ಶನಿವಾರ, ಮಾರ್ಚ್ 6, 2021
32 °C
ಪಾಯಿಂಟ್‌ ಕಳೆದುಕೊಂಡರೂ ಭಾರತದ ಸ್ಥಾನಕ್ಕೆ ಭಂಗವಿಲ್ಲ

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌: ಎರಡನೇ ಸ್ಥಾನಕ್ಕೇರಿದ ಕೊಹ್ಲಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌: ಎರಡನೇ ಸ್ಥಾನಕ್ಕೇರಿದ ಕೊಹ್ಲಿ

ದುಬೈ: ನಿರಂತರ ಅಮೋಘ ಆಟ ಆಡುತ್ತಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಬಿಡುಗಡೆ ಮಾಡಿರುವ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ.

ಶ್ರೀಲಂಕಾ ವಿರುದ್ಧ ಬುಧವಾರ ಮುಕ್ತಾಯಗೊಂಡ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಕೊನೆಯ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 243 ರನ್‌ ಗಳಿಸಿದ ಅವರು ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿದ್ದರು. ಸರಣಿಯಲ್ಲಿ ಒಟ್ಟು 610 ರನ್‌ ಗಳಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿ ಆರಂಭ ವಾಗುವ ಮುನ್ನ ಕೊಹ್ಲಿ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿ ಇದ್ದರು. ಸರಣಿಯಲ್ಲಿ 152.50ರ ಸರಾಸರಿಯಲ್ಲಿ ರನ್‌ ಗಳಿಸಿದ ಅವರು ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌, ಭಾರತದ ಚೇತೇಶ್ವರ್ ಪೂಜಾರ, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಮತ್ತು ಇಂಗ್ಲೆಂಡ್‌ನ ಜೋ ರೂಟ್ ಅವರನ್ನು ಹಿಂದಿಕ್ಕಿ ದ್ದಾರೆ. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್‌ ಅಗ್ರ ಸ್ಥಾನದಲ್ಲಿ ಉಳಿದಿದ್ದಾರೆ. 938 ಪಾಯಿಂಟ್ ಹೊಂದಿರುವ ಅವರು ಕೊಹ್ಲಿ ಅವರಿಗಿಂತ 45 ಪಾಯಿಂಟ್‌ಗಳಿಂದ ಮುಂದಿದ್ದಾರೆ.

ಮುರಳಿ ವಿಜಯ್‌ಗೆ, ಬಡ್ತಿ; ಪೂಜಾರಗೆ ನಿರಾಸೆ

ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್‌ ಮೂರು ಸ್ಥಾನಗಳ ಬಡ್ತಿ ಹೊಂದಿದ್ದು 25ನೇ ಸ್ಥಾನ ಗಳಿಸಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಆರು ಸ್ಥಾನಗಳ ಬಡ್ತಿ ಪಡೆದಿದ್ದು 40ನೇ ಸ್ಥಾನಕ್ಕೇರಿದ್ದಾರೆ. ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದ ಚೇತೇಶ್ವರ್ ಪೂಜಾರ ಎರಡು ಸ್ಥಾನಗಳ ಕುಸಿತ ಕಂಡಿದ್ದಾರೆ.

ಬೌಲರ್‌ಗಳ ಪಟ್ಟಿಯಲ್ಲಿ ಎಡಗೈ ಸ್ಪಿನ್ನರ್‌ ರವೀಂದ್ರ ಜಡೇಜ ಒಂದು ಸ್ಥಾನದ ಕುಸಿತ ಕಂಡಿದ್ದಾರೆ. ಅವರಿಗೆ ಈಗ ಮೂರನೇ ಸ್ಥಾನ. ರಚಿಚಂದ್ರನ್ ಅಶ್ವಿನ್‌ ನಾಲ್ಕನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಜಡೇಜ ಎರಡನೇ ಸ್ಥಾನದಲ್ಲಿದ್ದು ಅಶ್ವಿನ್‌ ಒಂದು ಸ್ಥಾನದ ಕುಸಿತದೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಚಾಂಡಿಮಲ್‌ ಉತ್ತಮ ಸಾಧನೆ: ಶ್ರೀಲಂಕಾ ಟೆಸ್ಟ್ ತಂಡದ ನಾಯಕ ದಿನೇಶ್ ಚಾಂಡಿಮಲ್‌ ಅವರು ಎಂಟು ಸ್ಥಾನಗಳ ಬಡ್ತಿ ಕಂಡಿದ್ದು ಒಂಬತ್ತನೇ ಸ್ಥಾನ ಗಳಿಸಿದ್ದಾರೆ. ಭಾರತ ವಿರುದ್ಧದ ಸರಣಿಯಲ್ಲಿ ಅವರು ಒಂದು ಶತಕ ಗಳಿಸಿದ್ದರು.

 

**

ಕುಸಿತ ಕಂಡ ಸ್ಟೀವ್ ಸ್ಮಿತ್‌

ಟೆಸ್ಟ್ ಬ್ಯಾಟ್ಸ್‌ಮ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ದಾಖಲೆಯತ್ತ ಹೆಜ್ಜೆ ಹಾಕಿದ್ದ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್‌ ಕುಸಿತ ಕಂಡಿದ್ದಾರೆ. ಕಳೆದ ವಾರ 941 ಪಾಯಿಂಟ್‌ ಹೊಂದಿದ್ದ ಅವರು ಈಗ 938 ಪಾಯಿಂಟ್‌ಗಳಿಗೆ ತಲುಪಿದ್ದಾರೆ. ಆದರೂ ಆಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅತಿ ಹೆಚ್ಚು ಪಾಯಿಂಟ್‌ ಗಳಿಕೆಯಲ್ಲಿ ಅವರು ಈಗ ಜಂಟಿ ಐದನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಉತ್ತಮ ಸಾಮರ್ಥ್ಯ ತೋರಿ ಅಗ್ರ ಸ್ಥಾನಕ್ಕೆ ಏರಲು ಸಾಧ್ಯವಾದರೆ ಕೊಹ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಸಾಧನೆ ತಮ್ಮದಾಗಿಸಿಕೊಳ್ಳಲಿದ್ದಾರೆ.

ಇಂಥ ಸಾಧನೆ ಮಾಡಿದ ಏಕೈಕ ಆಟಗಾರ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌. ಅವರು 2005–06ರ ಸಾಲಿನಲ್ಲಿ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.