ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಲ್ಲೇ ಹಾಳಾದ ಕಸದ ಡಬ್ಬಿಗಳು!

ಸ್ವಚ್ಛ ಭಾರತ ಅಭಿಯಾನದಡಿ ಖರೀದಿಸಿದ ಡಬ್ಬಿಗಳು: ಕಸ ಸಂಗ್ರಹವೂ ಅಸಮರ್ಪಕ: ನಾಗರಿಕರ ಅಸಮಾಧಾನ
Last Updated 7 ಡಿಸೆಂಬರ್ 2017, 5:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸ್ವಚ್ಛ ಭಾರತ ಅಭಿಯಾನದ ಅಡಿ ಅಕ್ಟೋಬರ್‌ನಿಂದ ಹುಬ್ಬಳ್ಳಿ–ಧಾರವಾಡದ ಆಯ್ದ ಸ್ಥಳಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯ ಹಾಕುವ ಕಸದ ಡಬ್ಬಿಗಳನ್ನು ಇಡಲಾಗಿದೆ. ಆದರೆ, ಹೀಗೆ ಇಟ್ಟಿರುವ ಡಬ್ಬಿಗಳು ತಿಂಗಳೊಳಗೇ ಹಾಳಾಗಿವೆ. ಅಲ್ಲದೆ, ಇಲ್ಲಿ ಹಾಕುವ ಕಸವನ್ನು ಸರಿಯಾಗಿ ಸಂಗ್ರಹಿಸುತ್ತಿಲ್ಲ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕಸದ ಡಬ್ಬಿಗಳನ್ನು ಅಲ್ಲಲ್ಲಿ ಅಳವಡಿಸಲಾಗಿದೆ. ಆದರೆ, ಅದರ ಬಳಿ ಹೋಗುವುದೇ ಕಷ್ಟವಾಗುವಷ್ಟು ಅವು ಹಾಳಾಗಿವೆ. ಅಲ್ಲಿ ಹಾಕಿರುವ ಕಸವನ್ನು ನಿಯಮಿತವಾಗಿ ತೆಗೆದುಕೊಳ್ಳುವುದಿಲ್ಲ. ಬಳಿ ಹೋದರೆ ದುರ್ವಾಸನೆ ಬರುತ್ತದೆ’ ಎಂದು ಗದಗ ರಸ್ತೆಯ ರೈಲ್ವೆ ಸೇತುವೆ ಬಳಿಯ ನಿವಾಸಿ ಮಹೇಶ ಪಂಡಿತ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಕೆಲವೊಂದು ಡಬ್ಬಿಗಳನ್ನು ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಎಸೆಯಲಾಗಿದೆ. ಈ ರೀತಿ ಅಸಮರ್ಪಕ ನಿರ್ವಹಣೆ ಮಾಡುವುದಾಗಿದ್ದರೆ, ಆ ಡಬ್ಬಿಗಳನ್ನಾದರೂ ಏಕೆ ಇಡಬೇಕಾಗಿತ್ತು. ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ಡಬ್ಬಿಗಳ ಸುತ್ತಲೂ ಹಂದಿ–ನಾಯಿಗಳುಓಡಾಡುತ್ತವೆ. ಅಲ್ಲಿ ಕಸ ಹಾಕುವುದಕ್ಕೂ ಹೆದರಿಕೆಯಾಗುತ್ತದೆ. ಅಲ್ಲದೆ, ಎರಡು–ಮೂರು ದಿನಗಳ ಕಸ ಹಾಗೆಯೇ ಬಿಡುವುದರಿಂದ ಸಮಸ್ಯೆಯಾಗುತ್ತಿದೆ’ ಎಂದು ವಿಶ್ವೇಶ್ವರ
ನಗರದ ಪ್ರೇಮಲತಾ ಕುಂಬಾರ ಹೇಳಿದರು.

ಪ್ರತಿದಿನ ಸಂಗ್ರಹ: ‘ಪ್ರತಿ ದಿನ ಮಧ್ಯಾಹ್ನ ಈ ಡಬ್ಬಿಗಳಿಂದ ಕಸ ಸಂಗ್ರಹಿಸಲಾಗುತ್ತಿದೆ. ಅದಕ್ಕೆಂದೇ ಎರಡು ಆಟೊ ಹಾಗೂ ಇಬ್ಬರು ಕಾರ್ಮಿಕರನ್ನು ನಿಯೋಜಿಸಲಾಗಿದೆ’ ಎಂದು ಹುಬ್ಬಳ್ಳಿ–ಧಾರವಾಡ ಪರಿಸರ ಎಂಜಿನಿಯರ್‌ ಶ್ರೀಧರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಟ್ಟು 120 ಕಸದ ಡಬ್ಬಿಗಳನ್ನು ಇಡಲಾಗುತ್ತಿತ್ತು, ಹುಬ್ಬಳ್ಳಿಯಲ್ಲಿ ಈ ಕಾರ್ಯ ಮುಕ್ತಾಯ ಹಂತದಲ್ಲಿದೆ. ಧಾರವಾಡದಲ್ಲಿಯೂ ಶೀಘ್ರದಲ್ಲಿ ಅಳವಡಿಸಲಾಗುವುದು’ ಎಂದು ಅವರು ತಿಳಿಸಿದರು.

‘ಕಸದ ಡಬ್ಬಿಗಳನ್ನು ಅಳವಡಿಸುವ ಗುತ್ತಿಗೆಯನ್ನು ಹುಬ್ಬಳ್ಳಿಯ ಸಜ್ಜನ್‌ ಕಂಪೆನಿಗೆ ನೀಡಲಾಗಿದೆ. ಆದರೆ, ಕೆಲವು ಕಡೆ ಸರಿಯಾಗಿ ವೆಲ್ಡಿಂಗ್‌ ಮಾಡದಿರುವುದರಿಂದ ಡಬ್ಬಿಗಳು ಕೆಳಗೆ ಬಿದ್ದಿವೆ. ಮತ್ತೆ ಕೆಲವು ಭಾಗಗಳಲ್ಲಿ ರಸ್ತೆ ಕಾಮಗಾರಿ ಪ್ರಾರಂಭವಾಗುತ್ತಿರುವುದರಿಂದ ಡಬ್ಬಿಗಳನ್ನು ಬದಿಯಲ್ಲಿ ಇಡಲಾಗಿದೆ. ಸಮರ್ಪಕವಾಗಿ ಡಬ್ಬಿಗಳನ್ನು ಅಳವಡಿಸದ ಕಾರಣ, ಸಜ್ಜನ್‌ ಕಂಪೆನಿಗೆ ಇನ್ನೂ ಬಿಲ್‌ ಪಾವತಿಸಿಲ್ಲ’ ಎಂದು ಅವರು ತಿಳಿಸಿದರು.

‘ಜಿ.ಎಸ್.ಟಿ ಕಾರಣದಿಂದ ಒಂದು ತಿಂಗಳು ಸಜ್ಜನ್‌ ಕಂಪೆನಿಯವರು ಕೆಲಸ ಸ್ಥಗಿತಗೊಳಿಸಿದ್ದರು. ಇಲ್ಲದಿದ್ದರೆ, ಈ ವೇಳೆಗಾಗಲೇ ಧಾರವಾಡದಲ್ಲಿಯೂ ಡಬ್ಬಿಗಳ ಅಳವಡಿಕೆ ಕಾರ್ಯ ಪೂರ್ಣವಾಗಿರುತ್ತಿತ್ತು’ ಎಂದು ಹೇಳಿದರು.

‘ಖರೀದಿಗೆ ನಾವೇನೂ ಟೆಂಡರ್‌ ಕರೆಯುವುದಿಲ್ಲ. ಜೋಡಿ ಡಬ್ಬಿಗೆ, ಸ್ಟ್ಯಾಂಡ್‌ ಸೇರಿ ₹6,531 ವೆಚ್ಚದಲ್ಲಿ ಕೇಂದ್ರ ಸರ್ಕಾರದವರೇ ಇವುಗಳನ್ನು ಖರೀದಿಸಿದೆ. ಗುರ್‌ಗಾಂವ್‌ನಿಂದ ಇವುಗಳನ್ನು ತರಿಸಲಾಗಿದೆ. ಈ ಹಣವನ್ನೂ ಇನ್ನೂ ಪಾವತಿಸಿಲ್ಲ’ ಎಂದು ಶ್ರೀಧರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT