7

ಔರಾದ್‌: ಎರಡು ಕಡೆ ವೇದಿಕೆ, ಕಾರ್ಯಕರ್ತರ ಕಿತ್ತಾಟ

Published:
Updated:
ಔರಾದ್‌: ಎರಡು ಕಡೆ ವೇದಿಕೆ, ಕಾರ್ಯಕರ್ತರ ಕಿತ್ತಾಟ

ಔರಾದ್: ಇಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಪರಿವರ್ತನಾ ಯಾತ್ರೆ ವೇಳೆ ಪಕ್ಷದ ಎರಡು ಗುಂಪುಗಳ ನಡುವಿನ ಭಿನ್ನಮತ ಭುಗಿಲೆದ್ದಿತು.

ಶಾಸಕ ಪ್ರಭು ಚವಾಣ್ ಮತ್ತು ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಧನಾಜಿ ಜಾಧವ್ ಗುಂಪಿನ ನಡುವಿನ ಒಳಜಗಳ ನಾಯಕರ ಮುಂದೆ ಸ್ಫೋಟಗೊಂಡಿತು.

ಪರಿವರ್ತನೆ ಯಾತ್ರೆ ಸಮಾವೇಶ ಆಯೋಜಿಸಲು ಉಭಯ ಬಣಗಳು ಪ್ರತ್ಯೇಕ ವೇದಿಕೆ ನಿರ್ಮಿಸಿದ್ದವು. ಯಾತ್ರೆ ಪಟ್ಟಣ ಪ್ರವೇಶಿಸುತ್ತಿದ್ದಂತೆ ಧನಾಜಿ ಜಾಧವ್ ಬಣದ ಗುಂಪು ತಮ್ಮ ವೇದಿಕೆಗೆ ಬರುವಂತೆ ಬಿಜೆಪಿ ನಾಯಕರನ್ನು ತಡೆದು ಒತ್ತಾಯ ಮಾಡಿತು. ಶಾಸಕ ಪ್ರಭು ಚವಾಣ್ ಅವರು ಪಕ್ಷದ ನಿಷ್ಠಾವಂತ ಹಳೆ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ ಎಂದು ಕೆಲ ಮುಖಂಡರು ದೂರಿದರು.

ಈ ವೇಳೆ ಎರಡು ಗುಂಪುಗಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.

ಕಾರ್ಯಕರ್ತರ ಒತ್ತಡಕ್ಕೆ ಮಣಿದು ವೇದಿಕೆಗೆ ಬಂದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಈ ರೀತಿ ಗುಂಪುಗಾರಿಕೆ ಮಾಡುವುದು ಸರಿಯಲ್ಲ. ಏನಿದ್ದರೂ ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ನಂತರ ಮೆರವಣಿಗೆ ಮೂಲಕ ಪ್ರಭು ಚವಾಣ್ ಗುಂಪಿನವರು ನಿರ್ಮಿಸಿದ್ದ ವೇದಿಕೆಗೆ ಬಂದು ಭಾಷಣ ಮಾಡಿದರು. ಕ್ಷೇತ್ರದ ಮತದಾರರು ಪ್ರಭು ಚವಾಣ್ ಅವರನ್ನು ಈ ಸಲ 40 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಕೋರುವ ಮೂಲಕ ಕ್ಷೇತ್ರದ ಟಿಕೆಟ್ ಬಗ್ಗೆ ಕಾರ್ಯಕರ್ತರಲ್ಲಿ ಇದ್ದ ಗೊಂದಲಕ್ಕೆ ತೆರೆ ಎಳೆದರು.

‘ಪಕ್ಷ ವಿರೋಧಿ ಹೇಳಿಕೆ ಸಹಿಸಲ್ಲ’:

‘ಪಕ್ಷವು ಅಧಿಕೃತ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಿದ ನಂತರ ಯಾರೂ ವಿರೋಧಿಸಿ ಹೇಳಿಕೆ ಕೊಡುವುದಾಗಲಿ,  ಯಾವುದೇ ರೀತಿಯ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಅಂಥವರನ್ನು ಮುಲಾಜಿಲ್ಲದೆ ಪಕ್ಷದಿಂದ ಉಚ್ಚಾಟಿಸಲಾಗುವುದು. ಎಲ್ಲರೂ ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡಬೇಕು’ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry