ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಬಾ ವಚನಗಳು

Last Updated 7 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಅಹಿಂಸೆಯನ್ನು ಬೋಧಿಸುವ ಜೈನಧರ್ಮ, ಒಂದು ಶಾಶ್ವತ ಧರ್ಮ. ಇದಕ್ಕೆ ಆದಿ ಇಲ್ಲ, ಅಂತ್ಯವಿಲ್ಲ. ಆಗಾಗ ಕಾಲವಶದಿಂದ ಉಂಟಾಗುವ ಆಘಾತಗಳಿಂದ ಇದು ನಾಶವಾಗುವುದಿಲ್ಲ. ಆದರೆ ಧರ್ಮ ಪ್ರಭಾವನೆ ಮಸಕಾಗಿದ್ದಾಗ, ದೊಡ್ಡ ಪ್ರಮಾಣದಲ್ಲಿ ಧರ್ಮದ ಉಪದೇಶಮಾಡಲು ಮೋಕ್ಷಮಾರ್ಗದ ನೇತಾರರು ಕಾಲಕಾಲಕ್ಕೆ ಕಾಣಿಸಿಕೊಳ್ಳುತ್ತಾರೆ. ಅವರೇ ತೀರ್ಥಂಕರರು. ವೃಷಭನಾಥರಿಂದ ಮೊದಲುಗೊಂಡು ಮಹಾವೀರರವರೆಗೆ 24 ಜನ ತೀರ್ಥಂಕರರು ಆಗಿದ್ದಾರೆ. ಇವರೆಲ್ಲರು ಉತ್ತರ ಭಾರತದಲ್ಲಿ ಜನಿಸಿ, ಆ ದೊಡ್ಡ ಭೂಭಾಗದಲ್ಲಿ ವಿಶೇಷವಾಗಿ ವಿಹಾರಮಾಡಿ ಬೋಧಿಸಿದ್ದಾರೆ.

ಆದರೆ ದೊಡ್ಡ ದೊಡ್ಡ ಆಚಾರ್ಯರು ದಕ್ಷಿಣ ಭಾರತದಲ್ಲಿ ಜನಿಸಿ, ಮಹಾನ್ ಸಿದ್ಧಂತ, ಪುರಾಣ, ಕಾವ್ಯ ಗ್ರಂಥಗಳನ್ನು ರಚಿಸಿ ಲೋಕ ಪೂಜ್ಯರಾಗಿದ್ದಾರೆ. ಅಂತಹ ಮಹಾನ್ ದಿಗಂಬರ ಆಚಾರ್ಯರನ್ನು ಕರ್ನಾಟಕ ಹಿಂದೆಯೂ ನೀಡಿದೆ, ಈಗಲೂ ನೀಡುತ್ತಿದೆ. ಆಧುನಿಕ ಕಾಲದಲ್ಲಿ ದಿಗಂಬರ ಮುನಿ ಪರಂಪರೆಯನ್ನು ಪುನರುತ್ಥಾನಗೊಳಿಸಿದ ಪ್ರಾತಃಸ್ಮರಣೀಯ ಪ.ಪೂ. ಚಾರಿತ್ರ ಚಕ್ರವರ್ತಿ ಆಚಾರ್ಯ ಶಾಂತಿಸಾಗರರು ಕರ್ನಾಟಕದವರು. ಭಗವಾನ್ ಗೊಮ್ಮಟೇಶ್ವರ ಮೂರ್ತಿ ಸ್ಥಾಪನೆಯ ಸಾವಿರ ವರ್ಷದ ಮಹಾಮಸ್ತಕಾಭಿಷೇಕಕ್ಕೆ ಮಾರ್ಗದರ್ಶನ ನೀಡಿದ ಪ.ಪೂ. ಆಚಾರ್ಯ ವಿದ್ಯಾನಂದರು ಕರ್ನಾಟಕದವರು. ಈಗಲೂ ಕರ್ನಾಟಕದ ಬೆಳಗಾವಿ ಜಿಲ್ಲೆಯವರಾದ ಪ.ಪೂ.ಆಚಾರ್ಯ ವಿದ್ಯಾಸಾಗರರು ದೊಡ್ಡ ಮುನಿಸಂಘದೊಂದಿಗೆ ಉತ್ತರ ಭಾರತದಲ್ಲಿ ಧರ್ಮ ಪ್ರಭಾವನೆ ಮಾಡುತ್ತಿದ್ದಾರೆ.

ಕರ್ನಾಟಕದ ಇಂಥ ದಿಗಂಬರ ಮುನಿ ಪರಂಪರೆಗೆ ಸೇರಿದವರು ಜಂಗಲ್ ವಾಲೇ ಬಾಬಾ ಎಂದೇ ಖ್ಯಾತರಾಗಿರುವ ಪ.ಪೂ. ಶ್ರೀಚಿನ್ಮಯ ಸಾಗರ ಮುನಿ ಮಹಾರಾಜರು. ಇವರು ನಾಲ್ಕು ವರ್ಷಗಳಿಂದ ಕನ್ನಡ ನಾಡಿನಲ್ಲಿ ವಿಹರಿಸುತ್ತಿದ್ದಾರೆ. ಸಾಮಾನ್ಯ ಜನರೊಂದಿಗೆ ಕನ್ನಡದಲ್ಲಿ ಮಾತನಾಡುತ್ತಾರೆ. ತಮ್ಮ ಭಕ್ತರಿಂದ ಅವರಿಗೆ ವಸ್ತ್ರ, ಆಹಾರ, ಔಷಧ ದಾನ ಮಾಡಿಸುತ್ತಾರೆ. ಅವರನ್ನು ನಶಾ ಮುಕ್ತರನ್ನಾಗಿ, ವ್ಯಸನಮುಕ್ತರನ್ನಾಗಿ ಮಾಡುವ ಕಾರ್ಯದಲ್ಲಿ ದಾಖಲೆಯನ್ನೇ ಸ್ಥಾಪಿಸಿದ್ದಾರೆ. ಚಾತುರ್ಮಾಸದ ಸಮಯದಲ್ಲಿ ಅರಣ್ಯ ಪ್ರದೇಶವನ್ನು ಆಯ್ಕೆ ಮಾಡಿ ಕೊಂಡು ಅಲ್ಲಿಯೇ ವಾಸಿಸಿ ತಪಸ್ಸು ಮಾಡುತ್ತಾರೆ. ಈ ಆಚರಣೆಯಿಂದ ಅವರನ್ನು ಜಂಗಲ್ ವಾಲೇ ಬಾಬಾ ಎಂದು ಜನ ಗುರುತಿಸಿದ್ದಾರೆ.

ಅವರದು ಕನ್ನಡ ಮನಸ್ಸು. ಕನ್ನಡದಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಾಲ್ಕು ನಾಲ್ಕು ಸಾಲಿನ ವಚನಗಳನ್ನು ರಚಿಸಿದ್ದಾರೆ. ಅವು ಪ್ರಭು ಸಮ್ಮಿತೆಯಲ್ಲಿವೆ. ಅವುಗಳಲ್ಲಿ ಜನರ ನೈತಿಕಮಟ್ಟವನ್ನು ಎತ್ತರಿಸುವ ಕಳಕಳಿಯಿದೆ. ಉನ್ನತ ಚಿಂತನೆಗಳಿವೆ. ಮಾದರಿಗಾಗಿ ಆಯ್ದ ನಾಲ್ಕು ವಚನಗಳು ಇಲ್ಲಿವೆ-

ಯಾರು ನೀನು? ನಿನ್ನವರಾರು?

ಯಾರ ಹೊರೆಯನ್ನು ಹೊತ್ತುತ್ತಿರುವೆ?

ಗಾಣಿಗರ ಎತ್ತು, ಅಗಸರ ಕತ್ತೆ ಹಾಗೆ

ಅತ್ತ ಇತ್ತ ಯಾಕೆ ತಿರುಗುತ್ತಿರುವೆ?

ನೀ ಜೈನನಾಗ ಬೇಡ, ನೀ ಅಹಿಂಸಕನಾಗು
ನೀ ಬೌದ್ಧನಾಗ ಬೇಡ, ನೀ ಪ್ರಬುದ್ಧನಾಗು
ನೀ ಮುಸ್ಲೀಮನಾಗ ಬೇಡ, ನೀ ಶಾಂತಿಪ್ರಿಯನಾಗು
ನೀ ಹಿಂದೂ ಆಗಬೇಡ, ನೀ ಎಲ್ಲರ ಹಿತೈಷಿಯಾಗು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT