ಶುಕ್ರವಾರ, ಮಾರ್ಚ್ 5, 2021
17 °C

ಪ್ರತಾಪಸಿಂಹ ಸದಸ್ಯತ್ವ ರದ್ದತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತಾಪಸಿಂಹ ಸದಸ್ಯತ್ವ ರದ್ದತಿಗೆ ಆಗ್ರಹ

ಮೈಸೂರು: ಸಾಂವಿಧಾನಿಕ ಜವಾಬ್ದಾರಿ ಮರೆತಿರುವ ಸಂಸದ ಪ್ರತಾಪಸಿಂಹ ಅವರ ಸಂಸತ್ ಸದಸ್ಯತ್ವ ರದ್ದುಪಡಿಸಬೇಕು ಎಂದು ನಗರದಲ್ಲಿ ಗುರುವಾರ ನಡೆದ ಸಭೆಯಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಆಗ್ರಹಿಸಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸಿಪಿಎಂ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಪಿಯುಸಿಎಲ್ ನೇತೃತ್ವದಲ್ಲಿ ದುಂಡು ಮೇಜಿನ ಸಭೆ ನಡೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರನ್ನು ಸಂಪುಟದಿಂದ ಹೊರಹಾಕುವಂತೆ ಸಭೆ ಒತ್ತಾಯಿಸಿತು.

ಹುಣಸೂರು ಮತ್ತು ರಾಜ್ಯದ ವಿವಿಧೆಡೆ ಕೋಮು ಸಾಮರಸ್ಯ ಕದಡಿ ರಾಜಕೀಯ ಲಾಭ ಪಡೆಯುತ್ತಿರುವ ಬಿಜೆಪಿ ಮತ್ತು ಸಂಘಪರಿವಾರದ ಹುನ್ನಾರವನ್ನು ಸಭೆ ಖಂಡಿಸಿತು. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸಂವಿಧಾನ ವಿರೋಧಿ ಧೋರಣೆ ಮುಂದುವರಿಸಿದರೆ ಅವರ ವಿರುದ್ಧ ಉಗ್ರ ಹೋರಾಟ ನಡೆಸುವ ನಿರ್ಣಯವನ್ನೂ ತೆಗೆದುಕೊಳ್ಳಲಾಯಿತು.

ಡಿ. 11ರಂದು ಜನಜಾಗೃತಿ ಜಾಥಾ: ಕೋಮು ಸೌಹಾರ್ದ ಕದಡುವ ಬಿಜೆಪಿಯ ಹುನ್ನಾರದ ವಿರುದ್ಧ ಜಾಗೃತಿ ಮೂಡಿಸಲು ಹುಣಸೂರಿನಲ್ಲಿ ಡಿಸೆಂಬರ್‌ 11ರಂದು ಜನಜಾಗೃತಿ ಸಭೆ ಮತ್ತು ಮೆರವಣಿಗೆ ನಡೆಸುವ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಪಾಪದ ಕೂಸು: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ‘ಹೆಗಡೆ ವಂಶದ ಪಾಪದ ಕೂಸು’ ಎಂದು ಇತಿಹಾಸತಜ್ಞ ಪ್ರೊ.ಎನ್.ಎಸ್.ರಂಗರಾಜ್ ಟೀಕಿಸಿದರು.

‘ಅವರು ಅತ್ಯಂತ ತುಚ್ಛ ಮನಸ್ಸಿನ ವ್ಯಕ್ತಿಯಾಗಿದ್ದು, ಉತ್ತಮ ಸಂಸ್ಕೃತಿಯ ಹಿನ್ನೆಲೆ ಹೊಂದಿರುವ ಹೆಗಡೆ ವಂಶಕ್ಕೆ ಕಳಂಕವಾಗಿ ಪರಿಣಮಿಸಿರುವುದು ದುರಂತ’ ಎಂದು ಹೇಳಿದರು.

ಸಾಹಿತಿ ಡಾ.ಕಾಳೇಗೌಡ ನಾಗವಾರ, ರಾಜ್ಯ ರೈತ ಸಂಘದ ಹೊಸಕೋಟೆ ಬಸವರಾಜು, ಕಾಂಗ್ರೆಸ್ ಮುಖಂಡರಾದ ಮಂಜುಳಾ ಮಾನಸ ಪಾಲ್ಗೊಂಡಿದ್ದರು.

‘ಹಬ್ಬಕ್ಕೆ ನಿರ್ಬಂಧ ಹೇರಲು ಇದು ಪಾಕಿಸ್ತಾನವೇ? ’

ಶಿವಮೊಗ್ಗ: ‘ರಾಜ್ಯ ಸರ್ಕಾರ ಈದ್ ಮಿಲಾದ್ ಸಂದರ್ಭದಲ್ಲಿ ಗಲ್ಲಿಗಲ್ಲಿಗಳಲ್ಲೂ ಮೆರವಣಿಗೆಗೆ ಅವಕಾಶ ನೀಡಿತ್ತು. ಆದರೆ ಹುಣಸೂರಿನಲ್ಲಿ ಹನುಮ ಜಯಂತಿಯಂದು ಮೆರವಣಿಗೆಗೆ ನಿರ್ಬಂಧ ಹೇರಿದ್ದು ಸರಿಯಲ್ಲ. ಹಿಂದೂಗಳ ಪವಿತ್ರ ಹಬ್ಬದಲ್ಲಿ ನಿರ್ಬಂಧ ಹೇರಲು ಇದೇನು ಪಾಕಿಸ್ತಾನವೇ?’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಸದ ಪ್ರತಾಪ ಸಿಂಹ ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಹನುಮ ಜಯಂತಿ ಕಾರ್ಯಕ್ರಮಕ್ಕೆ ಬರುತ್ತಿದ್ದ ಅವರನ್ನು ಅಡ್ಡಿಪಡಿಸಿ ಬ್ಯಾರಿಕೇಡ್ ಹಾಕಿರುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಅವರು ಪ್ರಶ್ನಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.