ಸೋಮವಾರ, ಮಾರ್ಚ್ 8, 2021
24 °C

ರಾಷ್ಟ್ರೀಯತೆ, ಹಿಂದುತ್ವದ ಹೆಸರಲ್ಲಿ ಹೊಸ ಮೌಢ್ಯ: ಪ್ರಕಾಶ್‌ ರೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯತೆ, ಹಿಂದುತ್ವದ ಹೆಸರಲ್ಲಿ ಹೊಸ ಮೌಢ್ಯ: ಪ್ರಕಾಶ್‌ ರೈ

ಬೆಳಗಾವಿ: ‘ರಾಷ್ಟ್ರೀಯತೆ ಮತ್ತು ಹಿಂದುತ್ವ ಎರಡೂ ಒಂದೇ ಎನ್ನುವ ಮೌಢ್ಯವನ್ನು ಬೆಳೆಸಲು ಕೇಂದ್ರ ಸಚಿವರೊಬ್ಬರು ಯತ್ನಿಸುತ್ತಿದ್ದಾರೆ’ ಎಂದು ಚಿತ್ರನಟ ಪ್ರಕಾಶ್‌ ರೈ ಟೀಕಿಸಿದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ಇಲ್ಲಿನ ಸದಾಶಿವನಗರದ ಸ್ಮಶಾನದಲ್ಲಿ ಬುಧವಾರ ಆಯೋಜಿಸಿದ್ದ ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಷ್ಟು ದಿನಗಳ ಕಾಲ ಬಡತನ, ಅನಕ್ಷರತೆ, ಜಾತಿ, ಧರ್ಮಗಳ ಹೆಸರಿನಲ್ಲಿ ಮೌಢ್ಯವನ್ನು ಬಿತ್ತಲಾಗಿತ್ತು. ಆದರೆ, ಈಗ ರಾಷ್ಟ್ರೀಯತೆ ಹಾಗೂ ಹಿಂದುತ್ವದ ಹೆಸರಿನಲ್ಲಿ ಮೌಢ್ಯ ಬಿತ್ತಲು ಹೊರಟಿದ್ದಾರೆ. ವೈವಿಧ್ಯದ ಸಮಾಜವನ್ನು ತುಳಿದು, ಒಂದು ಧರ್ಮದ ಸಮಾಜವನ್ನು ಕಟ್ಟಲು ಹೊರಟಿದ್ದಾರೆ’ ಎಂದು ಅವರು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೆಸರನ್ನು ಉಲ್ಲೇಖಿಸದೇ ವಾಗ್ದಾಳಿ ನಡೆಸಿದರು.

‘ನಮ್ಮ ಮುಗ್ಧತೆಯನ್ನು ಬಳಸಿಕೊಂಡು ಇವರು ಹತ್ತಾರು ಸುಳ್ಳು ಹೇಳುತ್ತಾರೆ. ಅದರ ಮೂಲಕ ಮೌಢ್ಯವನ್ನು ಬೆಳೆಸುತ್ತಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ವಿಚಾರಧಾರೆಗಳನ್ನು ಅನುಸರಿಸುವ ಮೂಲಕ ಇವರಿಗೆ ಉತ್ತರ ನೀಡಬೇಕಾಗಿದೆ. ಅಂಬೇಡ್ಕರ್‌ ಅವರ ಚಿಂತನೆಗಳನ್ನು ರಕ್ತಬೀಜಾಸುರನ ರೀತಿಯಲ್ಲಿ ಲಕ್ಷಾಂತರ ಜನರು ಅಳವಡಿಸಿಕೊಳ್ಳಬೇಕಾಗಿದೆ’ ಎಂದರು.

ನನಗೂ ಬೆದರಿಕೆ ಇದೆ:

‘ಮುಕ್ತವಾಗಿ ನಾನು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವುದನ್ನು ಸಹಿಸದ ಕೆಲವು ಶಕ್ತಿಗಳು ಬೆದರಿಕೆಯೊಡ್ಡುತ್ತಿವೆ. ನನ್ನನ್ನು ಹಿಂಬಾಲಿಸುತ್ತಿದ್ದಾರೆ. ನಾನು ಜನರ ಮಧ್ಯದಲ್ಲಿದ್ದೇನೆ. ನನಗೇನೂ ಮಾಡಲಿಕ್ಕಾಗದು. ಅವರು ಕಳ್ಳರು, ಅಂಜುಬುರುಕರು, ಹೇಡಿಗಳು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶ ವಿಭಜಿಸಿದ ದಾರ:

‘ದೇವಸ್ಥಾನದ ಒಳಗೆ ಹೋಗುವಾಗ ನಾವು ದಾರ (ಜನಿವಾರ) ಹಾಕಿಕೊಂಡಿದ್ದೇವೆಯೋ ಇಲ್ಲವೋ ಎನ್ನುವುದನ್ನು ನೋಡಲು ಅಂಗಿ ಬಿಚ್ಚಿಸುತ್ತೀರಿ, 10 ಪೈಸೆ ಕಿಮ್ಮತ್ತಿನ ದಾರವಿದು, ದೇಶವನ್ನೇ ವಿಭಜನೆ ಮಾಡಿದೆ’ ಎಂದು ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಆರೋಪಿಸಿದರು.

‘ಈ ದಾರದಿಂದ ನೇಣು ಹಾಕಿಕೊಂಡರೆ ಪ್ರಾಣ ಹೋಗುವುದಿಲ್ಲ. ಆದರೆ, ಬೇರೆಯವರ ಪ್ರಾಣ ತೆಗೆಯಬಹುದು’ ಎಂದು ಟೀಕಿಸಿದ ಅವರು, ಆ ದಾರವನ್ನು ಬಿಸಾಕಿಯೇ ತಾವು ಇಲ್ಲಿಗೆ ಬಂದಿರುವುದಾಗಿ ಹೇಳಿದರು.

‘ಉಡುಪಿಯಲ್ಲಿ ಇತ್ತೀಚೆಗೆ ನಡೆದಿರುವ ಧರ್ಮ ಸಂಸತ್‌ ದೇಶ ರಕ್ಷಣೆಗಾಗಿ ನಡೆದದ್ದು ಅಲ್ಲ, ಚಾತುರ್ವರ್ಣ, ವೈದಿಕಶಾಹಿಯ ರಕ್ಷಣೆಗೆ ನಡೆದ ಸಂಸತ್‌ ಆಗಿದೆ. ಈ ಸಭೆಯಲ್ಲಿ ಮಠಾಧೀಶರೊಬ್ಬರು ಸಂವಿಧಾನ ಬದಲಾಯಿಸಬೇಕೆಂದು ಹೇಳಿಕೆ ನೀಡಿದ್ದಾರೆ. ನಮಗೆ ಅಂಬೇಡ್ಕರ್‌ ರಚಿಸಿದ ಸಂವಿಧಾನ ಬೇಕು, ನಾಗ್ಪುರದ (ಆರ್‌ಎಸ್‌ಎಸ್‌ ಕೇಂದ್ರ ಸ್ಥಾನ) ಸಂವಿಧಾನ ಬೇಡ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಮಠಾಧೀಶರು ಅಸ್ಪೃಶ್ಯತೆಯನ್ನು ಹೋಗಲಾಡಿಸುವಂತೆ ಕರೆ ನೀಡಿದ್ದಾರೆ. ಅಸ್ಪೃಶ್ಯತೆ ಇದೆ ಎನ್ನುವುದು ಇವರಿಗೆ 21ನೇ ಶತಮಾನದಲ್ಲಿಯಾದರೂ ಅರಿವಿಗೆ ಬಂತಲ್ಲ?’ ಎಂದು ವ್ಯಂಗ್ಯವಾಡಿದ ಅವರು, ‘ಸಮಾನತೆ ಬರಬೇಕಾದರೆ ಬನ್ನಿ; ದಲಿತರ ಪಾದ ಪೂಜೆ ಮಾಡಿ. ಶೌಚಾಲಯಕ್ಕೆ ನೀರು ಹಾಕಿ. ಮ್ಯಾನ್‌ಹೋಲ್‌ಗಳನ್ನು ಸ್ವಚ್ಛಗೊಳಿಸಿ. ತಲೆಯ ಮೇಲೆ ಮಲ ಹೊತ್ತುಕೊಳ್ಳಿ’ ಎಂದು ಕಿಡಿಕಾರಿದರು.

ನವದೆಹಲಿಯ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ತಲೆತಲಾಂತರದಿಂದ ದನಿಯಡಗಿದ್ದ ಸಮುದಾಯಗಳಿಗೆ ಸ್ವಾಭಿಮಾನದ ಬದುಕು ನೀಡಿದ್ದು ಅಂಬೇಡ್ಕರ್‌ ರಚಿಸಿದ ಸಂವಿಧಾನ. ಇದರ ವಿರುದ್ಧ ಧರ್ಮ ಸಂಸತ್‌ನಲ್ಲಿ ಪ್ರಶ್ನೆಗಳು ಎದ್ದಿವೆ. ಇವು ಬಂದಿರುವುದು ದೆಹಲಿಯಿಂದ ಅಲ್ಲ, ನಾಗ್ಪುರದಿಂದ’ ಎಂದ ಅವರು, ಸಂವಿಧಾನವನ್ನು ರಕ್ಷಿಸಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮುಂದೆ ಇದೆ ಎಂದು ಹೇಳಿದರು.

ಹೋರಾಟಗಾರ್ತಿ ಕೆ.ನೀಲಾ ಮಾತನಾಡಿ, ‘ಅಹಿಂಸಾ ಪರಮೋಧರ್ಮ ಎನ್ನುವ ಜೈನ ಧರ್ಮಕ್ಕೆ ಸೇರಿದ ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರು ಗಲಾಟೆ, ದಂಗೆ ಮಾಡಿಸುವಂತೆ ಹೇಳುತ್ತಾರೆ. ಬಾಂಬ್‌ ಎಸೆಯಿರಿ, ಲಾಠಿ ಚಾರ್ಜ್‌ ಆಗಲಿ ಎನ್ನುತ್ತಾರೆ. ಇಲ್ಲಿರುವ ಸಂಸದರು ಅದನ್ನು ಕಾರ್ಯರೂಪಕ್ಕೆ ತರಲು ಹೊರಟಿದ್ದಾರೆ. ದಕ್ಷಿಣ ಭಾರತದಲ್ಲಿ ಹಲವು ವೈಚಾರಿಕ ಚಳವಳಿಗಳು ನಡೆದಿರುವ ಪರಿಣಾಮ ಇವರ ಪ್ರಯತ್ನ ಕೈಗೂಡದು. ಎಡಪಂಥೀಯ ಚಳುವಳಿಗಳು ಸಕ್ರಿಯವಾಗಿದ್ದ ಪ್ರದೇಶಗಳಲ್ಲಿ ಅಸ್ಪೃಶ್ಯತೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ’ ಎಂದರು.

ಅಥಣಿಯ ಪ್ರಭುಚನ್ನಬಸವ ಸ್ವಾಮೀಜಿ ಹಾಗೂ ಶರಣ ಬಸವ ಸ್ವಾಮೀಜಿ ಭಾಗವಹಿಸಿದ್ದರು. ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್‌, ವಿಲ್ಫ್ರೆಡ್‌ ಡಿಸೋಜಾ ಉಪಸ್ಥಿತರಿದ್ದರು.

ಕಾರ್ಯಕ್ರಮ ನಿಲ್ಲಿಸುವುದಿಲ್ಲ: ಜಾರಕಿಹೊಳಿ

ಮೌಢ್ಯ ವಿರೋಧಿ ಕಾರ್ಯಕ್ರಮ ಆಯೋಜಿಸುತ್ತಿರುವುದನ್ನು ಆಕ್ಷೇಪಿಸಿ ಹಲವರು ತಮ್ಮ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿದ್ದಾರೆ. ಆದರೆ ಪಕ್ಷವು ತಮಗೆ ಟಿಕೆಟ್‌ ಕೊಡಲಿ, ಕೊಡದೇ ಇರಲಿ. ತಾವು ಮಾತ್ರ ತಮ್ಮ ಸಿದ್ಧಾಂತಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಕಾರ್ಯಕ್ರಮದ ನೇತೃತ್ವ ವಹಿಸಿದ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬಂದ ಈ ಕಾರ್ಯಕ್ರಮವನ್ನು ಬರುವ ವರ್ಷಗಳಲ್ಲೂ ಮುಂದುವರಿಸಿಕೊಂಡು ಹೋಗುವುದಾಗಿ ಹೇಳಿದ ಅವರು, ಇದು ಯಾವುದೇ ರಾಜಕೀಯ ಲಾಭಕ್ಕಾಗಿ ಅಲ್ಲ; ಜನರನ್ನು ಮೌಢ್ಯದಿಂದ ಮುಕ್ತರನ್ನಾಗಿಸಬೇಕು ಎಂಬುದಷ್ಟೇ ತಮ್ಮ ಉದ್ದೇಶ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.