7

ಬೆಲೆ ಸ್ಥಿರತೆಗೆ ಒತ್ತು ನೀಡಿದ ಆರ್‌ಬಿಐನ ದೃಢ ನಿರ್ಧಾರ

Published:
Updated:
ಬೆಲೆ ಸ್ಥಿರತೆಗೆ ಒತ್ತು ನೀಡಿದ ಆರ್‌ಬಿಐನ ದೃಢ ನಿರ್ಧಾರ

ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಹಣಕಾಸು ನೀತಿಯ ಐದನೇ ದ್ವೈಮಾಸಿಕ ಪರಾಮರ್ಶೆಯಲ್ಲಿ ಪ್ರಮುಖ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಇದು ಬಹು ನಿರೀಕ್ಷಿತವೇ ಆಗಿತ್ತು. ಅಲ್ಪಾವಧಿ ಬಡ್ಡಿ ದರ ಕಡಿತ ಮಾಡಿಲ್ಲ, ಹೆಚ್ಚಳ ಮಾಡುವ ಗೋಜಿಗೂ ಹೋಗಿಲ್ಲ. ಹಣದುಬ್ಬರ ಏರಿಕೆ ನಿರೀಕ್ಷೆಯಲ್ಲಿ ಇದೊಂದು ಸಮತೋಲನದ ಮತ್ತು ವ್ಯಾವಹಾರಿಕ ಧೋರಣೆಯಾಗಿದೆ.

ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದ ಹಣಕಾಸು ನೀತಿ ರೂಪಿಸುವಲ್ಲಿ ಬೆಲೆ ಸ್ಥಿರತೆ ಅತಿ ಮುಖ್ಯ ಎನ್ನುವ ನೀತಿಗೆ ಅದು ಮತ್ತೊಮ್ಮೆ ದೃಢವಾಗಿ ಅಂಟಿಕೊಂಡಿದೆ. ಯಾವುದೇ ಪರಿಸ್ಥಿತಿಯಲ್ಲಿ ಹಣದುಬ್ಬರವನ್ನು ಶೇ 4ಕ್ಕೆ ಮಿತಗೊಳಿಸಲು ಬದ್ಧವಾಗಿರುವ ಆರ್‌ಬಿಐ, ಏರುಗತಿಯಲ್ಲಿ ಇರುವ ಗ್ರಾಹಕರ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರಕ್ಕೆ ವ್ಯಾಕುಲಗೊಂಡಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ. ಬೆಲೆ ಏರಿಕೆ ಬಗ್ಗೆ ಎಚ್ಚರಿಕೆಯ, ಆರ್ಥಿಕ ಬೆಳವಣಿಗೆ ಕುರಿತು ಸಕಾರಾತ್ಮಕ ಮತ್ತು ವಾಸ್ತವಿಕ ನಿಲುವು ತಳೆದಿರುವುದು ಸಮರ್ಪಕ. ಅದರ ನಡೆಯಲ್ಲಿ ಆಕ್ರಮಣಕಾರಿ ಸ್ವಭಾವವೇನೂ ಕಂಡುಬಂದಿಲ್ಲ. ಇದರಿಂದ ಕೈಗಾರಿಕಾ ವಲಯಕ್ಕೆ ತೀವ್ರ ನಿರಾಶೆಯಾಗಿದ್ದರೂ, ಆರ್‌ಬಿಐ ನಡೆಯ ಹಿಂದಿರುವ ಲೆಕ್ಕಾಚಾರ ನಿರ್ಲಕ್ಷಿಸುವಂತಿಲ್ಲ.

ಅಕ್ಟೋಬರ್‌ನಲ್ಲಿ ಗ್ರಾಹಕ ಬೆಲೆ ಸೂಚ್ಯಂಕವು ಏಳು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದ್ದರಿಂದ ಬಡ್ಡಿ ದರ ಕಡಿತಗೊಳಿಸಲು ಅದಕ್ಕೆ ಸಾಧ್ಯವಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ನೌಕರರ ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಹೆಚ್ಚಿಸಿರುವುದು ಹಣದುಬ್ಬರ ಏರಿಕೆಗೆ ಇಂಬು ನೀಡುತ್ತಿದೆ.

ಜಿಎಸ್‌ಟಿ ದರ ಕಡಿತ, ಕೃಷಿ ಸಾಲ ಮನ್ನಾ ಹಾಗೂ ತೈಲ ಬೆಲೆ ಏರಿಕೆ ಸಾಧ್ಯತೆಯಿಂದ ಈ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಗ್ರಾಹಕರ ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರವು ಏರುಗತಿಯಲ್ಲಿ (ಶೇ 4.3 ರಿಂದ ಶೇ 4.7) ಇರಲಿದೆ ಎಂದು ಅಂದಾಜಿಸಲಾಗಿದೆ. ಮುಂಗಾರು ಉತ್ಪಾದನೆ ಮತ್ತು ಹಿಂಗಾರು ಬಿತ್ತನೆಯಲ್ಲಿನ ಕುಸಿತವು ಕೃಷಿ ಕ್ಷೇತ್ರದಲ್ಲಿನ ಹಿನ್ನಡೆಗೆ, ಪೂರೈಕೆ ಕೊರತೆಗೆ ಕಾರಣವಾಗಿರುವುದನ್ನೂ ಆರ್‌ಬಿಐ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರೀಯ ಬ್ಯಾಂಕ್‌ನಿಂದ ಬ್ಯಾಂಕ್‌ಗಳು ಪಡೆಯುವ ಸಾಲದ ಮೇಲಿನ ಬಡ್ಡಿ ದರದಲ್ಲಿ (ಶೇ 6) ಕಡಿತ ಮಾಡದಿರುವುದು ಸಾಲ ನೀಡಿಕೆ, ಬೇಡಿಕೆ ಹೆಚ್ಚಳಕ್ಕೆ ನೆರವಾಗುವುದಿಲ್ಲ. ಹದಿನೈದು ತಿಂಗಳ ಕಾಲ ಮಂದಗತಿಯಲ್ಲಿದ್ದ ಆರ್ಥಿಕ ವೃದ್ಧಿ ದರವು ದ್ವಿತೀಯ ತ್ರೈಮಾಸಿಕದಲ್ಲಿ ಬೆಳವಣಿಗೆ ಹಾದಿಗೆ ಮರಳಿರುವುದು ಆರ್‌ಬಿಐ ಧೋರಣೆ ಮೇಲೆ ಯಾವುದೇ ಸಕಾರಾತ್ಮಕ ಪರಿಣಾಮ ಬೀರಿಲ್ಲ. ಇದು ಅಚ್ಚರಿದಾಯಕ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ₹ 2.11 ಲಕ್ಷ ಕೋಟಿಗಳಷ್ಟು ಪುನರ್ಧನ ಕೊಡುಗೆಯು ಬ್ಯಾಂಕ್‌ಗಳನ್ನು ಬಲವರ್ಧನೆ ಮಾಡುವುದರ ಜತೆಗೆ ಸುಧಾರಣಾ ಕ್ರಮಗಳನ್ನೂ ಒಳಗೊಂಡಿದೆ. ಇದು ಮುಂಬರುವ ದಿನಗಳಲ್ಲಿ ಆರ್ಥಿಕ ಚೇತರಿಕೆಗೆ ಖಂಡಿತವಾಗಿಯೂ ಇಂಬು ನೀಡಲಿದೆ.

ಹಣದುಬ್ಬರವು ನಿಯಂತ್ರಣ ಮಟ್ಟಕ್ಕೆ ಇಳಿಯುವವರೆಗೆ ಆರ್‌ಬಿಐ ನಗದು ಹರಿವಿನ ಮೇಲೆ ಕಡಿವಾಣ ವಿಧಿಸುವ ಇದೇ ಬಗೆಯ ಧೋರಣೆ ಮುಂದುವರೆಸಲಿದೆ ಎನ್ನುವುದಂತೂ ಈಗ ಮತ್ತೊಮ್ಮೆ ದೃಢಪಟ್ಟಿದೆ. ಈ ನೀತಿ ಇನ್ನೆಷ್ಟು ಸಮಯದವರೆಗೆ ಮುಂದುವರೆಯಲಿದೆ ಎನ್ನುವ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ. ಆರ್ಥಿಕ ವೃದ್ಧಿ ದರವು ಈ ಮೊದಲಿನ ಅಂದಾಜಿನಂತೆ (ಶೇ 6.7) ಬೆಳವಣಿಗೆ ಪಥದಲ್ಲಿ ಸಾಗುವ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿರುವುದು ಗಮನಿಸಬೇಕಾದ ಸಕಾರಾತ್ಮಕ ಸಂಗತಿ. ಸಾರ್ವಜನಿಕರ ಆರಂಭಿಕ ನೀಡಿಕೆ (ಐಪಿಒ) ಮೂಲಕ ಬಂಡವಾಳ ಸಂಗ್ರಹದಲ್ಲಿನ ಹೆಚ್ಚಳ, ಉದ್ದಿಮೆ– ವಹಿವಾಟು ಆರಂಭಿಸಲು ಸುಲಲಿತ ವಾತಾವರಣ ಕಲ್ಪಿಸುವಲ್ಲಿ ಜಾಗತಿಕ ಶ್ರೇಯಾಂಕ ಏರಿಕೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪುನರ್ಧನ, ಸಾಲ ವಸೂಲಾತಿಗೆ ಕಾಲಮಿತಿಗೆ ಒಳಪಟ್ಟ ದೃಢ ಕ್ರಮಗಳು ಮುಂಬರುವ ದಿನಗಳಲ್ಲಿ ಆರ್ಥಿಕತೆಯನ್ನು ಪ್ರಗತಿ ಹಾದಿಯಲ್ಲಿ ಕೊಂಡೊಯ್ಯಲಿವೆ. ಆಗ ಮಾತ್ರ ಬಡ್ಡಿ ದರ ಕಡಿತ ನಿರೀಕ್ಷಿಸಬಹುದಾಗಿದೆ ಎಂದು ಆಶಾವಾದ ತಳೆಯಬೇಕಷ್ಟೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry