7

ಚುನಾವಣೆಗೆ ಅಣಿಯಾಗುತ್ತಿರುವ ಆರು ಹೊಸ ಪಕ್ಷಗಳು

Published:
Updated:

ಬೆಂಗಳೂರು: ವಿಧಾನಸಭಾ ಚುನಾವಣೆಗೆ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ರಣಕಹಳೆ ಮೊಳಗಿಸಿ ಅಣಿಯಾಗುತ್ತಿರುವ ಹೊತ್ತಿನಲ್ಲೆ ಆರು ಹೊಸ ಪಕ್ಷಗಳು ರಾಜ್ಯದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ತಯಾರಿ ನಡೆಸಿವೆ.

2013 ರ ಚುನಾವಣೆಯಲ್ಲಿ ಆರು ರಾಷ್ಟ್ರೀಯ ಪಕ್ಷಗಳು, ಏಳು ಪ್ರಾದೇಶಿಕ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದವು. ಈ ಪೈಕಿ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ, ಶ್ರೀರಾಮುಲು ನೇತೃತ್ವ ಬಿಎಸ್ಆರ್‌ ಕಾಂಗ್ರೆಸ್‌ ಪಕ್ಷಗಳು ತೀವ್ರ ಪೈಪೋಟಿ ನೀಡಿದ್ದವು. ಪ್ರತ್ಯೇಕ ಪಕ್ಷ ಸ್ಥಾಪಿಸಿದ್ದ ಈ ಇಬ್ಬರೂ ಈಗ ಬಿಜೆಪಿ ಸೇರಿದ್ದಾರೆ.

2018ರ ಚುನಾವಣೆಯಲ್ಲಿ ಹೊಸ ಪಕ್ಷಗಳು ರಂಗ ಪ್ರವೇಶ ಮಾಡಲಿವೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಚುನಾವಣಾ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿದೆ.

‘2013ರಲ್ಲಿ ನವದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರಿಂದಾಗಿ ಕರ್ನಾಟಕದಲ್ಲಿ ಸ್ಪರ್ಧಿಸಿರಲಿಲ್ಲ. ಈ ಬಾರಿ 70 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, 25 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಪೈಪೋಟಿ ನೀಡಲು ಪಕ್ಷ ಅಣಿಯಾಗಿದೆ’ ಎಂದು ರಾಜ್ಯ ಘಟಕದ ಸಹ ಸಂಚಾಲಕ ಸಿ. ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಆಮ್ ಆದ್ಮಿ ಪಕ್ಷದಿಂದ ಹೊರಬಂದಿರುವ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್‌ ‘ಸ್ವರಾಜ್ ಇಂಡಿಯಾ’ ಸ್ಥಾಪಿಸಿದ್ದಾರೆ.

ಕರ್ನಾಟಕದಲ್ಲಿ ಸಾಹಿತಿ ದೇವನೂರ ಮಹಾದೇವ ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಸ್ವರಾಜ್ ಇಂಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಈ ಪಕ್ಷ 10ರಿಂದ 15 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದೆ.

‘ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ’ ಸ್ಥಾಪಿಸಿರುವ ನಟ ಉಪೇಂದ್ರ ಪ್ರಜಾಕೀಯಕ್ಕೆ ಮುಂದಾಗಿದ್ದಾರೆ. 224 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಅವರು ಘೋಷಿಸಿದ್ದಾರೆ.

ಮುಖ್ಯಮಂತ್ರಿ ಜತೆಗೆ ಗುರುತಿಸಿಕೊಂಡಿದ್ದ ವರ್ತೂರು ಪ್ರಕಾಶ್, ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರನ್ನು ಒಗ್ಗೂಡಿಸಲು ‘ನಮ್ಮ ಕಾಂಗ್ರೆಸ್’ ಪಕ್ಷ ಸ್ಥಾಪಿಸುವುದಾಗಿ ಈಗಾಗಲೇ ಪ್ರಕಟಿಸಿದ್ದಾರೆ. ಇದೇ ತಿಂಗಳು 19ರಂದು ಪಕ್ಷಕ್ಕೆ ಚಾಲನೆ ನೀಡುವುದಾಗಿಯೂ ಅವರು ಹೇಳಿದ್ದಾರೆ. ಹಿಂದಿನ ಎರಡು ಚುನಾವಣೆಗಳಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ, ಆಯ್ಕೆಯಾಗಿದ್ದ ವರ್ತೂರು 2008ರಲ್ಲಿ ಬಿಜೆಪಿ ಸರ್ಕಾರದಲ್ಲಿ ಸಚಿವರೂ ಆಗಿದ್ದರು.

ಸಿದ್ದರಾಮಯ್ಯ ನೇತೃತ್ವ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಕಾಂಗ್ರೆಸ್ ಸಹ ಸದಸ್ಯರಾಗಿ ಸೇರ್ಪಡೆಗೊಂಡಿದ್ದರು. ಇತ್ತೀಚೆಗೆ ಅವರು ಸಿದ್ದರಾಮಯ್ಯ ಸಖ್ಯ ತೊರೆದಿದ್ದಾರೆ.

ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಭಾರತೀಯ ಜನಶಕ್ತಿ ಕಾಂಗ್ರೆಸ್ ಸ್ಥಾಪಿಸುವುದಾಗಿ ನವೆಂಬರ್ 1ರಂದು ಘೋಷಿಸಿದ್ದಾರೆ. ಪಕ್ಷದ ನೋಂದಣಿಗಾಗಿ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿದ್ದಾರೆ. ‘ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಪಕ್ಷದ ಬಲವರ್ಧನೆ ಸದ್ಯಕ್ಕೆ ತಮ್ಮ ಗುರಿ’ ಎಂದು ಶೆಣೈ ತಿಳಿಸಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುನಿಂದ ಹೊರಬಂದಿರುವ ಶರದ್ ಯಾದವ್‌ ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.

ಕರ್ನಾಟಕದಲ್ಲಿ ಈ ಹಿಂದೆ ಜೆಡಿಯು ಅಧ್ಯಕ್ಷರಾಗಿದ್ದ ಎಂ.ಪಿ. ನಾಡಗೌಡ, ಮಾಜಿ ಸಂಸದ ಪಿ.ಕೋದಂಡರಾಮಯ್ಯ ಶರದ್ ಜತೆ ಗುರುತಿಸಿಕೊಂಡಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿ ನಾಡಗೌಡ ಈಗಾಗಲೇ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry