6
ಎಚ್.ಡಿ.ಕೋಟೆ ತಾಲ್ಲೂಕಿನ ಸೊಳ್ಳೇಪುರ ಪನರ್ವಸತಿ ಕೇಂದ್ರದಲ್ಲಿ ಉಲುಸಾದ ಬೆಳೆ

ಆದಿವಾಸಿಗಳ ಕೃಷಿ ಪ್ರೀತಿ...

Published:
Updated:

ಎಚ್.ಡಿ.ಕೋಟೆ: ತಾಲ್ಲೂಕಿನ ಸೊಳ್ಳೇಪುರ ಪುನರ್ವಸತಿ ಕೇಂದ್ರದ ಆದಿವಾಸಿಗಳು ಯಾರಿಗೂ ಕಡಿಮೆ ಇಲ್ಲದಂತೆ ಉತ್ತಮವಾಗಿ ಬೆಳೆ ಬೆಳೆದು ಸೈ ಎನಿಸಿಕೊಂಡಿದ್ದಾರೆ.

ಇಲ್ಲಿನ 60 ಕುಟುಂಬಗಳ ಪೈಕಿ 35 ಕುಟುಂಬಗಳು ಸಂಪೂರ್ಣವಾಗಿ ಬೇಸಾಯದಲ್ಲಿ ತೊಡಗಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ 2007– 08ರಲ್ಲಿ ಪುನರ್ವಸತಿಗೊಂಡಾಗ ಇವರಿಗೆ ತಲಾ ಮೂರು ಎಕರೆ ಕೃಷಿ ಭೂಮಿ ನೀಡಲಾಗಿತ್ತು. ಆದರೆ, ಬೇಸಾಯ ಮಾಡುವುದೇ ಗೊತ್ತಿರಲಿಲ್ಲ. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇದಕ್ಕಾಗಿ ಕೊಡಗು, ಕೇರಳ ಇತರೆಡೆಗೆ ವಲಸೆ ಹೋಗುತ್ತಿದ್ದರು. ಆದರೆ, ಈಗ ಎಲ್ಲರೂ ಚಕಿತಗೊಳ್ಳುವಂತಹ ಬೆಳೆ ಬೆಳೆದಿದ್ದಾರೆ.

ಅರಣ್ಯ ಇಲಾಖೆಯ ₹1 ಲಕ್ಷ ಹಣದಲ್ಲಿ 60 ಕುಟುಂಬಗಳು ಪುನರ್ವಸತಿಗೊಂಡವು. ಆದರೆ, ಇದಾದ 6 ತಿಂಗಳಲ್ಲಿಯೇ ಹೊಸದಾಗಿ ಪುನರ್ವಸತಿಗೊಳ್ಳುವವರಿಗೆ ಸರ್ಕಾರ ₹ 10 ಲಕ್ಷದ ಪ್ಯಾಕೇಜ್ ಘೋಷಿಸಿತು. ಹೀಗಾಗಿ, ಈ 60 ಕುಟುಂಬಗಳು ದೊಡ್ಡ ಮೊತ್ತದ ಪ್ಯಾಕೇಪ್‌ನಿಂದ ವಂಚಿತವಾದವು.

ಅರಣ್ಯ ಇಲಾಖೆಯು ಒಂದು ಲಕ್ಷ ಹಣದಲ್ಲಿ ₹ 60 ಸಾವಿರ ವೆಚ್ಚದಲ್ಲಿ ಮನೆ ಕಟ್ಟಿಕೊಟ್ಟು, ಉಳಿದ ಹಣ ಅವರಿಗೆ ಸಣ್ಣಪುಟ್ಟ ಖರ್ಚುಗಳಿಗೆ ನೀಡಿತು. ಇದು ಬಿಟ್ಟರೆ ಬೇರೆ ಯಾವುದೇ ಫಲ ಇವರಿಗೆ ಲಭಿಸಿಲ್ಲ. ನೀಡಲಾಗಿದ್ದ 3 ಎಕರೆ ಜಮೀನು ಪಾಳು ಬಿದ್ದಿತ್ತು. ಅಕ್ಕಪಕ್ಕದ ರೈತರು ಇವರ ಜಮೀನಿನಲ್ಲಿ ಬೇಸಾಯ ಮಾಡಲು ಹಿಂದೇಟು ಹಾಕುತ್ತಿದ್ದರು. ಹೀಗಾಗಿ, ಕೃಷಿ ಬಗ್ಗೆ ಅರಿವು ಮೂಡಿಸುವುದಿರಲಿ ಅತ್ತ ಗಮನವೂ ಬರುತ್ತಿರಲಿಲ್ಲ. ನಂತರದ ದಿನಗಳಲ್ಲಿ ಬೇಸಾಯದೆಡೆಗೆ ಸೆಳೆಯಲು ಸಮಾಜ ಕಲ್ಯಾಣ ಇಲಾಖೆ ಮತ್ತು ಇತರೆ ಇಲಾಖೆಗಳು ಮಾಡಿದ ಯಾವುದೇ ಪ್ರಯತ್ನವೂ ಸಫಲವಾಗಲಿಲ್ಲ. ಅವರು ಕೂಲಿ ಮಾಡುವುದು ತಪ್ಪಲಿಲ್ಲ.

ಕೈಹಿಡಿದ ವನ್ಯಜೀವಿ ಅಧ್ಯಯನ ಕೇಂದ್ರ: ಕೂಲಿ ಅರಸಿಕೊಂಡು ವಲಸೆ ಹೋಗುತ್ತಿದ್ದ ಆದಿವಾಸಿಗಳು ಕೃಷಿಯಲ್ಲಿ ತೊಡಗುವಂತೆ ಮಾಡುವಲ್ಲಿ ಇಲ್ಲಿನ ವನ್ಯಜೀವಿ ಅಧ್ಯಯನ ಕೇಂದ್ರದ ಶ್ರಮ ಇದೆ. ಇದರ ಯೋಜನಾ ಸಹಾಯಕ ಗೋವಿಂದಪ್ಪ ಸೂಕ್ತ ಮಾರ್ಗದರ್ಶನ ನೀಡಿ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದ್ದಾರೆ. ಇದರಿಂದ ಆದಿವಾಸಿಗಳು ಹತ್ತಿ, ರಾಗಿ, ಜೋಳ, ಮುಸುಕಿನ ಜೋಳ, ಹಲಸಂದೆ, ತೊಗರಿ, ಉದ್ದು, ಮೆಣಸಿನಕಾಯಿ, ಟೊಮೆಟೊ, ಕುಂಬಳ, ಸೋರೆಕಾಯಿ, ಬೂದಿಕಾಯಿ ಸೇರಿದಂತೆ ವೈವಿಧ್ಯಮಯ ಬೆಳೆ ಬೆಳೆಯುತ್ತಿದ್ದಾರೆ.

ಅಲ್ಲದೆ, ಹಸು, ಕುರಿ, ಕೋಳಿ ಸೇರಿದಂತೆ ಇತರೆ ಉಪಕಸುಬುಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. ಹಿತ್ತಲಿನಲ್ಲಿ ವಿವಿಧ ತರಕಾರಿ ಮತ್ತು ಸೊಪ್ಪು ಬೆಳೆಯುವಂತಹ ಕೈತೋಟ ಮಾಡಿಕೊಂಡಿದ್ದಾರೆ. ಈ ಪುನರ್ವಸತಿ ಕೇಂದ್ರದಲ್ಲಿ ಸ್ವ ಸಹಾಯ ಸಂಘಗಳಿದ್ದು, ಎಲ್ಲರೂ ಸಂಘಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದಾರೆ.

ದೇವಮ್ಮ, ಕಮಲಾ, ಶಿವಣ್ಣ, ಮಲ್ಲಿಗೆ, ತಾಯಮ್ಮ, ಸಂತೋಷ್, ದಾಸಿ ಇತರರು ಉತ್ತಮವಾಗಿ ಬೆಳೆ ಬೆಳೆದು ಮಾದರಿ ರೈತರೆನಿಸಿಕೊಂಡಿದ್ದಾರೆ.

***

ವಿವಿಧ ತರಬೇತಿ ಕೊಡಿಸಲಾಗುತ್ತಿದೆ. ಸಮಾಜ ಸೇವಾ ಸಂಸ್ಥೆಗಳಿಂದ ಸಿಗುವ ಸೌಲಭ್ಯ ಒದಗಿಸಿ, ಗಿರಿಜನರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದೇನೆ

– ಗೋವಿಂದಪ್ಪ, ಸೋಳ್ಳೇಪುರ ಪುನರ್ವಸತಿ ಕೇಂದ್ರದ ಯೋಜನಾ ಸಹಾಯಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry