6

ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಕ್ರಮಕ್ಕೆ ಒತ್ತಾಯ

Published:
Updated:
ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಕ್ರಮಕ್ಕೆ ಒತ್ತಾಯ

ಸಾಗರ: ಬಾಬಾಬುಡನ್‌ಗಿರಿಯಲ್ಲಿ ದಾಂಧಲೆ ನಡೆಸಿರುವ ಸಂಘ ಪರಿವಾರದ ಕಾರ್ಯಕರ್ತರ ಮೇಲೆ ರಾಜ್ಯ ಸರ್ಕಾರ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಟಿಪ್ಪು ಸಹರಾ ಯುವಜನ ಸಂಘದ ಕಾರ್ಯಕರ್ತರು ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಟಿಪ್ಪು ಸಹರಾ ಯುವಜನ ಸಂಘದ ಅಧ್ಯಕ್ಷ ಸೈಯದ್ ಜಮೀಲ್‌ ಮಾತನಾಡಿ, ‘ದತ್ತ ಜಯಂತಿ ಸಂದರ್ಭದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಬಾಬಾಬುಡನ್‌ಗಿರಿಯಲ್ಲಿ ಕಾನೂನಿನ ನಿಯಮಗಳನ್ನು ಉಲ್ಲಂಘಿಸಿ ಅತಿರೇಕದಿಂದ ವರ್ತಿಸಿದ್ದಾರೆ. ಈ ಮೂಲಕ ಮತ್ತೊಂದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಘಾಸಿ ತರುವ ಪ್ರಯತ್ನ ನಡೆಸಿದ್ದಾರೆ’ ಎಂದು ದೂರಿದರು.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಹೇಗಾದರೂ ಮಾಡಿ ಕೋಮುದ್ವೇಷವನ್ನು ಬೆಳೆಸುವ ಮೂಲಕ ರಾಜಕೀಯ ಲಾಭ ಪಡೆಯುವ ಪ್ರಯತ್ನವನ್ನು ಕೆಲವು ವ್ಯಕ್ತಿಗಳು ಹಾಗೂ ಸಂಘಟನೆಗಳು ಮಾಡುತ್ತಿವೆ. ಇಂತಹ ಶಕ್ತಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸಚಿವ ಅನಂತಕುಮಾರ್‌, ಸಂಸದ ಪ್ರತಾಪ ಸಿಂಹ, ಬಿಜೆಪಿ ಮುಖಂಡ ಗೋ.ಮಧುಸೂದನ್‌ ಅವರು ಆಗಾಗ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಕಾರುವ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಈ ವರ್ತನೆ ಮುಂದುವರಿಯಬಾರದು. ಅವರು ಶಿವಮೊಗ್ಗ ಜಿಲ್ಲೆಗೆ ಬಂದಾಗ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಸಿದರು.

ಟಿಪ್ಪು ಸಹರಾ ಯುವಜನ ಸಂಘದ ಇಮ್ರಾನ್‌ ಸಾಗರ್‌ ಮಾತನಾಡಿ, ‘ಬಾಬಾಬುಡನ್‌ಗಿರಿಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ ಎಂಬ ಅರಿವಿದ್ದರೂ ಬಂದೋಬಸ್ತ್‌ ವ್ಯವಸ್ಥೆ ಮಾಡದೇ ಇರುವುದು ಸರಿಯಲ್ಲ. ಚುನಾವಣೆ ಹತ್ತಿರ ಬರುತ್ತಿರುವಂತೆ ಧರ್ಮದ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಧಾರ್ಮಿಕ ಕೇಂದ್ರಗಳಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಸೂಫಿ ಹಜರತ್‌ ಖ್ವಾಜಾ ಗಾರೀಬ್‌ ನವಾಜ್‌ ಚಿತ್ತಿ ಸೇವಾ ಸಮಿತಿ ಜಿಲ್ಲಾ ಘಟಕದ ಉಪಾಧ್ಯಕ್ಷ ಅಸ್ಪಾಕ್‌, ಮಹಮ್ಮದ್ ತೌಫಿಕ್‌, ಸೈಯದ್ ತೌಫಿಕ್‌, ಮುಕ್ತಿಯಾರ್‌, ಸೈಯದ್‌ ಉಮ್ಮರ್‌, ತಬರೀಜ್, ಭಾಷಾ ಶೇಖ್‌, ಅಸಾದುಲ್ಲಾ ಖಾನ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry