7
ಸಾಮಾಜಿಕ ಜಾಲತಾಣಗಳಲ್ಲಿ ಹೃದಯ ವಿದ್ರಾವಕ ದೃಶ್ಯಾವಳಿ, ‘ಲವ್‌ ಜಿಹಾದ್‌’ ವಿರುದ್ಧದ ಕೃತ್ಯ–ಆರೋಪಿ ಹೇಳಿಕೆ

ಕ್ಯಾಮೆರಾ ಮುಂದೆಯೇ ದಿನಗೂಲಿಯ ಬರ್ಬರ ಹತ್ಯೆ

Published:
Updated:
ಕ್ಯಾಮೆರಾ ಮುಂದೆಯೇ ದಿನಗೂಲಿಯ ಬರ್ಬರ ಹತ್ಯೆ

ಜೈಪುರ: ರಾಜಸ್ಥಾನದ ರಾಜ್‌ಸಮಂದ್‌ ಜಿಲ್ಲೆಯಲ್ಲಿ ದಿನಗೂಲಿ ನೌಕರ ಮೊಹಮ್ಮದ್‌ ಅಫ್ರಾಜುಲ್‌ ಎಂಬುವವರನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿ ನಂತರ ದೇಹವನ್ನು ಸುಟ್ಟು ಹಾಕಿದ ಆರೋಪದ ಮೇಲೆ 36 ವರ್ಷದ ಶಂಭು ಲಾಲ್‌ ಎಂಬ ವ್ಯಕ್ತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಹತ್ಯೆ ಮಾಡಿ ಶವಕ್ಕೆ ಬೆಂಕಿ ಹಚ್ಚುವ ದೃಶ್ಯಗಳನ್ನು ಮೊಬೈಲ್‌ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿದೆ. ಹೃದಯ ವಿದ್ರಾವಕವಾದ ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.

ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಪ್ರೀತಿಸುವುದರ ವಿರುದ್ಧವಾಗಿ ಹತ್ಯೆ ಮಾಡಿದ ವ್ಯಕ್ತಿಯು ಮಾತನಾಡುವ ದೃಶ್ಯವೂ ವಿಡಿಯೊದಲ್ಲಿದೆ.

‘ಅರ್ಧ ಸುಟ್ಟಿರುವ ಮೃತ ದೇಹವೊಂದು ರಾಜ್‌ಸಮಂದ್‌ನ 100 ಅಡಿ ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ. ಇದು ಪಶ್ಚಿಮ ಬಂಗಾಳದ ಮಾಲ್ಡಾದ ನಿವಾಸಿ 46 ವರ್ಷದ ಮೊಹಮ್ಮದ್ ಅಫ್ರಾಜುಲ್‌ ಅವರದ್ದು ಎಂಬುದು ದೃಢಪಟ್ಟಿದೆ. ರಾಜ್‌ಸಮಂದ್‌ನಲ್ಲಿ ವಾಸಿಸುತ್ತಿದ್ದ ಅವರು ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

‘ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ’ ಎಂದು ರಾಜ್ಯ ಗೃಹ ಸಚಿವ ಗುಲಾಬ್‌ ಚಂದ್‌ ಕಠಾರಿಯಾ ಹೇಳಿದ್ದಾರೆ.

ವಿಡಿಯೊದಲ್ಲಿ ಏನಿದೆ?: ಎರಡು ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವುಗಳಲ್ಲಿ ಒಂದರಲ್ಲಿ ಕೆಂಪು ಅಂಗಿ ಮತ್ತು ಬಿಳಿ ಪ್ಯಾಂಟ್‌ ಧರಿಸಿರುವ ಶಂಭು ಲಾಲ್‌, ಅಫ್ರಾಜುಲ್‌ ಅವರ ಹಿಂದಿನಿಂದ ಸಾಗುತ್ತ ಆಯುಧದಿಂದ ಅಫ್ರಾಜುಲ್‌ ಮೇಲೆ ಏಕಾಏಕಿ ದಾಳಿ ನಡೆಸುವ ದೃಶ್ಯ ಇದೆ. ಮೃತ ದೇಹಕ್ಕೆ ಲಾಲ್‌ ಬೆಂಕಿ ಹಾಕುವ ದೃಶ್ಯವೂ ತುಣುಕಿನಲ್ಲಿದೆ. ನಂತರ ಕ್ಯಾಮೆರಾದ ಮುಂದೆ ಬರುವ ಆರೋಪಿ, ಮಹಿಳೆಯೊಬ್ಬರನ್ನು ‘ಲವ್‌ ಜಿಹಾದ್‌’ನಿಂದ ರಕ್ಷಿಸುವ ಸಲುವಾಗಿ ಹತ್ಯೆ ಮಾಡಿರುವುದಾಗಿ ಘೋಷಿಸುತ್ತಾನೆ.

ಹತ್ಯೆ ಮಾಡುವ ದೃಶ್ಯವನ್ನು ಸೆರೆ ಹಿಡಿದವ ಶಂಭು ಲಾಲ್‌ನ 15 ವರ್ಷ ವಯಸ್ಸಿನ ಸೋದರಳಿಯ. ರಾಜ್‌ಸಮಂ‌ದ್‌ನ ಪೊಲೀಸರು ಆರೋಪಿಯ ಮಗಳು ಮತ್ತು ಸೋದರಳಿಯನನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಹೇಳಿದ್ದಾರೆ.

‘ಇಬ್ಬರು ಕೂಡ 18 ವರ್ಷಕ್ಕಿಂತ ಕೆಳಗಿನವರು. ಘಟನೆ ನಡೆದಾಗ ಇವರಿಬ್ಬರೂ ಶಂಭು ಲಾಲ್‌ ಜೊತೆಗಿದ್ದರು’ ಎಂದು ಅವರು ಹೇಳಿದ್ದಾರೆ.

ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 302 (ಕೊಲೆ) ಮತ್ತು 201ರ (ಸಾಕ್ಷ್ಯ ನಾಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ತನಿಖೆಗೆ ಆಗ್ರಹ: ಇಂತಹ ಹೀನ ಕೃತ್ಯ ನಡೆಸಲು ಆರೋಪಿಗೆ ಪ್ರಚೋದನೆ ನೀಡಿದವರನ್ನು ಬಂಧಿಸುವಂತೆ ಸಾಮಾಜಿಕ ಕಾರ್ಯಕರ್ತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇಂಟರ್‌ನೆಟ್‌ ಸ್ಥಗಿತ: ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದನ್ನು ತಪ್ಪಿಸುವುದಕ್ಕಾಗಿ ರಾಜ್‌ಸಮಂದ್‌ನಲ್ಲಿ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗಿದೆ.

ಕಾಂಗ್ರೆಸ್‌ ಆರೋಪ: ರಾಜ್ಯದಲ್ಲಿ ದುರ್ಬಲ ಆಡಳಿತ ಇದೆ ಎಂಬುದನ್ನು ಈ ಹತ್ಯೆಯ ವಿಡಿಯೊ ಸಾಬೀತು ಪಡಿಸಿದೆ ಎಂದು ಕಾಂಗ್ರೆಸ್‌ ಮುಖಂಡ ಸಚಿನ್‌ ಪೈಲಟ್‌ ಆರೋಪಿಸಿದ್ದಾರೆ.

**

‘ಮಾದಕದ್ರವ್ಯ ಸೇವಿಸಿದ್ದ ಪತಿ’

ಆರೋಪಿ ಶಂಭು ಲಾಲ್‌ ಕೃತ್ಯ ಎಸಗುವಾಗ ಮಾದಕ ದ್ರವ್ಯ ಸೇವಿಸಿದ್ದ ಎಂದು ಆತನ ಪತ್ನಿ ಸೀತಾ ದೇವಿ ಹೇಳಿದ್ದಾರೆ.

‘ನನ್ನ ಪತಿ ಮಾದಕ ವ್ಯಸನಿಯಾಗಿದ್ದರು. ಅವರು ಏನೂ ಕೆಲಸ ಮಾಡುತ್ತಿರಲಿಲ್ಲ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಲವ್‌ ಜಿಹಾದ್‌ಗೂ ಈ ಪ್ರಕರಣಕ್ಕೂ ಸಂಬಂಧ ಇದೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ, ಒಂದು ವರ್ಷದ ಹಿಂದೆ ಪಶ್ವಿಮ ಬಂಗಾಳದ ಮುಸ್ಲಿಂ ವ್ಯಕ್ತಿಯನ್ನು ನಮ್ಮ ಗ್ರಾಮದ ಹುಡುಗಿಯೊಬ್ಬಳು ಮದುವೆಯಾದ ನಂತರ ಅವರು ಕೋಪಗೊಂಡಿದ್ದರು’ ಎಂದು ಸೀತಾ ದೇವಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

**

ಮಮತಾ ಬ್ಯಾನರ್ಜಿ ಖಂಡನೆ

ಕೋಲ್ಕತ್ತ (ಪಿಟಿಐ): ದಿನಗೂಲಿ ನೌಕರನ ಹತ್ಯೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದಾರೆ.

‘ರಾಜಸ್ಥಾನದಲ್ಲಿ ರಾಜ್ಯದ ದಿನಗೂಲಿ ನೌಕರನನ್ನು ಹತ್ಯೆ ಮಾಡಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಜನರು ಇಷ್ಟೊಂದು ಅಮಾನವೀಯವಾಗಿರಲು ಹೇಗೆ ಸಾಧ್ಯ? ಅತ್ಯಂತ ನೋವಿನ ಸಂಗತಿ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ನ್ಯಾಯಕ್ಕಾಗಿ ಕುಟುಂಬದ ಆಗ್ರಹ (ಮಾಲ್ಡಾ ವರದಿ): ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಫ್ರಾಜುಲ್‌ ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ.

‘ಈ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಿ ತಪ್ಪಿತಸ್ಥನಿಗೆ ಶಿಕ್ಷೆ ವಿಧಿಸುವುದನ್ನು ನಾವು ಬಯಸುತ್ತೇವೆ’ ಎಂದು ಸಂಬಂಧಿಯೊಬ್ಬರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry