7

ವೈದ್ಯರಿಗೂ ಇವೆ ಕಷ್ಟಗಳು

Published:
Updated:
ವೈದ್ಯರಿಗೂ ಇವೆ ಕಷ್ಟಗಳು

ಖಾಸಗಿ ವೈದ್ಯರ ಪ್ರತಿಭಟನೆ ಎಂಬ ವಿಷಯದ ಬಗ್ಗೆ ಎರಡು–ಮೂರು ವಾರಗಳಿಂದ ಟಿ.ವಿ. ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ, ನಿಯತಕಾಲಿಕಗಳಲ್ಲಿ ಲೇಖನಗಳನ್ನು ಓದಿ, ವಿಷಯಗಳನ್ನು ಕೇಳಿ ನೊಂದು ಮತ್ತೊಮ್ಮೆ ಬರೆಯುತ್ತಿದ್ದೇನೆ. ಬಹುತೇಕರು ವೈದ್ಯರನ್ನು ಮಾತ್ರ ಖಳನಾಯಕರಂತೆ ಚಿತ್ರಿಸಿ, ಅದಕ್ಕೆ ಕಾರಣರಾದವರನ್ನು ಮರೆತುಬಿಟ್ಟಿದ್ದಾರೆ. ಪ್ರತಿ ವಿಷಯಕ್ಕೂ ಎರಡು ಮಗ್ಗುಲು ಇರುತ್ತವೆ, ಎರಡೂ ಕಡೆ ನೋಡುವುದು ಅಗತ್ಯವೆನಿಸುತ್ತದೆ.

‘ಇವರದು ಸೇವೆಯಲ್ಲ, ಉದ್ಯೋಗವಷ್ಟೇ’ ಎಂಬ ಲೇಖನದಲ್ಲಿ (ಪ್ರ.ವಾ., ಚರ್ಚೆ, ನ. 23) ಶಾರದಾ ಗೋಪಾಲ ಅವರು ಕೆಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ. ಅದಕ್ಕೆ ವಿವರಣೆ ನೀಡಬೇಕಾಗಿರುವುದರಿಂದ ಕೆಲವು ಮಾತುಗಳನ್ನು ಬರೆಯುತ್ತಿದ್ದೇನೆ.

ನಾನು ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗ, ಎಂದರೆ ಐದು ದಶಕಗಳಿಗೂ ಹಿಂದೆ ರೋಗಿಗಳು ವೈದ್ಯರ ಬಳಿಗೆ ಬರುವಾಗ, ಸಮಸ್ಯೆ ಉಲ್ಬಣಿಸಿರುತ್ತಿತ್ತು. ರೋಗಿಯು ವಿವರಿಸಿದ ತೊಂದರೆಯ ಲಕ್ಷಣಗಳು (Symptoms) ಹಾಗೂ ವೈದ್ಯರು ಕಂಡುಹಿಡಿದ ರೋಗದ ಚಿಹ್ನೆಗಳು (Signs) ಇವುಗಳನ್ನು ಒಟ್ಟುಗೂಡಿಸಿ, ಅನುಭವದಿಂದ ರೋಗ ನಿರ್ಣಯ ಮಾಡುತ್ತಿದ್ದೆವು (Working diagnosis). ಚಿಕಿತ್ಸೆಗೆ ರೋಗಿ ಸ್ಪಂದಿಸದಿದ್ದಾಗ ಒಂದೊಂದಾಗಿ ಲಭ್ಯವಿರುವ ಪರೀಕ್ಷೆಗಳನ್ನು ಮಾಡುತ್ತಿದ್ದೆವು. ರೋಗ ಗುಣವಾದರೆ ವ್ಯಕ್ತಿ ಮನೆಗೆ ತೆರಳುತ್ತಿದ್ದ, ಇಲ್ಲದಿದ್ದರೆ ತನ್ನ ಹಣೆಬರಹ ಇಷ್ಟೇ ಎಂದು ಹೇಳಿ ವೈದ್ಯರಿಗೆ ನಮಸ್ಕರಿಸಿ ಹೋಗುತ್ತಿದ್ದ. ಅಂದು ವ್ಯಾಪಕವಾಗಿದ್ದ ಸಿಡುಬು, ಕಾಲರಾ, ಕ್ಷಯ ಇತ್ಯಾದಿ ಸಮಸ್ಯೆಗಳು ಇಂದು ಬಹುಮಟ್ಟಿಗೆ ಕಡಿಮೆಯಾಗಿವೆ. ಅಪಘಾತಗಳು, ಜೀವನ ಶೈಲಿಯ ರೋಗಗಳು ದಿನ ದಿನಕ್ಕೂ ಹೆಚ್ಚಾಗುತ್ತಿವೆ.

ಇಂದಿನ ಆರೋಗ್ಯ ಸಮಸ್ಯೆಗಳೇ ಬೇರೆ ರೀತಿಯವು. ಹೃದಯ ಸಂಬಂಧಿ ಸಮಸ್ಯೆಗಳು, ಮಧುಮೇಹ, ಏಡ್ಸ್, ಹಂದಿಜ್ವರ, ಡೆಂಗಿ ಇತ್ಯಾದಿ ತೊಂದರೆಗಳನ್ನು ವಿವರವಾದ ಪರೀಕ್ಷೆಗೆ ಒಳಪಡಿಸದಿದ್ದರೆ ರೋಗ ನಿರ್ಣಯ ಆಗುವುದಿಲ್ಲ. ಒಂದಕ್ಕಿಂತ ಹೆಚ್ಚು ಸಲ ರಕ್ತ, ಮೂತ್ರ, ಕಫ ಇತ್ಯಾದಿ ಪರೀಕ್ಷೆಗಳಲ್ಲದೆ ಎಕ್ಸ್‌ರೇ ಹಾಗೂ ಸ್ಕ್ಯಾನಿಂಗ್ ಯಂತ್ರಗಳನ್ನು ಬಳಸಬೇಕಾಗುತ್ತದೆ.

ಇವಕ್ಕೆಲ್ಲಾ ಸುಸಜ್ಜಿತ ಲ್ಯಾಬ್, ತಂತ್ರಜ್ಞರು, ಸೂಕ್ತ ಉಪಕರಣಗಳು... ಇವೆಲ್ಲ ಅಗತ್ಯವಾಗುತ್ತವೆ. ಇಂದಿನ ದಿನಗಳ ಚಿಕಿತ್ಸೆಗೆ ‘ಸಾಕ್ಷ್ಯಾಧಾರಿತ ವೈದ್ಯಕೀಯ’ ಎನ್ನುತ್ತೇವೆ (Evidence based medicine). ಇದಲ್ಲದೆ ರೋಗಿಗಳು ಹಾಗೂ ಅವರ ಸಂಬಂಧಿಗಳು ಗೂಗಲ್‌ನಿಂದ ಪಡೆಯುವ ರೋಗ ವಿವರಗಳನ್ನೂ ವೈದ್ಯರಿಗೆ ತಿಳಿಸಿ, ಪ್ರಶ್ನೆ ಕೇಳುವ ಹಾಗೂ ಉತ್ತರ ಪಡೆಯುವ ಹವ್ಯಾಸವನ್ನು ಇಟ್ಟುಕೊಂಡಿದ್ದಾರೆ. ಇದಕ್ಕಾಗಿ ವೈದ್ಯರು ಸಹ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ಉನ್ನತ ತಿಳಿವಳಿಕೆಯನ್ನು ಪಡೆಯುವ ಅಗತ್ಯವಿದೆ. ಇದಕ್ಕೆ ಸಾವಿರಾರು ರೂಪಾಯಿಗಳು ಖರ್ಚಾಗುತ್ತವೆ.

ಈಚಿನ ದಿನಗಳಲ್ಲಿ  ಚಿಕಿತ್ಸೆಯೂ ಬಹಳ ಉನ್ನತ ಮಟ್ಟದ್ದಿದೆ. ವಿಷಪ್ರಾಶನ, ಅಪಘಾತಗಳು, ಹೃದಯಾಘಾತ, ಹಾವಿನಕಡಿತ ಇತ್ಯಾದಿಗಳ ಪರೀಕ್ಷೆ–ಚಿಕಿತ್ಸೆಗೆ ಬಳಸುವ ಸಾಧನಗಳು ಹಾಗೂ ಔಷಧಗಳಿಗೆ ತುಂಬ ಹಣ ಬೇಕು. ಅಲ್ಲದೆ ರೋಗಿಯ ಅಂಗಾಂಗಗಳ ಕಾರ್ಯವೈಖರಿಯನ್ನು ಪ್ರತಿನಿಮಿಷವೂ ಗಮನಿಸುವ ಹಾಗೂ ನಿಯಂತ್ರಿಸುವ ಅವಕಾಶವಿದೆ. ಇದಕ್ಕೆಲ್ಲ ವಿಶೇಷ ಸೌಕರ್ಯಗಳಿವೆ. ಈ ಸಾಧನಗಳನ್ನು ಬಳಸಲಿ ಬಿಡಲಿ ನಿರ್ವಹಣಾ ವೆಚ್ಚ ಭರಿಸಬೇಕಾಗುತ್ತದೆ. ಅಲ್ಲದೆ ಸಿಬ್ಬಂದಿಗೆ ಕೆಲಸವಿರಲಿ ಬಿಡಲಿ ಸಂಬಳ– ಸವಲತ್ತುಗಳನ್ನು ನೀಡಬೇಕಾಗುತ್ತದೆ.

ಖಾಸಗಿ ವೈದ್ಯಕೀಯ ವ್ಯವಸ್ಥೆಗೆ ಸರ್ಕಾರದ ಯಾವುದೇ ಸಹಾಯ, ಬೆಂಬಲ ಇರುವುದಿಲ್ಲ. ಕಟ್ಟಡ ಕಟ್ಟಲು, ಸಿಬ್ಬಂದಿಯನ್ನು ನೇಮಿಸಲು, ವಾಹನಗಳಿಗಾಗಿ, ಆಸ್ಪತ್ರೆಯ ಸ್ವಚ್ಛತೆಗಾಗಿ ಬಹಳಷ್ಟು ಹಣದ ಅಗತ್ಯವಿರುತ್ತದೆ. ಇದನ್ನೆಲ್ಲ ಲೆಕ್ಕ ಹಾಕಿಯೇ ಸೂಕ್ತವಾದ ದರಗಳನ್ನು ವಿಧಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಇಷ್ಟೆಲ್ಲಾ ಆದ ಬಳಿಕವೂ ರೋಗಿ ಅಥವಾ ಅವರ ಸಂಬಂಧಿಗಳು ಆಸ್ಪತ್ರೆಯಲ್ಲಿ ಪಡೆದ ಚಿಕಿತ್ಸೆ ಸರಿಯಿಲ್ಲವೆಂದು ತಿಳಿಸಿ ಗ್ರಾಹಕ ವೇದಿಕೆಯಲ್ಲಿ ಪ್ರಕರಣ ದಾಖಲಿಸಿದರೆ ವೈದ್ಯರು ತಮ್ಮ ರಕ್ಷಣೆಗೆ ವಕೀಲರನ್ನಿಟ್ಟು ಹಣ ವ್ಯಯ ಮಾಡಿಯೇ ಹಾಜರಾಗಬೇಕಾಗುತ್ತದೆ. ಲಕ್ಷಗಳ ಲೆಕ್ಕದಲ್ಲಿ ದಂಡ ತೆತ್ತ ವೈದ್ಯರೂ ಇದ್ದಾರೆ.

ಲಿಂಗಪತ್ತೆಯ ವಿಷಯವು ಈಗ ತಲೆದೋರಿರುವ ಸಮಸ್ಯೆಗೆ ಸದ್ಯಕ್ಕೆ ಸಂಬಂಧಿಸಿಲ್ಲ. ಆದರೂ ಲೇಖಕಿ ಅದರ ಬಗ್ಗೆ ಪ್ರಸ್ತಾಪಿಸಿರುವುದರಿಂದ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ಗರ್ಭಪಾತಕ್ಕೊಳಗಾಗುವವಳು ಹೆಣ್ಣು. ಆಕೆಯ ಗರ್ಭಕೋಶದಲ್ಲಿರುವುದು ಹೆಣ್ಣು ಭ್ರೂಣ. ಅದನ್ನು ತೆಗೆಸುವಂತೆ ಹೆಚ್ಚಿನ ಸಂದರ್ಭಗಳಲ್ಲಿ ಸಲಹೆ ನೀಡುವವರು ತಾಯಿ  ಅಥವಾ ಅತ್ತೆ. ಗರ್ಭಪಾತ ನಡೆಸುವವರು ಬಹುತೇಕ ಮಹಿಳಾ ವೈದ್ಯರು. ಇದು ತಪ್ಪು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಇದನ್ನು ಮಹಿಳಾ ಸಂಘಟನೆಗಳು ಶ್ರಮಿಸಿ ನಿಯಂತ್ರಿಸಬೇಕು.

ಸರ್ಕಾರಿ ವೈದ್ಯರು ಕೆಲವೊಮ್ಮೆ ಹೊರಗಡೆ ಪ್ರಾಕ್ಟೀಸ್‌ ಮಾಡುವುದನ್ನು ಸಹ ಲೇಖಕಿ ಪ್ರಸ್ತಾಪಿಸಿದ್ದಾರೆ. ಇದು ಸಂಪೂರ್ಣ ತಪ್ಪೇನೂ ಅಲ್ಲ. ಸರ್ಕಾರವೇ ಇದಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ನನ್ನ ನೆನಪು. ಆದರೆ ಆಸ್ಪತ್ರೆಯ ಕೆಲಸದ ವೇಳೆಯಲ್ಲಿಯೂ ಕೆಲವೊಮ್ಮೆ ಜನನಾಯಕರನ್ನು, ಅಧಿಕಾರಿಗಳನ್ನು ನೋಡಬೇಕಾದ, ಕೋರ್ಟ್‌ಗಳಿಗೆ ಹೋಗಬೇಕಾದ ಸಂದರ್ಭಗಳು ನನ್ನ ಸರ್ಕಾರಿ ಸೇವಾವಧಿಯಲ್ಲಿ ನಡೆದಿವೆ. ಇದನ್ನು ನಿಯಂತ್ರಿಸುವುದು ಸಾಧ್ಯವೇ ಎಂಬುದನ್ನು ಯೋಚಿಸಬೇಕಾಗಿದೆ. ಇವರನ್ನು ಎದುರು ಹಾಕಿಕೊಳ್ಳುವ ಸರ್ಕಾರಿ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿಲ್ಲ.

ಒಂದು ಘಟನೆಯನ್ನು ಉಲ್ಲೇಖಿಸುವುದು ಈ ಸಂದರ್ಭಕ್ಕೆ ಪ್ರಸ್ತುತವೆನಿಸುತ್ತದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಲು ನನ್ನ ವೈದ್ಯ ಮಿತ್ರರೊಬ್ಬರು ಆಸ್ಪತ್ರೆಯ ಕೆಲಸದ ವೇಳೆಯಲ್ಲಿಯೇ ಹೊರಗೆ ಹೋಗಬೇಕಾಗಿ ಬಂದಿತ್ತು. ಅದೇ ಸಮಯದಲ್ಲೇ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಬಂದು ಬಹಳ ಹೊತ್ತು ಕಾದು ಕುಳಿತಿರಬೇಕಾಯಿತು. ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಹಿರಿಯ ಅಧಿಕಾರಿ ಶಿಸ್ತಿನ ಕ್ರಮದ ಬಗ್ಗೆ ಎಚ್ಚರಿಸಿದರು.‌

ವೈದ್ಯಾಧಿಕಾರಿ ಯಾವುದೇ ಭಯವಿಲ್ಲದೆ ಹಿರಿಯ ಅಧಿಕಾರಿಗೆ ಹೀಗೆಂದರು: ‘ನಿಮಗೆ, ನಿಮ್ಮ ವಾಹನ ಚಾಲಕನಿಗೆ, ನಿಮ್ಮಂತೆ ಬರುವ ಇತರರಿಗೆ ಊಟ, ತಿಂಡಿ, ಗುಂಡು ಎಲ್ಲದಕ್ಕೂ ಖರ್ಚು ಮಾಡಿ ಕೈಗೂ ಅಷ್ಟಿಷ್ಟು ಹಣ ನೀಡಬೇಕಾಗುತ್ತದೆ. ನನಗೆ ಬರುವ ಸಂಬಳದಲ್ಲಿ ಇದನ್ನೆಲ್ಲಾ ಮಾಡಲು ಸಾಧ್ಯವೇ? ಅದಕ್ಕಾಗಿಯೇ ಆಗಾಗ ಹೊರಗೆ ಹೋಗಿ ದುಡಿದು ಬರಬೇಕಾಗುತ್ತದೆ, ಅಲ್ಲವೇ?’ ಈ ಘಟನೆ ನಡೆದು ಐದು ದಶಕಗಳಾಗಿವೆ. ಈಗಿನ ಪರಿಸ್ಥಿತಿ ಇನ್ನಷ್ಟು ಕೆಟ್ಟಿದೆ ಎಂದು ಪ್ರಮಾಣ ಮಾಡಿ ಹೇಳಬಲ್ಲೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry