7

ಸದ್ಯದಲ್ಲೆ ದಲಿತ ಮುಖಂಡರ ಸಭೆ

Published:
Updated:

ಬೆಂಗಳೂರು: ‘ಒಳ ಮೀಸಲಾತಿ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸದ್ಯದಲ್ಲೆ ದಲಿತ ಮುಖಂಡರ ಸಭೆ ಕರೆಯಲಿದ್ದಾರೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ತಿಳಿಸಿದರು.

ಅಂಬೇಡ್ಕರ್ ಪರಿನಿರ್ವಾಣ ದಿನದ ಪ್ರಯುಕ್ತ ವಿಧಾನಸೌಧದ ಬಳಿಯ ಅಂಬೇಡ್ಕರ್ ಪ್ರತಿಮೆಗೆ ಬುಧವಾರ ಗೌರವ ನಮನ ಸಲ್ಲಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,‘ಒಳ ಮೀಸಲಾತಿ  ಕೇಳುತ್ತಿರುವವರು, ಬೇಡ ಎನ್ನುವ ಮುಖಂಡರನ್ನು ಒಂದೇ ವೇದಿಕೆಗೆ ಕರೆದು ಚರ್ಚೆ ನಡೆಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘ಒಳ ಮೀಸಲಾತಿ ಜಾರಿಗೆ ಬಂದರೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ಕೆಲವು ಸಮುದಾಯಗಳನ್ನು ಕೈಬಿಡಲಾಗುತ್ತದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಜಾತಿಯನ್ನೂ ಪಟ್ಟಿಯಿಂದ ಕೈಬಿಡುವ ಪ್ರಶ್ನೆ ಇಲ್ಲ’ ಎಂದರು.

‘ಮೀಸಲಾತಿಯ ಲಾಭವನ್ನು ಮೂಲ ಅಸ್ಪೃಶ್ಯರಾದ ಮಾದಿಗ ಸಮುದಾಯ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಒಳ ಮೀಸಲಾತಿ ಅಗತ್ಯವಿದೆ ಎಂಬ ಒತ್ತಾಯ ಇದೆ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ನ್ಯಾಯಮೂರ್ತಿ ಎ.ಜೆ. ಸದಾಶಿವ ನೇತೃತ್ವದಲ್ಲಿ ಆಯೋಗ ರಚನೆ ಮಾಡಿ ವರದಿ ಪಡೆಯಲಾಗಿದೆ. ಆ ವರದಿ ಆಧರಿಸಿ ಅನ್ಯಾಯಕ್ಕೆ ಒಳಗಾಗಿರುವ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಲು ಕೋರಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಷ್ಟೇ ರಾಜ್ಯ ಸರ್ಕಾರದ ಕೆಲಸ’ ಎಂದರು.

‘ಜಾತಿ ಗಣತಿ: ಮುಖ್ಯಮಂತ್ರಿ ಅವರನ್ನೇ ಕೇಳಬೇಕು’: ‘ಜಾತಿ ಗಣತಿ ವರದಿ ಸಿದ್ಧವಾಗುತ್ತಿದ್ದು, ಯಾವಾಗ ಬಿಡುಗಡೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಕೇಳ ಬೇಕು’ ಎಂದು ಆಂಜನೇಯ ಹೇಳಿದರು.

 

‘ಸಂವಿಧಾನ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ’

‘ಬಿ.ಆರ್. ಅಂಬೇಡ್ಕರ್ ಅವರು ಎಲ್ಲರು ಮೆಚ್ಚುವಂತ ಸಂವಿಧಾನ ಬರೆದಿದ್ದಾರೆ. ಅದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಸಚಿವ ಎಚ್. ಆಂಜನೇಯಪ್ರತಿಕ್ರಿಯಿಸಿದರು.

‘ಸಂವಿಧಾನ ಬದಲಿಸಬೇಕು ಎಂಬುದು ಉಡಪಿ ಧರ್ಮ ಸಂಸತ್‌ನ ಖಾಸಗಿ ನಿರ್ಣಯ. ಹೀಗಾಗಿ ಅದಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ’ ಎಂದರು.

‘ಭಾರತದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕುನ್ನು ಸಂವಿಧಾನದಲ್ಲಿ ಅಂಬೇಡ್ಕರ್ ಕಲ್ಪಿಸಿದ್ದಾರೆ. ದೇಶ ವಿದೇಶಗಳಲ್ಲಿ ಜನ ಮೆಚ್ಚುತ್ತಿದ್ದಾರೆ. ಹೀಗಾಗಿ ಬೇರೆ ಸಂವಿಧಾನದ ಅವಶ್ಯಕತೆ ಇಲ್ಲ. ಅಂಬೇಡ್ಕರ್ ಅವರನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ’ ಎಂದೂ ಅವರು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry