ಗುರುವಾರ , ಫೆಬ್ರವರಿ 25, 2021
26 °C

ಹೊಳೆಕೊಪ್ಪ: ವಿಜಯನಗರ ಕಾಲದ ಶಿಲಾ ಶಾಸನ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳೆಕೊಪ್ಪ: ವಿಜಯನಗರ ಕಾಲದ ಶಿಲಾ ಶಾಸನ ಪತ್ತೆ

ತೀರ್ಥಹಳ್ಳಿ: ಮಣ್ಣಿನಲ್ಲಿ ಹುದುಗಿ ಹೋಗಿದ್ದ ವಿಜಯನಗರ ಕಾಲದ ಶಿಲಾ ಶಾಸನ ತಾಲ್ಲೂಕಿನ ಕಟ್ಟೇಹಕ್ಕಲು ಸಮೀಪ ಹೊಳೆಕೊಪ್ಪ ಗ್ರಾಮದಲ್ಲಿ ಪತ್ತೆಯಾಗಿದೆ. ಶಾಸನವನ್ನು ಶೃಂಗೇರಿ ರಾಜೀವ್‌ ಗಾಂಧಿ ರಾಷ್ಟ್ರೀಯ ಸಂಸ್ಕೃತ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಎಂ.ಎ.ಪ್ರಭಾಕರ ಕುಂಚೇರಿ ಶೋಧಿಸಿದ್ದಾರೆ.

ಆರಂಭದ ಸಾಲಿನಲ್ಲಿ ಕೆಲವು ಅಕ್ಷರಗಳು ಅಸ್ಪಷ್ಟವಾಗಿದ್ದು, ಸುಮಾರು 25 ಸಾಲುಗಳ ದಾನ ಶಾಸನ ಇದಾಗಿದೆ.

ವಿಜಯನಗರ ಸಾಮ್ರಾಜ್ಯದ ಆರಗ ರಾಜ್ಯದಲ್ಲಿ ಸಾಮಂತರಾಗಿದ್ದು ರಾಜ್ಯಭಾರ ಮಾಡುತ್ತಿದ್ದ ಸೊಂವಣ್ಣ ಒಡೆಯನ ಉಲ್ಲೇಖವಿದೆ. ಶಕ ವರ್ಷ 1336 ಎಂದಿದ್ದು, ಕ್ರಿ.ಶ. 1334ರ ಇಸವಿಗೆ ಸರಿಹೊಂದುತ್ತದೆ. ವಾಮನ ಮುದ್ರೆ, ಆಕಳು, ಕರು, ಸೂರ್ಯ–ಚಂದ್ರರ ಚಿತ್ರಗಳಿವೆ. 5 ಅಡಿ ಎತ್ತರ, ಎರಡೂವರೆ ಅಡಿ ಅಗಲವಿರುವ ಶಾಸನ ಶೈವ ಶ್ಲೋಕವನ್ನು ಒಳಗೊಂಡಿದೆ.

ಬುಕ್ಕರಾಯನ ಬಿರುದಾವಳಿಗಳನ್ನು ಶಾಸನದಲ್ಲಿ ಹೊಗಳಲಾಗಿದೆ. ಪ್ರಮುಖವಾಗಿ ಆರಗದ ನಾಡಾಧಿಪತಿಗಳಿಗೆ ಸಾಂತಳಿಕೆ ಸಾವಿರದ ನಾಡೊಳಗಣ ಭೂಮಿಯನ್ನು ದಾನ ಮಾಡಿರುವ ಕುರಿತು ಶಾಸನದಲ್ಲಿ ಉಲ್ಲೇಖವಿದೆ.

ತುಂಗಾ ತೀರದ ಶೈಲೇಶ್ವರ ದೇವರ ಅಮೃತಪಡಿ ನಂದಾ ದೀಪಕ್ಕೆ ಭೂಮಿ ದಾನ ಮಾಡಿದ ಮಾಹಿತಿಯೂ ಇದೆ. ವಿಪುಲವಾದ ಶಾಸನ ಸಾಹಿತ್ಯ, ಚತುಃಸೀಮೆ ವಿವರಣೆ, ಗದ್ದೆಬೆದ್ದಲು, ತೋಟ ತುಡಿಕೆ, ಮಾಪನಗಳಾದ ಖಂಡುಗ, ಸಲುಗೆ, ಕೊಳಗ, ನಾಣ್ಯಗಳಾದ ವರಹ, ರೊಕ್ಕದ ಬಗ್ಗೆ ಶಾಸನದಲ್ಲಿ ಮಾಹಿತಿ ಇದೆ.

‘ನೀಡಿದ ದಾನವನ್ನು ಪರಿಪಾಲಿಸಿದರೆ, ಪುಣ್ಯಾಶಯವನ್ನು ಪರಿಪಾಲಿಸದಿದ್ದರೆ ಕಠಿಣ ಶಾಪಾಶಯವಿದೆ’ ಎಂದು ಶಾಸನದಲ್ಲಿ ಉಲ್ಲೇಖಿಸಿ, ಎಚ್ಚರಿಸಲಾಗಿದೆ.

ಶಾಸನ ಕುರಿತು ಇನ್ನಷ್ಟು ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ಡಾ.ಎಂ.ಎ. ಪ್ರಭಾಕರ ಕುಂಚೇರಿ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.