7
ಯುವ ವಿನಿಮಯ– ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿರುವ ಉತ್ತರಾಖಂಡದ 51 ಯುವಜನರು

ಉದ್ಯೋಗ ಅವಕಾಶಗಳೇ ಇಲ್ಲ: ವಿಭುಕೃಷ್ಣ

Published:
Updated:

ಮಂಗಳೂರು: ‘ನಮ್ಮದು ಉತ್ತರ ತುದಿ. ಎಲ್ಲಿ ನೋಡಿದರೂ ಬೆಟ್ಟ, ಗುಡ್ಡಗಳೇ, 13 ಜಿಲ್ಲೆಗಳಿರುವ ಉತ್ತರಾಖಂಡದಲ್ಲಿ, ಎರಡು ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದೆಲ್ಲವೂ ಬೆಟ್ಟಗಳಿಂದಲೇ ಆವೃತವಾಗಿವೆ. ಹೀಗಾಗಿ ನಮ್ಮಲ್ಲಿ ಉದ್ಯೋಗ ಅವಕಾಶಗಳು ಕಡಿಮೆ’ ಎಂದು ಉತ್ತರಾಖಂಡದ ಯುವತಿ ವಿಭು ಕೃಷ್ಣ ಹೇಳಿದರು.

‌ಅಂತರರಾಜ್ಯ ಯುವ ವಿನಿಮಯ ಕಾರ್ಯಕ್ರಮದಲ್ಲಿ ನಗರಕ್ಕೆ ಬಂದಿರುವ ಉತ್ತರಾಖಂಡದ 51 ಯುವ ಜನರು, ಬುಧವಾರ ನಗರದ ವಾರ್ತಾ ಇಲಾಖೆ ಸಭಾಭವನದಲ್ಲಿ ಸಂವಾದ ನಡೆಸಿದರು.

‘ಒಳ್ಳೆಯ ವೈದ್ಯಕೀಯ ಸೇವೆಯೂ ಸಿಗುತ್ತಿಲ್ಲ. ಗುಡ್ಡಗಾಡು ಪ್ರದೇಶ ಆಗಿರುವುದರಿಂದ ವೈದ್ಯರು ಅಲ್ಲಿಗೆ ಬರುತ್ತಿಲ್ಲ. ತುರ್ತು ಸಂದರ್ಭಗಳಲ್ಲಿ ಡೆಹ್ರಾಡೂನ್‌ ಇಲ್ಲವೇ ದೆಹಲಿಗೆ ಹೋಗಬೇಕು. ಕರ್ನಾಟಕದಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗ ಅವ ಕಾಶಗಳು ಹೇರಳವಾಗಿವೆ. ಇಲ್ಲಿಗೆ ಬಂದಾಗ ಹೊಸದೊಂದು ದೇಶಕ್ಕೆ ಬಂದ ಅನುಭವವಾಯಿತು’ ಎಂದು ತಿಳಿಸಿದರು.

‘ಇದೇ ಮೊದಲ ಬಾರಿಗೆ ನಾವು ಕಡಲು ನೋಡುತ್ತಿದ್ದೇವೆ. ಅದೇ ರೀತಿ ಮೊದಲ ಬಾರಿಗೆ ರೈಲಿನಲ್ಲಿ ಪ್ರಯಾಣ ಮಾಡಿದ್ದೇವೆ. ನಾವೆಲ್ಲ ಅನ್ನ, ಸಾರು, ರೊಟ್ಟಿ ತಿನ್ನುವವರು. ಇಲ್ಲಿಗೆ ಬಂದಾಗ ಇಡ್ಲಿ, ದೋಸೆಯ ರುಚಿಯನ್ನು ಸವಿದಿದ್ದೇವೆ. ಕರ್ನಾಟಕಕ್ಕೆ ಭೇಟಿ ನೀಡಿ ಒಳ್ಳೆಯ ಅನುಭವ ಸಿಕ್ಕಿದೆ’ ಎಂದು ಹೇಳಿದರು.

ನಿಯೋಗದ ನೇತೃತ್ವ ವಹಿಸಿರುವ ಚಂದ್ರಸಿಂಗ್ ದಾನು ಮಾತನಾಡಿ, ‘ಯಾವುದೇ ಕೈಗಾರಿಕೆ ಇಲ್ಲ. ಪದೇ ಪದೇ ಭೂಕುಸಿತ ಉಂಟಾಗುತ್ತದೆ. ನಮ್ಮಲ್ಲೂ ಅನೇಕ ವಿದ್ಯಾವಂತರಿದ್ದಾರೆ. ಆದರೆ, ಉದ್ಯೋಗ ಸಿಗುತ್ತಿಲ್ಲ. ಸಣ್ಣಪುಟ್ಟ ವ್ಯಾಪಾರ, ಸೇನೆಗೆ ಸೇರುವುದೇ ನಮ್ಮ ಜೀವನ ನಿರ್ವಹಣೆಗೆ ಆಧಾರವಾಗಿವೆ. ಅಲ್ಪಸ್ವಲ್ಪ ಕೃಷಿ ಮಾಡುತ್ತಿದ್ದು, ಅದು ಏತಕ್ಕೂ ಸಾಲುವುದಿಲ್ಲ’ ಎಂದು ಹೇಳಿದರು.

‘ಕರ್ನಾಟಕದಲ್ಲಿ ಗ್ರಾಮ ಪಂಚಾ ಯಿತಿಗಳು ಸಬಲವಾಗಿವೆ. ಒಳ್ಳೆಯ ಕಟ್ಟಡ, ಸೌಲಭ್ಯಗಳು ಇವೆ. ತ್ಯಾಜ್ಯ ವಿಲೇವಾರಿ, ನೀರು ಇಂಗಿಸುವುದು ಸೇರಿದಂತೆ ಅನೇಕ ಯೋಜನೆಗಳು ಗ್ರಾಮ ಪಂಚಾಯಿತಿಗಳಲ್ಲಿ ಲಭ್ಯವಾಗಿವೆ. ನಮ್ಮಲ್ಲಿ ಕೇವಲ ಒಂದು ಶೆಡ್‌ ಮಾತ್ರ ಕಾಣುತ್ತದೆ’ ಎಂದರು.

ಯುವಕ ಅನೂಪ್‌ ಸಿಂಗ್‌ ಮಾತನಾಡಿ, ‘ದಕ್ಷಿಣ ಭಾರತದ ಅನೇಕ ಪ್ರವಾಸಿಗರು ಉತ್ತರಾಖಂಡಕ್ಕೆ ಭೇಟಿ ನೀಡುತ್ತಾರೆ. ಇದರಿಂದ ನಮ್ಮ ಪ್ರವಾಸೋದ್ಯಮದ ಅಭಿವೃದ್ಧಿಗೆ ಅವ ಕಾಶ ದೊರೆತಿದೆ. ಅದೇ ರೀತಿ, ನಮ್ಮಲ್ಲಿ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಉದ್ಯೋಗಾವಕಾಶಗಳ ಸೃಷ್ಟಿಗೂ ಇಲ್ಲಿನ ಜನರು ಕಾಳಜಿ ವಹಿಸಬೇಕು’ ಎಂದು ಮನವಿ ಮಾಡಿದರು.

ಯುವತಿ ರಚನಾ ಮಾತನಾಡಿ, ‘ಕರ್ನಾಟಕದ ಭೇಟಿಯನ್ನು ಎಂದಿ ಗೂ ಮರೆಯಲು ಸಾಧ್ಯವಿಲ್ಲ. ಇಲ್ಲಿ ನೋಡಿರುವ ಎಲ್ಲವೂ ನಮಗೆ ಹೊಸದು. ಮೈಸೂರಿನ ಅರಮನೆ ಯಂತೂ ಬಿಟ್ಟು ಬರಲಾರ ದಷ್ಟು ಚೆನ್ನಾಗಿದೆ. ಒಳ್ಳೆಯ ಅನುಭವ ಸಿಕ್ಕಿದೆ’ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ನೆಹರೂ ಯುವ ಕೇಂದ್ರದ ಸಮನ್ವಯಾಧಿಕಾರಿ ಸಿಂಥಿಯಾ ಲೋಬೊ ಮಾತನಾಡಿ, ಕೇಂದ್ರ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯವು ನೆಹರು ಯುವ ಕೇಂದ್ರದ ಮೂಲಕ ‘ಒಂದು ಭಾರತ ಶ್ರೇಷ್ಠ’ ಕಾರ್ಯಕ್ರಮದಡಿ ಅಂತರರಾಜ್ಯ ಯುವ ವಿನಿಮಯ ಕಾರ್ಯಕ್ರಮ ಆಯೋಜಿಸಿದೆ. ಉತ್ತರಾ ಖಂಡದ 51 ಯುವಜನರು ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಕರ್ನಾಟಕದ 50 ಯುವಜನರು ಡಿಸೆಂಬರ್ 25 ರಂದು ಉತ್ತರಾಖಂಡಕ್ಕೆ ತೆರಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಯೇನೆಪೋಯ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಅಧಿಕಾರಿ ಡಾ. ಅಶ್ವಿನಿ ಶೆಟ್ಟಿ, ಉತ್ತರಾಖಂಡದ ತಂಡ ಇದೇ 3 ರಂದು ಜಿಲ್ಲೆಗೆ ಬಂದಿದೆ. ಈಗಾಗಲೇ ಯುವಕ ಮಂಡಲಗಳು, ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದೆ. ಎನ್‌ಎಂಪಿಟಿ, ಎಂಆರ್‌ಪಿಎಲ್‌, ಗೋವಿಂದದಾಸ್ ಪದವಿಪೂರ್ವ ಕಾಲೇಜು, ಯೇನೆಪೋಯ ವಿಶ್ವವಿದ್ಯಾ ಲಯ, ಮೂಡುಬಿದಿರೆ ಸಾವಿರ ಕಂಬದ ಬಸದಿ, ಉಳ್ಳಾಲ ದರ್ಗಾ, ಗೋಕರ್ಣನಾಥ ದೇವಸ್ಥಾನ, ಸೇಂಟ್‌ ಅಲೋಶಿಯಸ್‌ ಚಾಪೆಲ್‌ಗಳಿಗೆ ಭೇಟಿ ನೀಡಿದೆ ಎಂದು ಹೇಳಿದರು.

ನೆಹರೂ ಯುವ ಕೇಂದ್ರದ ವಲಯಾಧಿಕಾರಿ ಗುಣಶೇಖರನ್‌ ಇದ್ದರು.

**

ತಾಯ್ನಾಡು ಬಿಟ್ಟುಕೊಡದ ವಿಭು

ಉತ್ತರಾಖಂಡಕ್ಕಿಂತ ಕರ್ನಾಟಕದಲ್ಲಿ ಭ್ರಷ್ಟಾಚಾರ ಕಡಿಮೆ ಇದೆ. ಅಲ್ಲಿ ಪ್ರತಿಯೊಬ್ಬರಿಗೂ ಕಮಿಷನ್‌ ನೀಡಬೇಕು ಎಂದು ತಂಡದ ನೇತೃತ್ವ ವಹಿಸಿದ್ದ ಚಂದ್ರಸಿಂಗ್‌ ದಾನು ವಿವರಣೆ ನೀಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಭು ಕೃಷ್ಣ, ಉತ್ತರಾಖಂಡದಲ್ಲಿ ಭ್ರಷ್ಟಾಚಾರ ಇಲ್ಲವೇ ಇಲ್ಲ. ಬೇರೆ ಉದ್ಯೋಗಗಳು ಇಲ್ಲದೇ ಇರುವುದರಿಂದ ಸಿಗುವ ವೇತನವೇ ಅಧಿಕಾರಿಗಳಿಗೆ ಸಾಕಾಗುತ್ತದೆ ಎನ್ನುವ ಮೂಲಕ ತಾಯ್ನಾಡನ್ನು ಬಿಟ್ಟುಕೊಡಲಿಲ್ಲ.

‘ನಮ್ಮಲ್ಲೂ ಒಳ್ಳೆಯ ಶಿಕ್ಷಣವಿದೆ. ಆದರೆ, ಉದ್ಯೋಗ, ವೈದ್ಯಕೀಯ ಸೇವೆಗಳ ಕೊರತೆ ಇದೆ. ಆದರೂ, ಪ್ರವಾಸೋದ್ಯಮಕ್ಕೆ ಹೇರಳ ಅವಕಾಶವಿದೆ. ಉತ್ತರಾಖಂಡದ ಜನರು ವಲಸೆ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry