ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರ ಸುತ್ತಾಟಕ್ಕೆ ಕಡಿಮೆ ಖರ್ಚಿನ ವಾಹನ

Last Updated 7 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಸಂದರ್ಭದಲ್ಲಿ ಭಕ್ತರಿಗೆ ಕಡಿಮೆ ದರದಲ್ಲಿ ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆಗೆ ಟ್ಯಾಕ್ಸಿ ಸೇವೆ ಒದಗಿಸಲು ಜಿಲ್ಲಾಡಳಿತ ಮುಂದಾಗಿದೆ.

ಮಹೋತ್ಸವಕ್ಕೆ ಬರುವ ಲಕ್ಷಾಂತರ ಭಕ್ತರು, ಯಾತ್ರಾರ್ಥಿಗಳು, ಪ್ರವಾಸಿಗರು ಬರುವುದರಿಂದ ಜಿಲ್ಲೆಯ ಪ್ರವಾಸಿ ತಾಣಗಳ ಸೊಬಗನ್ನು ಕಣ್ತುಂಬಿಕೊಳ್ಳಲು ಮೊಬೈಲ್‌ ಆ್ಯಪ್‌ ಆಧಾರಿತ ಸೇವಾ ಕಂಪೆನಿಗಳಾದ ಓಲಾ, ಉಬರ್‌ ಕ್ಯಾಬ್‌ ಸೇವೆ ಬಳಸಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ಸುಮಾರು 500 ವಾಹನಗಳನ್ನು ಪಡೆಯಲು ಚಿಂತಿಸಲಾಗಿದೆ.

‘ದೊಡ್ಡ ಉತ್ಸವಗಳ ವೇಳೆ ಬಾಡಿಗೆ ವಾಹನಗಳ ಚಾಲಕರು, ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳಿಂದ ದುಬಾರಿ ಶುಲ್ಕ ಕೇಳುತ್ತಾರೆ’ ಎಂಬ ಆರೋಪ ಇದೆ. ಹೊರ ರಾಜ್ಯಗಳಿಂದ ಹೆಚ್ಚು ಜನರು ಬರುವುದರಿಂದ ಭಾಷಾ ಸಮಸ್ಯೆ ಇರುತ್ತದೆ.

ಈ ಎಲ್ಲ ಸಮಸ್ಯೆಗಳನ್ನು ಮನಗಂಡು ಕಡಿಮೆ ದರದಲ್ಲಿ ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಬಹುದು ಎಂಬುದು ಜಿಲ್ಲಾಡಳಿತದ ಲೆಕ್ಕಾಚಾರ.

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಬೇಲೂರು, ಹಳೇಬೀಡು, ಸಕಲೇಶಪುರದ ಪಶ್ಚಿಮಘಟ್ಟ, ಬಿಸಿಲೆ ಘಾಟ್‌ ತಾಣಗಳನ್ನು ಪ್ರವಾಸಿಗರು ಫೆಬ್ರುವರಿ ತಿಂಗಳು ಪೂರ್ತಿ ಕಣ್ತುಂಬಿಕೊಳ್ಳಬಹುದು. ಅಲ್ಲದೆ, ಶ್ರವಣಬೆಳಗೊಳದಿಂದ ಮೇಲುಕೋಟೆ ಸಮೀಪ ಆಗುವುದರಿಂದ ಒಂದು ದಿನದ ಪ್ರವಾಸಕ್ಕೂ ಯೋಜನೆ ರೂಪಿಸಲಾಗಿದೆ.

‘ಈಗಾಗಲೇ ಕಂಪೆನಿ ಪ್ರತಿನಿಧಿಗಳ ಜೊತೆ ಜಿಲ್ಲಾಡಳಿತ ಚರ್ಚೆ ನಡೆಸಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಹವಾ ನಿಯಂತ್ರಣ ರಹಿತ ಹಾಗೂ ಹವಾನಿಯಂತ್ರಿತ ಕಾರುಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ಕಡಿಮೆ ವೆಚ್ಚದಲ್ಲಿ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಮಸ್ತಕಾಭಿಷೇಕ ಮಹೋತ್ಸವದ ವಿಶೇಷ ಅಧಿಕಾರಿ ಬಿ.ಎನ್‌.ವರಪ್ರಸಾದ್‌ ರೆಡ್ಡಿ ತಿಳಿಸಿದರು.

‘ಟ್ಯಾಕ್ಸಿ ಸೇವೆ ಜೊತೆಗೆ ಆಟೊ ಮತ್ತು ದ್ವಿಚಕ್ರ ವಾಹನ ಬಳಸಿಕೊಳ್ಳಲಾಗುವುದು. ಇದರಿಂದ ಎಲ್ಲ ವರ್ಗದ ಜನರಿಗೂ ಅನುಕೂಲವಾಗಲಿದೆ. ಪ್ರವಾಸಿಗರಿಗೆ ಯಾವುದೇ ತೊಂದರೆ ಆಗದಂತೆ ಜೈನ ಕಾಶಿ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ರಿಯಾಯಿತಿ ದರದಲ್ಲಿ ದರ್ಶನ ಮಾಡಿಸುವ ಉದ್ದೇಶ ಇದೆ.

ಆನ್‌ಲೈನ್‌ ಬುಕಿಂಗ್‌ ಮಾಡಬಹುದು ಅಥವಾ ಸ್ಥಳದಲ್ಲಿಯೇ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು.

ಖಾಸಗಿ ವಾಹನಗಳ ಕಂಪೆನಿ ಜತೆ ಒಡಂಬಡಿಕೆ

ಪ್ರವಾಸಿ ತಾಣಗಳಿಗೆ 500 ಟ್ಯಾಕ್ಸಿ

ಆಟೊ, ದ್ವಿಚಕ್ರ ವಾಹನಗಳ ಬಳಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT