, ಖಾರವೊಂದಷ್ಟು ಕೊಟ್ಟು, ಹುಡುಗನ ಮುಖವನ್ನೂ ನೋಡದೆ ಒಳಗೆ ಬಂದಿದ್ದೆ. ಹುಡುಗ ನನ್ನ ಒಪ್ಪುವುದಿಲ್ಲವೆಂಬ ಖುಷಿಯಲ್ಲಿದ್ದೆ. ಆದರೆ ಹತ್ತು ನಿಮಿಷದ ಬಳಿಕ ಅವರ ತಂಗಿ ಒಳಬಂದು ನನ್ನ ಪಕ್ಕ ನಿಂತು ಎತ್ತರ ಪರೀಕ್ಷಿಸಿ ಬಂದಾಗಲೇ ಗೊತ್ತಾದದ್ದು ಹುಡುಗ ನನ್ನನ್ನು ಮೆಚ್ಚಿಕೊಂಡಿದ್ದಾರೆಂದು. ನನಗೆ ಆಗ ನಿಜವಾಗಿಯೂ ಪೀಕಲಾಟ ಶುರುವಾಗಿತ್ತು. ಏಕೆಂದರೆ ನಾನು ಹುಡುಗನನ್ನು ಸರಿಯಾಗಿ ನೋಡಿರಲೇ ಇಲ್ಲ.

ಹುಡುಗನ ಬಾಮೈದ ಒಳಬಂದು ಒಂದೇ ಸಮನೆ ನನ್ನ ಅಭಿಪ್ರಾಯ ತಿಳಿಸುವಂತೆ ಪೀಡಿಸತೊಡಗಿದರು. ನನ್ನ ಅಪ್ಪ ಅಮ್ಮ ಒಪ್ಪಿದರೆ ನನ್ನ ಅಭ್ಯಂತರವೇನೂ ಇಲ್ಲವೆಂದು ತಿಳಿಸಿದೆ. ಹುಡುಗನನ್ನು ಮತ್ತೊಮ್ಮೆ ನೋಡಬೇಕೆನ್ನುವ ಬಯಕೆ.

ಹಾಗೂ ಹೀಗೂ ಬಾಗಿಲ ಸಂದಿಯಿಂದ ಕದ್ದು ಕದ್ದು ನೋಡುತ್ತಿದ್ದೆ. ನನ್ನ ತಮ್ಮ ಹತ್ತಿರಕ್ಕೆ ಬಂದು ಕಿವಿಯಲ್ಲೇನೋ ಉಸುರಿದ, ಅದೇನೆಂದು ನನಗೆ ತಿಳಿಯುವ ಮೊದಲೇ ಎಲ್ಲರಿಗೂ ಕೇಳಿಸುವಂತೆ ‘ಅಕ್ಕ ಇನ್ನೊಮ್ಮೆ ಹುಡುಗನನ್ನು ನೋಡಬೇಕಂತೆ’ ಎಂದು ಜೋರಾಗಿ ಕಿರುಚಿಬಿಟ್ಟ. ನನಗಂತೂ ನಾಚಿಕೆಗೆ ಮುಖ ಕೆಂಪಿಡಿದುಬಿಟ್ಟಿತ್ತು.

ಕೊನೆಗೆ ನನ್ನನ್ನು ಮತ್ತು ಹುಡುಗನನ್ನು ಒಂದು ಕೋಣೆಯೊಳಗೆ ಮಾತನಾಡಲು ಬಿಟ್ಟರು. ಹುಡುಗ ಬಹಳ ಮೌನಿ. ನನ್ನ ಮಾತೇ ಜೋರಾಗಿತ್ತು. ಮದುವೆಯೂ ನಡೆಯಿತು. ಈ ಮಧ್ಯೆ ಸ್ನಾತಕೋತ್ತರ ಪದವಿಯನ್ನು ಮೊದಲ ರ‍್ಯಾಂಕ್‌ನಲ್ಲಿ ಪಾಸ್ ಮಾಡಿದೆ.
-ಶ್ವೇತಾ ಎಂ.ಪಿ ತುಮಕೂರು

*


ಹುಡುಗಿ ನೋಡದೇ ಮದುವೆ ಆದೆ
2006ರಲ್ಲಿ ಮೈಸೂರಿಗೆ ಹೋಗಿದ್ದ ನನ್ನ ಅತ್ತಿಗೆ, ಅವರ ಸಂಬಂಧಿ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ನನ್ನ ಮದುವೆಗೆ ಹುಡುಗಿ ಹುಡುಕುತ್ತಿದ್ದವರಲ್ಲಿ ಒಬ್ಬರಾಗಿದ್ದ ಅವರು ನನ್ನ ಮದುವೆಯ ವಿಚಾರವನ್ನು ಅವರ ಮನೆಯಲ್ಲಿ ಪ್ರಸ್ತಾಪಿಸಿದಾಗ ಆ ಮನೆಯವರು ತಮ್ಮ ಸಂಬಂಧದ ಒಳ್ಳೆ ಗುಣ ಲಕ್ಷಣವಿರುವ ಹುಡುಗಿ ಇದ್ದಾಳೆಂದು ತಿಳಿಸಿದ್ದರು.

ವಿಚಾರ ಮುಂದುವರಿದು ಹುಡುಗಿಯ ತಾಯಿ ನಮ್ಮ ಅತ್ತಿಗೆ ಉಳಿದ್ದಿದ್ದ ಮನೆಗೆ ಬಂದು ಹುಡುಗಿ ಫೋಟೊ ತೋರಿಸಿದ್ದರು. ನಮ್ಮ ತಂದೆ ಹೆಚ್ಚಿನ ವಿಚಾರಣೆ ಮಾಡಿ ನಮಗೂ ಹಾಗೂ ಹುಡುಗಿ ಕಡೆಯವರಿಗೂ ಅನುಕೂಲವಾಗುವಂತೆ ಶಿವಮೊಗ್ಗದಲ್ಲಿರುವ ಹುಡುಗಿಯ ದೊಡ್ಡಮ್ಮನ ಮನೆಯಲ್ಲಿ ಸಂದರ್ಶನ ಮಾಡುವುದೆಂದು ಏರ್ಪಾಡಾಯಿತು.

ಆ ದಿವಸ ಬೆಳಿಗ್ಗೆ ನಮ್ಮ ತಂದೆ, ದೊಡ್ಡಪ್ಪ, ನಾನು ಹಾಗೂ ನನ್ನ ಸ್ನೇಹಿತರೊಬ್ಬರು ನಮ್ಮ ಊರಿನಿಂದ ಶಿವಮೊಗ್ಗಕ್ಕೆ ಹೊರಟೆವು. ಹುಡುಗಿಯ ತಾಯಿ ತವರು ಮನೆಯವರ ಪರಿಚಯ ಮೊದಲೇ ಇದ್ದ ನನ್ನ ದೊಡ್ಡಪ್ಪ ದಾರಿಯುದ್ದಕ್ಕೂ ಅವರ ಗುಣಗಾನ ಮಾಡುತ್ತಿದ್ದರು. ಹುಡುಗಿಯನ್ನು ನೋಡದ ಹಾಗೂ ಹುಡುಗಿಯ ಬಗ್ಗೆ ಏನೂ ತಿಳಿಯದ ನಾನು ಮೌನವಾಗಿದ್ದೆ.

ನಿಗದಿಯಂತೆ ಹುಡುಗಿ ತೋರಿಸುವ ಮನೆಗೆ ತಲುಪಿದೆವು. ಮನೆಯಲ್ಲಿ ಹುಡುಗಿಯ ಪೋಷಕರು, ಸಹೋದರ ಮಾವಂದಿರು ಹಾಗೂ ದೊಡ್ಡಮ್ಮಂದಿರು ಇದ್ದರು. ಉಭಯ ಕುಶಲೋಪರಿ ನಂತರ ಒಬ್ಬರು ತಿಂಡಿ ಕೊಡಲು ಸನ್ನೆ ಮಾಡಿದರು. ಮೊದಲಿಗೆ ಹುಡುಗಿ ಸೀರೆಯುಟ್ಟು ನೀರು ತಂದಿಟ್ಟಳು. ಹುಡುಗಿ ನೋಡಬೇಕೆಂಬ ಕುತೂಹಲದ ಜೊತೆಗೆ ನಾಚಿಕೆ, ಮುಜುಗರ ಹಾಗೂ ಗಾಬರಿ ಒಟ್ಟಿಗೆ ಸೇರಿ ಬೆವರಿದ ನಾನು ಹುಡುಗಿಯನ್ನು ನೋಡಲಾಗಲೇ ಇಲ್ಲ, ಬದಲಾಗಿ ಹುಡುಗಿಯ ಸೆರಗು ತಾಗಿ ಕೆಳಗೆ ಬಿದ್ದ ನೀರಿನ ಲೋಟವನ್ನು ಹುಡುಕಿ ಮೇಲಿಡುವ ಕೆಲಸ ಮಾಡಿದೆ!

ತಿಂಡಿ ಹಾಗೂ ಕಾಫಿಯನ್ನು ಬೇರೆ ಯಾರೋ ತಂದುಕೊಟ್ಟರು. ತಿಂಡಿ ತಿಂದ ನಂತರ ಹುಡುಗಿಯ ಹತ್ತಿರ ಪ್ರತ್ಯೇಕವಾಗಿ ಮಾತನಾಡುತ್ತೀರಾ ಅಂತ ನೆರೆದವರೊಬ್ಬರು ಕೇಳಿದಾಗ ‘ಇಲ್ಲ’ ಎಂದೆ. ಆದೇ ಉತ್ತರವನ್ನು ಹುಡುಗಿಯು ಸಹ ಕೊಟ್ಟಳು. ನಂತರ ಐದ್ಹತ್ತು ನಿಮಿಷ ಮಾತನಾಡಿ ಅಲ್ಲಿಂದ ಹೊರಟೆವು.

ಅವರ ಮನೆಯಿಂದ ಹೋಟೆಲ್‌ಗೆ ಊಟಕ‍್ಕೆಂದು ಹೋಗುತ್ತಿರುವಾಗ ಹುಡುಗಿ ಹುಡುಕುವ ಕಷ್ಟ ಅರಿತಿದ್ದ ನನ್ನ ದೊಡ್ಡಪ್ಪ ಹಾಗೂ ತಂದೆ, ಸಂಬಂಧ ಎಲ್ಲ ಆಗಬಹುದು ಎಂದು ಮಾತನಾಡುತ್ತಿದ್ದರು. ಅವರು ಏನಾದರು ಒಪ್ಪಿದರೆ ನಾವು ಒಪ್ಪುವುದೇ ಎಂದು ಹೇಳುತ್ತಿದ್ದರು. ಹುಡುಗಿಯನ್ನೇ ನೋಡದ ನಾನು ‘ಅವರು ಒಪ್ಪಿದಾಗ ತಾನೆ ಮುಂದಿನ ಮಾತು’ ಅಂತ ಸುಮ್ಮನಿದ್ದೆ.

ಊಟಕ್ಕೆ ಕುಳಿತಾಗ ನನ್ನ ತಂದೆಗೆ ಕರೆ ಮಾಡಿದ ‘ಪರಸ್ಪರ ಸಂಬಂಧಿ’ ನಮ್ಮ ಕಡೆಯಿಂದ ಒಪ್ಪಿಗೆ ಎಂದರು. ನನ್ನ ನಿಲುವನ್ನು ಕೇಳಲು ತಂದೆ ದೊಡ್ಡಪ್ಪನಿಗೆ ಹೇಳಿದಾಗ, ಅವನನ್ನು ಕೇಳುವುದೇನಿದೆ ಒಪ್ಪಿಗೆ ಅಂತ ತಿಳಿಸು ಎಂದು ಕರೆ ಮಾಡಿಸಿದರು. ಅಲ್ಲಿಗೆ ನಾನು ಹುಡುಗಿ ನೋಡುವ ಶಾಸ್ತ್ರದಲ್ಲಿ ಹುಡುಗಿಯನ್ನೇ ನೋಡದೇ ಒಪ್ಪಿಗೆ ಕೊಟ್ಟದ‍್ದಾಯಿತು ಹಾಗೂ ಅದೇ ಹುಡುಗಿಯನ್ನು ಮದುವೆಯೂ ಅಗಿದ‍್ದಾಯಿತು.
–ಗೌತಮ್ ಚಿಕ್ಕಮಗಳೂರು

*
ಇಬ್ಬಿಬ್ಬರನ್ನು ನೋಡಿ ಬಂದೆ
ಮೊದಲೇ ಮದುವೆ ಬೇಡವಾಗಿದ್ದ ನನಗೆ ಗೆಳೆಯರ ಹಾಗೂ ಮನೆಯವರೆಲ್ಲರ ಒತ್ತಾಯದಿಂದ ಹುಡುಗಿ ನೋಡಲು ಒಪ್ಪಿಕೊಂಡೆ. ಆದರೆ ಹುಡುಗಿ ನೋಡಲು ಹೋಗಿದ್ದು ನನ್ನ ತಂದೆ ಮತ್ತು ಗೆಳೆಯ. ಇವರಿಬ್ಬರು ಹೋಗಿ ಹುಡುಗಿ ನೋಡಿ ಬಂದು ತಮ್ಮ ಒಪ್ಪಿಗೆ ಹೇಳಿದರು. ಆಮೇಲೆ ನಮ್ಮೂರಿಗೆ ಹತ್ತಿರವಿದ್ದ ಹುಡುಗಿಯ ಊರಿಗೆ ನಾನು, ನನ್ನ ತಂದೆ ಮತ್ತು ಗೆಳೆಯ ಮೂವರು ಹೋದೆವು.

ಆ ಊರಿಗೆ ಹೋದ ಮೇಲೆ ಹುಡುಗಿ ತೋರಿಸುವ ವ್ಯಕ್ತಿಯನ್ನು ಕರೆದುಕೊಂಡು ಹೋಗಬೇಕಾಗಿತ್ತು. ಆ ವ್ಯಕ್ತಿಗೆ ಕರೆ ಮಾಡಿದೆವು. ಆದರೆ ಫೋನ್ ನಾಟ್ ರೀಚೆಬಲ್ ಆಗಿತ್ತು. ಆ ವ್ಯಕ್ತಿ ಭೇಟಿಯಾಗಲೇ ಇಲ್ಲ. ಕೊನೆಗೆ ನಾವೇ ಆ ಹುಡುಗಿಯ ತಂದೆ ಹೆಸರು ಹಾಗೂ ಅವರ ಮನೆತನದ ಹೆಸರು ಕೇಳಿಕೊಂಡು ಹೋದೆವು.

ನಮಗೆ ಅವರ ವಿಳಾಸ ಖಚಿತವಾಗಿ ಗೊತ್ತಿರಲಿಲ್ಲ. ನನ್ನ ತಂದೆಗೂ ಮರೆತು ಹೋಗಿತ್ತು. ಆದರೂ ಅಲ್ಪ ಸ್ವಲ್ಪ ನೆನಪಿನೊಂದಿಗೆ ಅವರಿವರನ್ನು ಕೇಳಿಕೊಂಡು ಹುಡುಗಿ ಮನೆಗೆ ಹೋದೆವು. ಆದರೆ ಹುಡುಗಿ ಮನೆಯವರಿಗೆ ನಾವು ಯಾರು, ಏಕೆ ಬಂದಿದ್ದೇವೆ ಎಂಬುದೇ ಗೊತ್ತಾಗದೆ ಗಲಿಬಿಲಿಗೊಂಡರು. ಹುಡುಗಿಗಂತೂ ಈ ವಿಷಯ ಗೊತ್ತೇ ಇರಲಿಲ್ಲ. ನಮ್ಮ ತಂದೆ ಹುಡುಗಿ ನೋಡುವ ವಿಷಯವನ್ನು ಅವರಿಗೆ ತಿಳಿಸಿದ ನಂತರ ಅವರು ಹುಡುಗಿಯನ್ನು ತೋರಿಸಲು ಒಪ್ಪಿದರು. ಹುಡುಗಿ ನೋಡುವ ಕಾರ್ಯಕ್ರಮ ಮುಗಿಯಿತು. ಹುಡುಗಿಗೂ, ಅವರ ಮನೆಯವರಿಗೂ ನಾನು ಒಪ್ಪಿಗೆಯಾಗಿದ್ದೆ.

ಆಮೇಲೆ ನನ್ನ ತಂದೆ ಪರಸ್ಪರ ಪರಿಚಯ ಮಾಡಿಕೊಳ್ಳುತ್ತಾ ಹುಡುಗಿಯ ತಂದೆ ಹೆಸರು ಹಾಗೂ ಮನೆತನದ ಹೆಸರು ಎಲ್ಲವನ್ನು ವಿವರವಾಗಿ ತಿಳಿದುಕೊಂಡು ಗೊಂದಲಕ್ಕೊಳಗಾದರು. ನನ್ನ ತಂದೆಯವರಿಗೆ ಏನೋ ಎಡವಟ್ಟಾಗಿದೆ ಎಂಬುದು ಖಾತ್ರಿಯಾಯಿತು. ಮನೆಗೆ ಹೋಗಿ ಅಭಿಪ್ರಾಯ ತಿಳಿಸುತ್ತೇವೆ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತೆವು. ಅಲ್ಲಿಂದ ಹೊರ ಬರುತ್ತಿದ್ದಂತೆಯೇ ಹುಡುಗಿ ತೋರಿಸುವ ವ್ಯಕ್ತಿಯೇ ಎದುರಾದರು.

‘ನೀವ್ ಹುಡುಗಿ ತೋರ್ಸಾಕ ಯಾಕ್ ಬರಲಿಲ್ಲ, ನಿಮ್ಮ ದಾರಿ ಕಾದು ಕಾದು ನಾವ್ ಹೋಗಿ ನೋಡಿಕೊಂಡು ಬಂದ್ವಿ’ ಎಂದು ನನ್ನ ತಂದೆ ಹೇಳಿದಾಗ ವ್ಯಕ್ತಿ ‘ಅಲ್ರೀ ಯಜಮಾನ್ರ; ನಾನ್ ಆವಾಗಿನಿಂದ ಆ ಹುಡುಗಿ ಮನ್ಯಾಗ್ ಇದ್ದೀನ್ರೀ ನೀವೆಲ್ಲಿ ಬಂದ್ರೀ? ನೀವ್ ಯಾರ್ ಮನೆಗ್ ಹೋಗಿದ್ರೀ? ನಮ್ ಊರಾಗ ನೆಟ್‌ವರ್ಕ್‌ ಸರಿಯಾಗಿ ಬರೋದಿಲ್ಲ ನೋಡ್ರೀ’ ಎಂದ.

ಆ ವ್ಯಕ್ತಿಗೆ ಇವರು ಈ ಹುಡುಗಿ ಅಂತ ಬೇರೆ ಕನ್ಯಾ ನೋಡಿ ಬಂದರು ಅಂತ ಗೊತ್ತಾಗಿ ನಗಲಿಕ್ಕ ಹತ್ತಿದ. ಆವಾಗ ನಾವ್ ದಾರಿ ತಪ್ಪಿದ್ದು ಪಕ್ಕಾ ಆಯಿತು. ನಾವು ನೋಡಿದ್ದು ಬೇರೆ ಹುಡುಗಿಯನ್ನು. ನಂತರ, ನೋಡಬೇಕಾದ ಹುಡುಗಿ ಮನೆಗೆ ಕರೆದುಕೊಂಡು ಹೋದ್ರು. ಹುಡುಗಿ ನೋಡಿದ್ದು ಆಯಿತು, ಅವರಿಗೂ ನಮಗೂ ಒಪ್ಪಿಗೆಯಾಗಿ ಕೆಲವೇ ದಿನಗಳಲ್ಲಿ ಮದುವೆಯೂ ಆಯಿತು. ಕೊನೆಗೆ ಗೊತ್ತಾಯಿತು ಆ ಇಬ್ಬರು ಹುಡುಗಿಯರು ಸಂಬಂಧಿಗಳೆಂದು.

ಆದದ್ದಿಷ್ಟೇ. ಇಬ್ಬರೂ ಹುಡುಗಿಯರ ತಂದೆಯ ಹೆಸರು ಹಾಗೂ ಮನೆತನದ ಹೆಸರು ಒಂದೇ ಆಗಿದ್ದವು. ಆದರೆ ನನ್ನ ತಂದೆಯವರ ಮರೆವಿನಿಂದ ಎಡವಟ್ಟಾಗಿತ್ತು. ಜೋಡಿ ನೋಡಲು ಹೋದಾಗ ಹೀಗಾಗಿದ್ದನ್ನು ನನ್ನ ಹೆಂಡತಿಗೆ ಹೇಳುತ್ತಾ ಛೇಡಿಸುತ್ತಿರುತ್ತೇನೆ.
-ಪಿ.ಎ.ರೊಟ್ಟಿ ಬೆಳಗಾವಿ

*
ನನ್ನನ್ನು ಒಪ್ಪುವರೇ?
ನನ್ನ ಬಗ್ಗೆ ಏನೂ ಗೊತ್ತಿರದ ಅವರು ಹೆಣ್ಣು ಕೊಡಲಿಕ್ಕೆ ಸಾಧ್ಯವಿಲ್ಲವೆಂದು ಮುಖಕ್ಕೆ ಹೊಡೆದಂತೆ ಹೇಳಿದರು. ಅದೇ ಹೊತ್ತಿಗೆ ಜಾನು ತಂದಿಟ್ಟ ಪಲಾವು ಒಣಗಿ ಗಂಟಲಲ್ಲಿ ಇಳಿಯದಾಗಿತ್ತು. ಚಹಾವಂತೂ ಅವಳು ಚಂದವಾಗಿ ಮಾಡಿದ್ದಳೋ ಏನೋ ಕಷಾಯವಾಗಿ ಮಾರ್ಪಾಡಾಗಿತ್ತು.

ಜಾನುವಿನ ಪರಿಚಯವಿದ್ದ, ಅವಳ ದೇವರು-ಧರ್ಮ, ಜಾತಿ-ಜಾತಕ, ಕಾಲ-ಗಳಿಗೆ ಇವುಗಳಾವುದರ ಬಗೆಗೆ ನಿಜಕ್ಕೂ ಗೊತ್ತಿರದ ನಾನು ಹುಂಬತನದಿಂದಲೇ ಹೊರಟೆ.

ಪುಸ್ತಕಗಳನ್ನು ಓದುವ ಅಭ್ಯಾಸ, ಸಾಂಪ್ರದಾಯಿಕ ಎನ್ನುವ ಸ್ಥಿತಿಯನ್ನು ಪ್ರಶ್ನಿಸುವ ಮನಸ್ಥಿತಿಯನ್ನು ನನ್ನೊಳಗೆ ರೂಪಿಸಿದ್ದವು.

ಹೌದು, ನನ್ನ ಬಾಳಿನ ಇರುಳ ತಿಳಿಯಾಗಿಸಬೇಕಾದ ಅವಳ ಮನೆಯವರ ಹತ್ತಿರ ವಿಷಯ ಪ್ರಸ್ತಾಪಿಸುವುದಾದರೂ ಹೇಗೆ? ಒಬ್ಬನೇ ಹೊರಡಬೇಕು ಎಂದುಕೊಂಡರೂ ಆಗದೆ, ಕಲ್ಲು ಕೊಪ್ಪನಾಗಣ್ಣನನ್ನು ಕರೆದುಕೊಂಡು ಹೊರಟೆ. ಅವನೂ ಅಷ್ಟೆ. ಹಿಂದು ಮುಂದು ನೋಡದೆ ಕೇಳೋದ್ರಲ್ಲಿ ತಪ್ಪೇನಿದೆ ನಡೆಯೋ ಹೋಗೋಣ ಎಂದ. ಹೋದೆವು. ಮನೆಯ ಮುಂಬಾಗಿಲು ಕಿರುಗುಟ್ಟಿದ್ದು ಕಂಡು ಮನೆಯವರು ಹೊರಬಂದರು.

ಅಪರಿಚಿತ ಮುಖಗಳನ್ನು ಒಳ ಕರೆಯಬೇಕೋ, ಬೇಡವೋ ಎಂಬ ಅನುಮಾನ. ಜಾನು ನೋಡಿ ಬರಮಾಡಿಕೊಂಡಳು. ಎಲ್ಲರಲ್ಲೂ ಏಕಿರಬಹುದೆಂದು ಕುತೂಹಲ.

ಕೂತ ಒಂದೆರಡು ನಿಮಿಷಗಳಲ್ಲಿ ನೇರವಾಗಿ ನಾನೇ ವಿಷಯ ಪ್ರಸ್ತಾಪಿಸಿದೆ. ನಾಗಣ್ಣ ನಮ್ಮ ಅರೆಉದ್ಯೋಗ ಮತ್ತು ಅವನ ಅರಣ್ಯವಿರುವ ಊರನ್ನೇ ನನಗೆ ಹೆಣ್ಣು ಕೊಡಬೇಕಾದ ಬಹುದೊಡ್ಡ ಅರ್ಹತೆ ಎನ್ನುವಂತೆ ತುಂಬಾ ಗಂಭೀರವಾಗಿ ಪರಿಚಯ ಮಾಡಿಕೊಟ್ಟ ಜಾನು ಒಮ್ಮೆಯೂ ನಮ್ಮನ್ನು ನೋಡಲಿಲ್ಲ. ಆಯ್ತು ಬರ್ತೇವೆಂದು ನಮ್ರತೆಯಿಂದ ಹೇಳಿ ಹೊರಟೆವು. ನಾವು ಹೀಗೆ ಕೇಳಿದ್ದಕ್ಕೆ ಪಶ್ಚಾತ್ತಾಪ ಎನಿಸಲಿಲ್ಲ. ಅವರಿಗಂತೂ ತಮ್ಮ ಮನೆಯೊಳಕ್ಕೆ ಹೆಗ್ಗಿಲ್ಲದ ಹಾವು ನುಗ್ಗಿದಂತಾಗಿತ್ತು. ಆದರೆ, ಇದರ ಪ್ರಯತ್ನವಂತೂ ನಾವು ಬಿಡಲಿಲ್ಲ.

ಅದರ ಫಲವೇ ಇಂದು ನಮ್ಮ ಮನೆಯಲ್ಲಿ ಜಾನು ಮಾಡುವ ಪಲಾವು ಮತ್ತು ಚಹಾದ ರುಚಿಗಳು ಬೇರೆಲ್ಲೂ ನನಗೆ ಸಿಗಲಿಕ್ಕೆ ಸಾಧ್ಯವೇ ಇಲ್ಲದಾಗಿದೆ.
–ಎಸ್‌. ಮಾರುತಿ ಚಿತ್ರದುರ್ಗ

*
ನಮ್ಮೆಜಮಾನ್ರಿಗೇ ಹೆಣ್ಣು ನೋಡಲು ಹೋಗಿದ್ದೆ!
ಗಂಡು ಮಕ್ಕಳಿದ್ದವರು ಹೆಣ್ಣು ಹುಡುಕುವುದು, ಹೆಣ್ಣು ಮಕ್ಕಳಿದ್ದವರು ಗಂಡು ಹುಡುಕುವುದು ಸ್ವಾಭಾವಿಕ. ಆದರೆ ನಾನು ನನ್ನ ಗಂಡನಿಗೇ ಹೆಣ್ಣು ನೋಡಲು ಹೋಗಿದ್ದೆ! ನಮ್ಮೆಜಮಾನ್ರು ಮತ್ತು ನನ್ನ ಅಕ್ಕನ ಯಜಮಾನ್ರು ಇಬ್ಬರೂ ಅವಳಿ ಸಹೋದರರು. ಸಾಮಾನ್ಯವಾಗಿ ಅವಳಿ–ಜವಳಿ ಮಕ್ಕಳ ಮದುವೆ ಒಟ್ಟಿಗೆ ಮಾಡುವುದು ರೂಢಿ. ಅಕ್ಕ–ಭಾವನವರ ಮದುವೆಯಾಗಿ 4–5 ವರ್ಷಗಳಾಗಿತ್ತು. ನಮ್ಮೆಜಮಾನ್ರಿಗೆ ಇನ್ನೂ ಹುಡುಗಿ ಸಿಕ್ಕಿರಲಿಲ್ಲ. ಕಾರಣ ಅವರು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ವರ್ಷದಲ್ಲಿ ಒಂದು ಸಾರಿ ಮನೆಗೆ ಬರುತ್ತಿದ್ದರು. ಆಗ ಹೆಣ್ಣು ನೋಡುವ ಕೆಲಸ ಶುರುವಾಗುತ್ತಿತ್ತು.

ತಿಂಗಳೋ, 20 ದಿನವೋ ಇದ್ದು ಹೊರಟು ಬಿಡುತ್ತಿದ್ದರಿಂದ ಅವರಿಗೆ ಬೇಗ ಹುಡುಗಿ ಹುಡುಕುವುದು ಸಮಸ್ಯೆಯಾಗಿತ್ತು. ಹುಡುಗಿ ನೋಡಿದ ಮೇಲೂ ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ಏನಾದರೂ ಸಮಸ್ಯೆಯಿಂದ ತಪ್ಪಿ ಹೋಗುತ್ತಿತ್ತು.

ಒಮ್ಮೆ ನಾನು ಅಕ್ಕನ ಮನೆಗೆ ಹೋಗಿದ್ದಾಗ, ಹೆಣ್ಣು ನೋಡಲು ಹೊರಟಿದ್ದ ಇಡೀ ಕುಟುಂಬದ ಸದಸ್ಯರು ನನ್ನನ್ನೂ ಜೊತೆಗೆ ಕರೆದುಕೊಂಡು ಹೋದರು. ಹುಡುಗಿ ಮನೆಗೆ ಹೋಗಿ ಕಾಫಿ, ಬಿಸ್ಕೆಟ್ ಅದು ಇದು ಮಾತು ಆಯಿತು.

ಆದರೆ ಹುಡುಗನ ಕಣ್ಣು ನನ್ನ ಮೇಲಿತ್ತು! ಇದನ್ನು ನನ್ನ ಭಾವ ಗಮನಿಸಿದ್ದರು. ಅಂತೂ ಮನೆಗೆ ಬಂದಾದ ಮೇಲೆ ಹುಡುಗಿ ಎಲ್ಲರಿಗೂ ಓಕೆ ನಿನಗೆ ಎಂದರು. ಆದರೆ ಇವರು ನಾಳೆ ನಾನು ಕೆಲಸಕ್ಕೆ ಹೋಗುತ್ತಿದ್ದೇನೆ ಎಂದಷ್ಟೆ ಹೇಳಿ ಅಲ್ಲಿಂದ ಹೊರಟು ಹೋದರು. ಎಲ್ಲರೂ ಮುಖ ಮುಖ ನೋಡಿಕೊಂಡರು. ಸ್ವಲ್ಪ ಸಮಯದ ನಂತರ ನನ್ನ ಕೈಗೊಂದು ಕಾಗದ ಕೊಟ್ಟು ಹೋದರು. ಅದರಲ್ಲಿ ‘ನಾನು ನಿನ್ನನ್ನು ತುಂಬಾ ಪ್ರೀತಿಸ್ತೇನೆ. ನಿನ್ನ ಅಭಿಪ್ರಾಯ ತಿಳಿಸು’ ಎಂದು ಬರೆದಿದ್ದರು. ಮೊದಲೇ ಗುಮಾನಿ ಇದ್ದ ಅಕ್ಕ–ಭಾವನವರಿಗೆ ಈ ವಿಷಯ ತಿಳಿಯಿತು.

ನನ್ನ ನಾಚಿಕೆಯೇ ಸಮ್ಮತಿಯಾಯಿತು, ನಮ್ಮಿಬ್ಬರ ಈ ತೀರ್ಮಾನ ಎಲ್ಲರಿಗೂ ಒಪ್ಪಿಗೆಯಾಯ್ತು. ಮುಂದಿನ ರಜೆಗೆ ಬಂದಾಗ ಮದುವೆ ಎಂದು ತೀರ್ಮಾನವಾಯ್ತು. ಅಕ್ಕ–ತಂಗಿ ಒಂದೇ ಮನೆ ಸೊಸೆಯಾದೆವು. ಈಗಲೂ ನನ್ನ ಪತಿಯನ್ನು ರೇಗಿಸುವುದು ಬಿಟ್ಟಿಲ್ಲ, ನಾನು ಬಂದು ಹೆಣ್ಣು ನೋಡಿದರೂ ನಿಮ್ಮ ಮದುವೆ ಸೆಟ್ಟಾಗ್ಲಿಲ್ಲ ಎಂದು.
–ಲತಾ.ಎನ್ ಮಾಯಸಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT