ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು: ಆಂಜನೇಯ

Last Updated 7 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಉಪಯೋಜನೆಯಡಿ (ಎಸ್‌ಸಿಪಿ–ಟಿಎಸ್‌ಪಿ) ನಿಗದಿಪಡಿಸಿದ ಕಾರ್ಯಕ್ರಮಗಳನ್ನು ಜಾರಿ ಮಾಡದ ಕೃಷಿ ಇಲಾಖೆ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು.

ಎಸ್‌ಸಿಪಿ–ಟಿಎಸ್‌ಪಿಯಡಿ 37 ಇಲಾಖೆಗಳಿಗೆ ನಿಗದಿಪಡಿಸಲಾದ ಮೊತ್ತದ ಬಳಕೆ ಕುರಿತು ಗುರುವಾರ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಕೃಷಿ ಇಲಾಖೆಯಿಂದ ನೀಡುವ ಟ್ರ್ಯಾಕ್ಟರ್‌ಗಳಿಗೆ ಸಹಾಯಧನವನ್ನು ₹ 2 ಲಕ್ಷದಿಂದ ₹ 3 ಲಕ್ಷಕ್ಕೆ ಹೆಚ್ಚಿಸುವಂತೆ ಸೂಚಿಸಿದ್ದರೂ ₹ 2 ಲಕ್ಷವನ್ನೇ ನೀಡಲಾಗುತ್ತದೆ. ಈ ವರ್ಗದವರ ಏಳಿಗೆ ಸಹಿಸಲು ಕೃಷಿ ಅಧಿಕಾರಿಗಳಿಗೆ ಆಗುತ್ತಿಲ್ಲ ಎಂದು ಆರೋಪಿಸಿದರು.

‘ಇದರ ಜೊತೆಗೆ ಕೃಷಿ ಕೂಲಿ ಕಾರ್ಮಿಕರನ್ನು ಇಸ್ರೇಲ್, ಚೈನಾಕ್ಕೆ ಪ್ರವಾಸ ಕರೆದುಕೊಂಡು ಹೋಗಬೇಕು ಎಂಬ ಕಾರ್ಯಕ್ರಮವನ್ನೂ ನೀಡಲಾಗಿತ್ತು. ಕಳೆದ ವರ್ಷ ಮತ್ತು ಈ ವರ್ಷ ಯಾವ ರೈತರನ್ನೂ ವಿದೇಶಕ್ಕೆ ಕರೆದೊಯ್ದಿಲ್ಲ. ಇದು ಸಂಪೂರ್ಣವಾಗಿ ಅಧಿಕಾರಿಗಳ ನಿರ್ಲಕ್ಷ್ಯ’ ಎಂದು ಹೇಳಿದರು.

‘ಎಸ್‌ಸಿಪಿ–ಟಿಎಸ್‌ಪಿ ಯೋಜನೆಯಡಿ ನೀಡಿದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡದ ಅಧಿಕಾರಿಗಳ ವಿರುದ್ಧ ಕ್ರಮಕ್ಕೂ ಕಾಯ್ದೆಯಲ್ಲಿ ಅವಕಾಶ ಇದೆ. ಆದರೆ, ನಾಲ್ಕು ವರ್ಷಗಳಲ್ಲಿ ಯಾವ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಇನ್ನು ಮುಂದೆಯೂ ಸುಮ್ಮನಿರಲು ಸಾಧ್ಯವಿಲ್ಲ. ಕೃಷಿ ಇಲಾಖೆಯ ಕಾರ್ಯದರ್ಶಿ, ಆಯುಕ್ತರು ಸೇರಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಸ್ಥಾನದಲ್ಲಿರುವ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಶಿಫಾರಸು ಮಾಡಲಾಗುವುದು’ ಎಂದರು.

ಪರಿಶೀಲನಾ ಸಭೆಗೆ ಉನ್ನತ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ, ಕೈಗಾರಿಕೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬಂದಿಲ್ಲ. ಅವರಿಗೆ ನೋಟಿಸ್ ಜಾರಿ ಮಾಡಲಾಗುವುದು. ಅಲ್ಲದೆ, ಮುಂದಿನ ವಾರ ಮತ್ತೊಮ್ಮೆ ಸಭೆ ಕರೆಯಲಾಗುವುದು ಎಂದು ಹೇಳಿದರು.

ಶೇ 42 ಪ್ರಗತಿ:

‘ಎಸ್‌ಸಿಪಿ–ಟಿಎಸ್‌ಪಿ ಯೋಜನೆಯಡಿ ಈ ವರ್ಷ 37 ಇಲಾಖೆಗಳು ಸೇರಿ ₹ 27,703 ಕೋಟಿ ಹಂಚಿಕೆ ಮಾಡಲಾಗಿದೆ. ಆದರೆ, ಅದರಲ್ಲಿ ₹ 11,626 ಕೋಟಿ (ಶೇ 42) ಬಳಕೆಯಾಗಿದೆ’ ಎಂದು ಸಚಿವರು ವಿವರಿಸಿದರು.

ಕಳೆದ ವರ್ಷ ಇದೇ ಅವಧಿಗೆ ಶೇ 25ರಷ್ಟು ಮಾತ್ರ ಪ್ರಗತಿಯಾಗಿತ್ತು. ಈ ಸಾಲಿನಲ್ಲಿ ಹಂಚಿಕೆ ಮಾಡಲಾದ ಅನುದಾನದ ಪೈಕಿ 2018ರ ಜನವರಿ ಅಂತ್ಯದ ವೇಳೆಗೆ ಶೇ 75 ರಷ್ಟು ಹಾಗೂ ಮಾರ್ಚ್‌ ಅಂತ್ಯದೊಳಗೆ ಶೇ 100ರಷ್ಟು ಖರ್ಚು ಮಾಡಲಾಗುವುದು. ಕಾಯ್ದೆ ಜಾರಿಯಾಗಿ ನಾಲ್ಕು ವರ್ಷವಾಗಿದೆ. ಸಾಕಷ್ಟು ಅನುಭವವೂ ಆಗಿದೆ. ಅದರಿಂದ ಈ ವರ್ಷದ ಕಾರ್ಯಕ್ರಮಗಳ ಅನುಷ್ಠಾನ ಸುಲಭವಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT