ಗುರುವಾರ , ಫೆಬ್ರವರಿ 25, 2021
24 °C

ವಾಸಿಸುವವನೆ ಮನೆಯೊಡೆಯ 15ರಿಂದ ಹಕ್ಕುಪತ್ರ ಆಂದೋಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಸಿಸುವವನೆ ಮನೆಯೊಡೆಯ 15ರಿಂದ ಹಕ್ಕುಪತ್ರ ಆಂದೋಲನ

ಬೆಂಗಳೂರು: ಕಂದಾಯ ಭೂಮಿಯಲ್ಲಿ ಅನಧಿಕೃತವಾಗಿ ಮನೆ ಕಟ್ಟಿಕೊಂಡವರಿಗೆ ಹಕ್ಕುಪತ್ರ ನೀಡುವ ಕಾರ್ಯಕ್ರಮವನ್ನು ಇದೇ 15ರಿಂದ ಆಂದೋಲನ ರೂಪದಲ್ಲಿ ರಾಜ್ಯಾದ್ಯಂತ ನಡೆಸಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

‘ಉಳುವವನೆ ನೆಲದೊಡೆಯ’ ಮಾದರಿಯಲ್ಲೆ ವಾಸಿಸುವವನಿಗೆ ಮನೆಯ ಒಡೆತನ ನೀಡಲು ಕಂದಾಯ ಕಾಯ್ದೆಗೆ ಕ್ರಾಂತಿಕಾರಿ ಬದಲಾವಣೆ ತರಲಾಗಿದೆ. ಕಾಯ್ದೆ ಅನ್ವಯ ಹಕ್ಕುಪತ್ರ ಪಡೆಯಲು ಅವಕಾಶ ನೀಡಿದ್ದರೂ ಈ ಬಗ್ಗೆ ಜನರಿಗೆ ಅರಿವಿಲ್ಲ. ಗ್ರಾಮಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ನಿಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುವುದು ಎಂದು ಬುಧವಾರ ತಿಳಿಸಿದರು.

‘ಇದೇ 15ರಿಂದ ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ. ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಜತೆ ಚರ್ಚೆ ನಡೆಸಿ ವಾಸಿಸುವವನೆ ಮನೆಯೊಡೆಯ ಕಾರ್ಯಕ್ರಮ ಜಾರಿ ಮಾಡುವ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವಂತೆ ಕೋರುತ್ತೇನೆ’ ಎಂದು ಹೇಳಿದರು.

ಕಂದಾಯ ಭೂಮಿಯಲ್ಲಿ ಅನಧಿಕೃತವಾಗಿ ಮನೆ ಕಟ್ಟಿಕೊಂಡಿರುವ ಏಳು ಲಕ್ಷ ಕುಟುಂಬಗಳು ಈವರೆಗೆ ಅರ್ಜಿ ಸಲ್ಲಿಸಿವೆ. ಇಂತಹ 25 ಲಕ್ಷ ಕುಟುಂಬಗಳು ರಾಜ್ಯದಲ್ಲಿ ಇರಬಹುದು ಎಂಬ ಅಂದಾಜಿದೆ. 2012ರ ಅಕ್ಟೋಬರ್‌ವರೆಗೆ ಮನೆ ಕಟ್ಟಿಕೊಂಡವರಿಗೆ ಅರ್ಜಿ ಸಲ್ಲಿಸಲು ಈ ಹಿಂದೆ ಅವಕಾಶ ನೀಡಲಾಗಿತ್ತು. ಕಾಯ್ದೆಗೆ ತಿದ್ದುಪಡಿ ತಂದು 2015ರ ಅಕ್ಟೋಬರ್‌ವರೆಗೆ ಮನೆ ಕಟ್ಟಿಕೊಂಡವರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಸಕ್ರಮಕ್ಕಾಗಿ 2018ರ ಫೆಬ್ರುವರಿ ಅಂತ್ಯದವರೆಗೆ ಅರ್ಜಿ ಸಲ್ಲಿಸಬಹುದು. ಮಾರ್ಚ್‌ ಅಂತ್ಯದೊಳಗೆ ಎಲ್ಲ ಕುಟುಂಬಗಳಿಗೂ ಹಕ್ಕುಪತ್ರ ನೀಡುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.

ಹಕ್ಕುಪತ್ರ ನೀಡುವ ಕೆಲಸವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಜನರು ಅನಧಿಕೃತವಾಗಿ ಮನೆ ಕಟ್ಟಿಕೊಂಡಿರುವ ಪ್ರದೇಶಗಳಿಗೆ ಜಿಲ್ಲಾಧಿಕಾರಿ, ತಹಶೀಲ್ದಾರ್, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಭೂಮಿಯ ನಕಾಶೆ, ಕಂದಾಯ ಇಲಾಖೆ ದಾಖಲೆಗಳೊಂದಿಗೆ ತೆರಳಬೇಕು. ಸಾಧ್ಯವಾದರೆ ಅಲ್ಲಿಯೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದೂ ಕಾಗೋಡು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.