ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಐವಿ: ದಕ್ಷಿಣ ಕನ್ನಡ ಜಿಲ್ಲೆಗೆ ಮೂರನೇ ಸ್ಥಾನ

ಶೇ 50 ರಷ್ಟು ಕಡಿಮೆಯಾಗಿರುವ ರೋಗಿಗಳ ಸಂಖ್ಯೆ
Last Updated 7 ಡಿಸೆಂಬರ್ 2017, 10:24 IST
ಅಕ್ಷರ ಗಾತ್ರ

ಮಂಗಳೂರು: ಎಚ್‌ಐವಿ ಪೀಡಿತ ರೋಗಿಗಳ ಸಂಖ್ಯೆ ಈ ವರ್ಷ ಶೇ 50 ರಷ್ಟು ಕಡಿಮೆಯಾಗಿದ್ದು, ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೂರನೇ ಸ್ಥಾನದಲ್ಲಿದೆ ಎಂದು ಏಡ್ಸ್‌ ನಿಯಂತ್ರಣ ಅಧಿಕಾರಿ ಡಾ. ಬದ್ರುದ್ದೀನ್‌ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬಾಗಲಕೋಟೆ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎರಡನೇ ಸ್ಥಾನದಲ್ಲಿದೆ ಎಂದರು.

ವರ್ಷದಿಂದ ವರ್ಷಕ್ಕೆ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ವರ್ಷ ಜನವರಿಯಿಂದ ಅಕ್ಟೋಬರ್‌ವರೆಗೆ ಒಟ್ಟು 512 ಜನರಲ್ಲಿ ರೋಗ ಪತ್ತೆಯಾಗಿದೆ ಎಂದ ಅವರು, ಬೇರೆ ರಾಜ್ಯಗಳಿಂದ ವಲಸೆ ಬರುತ್ತಿರುವ ಜನರು ಹಾಗೂ ಚಿಕಿತ್ಸೆಗಾಗಿ ಕೇರಳದಿಂದ ಇಲ್ಲಿಗೆ ಬರುವ ಜನರಲ್ಲಿಯೇ ಹೆಚ್ಚಿನ ಪ್ರಮಾಣದ ಎಚ್‌ಐವಿ ಪತ್ತೆಯಾಗಿದೆ. ರೋಗಿಗಳಲ್ಲಿ ಶೇ 40 ರಷ್ಟು ಸ್ಥಳೀಯರಿದ್ದರೆ, ಶೇ 60 ರಷ್ಟು ಹೊರಗಿನವರೇ ಇದ್ದಾರೆ ಎಂದು ಹೇಳಿದರು.

ಎಚ್‌ಐವಿ ಸೋಂಕಿತರಿಗೆ ಮತ್ತು ಬಾಧಿತರಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಯೋಜನೆಗಳಾದ ವಸತಿ, ಸ್ವಉದ್ಯೋಗ, ಸಾಲ ಸೌಲಭ್ಯ ಹಾಗೂ ತರಬೇತಿಗಳನ್ನು ನೀಡಲಾಗುತ್ತಿದೆ. ಮಾಹಿತಿ ಶಿಕ್ಷಣ ಕಾರ್ಯಕ್ರಮದಡಿ ಮಂಗಳೂರು, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲ್ಲೂಕಿನ ವಿವಿಧೆಡೆ ಇದೇ 5 ರಿಂದ 15ರವರೆಗೆ ಯಕ್ಷಗಾನ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಯುವ ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯ 64 ಪದವಿ ಕಾಲೇಜುಗಳಲ್ಲಿ ರೆಡ್‌ ರಿಬ್ಬನ್‌ ಕ್ಲಬ್‌ ಗಳನ್ನು ಸ್ಥಾಪಿಸಲಾಗಿದೆ. ಹದಿಹರೆಯದ ಶಿಕ್ಷಣ ಕಾರ್ಯಕ್ರಮದಡಿ ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ 182 ಪ್ರೌಢಶಾಲೆ ಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ ಎಂದು ವಿವರಿಸಿದರು.

ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವ ದಲ್ಲಿ ಜಿಲ್ಲೆಯ ಲೈಂಗಿಕ ಕಾರ್ಯಕರ್ತರು, ವಲಸಿಗರು, ವಾಹನ ಚಾಲಕರಿಗೆ ನಿಯಮಿತವಾಗಿ ಎಚ್‌ಐವಿ ಮತ್ತು ಸುರಕ್ಷಿತ ಲೈಂಗಿಕತೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ಐಸಿಟಿಸಿ ಪರೀಕ್ಷೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಮಾಹಿತಿ ಶಿಕ್ಷಣ ಕಾರ್ಯಕ್ರಮದಡಿ ಯಕ್ಷಗಾನ, ಬೀದಿ ನಾಟಕಗಳ ಮೂಲಕ ಜನಜಾಗೃತಿ ಕಾರ್ಯಕ್ರಮ, ಆರೋಗ್ಯೇತರ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಹಾಗೂ ಸ್ವಸಹಾಯ ಗುಂಪು, ಯುವಕ, ಯುವತಿ ಮಂಡಲದ ಸದಸ್ಯರಿಗೆ ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು.

***

ಜಿಲ್ಲೆಯಲ್ಲಿ ಎಚ್‌ಐವಿ ಬಾಧಿತರ ವಿವರ

ಬಾಧಿತರು             2007–2017        ಜನವರಿ–ಅಕ್ಟೋಬರ್‌ 2017

ಗರ್ಭಿಣಿಯರು             386                        12

ಇತರ                    9,062                     500

ಒಟ್ಟು                     9,285                     512
 

ಚಿಕಿತ್ಸೆ ಪಡೆಯುತ್ತಿರುವವರು

ಮಹಿಳೆಯರು             1,638

ಪುರುಷರು                1,958

ಮಕ್ಕಳು                     322

ಒಟ್ಟು                     3,919

***

8ರಂದು ಜಾಗೃತಿ ಆಂದೋಲನ

ವಿಶ್ವ ಏಡ್ಸ್‌ ದಿನಾಚರಣೆ ಮತ್ತು ಜಾಗೃತಿ ಆಂದೋಲನವನ್ನು ಇದೇ 8 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸೇಂಟ್‌ ಆಗ್ನೆಸ್‌ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರತ್ನಾಕರ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಂಶುಪಾಲರಾದ ಡಾ. ಜಸ್ಟೀನಾ ಎ.ಸಿ. ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್‌ ಹಮೀದ್‌, ನ್ಯಾಯಾಧೀಶರಾದ ಮಲ್ಲನಗೌಡ ಪಾಟೀಲ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಂ.ಆರ್‌. ರವಿ, ಆರೋಗ್ಯಾಧಿಕಾರಿ ಡಾ. ರಾಮಕೃಷ್ಣರಾವ್‌ ಭಾಗವಹಿಸಲಿದ್ದಾರೆ. ಹಿರಿಯ ವಕೀಲರಾದ ಅನಿತಾ ಕಿಣಿ, ವೈದ್ಯಾಧಿಕಾರಿ ಡಾ. ಕಿಶೋರ್‌ಕುಮಾರ್ ಎಂ. ಉಪನ್ಯಾಸ ನೀಡಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT