7

‘ಸರ್ಕಾರದಿಂದಲೇ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ’

Published:
Updated:

ಕಾರವಾರ: ‘ಬಡವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ಸರ್ಕಾರದಿಂದಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಶೀಘ್ರದಲ್ಲೇ ಸ್ಥಾಪಿಸಲಾಗುತ್ತದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಬುಧವಾರ ಇಲ್ಲಿ ಹೇಳಿದರು.

‘ಪ್ರತಿ ಜಿಲ್ಲೆಯಲ್ಲಿಯೂ ಸರ್ಕಾರಿ ವೈದ್ಯಕೀಯ ಕಾಲೇಜು ಇರಬೇಕು. ಇದರಿಂದ ಬಡವರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂಬ ನಮ್ಮ ಸರ್ಕಾರದ ಆಸೆಗಳು ಈಡೇರಿವೆ’ ಎಂದರು.

ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ‘2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಬಹುತೇಕ ಆಶ್ವಾಸನೆ ಈಡೇರಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಒತ್ತು ನೀಡಿದೆ. ಸಂವಿಧಾನವನ್ನು ದುರ್ಬಲಗೊಳಿಸುತ್ತಿರುವ ಕೋಮುವಾದಿಗಳನ್ನು ಜನ ದೂರ ತಳ್ಳಬೇಕಿದೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ‘ಕೇಂದ್ರ ಸರ್ಕಾರ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಘೋಷಿಸಿತ್ತು. ಆದರೆ ಈವರೆಗೆ ಯಾವುದೂ ಆಗಿಲ್ಲ. ರಾಜ್ಯದಲ್ಲಿ ನಾಲ್ಕೂವರೆ ವರ್ಷದಲ್ಲಿ 14.50 ಲಕ್ಷ ಉದ್ಯೋಗ ಸೃಷ್ಟಿ ಮಾಡಿದ್ದೇವೆ. ಜಾತಿ, ಧರ್ಮದ ಭಾಷಣದಿಂದ ಹೊಟ್ಟೆ ತುಂಬುವುದಿಲ್ಲ. ಸಮಸ್ಯೆಗಳು ದೂರವಾಗುವುದಿಲ್ಲ. ಜಾತ್ಯತೀತ ವ್ಯವಸ್ಥೆಯಲ್ಲಿ ಕಾಂಗ್ರೆಸ್ ನಂಬಿಕೆ ಇಟ್ಟಿದೆ’ ಎಂದರು.

ಶಾಸಕ ಸತೀಶ್ ಸೈಲ್ ಮಾತನಾಡಿ, ‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮೊದಲ ಬಜೆಟ್‌ನಲ್ಲಿಯೇ ಇಲ್ಲಿನ ವೈದ್ಯಕೀಯ ಕಾಲೇಜಿಗೆ ಅನುದಾನ ಬಿಡುಗಡೆ ಮಾಡಿದೆ. ಅದರಿಂದಾಗಿ ಈಗ ಭವ್ಯ ಕಟ್ಟಡ ತಲೆ ಎತ್ತಿದೆ. ಅನೇಕ ಸೇತುವೆ ಕಾಮಗಾರಿಗಳಿಗೆ ಸರ್ಕಾರ ಮಂಜೂರಿ ಮಾಡಿಸುವ ಮೂಲಕ ಜನಪರ ಆಡಳಿತ ನೀಡಿದೆ’ ಎಂದರು.

ಸವಲತ್ತು ವಿತರಣೆ:

ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸಿದ್ದರಾಮಯ್ಯ ಸವಲತ್ತು ವಿತರಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸಿದ್ಧಪಡಿಸಲಾಗಿದ್ದ ‘ಅಭಿವೃದ್ಧಿಯ ಕಡಲು, ಸಮೃದ್ಧಿಯ ಹೊನಲು’ ವಿಶೇಷ ಹೊತ್ತಿಗೆಯನ್ನು ಇದೇ ವೇಳೆ ಬಿಡುಗಡೆ ಮಾಡಿದರು.

ಶಾಸಕರಾದ ಮಂಕಾಳು ವೈದ್ಯ, ಶಾರದಾ ಶೆಟ್ಟಿ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೇಂದ್ರ ನಾಯ್ಕ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ್, ಕಾಂಗ್ರೆಸ್‌ ಮುಖಂಡ ನಿವೇದಿತಾ ಆಳ್ವಾ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂದೀಪ ತಳೇಕರ್, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry