ಗುರುವಾರ , ಮಾರ್ಚ್ 4, 2021
29 °C
ಹಿರಿಯೂರಿನಲ್ಲಿ ಭೂಮಿ ಹಕ್ಕಿಗಾಗಿ ಉಪವಾಸ ಸತ್ಯಾಗ್ರಹ

‘ದುಡಿವ ಕೈಗಳಿಗೆ ಭೂಮಿ ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ದುಡಿವ ಕೈಗಳಿಗೆ ಭೂಮಿ ನೀಡಿ’

ಹಿರಿಯೂರು: ಭೂರಹಿತ ಬಡವರು ಬಗರ್‌ಹುಕುಂ ಹಾಗೂ ಅರಣ್ಯ ಭೂಮಿಯಲ್ಲಿ ಹಲವು ದಶಕಗಳಿಂದ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಅವರಿಗೆ ಭೂಮಿಯ ಹಕ್ಕು ನೀಡಬೇಕಾದುದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯ ಎಂದು ಬಿಜೆಪಿ ಒಬಿಸಿ ವಿಭಾಗದ ರಾಜ್ಯ ಉಪಾಧ್ಯಕ್ಷ ಡಿ. ಟಿ.ಶ್ರೀನಿವಾಸ್ ಹೇಳಿದರು.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ರಾಜ್ಯ ಭೂ ಹಕ್ಕುದಾರರ ವೇದಿಕೆಯ ಸ್ಥಳೀಯ ಘಟಕದ ನೇತೃತ್ವದಲ್ಲಿ ಬಗರ್‌ಹುಕುಂ ಹಾಗೂ ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡುವಂತೆ ಆಗ್ರಹಿಸಿ ಬುಧವಾರ ಹಮ್ಮಿಕೊಂಡಿದ್ದ 24 ಗಂಟೆಗಳ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದವರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ದುಡಿದು ತಿನ್ನುತ್ತೇವೆ, ನಮಗೆ ಭೂಮಿಯ ಹಕ್ಕು ಕೊಡಿ ಎಂದು ಕೇಳುವುದರಲ್ಲಿ ಅದ್ಯಾವ ತಪ್ಪಿದೆ? ಬಡವರು ತಮ್ಮ ಹಕ್ಕಿಗಾಗಿ ದಶಕಗಳಿಂದ ಹೋರಾಟ ನಡೆಸಬೇಕಾಗಿ ಬಂದಿರುವುದು ವ್ಯವಸ್ಥೆಯಲ್ಲಿರುವ ದೋಷ. ಈ ಹೋರಾಟಕ್ಕೆ ಬಿಜೆಪಿ ಬೆಂಬಲವಿದೆ’ ಎಂದು ಅವರು ಹೇಳಿದರು.

ವೇದಿಕೆಯ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ‘ಮಾಜಿ ಸಚಿವ ದಿ.ಕೆ.ಎಚ್. ರಂಗನಾಥ್ ಸಚಿವರಾಗಿದ್ದ ಸಂದರ್ಭದಲ್ಲಿ 900 ಫಲಾನುಭವಿಗಳಿಗೆ ಹಕ್ಕುಪತ್ರ ಕೊಟ್ಟಿದ್ದನ್ನು ಹೊರತುಪಡಿಸಿದರೆ ನಂತರ ಬಂದವರೆಲ್ಲ ಕೇವಲ ಭರವಸೆ ನೀಡಿದ್ದಾರೆಯೇ ಹೊರತು, ಬೇಡಿಕೆ ಈಡೇರಿಸಿಲ್ಲ. ಹಕ್ಕುಪತ್ರಕ್ಕಾಗಿ ತಾಲ್ಲೂಕಿನಲ್ಲಿ ಸುಮಾರು 11 ಸಾವಿರ ಫಲಾನುಭವಿಗಳು ಚಾತಕಪಕ್ಷಿಗಳಂತೆ ಕಾಯುತ್ತಿದ್ದು, ಆಳುವವರಿಗೆ ಬಡವರ ಗೋಳು ಕೇಳದಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ರೈತ ಹೋರಾಟಗಾರ ಕಸವನಹಳ್ಳಿ ರಮೇಶ್ ಮಾತನಾಡಿ, ‘ಇದು ಸಾಂಕೇತಿಕ ಉಪವಾಸ ಸತ್ಯಾಗ್ರಹ. ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದೇ ಹೋದಲ್ಲಿ ಹೋರಾಟ ತೀವ್ರಗೊಳಿಸಲಾಗುತ್ತದೆ’ ಎಂದು ಎಚ್ಚರಿಸಿದರು.

ನಿತ್ಯಾನಂದ ಆಶ್ರಮದ ಸಚ್ಚಿದಾನಂದ ಸ್ವಾಮೀಜಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದರು. ನಗರಸಭಾಧ್ಯಕ್ಷ ಟಿ. ಚಂದ್ರಶೇಖರ್, ಚಳ್ಳಕೆರೆ ತಿಪ್ಪೇಸ್ವಾಮಿ, ಬುಡೇನ್ ಸಾಬ್, ರಾಮಚಂದ್ರ, ಸಿದ್ದೇಶ್ ನಾಯ್ಕ, ಜಯಣ್ಣ, ವಿನೋದಮ್ಮ, ಕೆಂಚಮ್ಮ, ಗೌರಮ್ಮ, ಲೋಕಮ್ಮ, ಇಂದ್ರಮ್ಮ,ಸಿದ್ದಮ್ಮ, ಲಲಿತಮ್ಮ, ಓಬಳೇಶ್, ಷಫಿ, ತಿಮ್ಮರಾಜ್, ಚಂದ್ರಪ್ಪ, ಬಾಬುಸಾಬ್ ಮಾತನಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.