ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಮುನಾ ನದಿ ದಡಕ್ಕಾದ ಹಾನಿಗೆ ಆರ್ಟ್ ಆಫ್ ಲಿವಿಂಗ್ ಹೊಣೆ'

ವಿಶ್ವ ಸಂಸ್ಕೃತಿ ಉತ್ಸವ ಪರಿಣಾಮ
Last Updated 7 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಯಮುನಾ ನದಿಯ ದಂಡೆಗೆ ಆದ ಹಾನಿಗೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯೇ (ಎಓಎಲ್) ಹೊಣೆ ಎಂದು ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ಗುರುವಾರ ತೀರ್ಪು ನೀಡಿದೆ.

2016ರ ಮಾರ್ಚ್‌ 11ರಿಂದ 13ರವರೆಗೆ ಎಓಎಲ್‌, ಯಮುನಾ ನದಿ ದಂಡೆಯ ಮೇಲೆ ವಿಶ್ವ ಸಂಸ್ಕೃತಿ ಉತ್ಸವವನ್ನು ಆಯೋಜಿಸಿತ್ತು.

‘ತಜ್ಞರು ಸಲ್ಲಿಸಿದ ವರದಿಯ ಆಧಾರದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯನ್ನು ಹೊಣೆ ಮಾಡಲಾಗಿದೆ’ ಎಂದು ಎನ್‌ಜಿಟಿ ಮುಖ್ಯ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಅವರ ನೇತೃತ್ವದ ಪೀಠ ಹೇಳಿದೆ.

ಆದರೆ, ಹೊಸದಾಗಿ ಯಾವುದೇ ಪರಿಹಾರ ಧನ ಸಲ್ಲಿಸುವಂತೆ ಪೀಠ ಆದೇಶಿಸಿಲ್ಲ. ಬದಲಾಗಿ, ಸಂಸ್ಥೆಯು ಮೊದಲೇ ಪಾವತಿಸಿದ್ದ ₹ 5 ಕೋಟಿಯನ್ನೇ ನದಿ ದಂಡೆಯ ಪುನಶ್ಚೇತನಕ್ಕೆ ಬಳಸಲಾಗುತ್ತದೆ ಎಂದು ಹೇಳಿದೆ.

ನದಿ ದಂಡೆಗೆ ಉಂಟಾದ ಹಾನಿಯನ್ನು ನಿರ್ಣಯಿಸಿ, ತಜ್ಞರ ಸಮಿತಿಯ ಶಿಫಾರಸಿನ ಪ್ರಕಾರ ಪುನಶ್ಚೇತನಕ್ಕೆ ತಗಲುವ ವೆಚ್ಚವನ್ನು ಅಂದಾಜು ಮಾಡುವಂತೆ ನ್ಯಾಯಮೂರ್ತಿ ಜವಾದ್ ರಹೀಮ್ ಹಾಗೂ ಬಿ.ಎಸ್. ಸಜ್ವಾ‌ನ್ ಅವರೂ ಇದ್ದ ಪೀಠವು ದೆಹಲಿ ಅಭಿವೃದ್ಧಿ ‍ಪ್ರಾಧಿಕಾರಕ್ಕೆ (ಡಿಡಿಎ) ನಿರ್ದೇಶಿಸಿದೆ.

‘ತನ್ನ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ’ ಎಂದು ಪೀಠವು ಡಿಡಿಎಗೂ ಛೀಮಾರಿ ಹಾಕಿದೆ.ಆದರೆ ಅದಕ್ಕೆ ಯಾವುದೇದಂಡ ವಿಧಿಸಿಲ್ಲ.

‘ಒಂದು ವೇಳೆಪುನಶ್ಚೇತನದ ವೆಚ್ಚ ₹ 5 ಕೋಟಿಗಿಂತ ಹೆಚ್ಚಾದರೆ ಅದನ್ನು ಸಂಸ್ಥೆಯಿಂದಲೇ ಸಂಗ್ರಹಿಸಲಾಗುತ್ತದೆ.

₹5ಕೋಟಿಗಿಂತ ಕಡಿಮೆ ಖರ್ಚಾದರೆ ಉಳಿದ ಹಣವನ್ನು ಅದಕ್ಕೆ ಮರಳಿಸಲಾಗುತ್ತದೆ’ ಎಂದು ಪೀಠ ಹೇಳಿದೆ. ‘ನದಿ ದಂಡೆ ಪುನಶ್ಚೇತನಕ್ಕೆ ₹ 42.02 ಕೋಟಿ ಬೇಕಾಗುತ್ತದೆ’ ಎಂದು ತಜ್ಞರ ಸಮಿತಿ ತಿಳಿಸಿದೆ.

‘ಪರಿಸರಕ್ಕೆ ಹಾನಿ ಮಾಡುವ ಉಂಟಾಗುವ ಯಾವುದೇ ಚಟುವಟಿಕೆಗಳಿಗೆ ಯಮುನಾ ನದಿ ದಂಡೆಬಳಕೆ ಆಗಬಾರದು’ ಎಂದು ಪೀಠ ಹೇಳಿದೆ.

ಆದರೆ, ಸಂಸ್ಕೃತಿ ಉತ್ಸವ ಆಯೋಜನೆಗೆ ಎಓಎಲ್‌ಗೆ ಅಧಿಕಾರ ಇತ್ತೇ ಎಂಬುದನ್ನು ನಿರ್ಧರಿಸಲು ನಿರಾಕರಿಸಿರುವ ಪೀಠ, ಅದು ತನ್ನ ಅಧಿಕಾರ ವ್ಯಾಪ್ತಿ ಮೀರಿದ್ದು ಎಂದಿದೆ.

ನಿರಾಸೆ ತಂದಿದೆ: ‘ಹಸಿರು ಪೀಠದ ತೀರ್ಪು ನಮಗೆ ನಿರಾಸೆ ತಂದಿದೆ. ನಮ್ಮ ಅರಿಕೆಯನ್ನು ಪರಿಗಣಿಸಿಲ್ಲ. ನಾವು ಸುಪ್ರೀಂ ಕೋರ್ಟ್ ಮೊರೆ
ಹೋಗುತ್ತೇವೆ’ ಎಂದು ಎಓಎಲ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT