ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಳಪತಿ

Last Updated 6 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಭಾರತೀಯ ಚಿತ್ರರಂಗದ ಇತಿಹಾಸವನ್ನು ಗಮನಿಸಿದರೆ ಕೆಲವು ‘ಮಾದರಿ’ಗಳು ಸದಾ ಪ್ರಚಲಿತದಲ್ಲಿ ಉಳಿದುಕೊಂಡು ಬಂದಿವೆ. ಆ ಸಿದ್ಧ ಮಾದರಿಯ ಚೌಕಟ್ಟಿನಲ್ಲಿಯೇ ಕೊಂಚ ಹೊಸತನ್ನು ಸೇರಿಸಿ ತೆರೆಯ ಮೇಲೆ ತರಲಾಗುತ್ತದೆ. 

ಬಡಜನರ ಕಷ್ಟಕೋಟಲೆಗಳ ಪರಿಹಾರಕ್ಕಾಗಿಯೇ ಜೀವತಳೆದಂತಿರುವ– ತನ್ನ ಜನರ ಆಶೋತ್ತರದ ಪ್ರತಿರೂಪವಾಗಿ, ಅವರ ಕಷ್ಟ ನಿವಾರಣೆಗಾಗಿ ಏನು ಬೇಕಾದರೂ ಮಾಡಲು ಸಿದ್ಧನಿರುವ ನಾಯಕ ಅಂಥದ್ದೊಂದು ಜನಪ್ರಿಯ ಮಾದರಿ.

1991ರಲ್ಲಿ ತೆರೆಕಂಡ ಮಣಿರತ್ನಂ ನಿರ್ದೇಶನದ ತಮಿಳು ಸಿನಿಮಾ ‘ದಳಪತಿ’ ಇಂಥದ್ದೊಂದು ಮಾದರಿಯನ್ನು ಕಟ್ಟಿಕೊಟ್ಟ ಸಿನಿಮಾ. ದಕ್ಷಿಣ ಭಾರತದ ಕಮರ್ಷಿಯಲ್‌ ಚಿತ್ರಗಳ ಇತಿಹಾಸದಲ್ಲಿ ‘ದಳಪತಿ’ ಸಿನಿಮಾ ಆಗಿ, ಒಂದು ಪಾತ್ರವಾಗಿಯೂ ಮೈಲಿಗಲ್ಲು ಎಂದು ಪರಿಗಣಿಸಲ್ಪಟ್ಟಿದೆ.

ಈ ಚಿತ್ರದ ನಾಯಕ ಸೂರ್ಯ (ರಜನೀಕಾಂತ್‌) ಯಾವುದೋ ಹಳ್ಳಿಯಲ್ಲಿ ಹದಿನಾಲ್ಕರ ಬಾಲೆ ಕಲ್ಯಾಣಿ ವಿವಾಹಕ್ಕೂ ಮೊದಲೇ ಹೆತ್ತ ಮಗು. ಸಮಾಜದ ಟೀಕೆಗೆ ಅಂಜಿ ಶಿಶುವನ್ನು ರೈಲಿನಲ್ಲಿ ಇಟ್ಟು ಪಟ್ಟಣಕ್ಕೆ ಕಳಿಸುತ್ತಾಳೆ. ಅಲ್ಲಿ ಸೂರ್ಯ ಒಂದು ಕೊಳೆಗೇರಿಯಲ್ಲಿ ಎಲ್ಲರ ಮಗುವಾಗಿ ಬೆಳೆಯುತ್ತಾನೆ.

ಹರೆಯದ ಸೂರ್ಯ ಮಹಾ ಕೋಪಿಷ್ಠ. ಅಷ್ಟೇ ಮೃದುಹೃದಯಿಯೂ ಹೌದು. ಬಡವರ ವಿರುದ್ಧ ಎಲ್ಲೇ ಅನ್ಯಾಯ ಕಂಡರೂ ಸಿಡಿದೇಳುವ ಮನಸ್ಥಿತಿಯವ. ಅವನಿಗೆ ನಂತರ  ಇದೇ ಕೆಲಸವನ್ನು ವ್ಯವಸ್ಥಿತ ಜಾಲ ಕಟ್ಟಿಕೊಂಡು ಮಾಡುತ್ತಿರುವ ದೇವರಾಜ್‌ (ಮುಮ್ಮುಟ್ಟಿ) ಕೂಡ ಜತೆಯಾಗುತ್ತಾನೆ. ಸೂರ್ಯ, ದೇವರಾಜನ ಖಾಸಾ ಸ್ನೇಹಿತನೂ, ಬಂಟನೂ ಆಗುತ್ತಾನೆ. ಅವರು ಒಳ್ಳೆಯ ಕೆಲಸ ಮಾಡಲು, ದುಷ್ಟರನ್ನು ಶಿಕ್ಷಿಸಲು ಕಾನೂನಿನ ಗಡಿ ಲೆಕ್ಕಿಸದವರು. ನಿಯಮಗಳ ಪ್ರಕಾರ ಅಪರಾಧಿಗಳಾದರೂ, ಜನರ ಪಾಲಿಗೆ ದೇವರು.

ಇದೇ ಸಮಯದಲ್ಲಿ ಅರ್ಜುನ್‌ ಎಂಬ ಶಿಸ್ತಿನ ಜಿಲ್ಲಾಧಿಕಾರಿ ಅಲ್ಲಿಗೆ ವರ್ಗವಾಗಿ ಬರುತ್ತಾನೆ. ಅವನು ಕಲ್ಯಾಣಿಯ ಎರಡನೇ ಮಗ. ಅಂದರೆ ಸೂರ್ಯನ ಸಹೋದರ. ಇದು ಸೂರ್ಯನಿಗೆ ತಿಳಿಯುತ್ತದೆ. ಆದರೆ ಅರ್ಜುನನಿಗೆ ಗೊತ್ತಿಲ್ಲ. ಅವನ ದೃಷ್ಟಿಯಲ್ಲಿ ಸೂರ್ಯ ಮತ್ತು ದೇವರಾಜ್‌ ಇಬ್ಬರೂ ಪಾತಕಿಗಳು. ಅವರನ್ನು ಹಿಡಿದು ಶಿಕ್ಷಿಸಬೇಕು ಅಷ್ಟೆ.

ಭಾರತದ ಮಹಾಕಾವ್ಯವಾದ ‘ಮಹಾಭಾರತ’ ಹೇಗೆ ಇಂದಿನ ಕಾಲಮಾನಕ್ಕೂ ಜನರಿಗೆ ತಾಕುವ, ಪ್ರಭಾವಿಸುವ, ಪ್ರಸ್ತುತವೆನಿಸುವ ಕಥಾವಸ್ತುವಾಗಿ ಉಳಿದಿದೆ ಎನ್ನುವುದಕ್ಕೆ ‘ದಳಪತಿ’ ಒಂದು ನಿದರ್ಶನ. ಈ ಚಿತ್ರದ ಮುಖ್ಯ ಪಾತ್ರಗಳು ಕರ್ಣ, ದುರ್ಯೋಧನ, ಕುಂತಿ, ಅರ್ಜುನ ಪಾತ್ರಗಳನ್ನೇ ಪದೇ ಪದೇ ನೆನಪಿಸುತ್ತವೆ.

ರಜನೀಕಾಂತ್‌ ತಾರಾ ವರ್ಚಸ್ಸು ಮತ್ತು ಮಣಿರತ್ನಂ ನಿರ್ದೇಶನದಲ್ಲಿನ ಸ್ವಂತಿಕೆ ಎರಡೂ ಸೇರಿ ಈ ಚಿತ್ರದ ಪ್ರಭೆಯನ್ನು ಹೆಚ್ಚಿಸಿವೆ.  ಈ ಚಿತ್ರದಲ್ಲಿ ಇಳೆಯರಾಜ ಸಂಯೋಜನೆಯ –ಎಸ್‌.ಪಿ. ಬಾಲಸುಬ್ರಹ್ಮಣ್ಯ, ಎಸ್‌. ಜಾನಕಿ, ಕೆ.ಜೆ. ಯೇಸುದಾಸ್‌ ಅವರ ಧ್ವನಿಯಲ್ಲಿ ಮೂಡಿಬಂದ ಹಾಡುಗಳೂ ಇಂದಿಗೂ ಜನಮಾನಸದಲ್ಲಿ ಮಾಸದೇ ಉಳಿದುಕೊಂಡಿದೆ.

ಹಲವು ಪ್ರತಿಭಾವಂತರ ಪ್ರತಿಭೆ ಸರಿಯಾದ ಹದದಲ್ಲಿ ಸೇರಿ ರೂಪುಗೊಂಡ ನಾಯಗನ್‌ ಸಿನಿಮಾವನ್ನು ಯೂ ಟ್ಯೂಬ್‌ನಲ್ಲಿ https://goo.gl/FvFvoJ ಕೊಂಡಿ ಬಳಸಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT