7
ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ, ಕವನ ಸಂಕಲನ ಬಿಡುಗಡೆ, ಸಾರೋಟಿನಲ್ಲಿ ಮಕ್ಕಳ ಮೆರವಣಿಗೆ

ಆತಂಕದಲ್ಲಿ ಮಕ್ಕಳ ಬದುಕು–ಸಿದ್ದಲಿಂಗಯ್ಯ

Published:
Updated:
ಆತಂಕದಲ್ಲಿ ಮಕ್ಕಳ ಬದುಕು–ಸಿದ್ದಲಿಂಗಯ್ಯ

ಚನ್ನರಾಯಪಟ್ಟಣ (ಕುವೆಂಪು ವೇದಿಕೆ): ಪ್ರಸ್ತುತ ಮಕ್ಕಳ ಬದುಕು ಆತಂಕದಲ್ಲಿದ್ದು, ಪೋಷಕರು ಮತ್ತು ಶಿಕ್ಷಕರು ಜಾಗ್ರತೆ ವಹಿಸಬೇಕು ಎಂದು ಸಾಹಿತಿ ಸಿದ್ದಲಿಂಗಯ್ಯ ಎಚ್ಚರಿಸಿದರು.

ಇಲ್ಲಿನ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಅಧ್ಯಯನವೊಂದರ ಪ್ರಕಾರ ದೇಶದಲ್ಲಿ 37 ಕೋಟಿ ಮಕ್ಕಳಿದ್ದು, ಈ ಪೈಕಿ 3 ಕೋಟಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. 1 ಕೋಟಿ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದರೆ, ಶೇ 53ರಷ್ಟು ಹೆಣ್ಣು ಮಕ್ಕಳು ಲೈಂಗಿಕ ಕಿರುಕುಳ ಅನುಭವಿಸಿದ್ದಾರೆ. ಅಲ್ಲದೇ ಪ್ರತಿ ವರ್ಷ 44 ಸಾವಿರ ಮಕ್ಕಳು ನಾಪತ್ತೆಯಾಗುತ್ತಿದ್ದು, ಇವರು ಏನಾಗಿದ್ದಾರೆ ಎಂಬ ಸುಳಿವೇ ಇಲ್ಲ. ಜಾರ್ಖಂಡ್‌ನಲ್ಲಿ  ಆಧಾರ್‌ ಸಂಖ್ಯೆ ನೀಡಲಿಲ್ಲವೆಂಬ ಕಾರಣಕ್ಕೆ ಪಡಿತರ ಸಿಗದೆ ಸಂತೋಷಿ ಎಂಬಾಕೆ ಹಸಿವಿನಿಂದ ಸತ್ತಳು. ರಾಜ್ಯದ ಹೆಣ್ಣು ಮಗು, ನಂದಿನಿ ಧಾರವಾಹಿಯಿಂದ ಪ್ರೇರಿತಳಾಗಿ ಸುತ್ತಲೂ ಬೆಂಕಿ ಹಚ್ಚಿಕೊಂಡು ನೃತ್ಯ ಮಾಡುವಾಗ, ಬೆಂಕಿ ತಗುಲಿ ಸಾವೀಗೀಡಾದಳು. ಮಕ್ಕಳ ಸಾವಿನ ವರದಿ ನೋಡಿದರೆ ಮನಸ್ಸಿಗೆ ನೋವು ಉಂಟಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಪೋಷಕರಿಗೆ ಮಕ್ಕಳ ಮೇಲೆ ಪ್ರೀತಿ ಇರುತ್ತದೆ. ಆದರೆ ಕೆಲಸದ ಒತ್ತಡದಲ್ಲಿ ಗಮನ ಇಡುವುದಿಲ್ಲ. ಮಕ್ಕಳಿಲ್ಲದವರು ಮಕ್ಕಳು ಬೇಕು ಎನ್ನುವುದು ದೊಡ್ಡದಲ್ಲ. ಮಕ್ಕಳಂತೆ ಮುಗ್ದತೆ, ಕುತೂಹಲ, ವಿಸ್ಮಯ ಜೀವಂತವಾಗಿ ಇದ್ದರೆ ಬದುಕು ಚೆನ್ನಾಗಿರುತ್ತದೆ ಎಂದು ನುಡಿದರು.

ತಂದೆ ತನ್ನ ಮಕ್ಕಳಿಗೆ ಗದರಿಸುವುದನ್ನು ನೋಡಿದ ಯೇಸು, ‘ಮಕ್ಕಳನ್ನು ನೋಡಿ ಹಿರಿಯರು ಕಲಿಯಬೇಕು. ಇಲ್ಲದಿದ್ದರೆ ಸ್ವರ್ಗ ಸಿಗುವುದಿಲ್ಲ’ ಎಂದು ಹೇಳಿದ್ದರು. ಕುವೆಂಪು ಸಹ ಮಕ್ಕಳ ನಾಟಕ, ಶಿಶುಗೀತೆಗಳನ್ನು ಬರೆದರು. ಇಂದಿನ ಕವಿಗಳು ಸಹ ಅವರ ಮಾದರಿ ಅನುಸರಿಸಬೇಕು ಎಂದು ತಿಳಿಸಿದರು.

ಹಿರಿಯ ಸಾಹಿತಿ ಹೇಳಿದಂತೆ, ‘ಹುಟ್ಟುವಾಗ ವಿಶ್ವಮಾನವರು, ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ. ಅವರಿಗೆ ಜಾತಿ, ಮತದ ಸೋಂಕು ಇರುವುದಿಲ್ಲ. ಅವರಿಗೆ ಜಾತಿ ಬೀಜ ಬಿತ್ತಿ ಹಾಳು ಮಾಡುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಬಹಳ ವರ್ಷಗಳ ಹಿಂದೆ ನಡೆದ ಮಕ್ಕಳ ಚಿತ್ರೋತ್ಸವದ ಘಟನೆ ವಿವರಿಸಿದ ಸಿದ್ದಲಿಂಗಯ್ಯ, ಚಿತ್ರಮಂದಿರದಲ್ಲಿ ಮಕ್ಕಳ ಬದಲಾಗಿ ದೊಡ್ಡವರು ಚಿತ್ರ ವೀಕ್ಷಿಸುತ್ತಿದ್ದನ್ನು ನೋಡಿದ ನಟ ಅನಂತನಾಗ್‌, ‘ಇದೇನು ಮಕ್ಕಳ ಬದಲು ದೊಡ್ಡವರು ಇದ್ದಾರಲ್ಲಾ’ ಎಂದು ಸಾಹಿತಿ ವೈಎನ್ಕೆ ಅವರನ್ನು ಪ್ರಶ್ನಿಸಿದರು. ಆಗ ವೈಎನ್ಕೆ, ‘ಮಕ್ಕಳು ಇಲ್ಲದಿದ್ದರೇನು ಕಳ್ಳನನ್ನ ಮಕ್ಕಳ ಇದ್ದಾರಲ್ಲಾ ಎಂದು ಉತ್ತರಿಸಿದ್ದರು’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಪೋಷಕರು ಶಿಸ್ತಿನ ಹೆಸರಲ್ಲಿ ಮಕ್ಕಳಿಗೆ ಶಿಕ್ಷೆ ನೀಡುವುದು ಸರಿಯಲ್ಲ. ಮಕ್ಕಳ ಸಾಹಿತ್ಯ ಸಮೃದ್ಧವಾಗಿ ಬೆಳೆಯಲು ಸಮ್ಮೇಳನ ಪೂರಕವಾಗಲಿ ಎಂದು ಹಾರೈಸಿದರು.

ವಿದ್ಯಾರ್ಥಿಗಳಾದ ಸಿ.ಎಂ.ಸ್ವಾತಿ ರಚಿಸಿದ ಹೊಂಗಿರಣ, ಎಂ.ಸಿ.ರೇಖಾಶ್ರೀ ಅವರ ಮಂದಾರ ಮತ್ತು ಆರ್.ಪುಣ್ಯ ಅವರ ಚುಕ್ಕಿ ಚಂದ್ರಮ ಕವನ ಸಂಕಲನ ಬಿಡುಗಡೆ ಮಾಡಲಾಯಿತು.

ಸರ್ವಾಧ್ಯಕ್ಷೆ ಎಚ್‌.ವಿ.ಚಂದನಾ, ಸಹ ಅಧ್ಯಕ್ಷರಾದ ಜಿ.ಜೆ.ಯಶ್ವಂತ್‌, ಬಿ.ಜಿ.ಸುಹಾಸ್‌, ಸಿ.ಎಚ್‌.ಕಾವ್ಯಾ, ಡಿ.ಎಸ್‌.ನಿಸರ್ಗ ಮಾತನಾಡಿದರು.

ಆದಿಚುಂಚನಗಿರಿ ಮಠದ ಶಂಭುನಾಥ ಸ್ವಾಮೀಜಿ ಅವರು ಶಿಶು ಶಿಖರ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಮಕ್ಕಳ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿ.ಎನ್‌.ಅಶೋಕ್‌ ಸ್ವಾಗತಿಸಿದರು. ಉಪವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌ ಪ್ರಾಸ್ತಾವಿಕ ನುಡಿಗಳಾನ್ನಾಡಿದರು, ಕಬ್ಬಳ್ಳಿ ಮಠದ ಶಿವಪುತ್ರ ಸ್ವಾಮೀಜಿ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಮ್ಮಿಗೆ ಮೋಹನ್‌, ತಹಶೀಲ್ದಾರ್‌ ಸೋಮಶೇಖರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಕೆ.ಪುಷ್ಪಲತಾ, ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಇದ್ದರು.

**

ಕೊಬ್ಬರಿ, ಬೆಲ್ಲದ ಆತಿಥ್ಯ

ಚನ್ನರಾಯಪಟ್ಟಣ: ಸಮ್ಮೇಳನದಲ್ಲಿ ಭಾಗವಹಿಸಿದ್ದ ಗಣ್ಯರಿಗೆ ಈ ಭಾಗದ ಸಂಪ್ರದಾಯದಂತೆ ಕೊಬ್ಬರಿ, ಬೆಲ್ಲದ ಆತಿಥ್ಯ ನೀಡಿ ಸತ್ಕರಿಸಲಾಯಿತು.

ಜೊತೆಗೆ ಸಸಿಗಳು ಹಾಗೂ ಸ್ಮರಣ ಸಂಚಿಕೆಗಳನ್ನು ನೀಡಲಾಯಿತು.

ಆರಂಭದಲ್ಲಿ ಕಲಾವಿದೆ ರಮ್ಯಾ ಸೂರಜ್‌ ತಂಡದವರು ಸ್ವಾಗತ ಗೀತೆಗೆ ನೃತ್ಯ ಮಾಡಿದರು. ಸರ್ಕಾರಿ ಬಾಲಿಕಾ ಪ್ರೌಢಶಾಲೆಯ ಮಕ್ಕಳು ನಾಡಗೀತೆ, ಪೇಟೆ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ರಾಷ್ಟ್ರಗೀತೆ ಹಾಗೂ ಜ್ಞಾನದರ್ಶನ ಶಾಲೆಯ ಮಕ್ಕಳು ರೈತ ಗೀತೆ ಹಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry