ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿ ಸೋಲಿಸುವುದು ನಮ್ಮ ಗುರಿಯಾಗಬೇಕು’

Last Updated 6 ಡಿಸೆಂಬರ್ 2017, 20:25 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿಯನ್ನು ಸೋಲಿಸುವುದು ನಮ್ಮ ನೈಜ ಗುರಿಯಾಗಿರಬೇಕು. ಏಕೆಂದರೆ, ಅವರು ಹೆಚ್ಚಾಗಿ ಹಿಂದುತ್ವವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಬರುತ್ತಾರೆ’ ಎಂದು ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್ ಅವರು ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಅಂಬೇಡ್ಕರ್ ಅವರ 61ನೇ  ಪರಿನಿರ್ವಾಣ ಅಂಗವಾಗಿ ನಗರದಲ್ಲಿ ಬುಧವಾರ ಆಯೋಜಿ
ಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ನಾವೂ ಹಿಂದುತ್ವದ ಪರವಾಗಿದ್ದೇವೆ. ಎಲ್ಲ ಧರ್ಮಗಳನ್ನು ಒಗ್ಗೂಡಿಸುವ ಹಿಂದುತ್ವಕ್ಕೆ ನಮ್ಮ ಬೆಂಬಲವಿದೆ. ಪ್ರಜಾಪ್ರಭುತ್ವವೇ ನಮ್ಮ ಧರ್ಮ. ಸಂವಿಧಾನವೇ ನಮ್ಮ ಭಗವದ್ಗೀತೆ’ ಎಂದು ಪ್ರತಿಪಾದಿಸಿದರು.

‘ನಮ್ಮ ಪಕ್ಕದಲ್ಲಿ ಬೇರೆ ಧರ್ಮದ ಜನರಿದ್ದಾಗ ‘ನಾವೆಲ್ಲ ಹಿಂದೂ ನಾವೆಲ್ಲ ಒಂದೇ’ ಎಂಬ ಘೋಷವಾಕ್ಯ ಮೊಳಗುತ್ತದೆ. ಅವರು ಹೋದ ಬಳಿಕ ‘ನಾನು ಬ್ರಾಹ್ಮಣ, ನೀನು ದಲಿತ’ ಎಂಬ ಜಾತಿ ತಾರತಮ್ಯ ಪ್ರವೇಶವಾಗುತ್ತದೆ. ದೇಶದ ಪಕ್ಕದಲ್ಲಿ ಪಾಕಿಸ್ತಾನವಿಲ್ಲದಿದ್ದರೆ ರಾಷ್ಟ್ರಭಕ್ತಿಯೂ ಇರುತ್ತಿರಲಿಲ್ಲ. ಹೀಗಾಗಿ, ಮೊದಲು ಈ ಜಾತಿ ವ್ಯವಸ್ಥೆ ತೊಲಗಬೇಕು. ಆಗ ಸಮ ಸಮಾಜದ ಕನಸು ನನಸಾಗುತ್ತದೆ’ ಎಂದರು.

ದೇಶದಲ್ಲಿರುವ ಮುಸ್ಲಿಮರು ‘ಏಕತೆಯ ಭಾರತ’ದ ಪರವಾಗಿದ್ದಾರೆ. ಆದರೆ, ಅವರು ಇಂದು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಹೀಗಾಗಿ, ಅವರ ಆತ್ಮವಿಶ್ವಾಸ ವೃದ್ಧಿಸಲು ಎಲ್ಲ ಧರ್ಮಗಳ ಜನರು ಮುಂದಾಗಬೇಕು ಎಂದು ಹೇಳಿದರು.

ಅಸ್ಪೃಶ್ಯತೆ ಹುಟ್ಟಿರುವುದೆ ಜಾತಿಯಿಂದ: ‘ಧರ್ಮ ಸಂಸತ್‌ನಲ್ಲಿ ‘ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆಗೆ ಸಂಬಂಧವಿಲ್ಲ’ ಎಂಬ ನಿರ್ಣಯ ಕೈಗೊಳ್ಳಲಾಗಿದೆ. ಇದು ಹೇಗೆ ಸಂಬಂಧವಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ‘ಅಸ್ಪೃಶ್ಯತೆ ಹುಟ್ಟಿರುವುದೇ ಜಾತಿಯಿಂದ’ ಎಂದು ನಾವು ತಿಳಿದಿದ್ದೇವೆ. ಇಂಥ ನಿರ್ಣಯಗಳ ಮೂಲಕ ಸಂವಿಧಾನವನ್ನು ತಿರುಚುವ ಕೆಲಸ ನಡೆಯುತ್ತಿದೆ ಎಂದು ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋ
ಗದ ಅಧ್ಯಕ್ಷ ಕಾಂತರಾಜು ದೂರಿದರು.

ಸಂವಿಧಾನ ಛಿದ್ರಗೊಳಿಸುವ ಹುನ್ನಾರ: ‘ಧರ್ಮ ಸಂಸತ್‌ ಹೆಸರಿನಲ್ಲಿ ಮನುವಾದಿಗಳು ಹಿಂಬಾಗಿಲ ಮೂಲಕ ಸಂವಿಧಾನದ ಕೋಟೆ ಪ್ರವೇಶಿಸಿ ಅದನ್ನು ಛಿದ್ರಗೊಳಿಸುವ ಹುನ್ನಾರ ನಡೆಸಿದ್ದಾರೆ. ಕೆಲವರು ‘ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿಯೇ ತೀರುತ್ತೇವೆ’ ಎಂದು ಹೇಳುತ್ತಿದ್ದಾರೆ. ನಮ್ಮ ರಾಮನಿಗೆ (ಸಾಮಾನ್ಯ ವ್ಯಕ್ತಿಗೆ) ವಾಸಿಸಲು ಸ್ವಂತ ಮನೆ ಇದಿಯೋ ಇಲ್ಲವೊ ಎಂಬ ಚಿಂತೆ ಅವರಿಗಿಲ್ಲ. ರಾಮನಿಗೆ ಗುಡಿ ಕಟ್ಟುವುದೆ ಅವರ ಧ್ಯೇಯವಾಗಿದೆ’ ಎಂದು ಲೇಖಕ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಟೀಕಿಸಿದರು.

‘ಸಮಾಜದ ಎಲ್ಲ ಸಮಸ್ಯೆಗಳಿಗೆ ಸಂವಿಧಾನದಲ್ಲಿ ಪರಿಹಾರವಿದೆ. ಅಂಥ ಸಂವಿಧಾನವನ್ನು ಒಪ್ಪಿಕೊಳ್ಳದ ಮನಸ್ಥಿತಿ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ’ ಎಂದು ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾವಳ್ಳಿ ಶಂಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT