7
ಮಲ್ಪೆ ಬಳಿ ಮುಳುಗುತ್ತಿದ್ದ ಮೀನುಗಾರಿಕೆ ದೋಣಿ

13 ಜನರನ್ನು ರಕ್ಷಿಸಿದ ಕರಾವಳಿ ಕಾವಲು ಪಡೆ

Published:
Updated:
13 ಜನರನ್ನು ರಕ್ಷಿಸಿದ ಕರಾವಳಿ ಕಾವಲು ಪಡೆ

ಮಂಗಳೂರು: ಒಖಿ ಚಂಡಮಾರುತಕ್ಕೆ ಸಿಲುಕಿ ಮಲ್ಪೆಯಿಂದ 18 ಕಿ.ಮೀ. ದೂರದಲ್ಲಿ ಮುಳುಗುತ್ತಿದ್ದ ದೋಣಿಯಲ್ಲಿನ 13 ಜನರನ್ನು ರಕ್ಷಿಸುವಲ್ಲಿ ಕರಾವಳಿ ಕಾವಲು ಪಡೆ ಯಶಸ್ವಿಯಾಗಿದೆ.

ನವೆಂಬರ್‌ 7 ರಂದು ಕೊಚ್ಚಿಯಿಂದ ಹೊರಟಿದ್ದ ಈ ದೋಣಿ, ಬುಧವಾರ ಮಲ್ಪೆ ಬಳಿ ಮುಳುಗುವ ಹಂತಕ್ಕೆ ತಲುಪಿತ್ತು. ಈ ಕುರಿತು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು, ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದರು. ಕರಾವಳಿ ಕಾವಲು ಪಡೆಯ ಗಸ್ತು ನೌಕೆ ಅಮರ್ತ್ಯದಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಎರಡು ಗಂಟೆಯಲ್ಲಿ ಸ್ಥಳಕ್ಕೆ ತಲುಪಿದರು.

ಚಂಡಮಾರುತದಿಂದಾಗಿ ದೋಣಿಗೆ ಹಾಗೂ ಸಂವಹನ ಸಾಮಗ್ರಿಗಳಿಗೆ ಹಾನಿಯಾಗಿತ್ತು. ಪಡಿತರ ಕೂಡ ಸಮುದ್ರದ ಪಾಲಾಗಿತ್ತು. ಡಿಸೆಂಬರ್‌ 3ರಿಂದ ನಿಯಂತ್ರಣ ಕಳೆದುಕೊಂಡು ಸಮುದ್ರದಲ್ಲಿ ತೇಲುತ್ತಿತ್ತು ಎಂದು ದೋಣಿಯ ಮುಖ್ಯಸ್ಥ ತಿಳಿಸಿರುವುದಾಗಿ ಕರಾವಳಿ ಕಾವಲು ಪಡೆಯ ಕಮಾಂಡರ್‌ ಎಸ್‌.ಎಸ್‌. ದಾಸಿಲ್‌ ತಿಳಿಸಿದರು.

ಸಮುದ್ರದ ಭಾರಿ ತೆರೆಗಳಿಂದಾಗಿ ದೋಣಿಯಲ್ಲಿ ನೀರು ತುಂಬಿತ್ತು. ಎಂಜಿನ್‌ ಕೋಣೆಯಲ್ಲಿಯೇ 3 ಟನ್‌ನಷ್ಟು ನೀರು ಶೇಖರಣೆಯಾಗಿತ್ತು. ಜತೆಗೆ ದೋಣಿಯ ನೀರನ್ನು ಹೊರಕ್ಕೆ ಹಾಕಲು ಸಾಮಗ್ರಿಗಳೂ ಇಲ್ಲದಾಗಿತ್ತು ಎಂದು ಹೇಳಿದರು.

ದೋಣಿಯಲ್ಲಿದ್ದ 13 ಜನರು ನಿತ್ರಾಣಗೊಂಡಿದ್ದರು. ಅವರಿಗೆ ಪ್ರಥಮ ಚಿಕಿತ್ಸೆ, ಆಹಾರ, ನೀರು ಒದಗಿಸಲಾಯಿತು. ನಂತರ ನೌಕಾಪಡೆಯ ಹಡಗಿನಲ್ಲಿ ಅವರನ್ನು ದಡಕ್ಕೆ ಕರೆತರಲಾಯಿತು ಎಂದು ವಿವರಿಸಿದರು.

ರಕ್ಷಣಾ ಕಾರ್ಯಾಚರಣೆಯನ್ನು ಕರಾವಳಿ ಕಾವಲು ಪಡೆಯ ಜಿಲ್ಲಾ ಕೇಂದ್ರ ಕಚೇರಿಯ ಉಸ್ತುವಾರಿ ನಡೆಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸಹಕರಿಸಿದರು ಎಂದು ದಾಸಿಲ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry