ಗುರುವಾರ , ಮಾರ್ಚ್ 4, 2021
26 °C

ಸೆಲ್ಫಿ ಕ್ಲಿಕ್ಕಿಸಿದ ಕೋತಿ ‘ವರ್ಷದ ವ್ಯಕ್ತಿ’!

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸೆಲ್ಫಿ ಕ್ಲಿಕ್ಕಿಸಿದ ಕೋತಿ ‘ವರ್ಷದ ವ್ಯಕ್ತಿ’!

ಜಕಾರ್ತ(ಎಎಫ್‌ಪಿ): ಸೆಲ್ಫಿ ಕ್ಲಿಕ್ಕಿಸಿಕೊಂಡ ನಂತರ ಖ್ಯಾತಿಯಾಗಿದ್ದ ಇಂಡೋನೇಷ್ಯಾದ ಕಪ್ಪು ಕೋತಿ ನರುಟೊನನ್ನು‘ವರ್ಷದ ವ್ಯಕ್ತಿ’ ಎಂದು ಪ್ರಾಣಿ ದಯಾ ಸಂಘಟನೆ ಪೆಟಾ ಘೋಷಿಸಿದೆ.

ನಗೆ ಬೀರಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ನರುಟೊನನ್ನು ‘ಯಾವುದೋ ಪ್ರಾಣಿಯಲ್ಲ, ವ್ಯಕ್ತಿ’ ಎಂದು ಗುರುತಿಸಿ ಈ ಮೂಲಕ ಗೌರವಿಸಲಾಗುತ್ತಿದೆ ಎಂದು ಪೆಟಾ ಹೇಳಿದೆ.

2011ರಲ್ಲಿ ಸುಲವೆಸಿ ದ್ವೀಪದಲ್ಲಿ ಬ್ರಿಟನ್‌ ಪರಿಸರ ಛಾಯಾಗ್ರಾಹಕ ಡೇವಿಡ್ ಸ್ಲೇಟರ್ ಅವರ ಕ್ಯಾಮೆರಾ ಲೆನ್ಸ್ ದಿಟ್ಟಿಸುವ ವೇಳೆ ನರುಟೊ ಶಟರ್ ಬಟನ್ ಒತ್ತಿದ್ದ. ಈ ಚಿತ್ರಗಳು ತಕ್ಷಣವೇ ವೈರಲ್ ಆಗಿತ್ತು. ಆಗ ಆರು ವರ್ಷ ವಯಸ್ಸಾಗಿದ್ದ ನರುಟೊನನ್ನು ‘ಆ ಛಾಯಾಚಿತ್ರದ ಛಾಯಾಗ್ರಾಹಕ ಮತ್ತು ಹಕ್ಕುಸ್ವಾಮ್ಯ ಉಳ್ಳವನು’ ಎಂದು ಘೋಷಿಸಬೇಕೆಂದು ಪೆಟಾ ಕಾನೂನು ಹೋರಾಟ ಆರಂಭಿಸಿತ್ತು.

ಕ್ಯಾಲಿಫೋರ್ನಿಯ ನ್ಯಾಯಾಲಯದಲ್ಲಿ ಮೊದಲಿಗೆ ಸ್ಲೇಟರ್ ಅವರಿಗೆ ಜಯ ದೊರಕಿದ್ದರೂ ನಂತರ ಪೆಟಾ ಮೇಲ್ಮನವಿ ಸಲ್ಲಿಸಿತ್ತು. ನರುಟೊನ ಈ ಸೆಲ್ಪಿಗಳ ಬಳಕೆ ಅಥವಾ ಮಾರಾಟದಿಂದ ದೊರಕುವ ಆದಾಯದ ಶೇ 25ರಷ್ಟನ್ನು ಇಂಡೋನೇಷ್ಯಾದಲ್ಲಿನ ಕೋತಿಗಳ ರಕ್ಷಣೆಗೆ ನೀಡುವುದಾಗಿ ಸ್ಲೇಟರ್‌ ಒಪ್ಪಿಕೊಂಡ ನಂತರ ಸೆಪ್ಟೆಂಬರ್‌ನಲ್ಲಿ ಈ ಪ್ರಕರಣ ಇತ್ಯರ್ಥವಾಗಿತ್ತು.

ಸುಲವೆಸಿ ದ್ವೀಪವಾಸಿಗಳ ಆಹಾರವಾಗಿರುವ ಈ ಕಪ್ಪು ಕೋತಿಗಳು ತೀವ್ರ ಅಳಿವಿನ ಅಂಚಿನಲ್ಲಿದೆ. ಇವುಗಳನ್ನು ಸೇವಿಸದಂತೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳು ಹಾಗೂ ಕಾರ್ಯಕರ್ತರು ಯತ್ನಿಸುತ್ತಿದ್ದಾರೆ. ‘ಮಾನವನಲ್ಲದ ಪ್ರಾಣಿಯನ್ನು ಸ್ವತ್ತು ಎಂದು ಘೋಷಿಸುವ ಬದಲಿಗೆ ಆ ಪ್ರಾಣಿಯನ್ನೇ ಸ್ವತ್ತಿನ ಹಕ್ಕುದಾರ ಎಂದು ಘೋಷಿಸಬೇಕು ಎನ್ನುವ ಮೊದಲ ಕಾನೂನು ಹೋರಾಟಕ್ಕೆ ಕಾರಣವಾಗಿತ್ತು’ ಎಂದು ಪೆಟಾ ಸ್ಥಾಪಕ ಇಂಗ್ರಿಡ್ ನ್ಯೂಕಿರ್ಕ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.