ಬುಧವಾರ, ಮಾರ್ಚ್ 3, 2021
31 °C

‘ಅಂಜನಿಪುತ್ರ’ದ ಹಾಡು ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅಂಜನಿಪುತ್ರ’ದ ಹಾಡು ಬಿಡುಗಡೆ

ಅಲ್ಲಿ ಚಿತ್ರರಂಗದ ಗಣ್ಯರ ದಂಡು ನೆರೆದಿತ್ತು. ಆಂಜನೇಯ ಮೇಲಿನಿಂದ ಹೊತ್ತು ತಂದ ‘ಅಂಜನಿಪುತ್ರ’ ಚಿತ್ರದ ಹಾಡುಗಳ ಧ್ವನಿಮುದ್ರಿಕೆಯನ್ನು ನಾಯಕ ಪುನೀತ್‌ ರಾಜ್‌ಕುಮಾರ್‌ ಸ್ವಾಗತಿಸಿ ಗಣ್ಯರಿಗೆ ವಿತರಿಸಿದರು. ಬಳಿಕ ಶಿವರಾಜ್‌ ಕುಮಾರ್‌ ಅವರೊಟ್ಟಿಗೆ ನೃತ್ಯಕ್ಕೆ ಹೆಜ್ಜೆ ಹಾಕಿದರು. ಎ. ಹರ್ಷ ನಿರ್ದೇಶನದ ‘ಅಂಜನಿಪುತ್ರ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಇದು ತಮಿಳಿನ ‘ಪೂಜೈ’ ಚಿತ್ರದ ಕನ್ನಡ ರಿಮೇಕ್.

‘ಈಗ ಅಂಜನಿಪುತ್ರ ಎಂದು ಪುನೀತ್‍ ರಾಜ್‍ಕುಮಾರ್ ಅವರನ್ನು ಅಭಿಮಾನಿಗಳು ಕರೆಯುತ್ತಿದ್ದಾರೆ. ನಿಜವಾದ ಅಂಜನಿಪುತ್ರ ರಾಜ್‍ಕುಮಾರ್’ ಎಂದು ಮಾತಿಗಿಳಿದರು ಹಿರಿಯ ನಿರ್ದೇಶಕ ಭಗವಾನ್. ಅವರ ಮಾತುಗಳಲ್ಲಿ ರಾಜ್‌ಕುಮಾರ್‌ ಕುಟುಂಬದೊಂದಿಗಿನ 65 ವರ್ಷಗಳ ಅವಿನಾಭಾವ ಸಂಬಂಧ ಬೆಸೆದುಕೊಂಡಿತ್ತು. ‘ಜೀವನದಲ್ಲಿ ಅತ್ಯಂತ ಕಷ್ಟ, ನೋವು ಅನುಭವಿಸಿದ ರಾಜ್‌ಕುಮಾರ್‌ ಮತ್ತು ಪಾರ್ವತಮ್ಮ ನಮ್ಮೊಂದಿಗಿಲ್ಲ. ಈಗ ಮತ್ತೊಬ್ಬ ಅಂಜನಿಪುತ್ರ ಹುಟ್ಟಿಕೊಂಡಿದ್ದಾನೆ. ಈ ಕುಟುಂಬಕ್ಕೆ ಸದಾ ಯಶಸ್ಸು ಸಿಗಲಿ‘ ಎಂದರು.

ನಟ ಪುನೀತ್‍ರಾಜ್‍ಕುಮಾರ್, ‘ಸ್ಪರ್ಧೆಗಾಗಿ ಪಿ.ಆರ್‍.ಕೆ. ಆಡಿಯೊ ಕಂಪನಿ ಸ್ಥಾಪಿಸಿಲ್ಲ. ಒಳ್ಳೆಯ ಹಾಡುಗಳು, ಆಲ್ಬಂಗಳಿಗೆ ಪ್ರೋತ್ಸಾಹ ನೀಡಲು ಈ ಸಂಸ್ಥೆ ಸ್ಥಾಪಿಸಲಾಗಿದೆ. ಕಂಪನಿ ಮೂಲಕ ಅಂಜನಿಪುತ್ರದ ಹಾಡುಗಳನ್ನು ಹೊರತರಲಾಗಿದೆ. ದೇವರು ಯಾವ ದಾರಿಯಲ್ಲಿ ನಡೆಸಿಕೊಂಡು ಹೋಗುತ್ತಾನೋ ಅದರಂತೆ ಮುಂದುವರಿಯುತ್ತೇವೆ’ ಎಂದ ಅವರು, ‘ರಾಜಕುಮಾರ’ ಚಿತ್ರದ ಹಾಡು ಹೇಳಿ ರಂಜಿಸಿದರು.

‘ಅಪ್ಪು ಮೊದಲಿನಿಂದಲೂ ಡಿಫರೆಂಟ್. ಮೂರು ವರ್ಷ ಇರುವಾಗಲೆ ಬಣ್ಣ ಹಚ್ಚಿದ. ಆರು ವರ್ಷಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ. ಪಿ.ಆರ್‍.ಕೆ.ಯಲ್ಲಿ ಎಲ್ಲರೂ ಇದ್ದಾರೆ. ಇದು ಅಸಾಧಾರಣವಾದ ಹೆಸರು. ಕನ್ನಡ ಚಿತ್ರಗಳನ್ನು ನೋಡಿ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು’ ಎಂದರು ಶಿವರಾಜ್‍ಕುಮಾರ್.

‘ರಾಜ್ ಸಂಸ್ಥೆಯ ಮೊದಲ ಚಿತ್ರ ಶ್ರೀನಿವಾಸಕಲ್ಯಾಣ. ಮುಂದೆ ವಜ್ರೇಶ್ವರಿ ಕಂಬೈನ್ಸ್ ಪ್ರಾರಂಭವಾಯಿತು. ಈಗ ಆಡಿಯೊ ಕಂಪನಿ ಶುರುವಾಗಿದೆ. ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ’ ಎಂದು ಶುಭ ಕೋರಿದರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದ.

ರಾಘವೇಂದ್ರ ರಾಜ್‌ಕುಮಾರ್, ನಾಯಕಿ ರಶ್ಮಿಕಾ ಮಂದಣ್ಣ, ಸಂಗೀತ ನಿರ್ದೇಶಕ ರಾಜನ್ ಚುಟುಕಾಗಿ ಮಾತು ಮುಗಿಸಿದರು. ಭಗವಾನ್ ಮತ್ತು ರಾಜನ್ ಅವರನ್ನು ಸನ್ಮಾನಿಸಲಾಯಿತು. ಕೊನೆಯಲ್ಲಿ ಚಿತ್ರದ ಟ್ರೇಲರ್‌ ತೋರಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.