7

ಶೌಚಾಲಯಕ್ಕಾಗಿ ಪೆಟ್ಟು ತಿಂದ ಮಹಿಳೆ!

Published:
Updated:
ಶೌಚಾಲಯಕ್ಕಾಗಿ ಪೆಟ್ಟು ತಿಂದ ಮಹಿಳೆ!

ಹರ್ದಾ (ಮಧ್ಯಪ್ರದೇಶ): ಶೌಚಾಲಯ ಕಟ್ಟಿಸಿಕೊಡುವಂತೆ ಒತ್ತಾಯಿಸಿದ್ದಕ್ಕಾಗಿ ಗಂಡನ ಮನೆಯವರಿಂದ ಪೆಟ್ಟು ತಿಂದರೂ ಛಲ ಬಿಡದ ಮಹಿಳೆಯ ಯತ್ನ ಇದೀಗ ಫಲಿಸಿದೆ. 17 ಜನರಿದ್ದ ಈ ಅವಿಭಕ್ತ ಕುಟುಂಬದಲ್ಲಿ, ಇದ್ದ ಒಂದೇ ಶೌಚಾಲಯದ ಜೊತೆಗೆ ಈಗ ಮತ್ತೊಂದು ಶೌಚಾಲಯ ಸಿದ್ಧಗೊಂಡಿದೆ.

ಮನೆಯವರು ತನ್ನ ಮೇಲೆ ಹಲ್ಲೆ ನಡೆಸುತ್ತಿರುವುದಾಗಿ ಆರೋಪಿಸಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ವಿಚಾರಣೆ ನಡೆಸಿದಾಗ, ಒಂದೇ ಶೌಚಾಲಯವನ್ನು ಮನೆಯವರೆಲ್ಲರೂ ಬಳಸುತ್ತಿದ್ದುದರಿಂದ ಉಂಟಾಗುತ್ತಿದ್ದ ತೊಂದರೆಯಿಂದ ರೋಸಿ ಹೋಗಿದ್ದ ಮಹಿಳೆ, ಮತ್ತೊಂದು ಶೌಚಾಲಯಕ್ಕೆ ಪಟ್ಟು ಹಿಡಿದಿದ್ದುದೇ ಹಲ್ಲೆಗೆ ಕಾರಣ ಎಂಬುದು ತಿಳಿದುಬಂತು.

ಎರಡು ವರ್ಷಗಳ ಹಿಂದೆ ಮದುವೆಯಾಗಿ ಬಂದಿದ್ದ ಈಕೆಯ ಬೇಡಿಕೆಗೆ ಮನೆಯವರು ಕಿವುಡಾಗಿದ್ದರು. ಇದನ್ನು ಅರಿತ ಪೊಲೀಸರು, ಕುಟುಂಬದವರ ಮನವೊಲಿಸಿ ಮತ್ತೊಂದು ಶೌಚಾಲಯ ನಿರ್ಮಾಣಕ್ಕೆ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು.

ಇಷ್ಟೇ ಅಲ್ಲದೆ, ಅದಕ್ಕಾಗಿ ಪೊಲೀಸರು ಧನಸಹಾಯವನ್ನೂ ಮಾಡಿದ್ದು, ನೂತನ ಶೌಚಾಲಯವನ್ನು ಬುಧವಾರ ಕುಟುಂಬದ ವಶಕ್ಕೆ ನೀಡಲಾಗಿದೆ. ಈ ಕುರಿತು ಮಹಿಳೆ ಸಂತಸ ವ್ಯಕ್ತಪಡಿಸಿದ್ದಾರೆ.

‘ಸಮಸ್ಯೆ ಬಗೆಹರಿದಿದ್ದಕ್ಕೆ ನಮಗೆ ಸಂತೋಷವಾಗಿದೆ. ಹೊಸ ಶೌಚಾಲಯ ನಮ್ಮ ಕುಟುಂಬವನ್ನು ಕಾಪಾಡಿದೆ’ ಎಂದು ಆಕೆಯ ಅತ್ತೆ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry