ಶುಕ್ರವಾರ, ಮಾರ್ಚ್ 5, 2021
30 °C

ಕೈತೋಟದಲ್ಲಿ ಮಾಯಾಲೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೈತೋಟದಲ್ಲಿ ಮಾಯಾಲೋಕ

ಪುಟ್ಟ ಜಲಪಾತ, ಸುತ್ತಲೂ ಹಸಿರು ಹುಲ್ಲು, ಕುಬ್ಜ ಗಿಡಗಳ ನಡುವೆ ಮನೆ, ಬಗೆ ಬಗೆಯ ಬಣ್ಣದ ಹೂಗಳು, ಕುಳಿತು ವಿಶ್ರಮಿಸಲು ಆಸನ, ಉಯ್ಯಾಲೆ...

ಇದು ಯಾವುದೋ ಕಲ್ಪನಾ ಲೋಕದ ವಿವರಣೆಯಲ್ಲ. ತೊಟ್ಟಿಯೊಳಗೆ ಮೂಡಿರುವ ಮಾಯಾಲೋಕ. ಅದುವೇ ಕೃತಕ ಹೂದೋಟ (ಫೇರಿ ಗಾರ್ಡನ್). ಮನೆ, ಹೂದೋಟದಲ್ಲಿ ಪುಟ್ಟದೊಂದು ಕೃತಕ ಹೂದೋಟ ನಿರ್ಮಿಸುವ ಹವ್ಯಾಸವು ಇಂದು ಜನಪ್ರಿಯವಾಗುತ್ತಿದೆ.

ಮಕ್ಕಳನ್ನೂ, ಹಿರಿಯರನ್ನೂ ಆಕರ್ಷಿಸುವ ಇದು ಮನೆಯ ಅಂದವನ್ನು ಹೆಚ್ಚಿಸುವುಲ್ಲದೆ ಮಕ್ಕಳಲ್ಲಿ ಸೃಜನಶೀಲತೆಯನ್ನೂ ಪೋಷಿಸುತ್ತದೆ. ಸಣ್ಣದೊಂದು ತೊಟ್ಟಿಯಲ್ಲೋ ಪೆಟ್ಟಿಗೆಯಲ್ಲೋ ನಿರ್ಮಿಸಬಹುದಾದ ಕೃತಕ ಹೂದೋಟದಲ್ಲಿ ನಮ್ಮ ಕಲ್ಪನೆಯ ಲೋಕವನ್ನು ಸೃಷ್ಟಿಸಬಹುದು.

ನಿರ್ಮಾಣ ಹೇಗೆ: ಸಿಮೆಂಟ್ ತೊಟ್ಟಿ, ಮರದ ಪೆಟ್ಟಿಗೆ ಅಥವಾ ಪ್ಲಾಸ್ಟಿಕ್ ತೊಟ್ಟಿ, ಹೂವಿನ ಗಿಡಗಳು, ಸಮುದ್ರ ಕಿನಾರೆಯಲ್ಲಿ ಸಿಗುವ ಚಿಪ್ಪು, ನಯವಾದ ಕಲ್ಲು ಮತ್ತು ಚಿಕ್ಕ ಗೊಂಬೆಗಳು ಇದ್ದರೆ ಇದನ್ನು ನಿರ್ಮಿಸಬಹುದು. ಬೋನ್ಸಾಯಿ, ಕಳ್ಳಿ ಜಾತಿಯ ಗಿಡಗಳನ್ನು ಇದರಲ್ಲಿ ನೆಡಲು ಬಳಸಬಹುದು.

ಆರಂಭದಲ್ಲಿ ತೊಟ್ಟಿಯೊಳಗೆ ಮಣ್ಣು ತುಂಬಿಸಬೇಕು. ಅನಂತರ ಹೂವಿನ ಗಿಡಗಳನ್ನು ಅವುಗಳ ಗಾತ್ರಕ್ಕೆ ಅನುಗುಣವಾಗಿ ನೆಡಬೇಕು. ಬಳಿಕ ನಯವಾದ ಕಲ್ಲುಗಳನ್ನು ಗಿಡಗಳ ಬುಡದ ಸುತ್ತ ಜೋಡಿಸಬೇಕು. ಇವುಗಳು ಗಿಡಗಳಿಗೆ ನೀರುಣಿಸುವಾಗ ಮಣ್ಣು ಕರಗದಂತೆ ತಡೆಯುತ್ತವೆ. ವಿವಿಧ ಬಗೆಯ ಸಣ್ಣ ಗಾತ್ರದ ಹೂವಿನ ಗಿಡಗಳನ್ನು ನೆಟ್ಟರೆ ಇನ್ನಷ್ಟು ಸುಂದರವಾಗಿ ಕಾಣಬಹುದು. ಎತ್ತರವಾಗಿ ಬೆಳೆಯುವ ಗಿಡಗಳನ್ನು ಬಳಸಬಾರದು. ಗೊಂಬೆ, ಮನೆ, ಪೀಠೋಪಕರಣಗಳ ಮಾದರಿಗಳನ್ನು ಅಲಂಕಾರಕ್ಕೆ ಬಳಸಬಹುದು. ಪ್ರತಿ ದಿನ ನೀರೆರೆಯಬೇಕು ಮತ್ತು ಗಿಡಗಳ ನಿರ್ವಹಣೆಗೆ ಗಮನ ನೀಡಬೇಕು.

ಪ್ರಯೋಜನ: ಮನೆಯ ಮುಂಭಾಗದಲ್ಲೋ, ತಾರಸಿಯಲ್ಲೋ ಅಥವಾ ಮನೆಯೊಳಗೆ ಎಲ್ಲಿ ಸ್ಥಳಾವಕಾಶ ಇದೆಯೋ ಅಲ್ಲಿ ಕೃತಕ ಹೂದೋಟವನ್ನು ನಿರ್ಮಿಸಬಹುದು. ಇದು ವಾಯು ಶುದ್ದೀಕರಣಗೊಳಿಸುವುದರ ಮೂಲಕ ಉತ್ತಮ ಪರಿಸರವನ್ನು ಸೃಷ್ಟಿಸುತ್ತದೆ. ಇವುಗಳ ನಿರ್ವಹಣೆಯಲ್ಲಿ ತೊಡಗುವುದು ಮಾನಸಿಕ ಆರೋಗ್ಯಕ್ಕೂ, ಒತ್ತಡ ನಿವಾರಣೆಗೂ ಉತ್ತಮ.

ಮಕ್ಕಳಿಗೆ ರಜಾ ದಿನಗಳನ್ನು ಕಳೆಯಲು ಕೃತಕ ಹೂದೋಟ ನಿರ್ಮಾಣ ಅತ್ಯುತ್ತಮ ಆಯ್ಕೆಯಾಗಬಹುದು. ಇವುಗಳನ್ನು ನಿರ್ಮಿಸಲು ಮಕ್ಕಳಿಗೆ ಪ್ರೋತ್ಸಾಹ ನೀಡುವುದರಿಂದ ಅವರಲ್ಲಿ ಪರಿಸರದ ಬಗೆಗಿನ ಕಾಳಜಿಯನ್ನು ಮೂಡಿಸಬಹುದು. ಅಧಿಕ ಮೊಬೈಲ್ ಬಳಕೆಯಿಂದಲೂ ದೂರವಿರಿಸಬಹುದು. ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಾಟಲಿಗಳನ್ನೂ ಇಂತಹ ಹೂದೋಟಗಳ ಅಲಂಕಾರಕ್ಕೆ ಬಳಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.