ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಅಭ್ಯರ್ಥಿಗಳ ಶಿಫಾರಸಿಗೆ ಶೀಘ್ರ ವೀಕ್ಷಕರ ನೇಮಕ

Last Updated 7 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿರುವ ಕಾಂಗ್ರೆಸ್‌, ಇದಕ್ಕಾಗಿ ಸದ್ಯದಲ್ಲೇ ಎಲ್ಲ ಜಿಲ್ಲೆಗಳಿಗೂ ವೀಕ್ಷಕರನ್ನು ನೇಮಿಸಲು ನಿರ್ಧರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ 13 ರಿಂದ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲಿದ್ದು, ಇದಾದ ಬಳಿಕ ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲು ವೀಕ್ಷಕರ ನೇಮಕ ಆಗಲಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಆಂತರಿಕ ಸಮೀಕ್ಷೆ ನಡೆಸಲಾಗುವುದು. ಸಮೀಕ್ಷೆ ವರದಿ ಆಧರಿಸಿ ವೀಕ್ಷಕರು ಹೆಸರು ಶಿಫಾರಸು ಮಾಡಲಿದ್ದಾರೆ.

ಎಲ್ಲ ಜಿಲ್ಲೆಗಳಿಗೂ ವೀಕ್ಷಕರನ್ನು ಕೆಪಿಸಿಸಿಯೇ ನೇಮಕ ಮಾಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ  ಜಿ.ಪರಮೇಶ್ವರ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣೆಯಲ್ಲಿ ಸ್ಪರ್ಧಿಸಲು ಯಾರಿಗೆ ಟಿಕೆಟ್‌ ನೀಡಬೇಕು ಎಂಬುದನ್ನು ಹೈಮಾಂಡ್‌ ನಿರ್ಧರಿಸುತ್ತದೆ. ಎಲ್ಲ ಹಾಲಿ ಶಾಸಕರಿಗೆ ಟಿಕೆಟ್‌ ನೀಡುವುದು ಮತ್ತು ಒಂದು ಕುಟುಂಬದಲ್ಲಿ ಒಬ್ಬರಿಗೇ ಟಿಕೆಟ್‌ ನೀಡಬೇಕು ಎನ್ನುವ ವಿಚಾರದ ಬಗ್ಗೆ ಎಐಸಿಸಿಯೇ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

‘ನನ್ನ ಮತ್ತು ಮುಖ್ಯಮಂತ್ರಿ ಮಧ್ಯೆ ವೈಮನಸ್ಯವಿಲ್ಲ. ಎಂಟು ವರ್ಷಗಳಿಂದ ಒಗ್ಗಟ್ಟಿನಿಂದಲೆ ಕೆಲಸ ಮಾಡುತ್ತಿದ್ದೇವೆ. ಪ್ರವಾಸ ಮತ್ತಿತರ ಕಾರ್ಯಕ್ರಮವನ್ನು ಒಟ್ಟಿಗೆ ತೀರ್ಮಾನ ತೆಗೆದುಕೊಳ್ಳುತ್ತಿದ್ದೇವೆ.  ಜಗಳ ಆಡಿಲ್ಲ, ಕಿತ್ತಾಟ ಮಾಡಿಲ್ಲ. ನನ್ನನ್ನಾಗಲಿ, ಮಲ್ಲಿಕಾರ್ಜುನ ಖರ್ಗೆ ಅವರನ್ನಾಗಲಿ ಮೂಲೆ ಗುಂಪು ಮಾಡಿಲ್ಲ’ ಎಂದೂ ತಿಳಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ 13 ರಿಂದ ಸಾಧನೆಯ ಸಂಭ್ರಮ ಯಾತ್ರೆ ಆರಂಭಿಸುತ್ತಾರೆ. 124 ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ಅವರು ಬಿಜೆಪಿ ಮತ್ತು ಜೆಡಿಎಸ್‌ ಶಾಸಕರಿರುವ ಕ್ಷೇತ್ರಗಳಿಗೂ ಭೇಟಿ ನೀಡುತ್ತಾರೆ. ಉಳಿದ 100 ಕ್ಷೇತ್ರಗಳಲ್ಲಿ ಪಕ್ಷದ ಇಬ್ಬರು ಕಾರ್ಯಾಧ್ಯಕ್ಷರು, ಪ್ರಚಾರ ಸಮಿತಿ ಅಧ್ಯಕ್ಷರ ಜತೆ ಸೇರಿ ಪ್ರವಾಸ ಮಾಡುತ್ತೇವೆ. ಮಾರ್ಚ್‌ 1 ರಿಂದ ಮುಖ್ಯಮಂತ್ರಿ ಸೇರಿ ಎಲ್ಲ ಮುಖಂಡರೂ ಒಟ್ಟಿಗೆ ರಾಜ್ಯದಾದ್ಯಂತ ಚುನಾವಣಾ ಪ್ರವಾಸ ಮಾಡಲಿದ್ದೇವೆ’ ಎಂದು ವಿವರಿಸಿದರು.

‘ರಾಹುಲ್‌ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ದೊಡ್ಡ ಸಮಾವೇಶ ನಗರದಲ್ಲಿ ನಡೆಸಲು ನಿರ್ಧರಿಸಿದ್ದೇವೆ. ಇದಕ್ಕೆ ರಾಹುಲ್ ಗಾಂಧಿ ಒಪ್ಪಿದ್ದಾರೆ. ಅವರ ದಿನಾಂಕಕ್ಕಾಗಿ ಕಾಯುತ್ತಿದ್ದೇವೆ. ದೇಶದಲ್ಲಿ ರಾಹುಲ್‌ ಗಾಂಧಿ ಯುಗ ಆರಂಭಗೊಳ್ಳಲಿದ್ದು, ಅದಕ್ಕೆ ಕರ್ನಾಟಕದಿಂದಲೇ ನಾಂದಿ ಹಾಡುತ್ತೇವೆ’ ಎಂದರು.

ರಾಜ್ಯದಲ್ಲಿ ಮನೆ– ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮ ಯಶಸ್ವಿಯಾಗಿದೆ. ಇಲ್ಲಿಯವರೆಗೆ ಶೇ 86.5 ರಷ್ಟು ಮನೆಗಳಿಗೆ ಕಾರ್ಯಕರ್ತರು ಭೇಟಿ ನೀಡಿದ್ದಾರೆ. 1.10 ಕೋಟಿ ಕುಟುಂಬಗಳಿಗೆ ಸರ್ಕಾರದ ಕಾರ್ಯಕ್ರಮಗಳ ಮಾಹಿತಿ ಪುಸ್ತಕವನ್ನು ತಲುಪಿಸಿದ್ದೇವೆ ಎಂದರು.

ರಾಜ್ಯಕ್ಕೆ 23ರಂದು ರಾಹುಲ್‌ ಭೇಟಿ?

ಬೆಂಗಳೂರು: ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ, ಈ ತಿಂಗಳ 23ರಂದು ರಾಹುಲ್‌ ಗಾಂಧಿ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

‘ರಾಹುಲ್‌ ಗಾಂಧಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದ ಭಾಗವಾಗಿ ಬೃಹತ್‌ ರ‍್ಯಾಲಿ ಆಯೋಜಿಸುವಂತೆ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಸೂಚನೆ ನೀಡಿದ್ದಾರೆ. ಆದರೆ, ರ‍್ಯಾಲಿ ನಡೆಯುವ ದಿನ ಮತ್ತು ಜಾಗ ಇನ್ನೂ ನಿಗದಿಯಾಗಿಲ್ಲ. ಚಿಕ್ಕಮಗಳೂರು ಅಥವಾ ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ನಗರದ ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ ನಡೆದ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಹಾಲಿ 35 ಶಾಸಕರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾದ ಬೆನ್ನಲ್ಲೆ, 80ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಕೆಟ್‌ ನೀಡುವ ಭರವಸೆ ನೀಡಿದ್ದಾರೆ. ಅಲ್ಲದೆ, ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT