ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್ ನಿರ್ಧಾರ ‘ಬೇಜವಾಬ್ದಾರಿ’: ಸೌದಿ ಟೀಕೆ

ಇಸ್ರೇಲ್‌ನ ರಾಜಧಾನಿ ಜೆರುಸಲೇಂ ಘೋಷಣೆ ಮರುಪರಿಶೀಲಿಸಲು ರಾಜ ಸಲ್ಮಾನ್ ಆಗ್ರಹ
Last Updated 16 ಜನವರಿ 2018, 11:23 IST
ಅಕ್ಷರ ಗಾತ್ರ

ರಿಯಾದ್: ಜೆರುಸಲೇಂ ಅನ್ನು ಇಸ್ರೇಲ್‌ನ ರಾಜಧಾನಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ರಾತ್ರಿ ಅಧಿಕೃತವಾಗಿ ಘೋಷಿಸಿರುವುದನ್ನು ಹಲವು ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ.

ವಿವಾದಾತ್ಮಕ ಪಟ್ಟಣದ ಕುರಿತು ಅಮೆರಿಕ ಕಳೆದ ಏಳು ದಶಕಗಳಿಂದ ಹೊಂದಿದ್ದ ಅನಿಶ್ಚಿತ ನಿಲುವನ್ನು ಟ್ರಂಪ್ ಈಗ ಅಂತ್ಯಗೊಳಿಸಿದ್ದಾರೆ. ಈ ನಿರ್ಧಾರದಿಂದ ಮಧ್ಯಪ್ರಾಚ್ಯದಲ್ಲಿ ಹೊಸದಾಗಿ ರಕ್ತಪಾತ ಉಂಟಾಗುವ ಸಂಭವ ಎದುರಾಗಿದೆ.

ಟ್ರಂಪ್ ನಿರ್ಧಾರ ‘ಅನ್ಯಾಯ ಹಾಗೂ ಬೇಜವಾಬ್ದಾರಿಯುತವಾದದ್ದು’ ಎಂದು ಸೌದಿ ಅರೇಬಿಯಾ ಟೀಕಿಸಿದೆ.‌

‘ಈ ನಿರ್ಧಾರಕ್ಕೆ ತೀವ್ರ ವಿರೋಧ ಇದೆ’ ಎನ್ನುವ ಸೌದಿ ರಾಜ ಸಲ್ಮಾನ್ ಹೇಳಿಕೆಯನ್ನು ಸರ್ಕಾರಿ ಪತ್ರಿಕೆ ವರದಿ ಮಾಡಿದೆ.

‘ಇದು ಪ್ಯಾಲೆಸ್ಟೈನ್‌ ಜನರ ಐತಿಹಾಸಿಕ ಹಾಗೂ ಕಾಯಂ ಹಕ್ಕುಗಳಿಗೆ ವಿರುದ್ಧವಾದುದು. ಇದನ್ನು ಮರುಪರಿಶೀಲಿಸಬೇಕು. ಇಂತಹ ನಿರ್ಧಾರದಿಂದ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು ಎಂದು ಈಗಾಗಲೇ ಎಚ್ಚರಿಕೆ ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಅಮೆರಿಕದ ಈ ಕ್ರಮದಿಂದ ಶಾಂತಿ ಸ್ಥಾಪನೆ ಯತ್ನಕ್ಕೆ ಹಿನ್ನಡೆ ಆದಂತೆ ಆಗಿದೆ. ಇದು, ಜೆರುಸಲೇಂ ಕುರಿತ ಅಮೆರಿಕದ ಐತಿಹಾಸಿಕ ತಟಸ್ಥ ಧೋರಣೆಯ ಉಲ್ಲಂಘನೆ’ ಎಂದು ಅವರು ತಿಳಿಸಿದ್ದಾರೆ.

(ಬೆತ್ಲಹೆಮ್‌ನಲ್ಲಿ ಇರುವ ಇಸ್ರೇಲ್‌ನ ವಿವಾದಾತ್ಮಕ ಗಡಿಗೋಡೆ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವಿರೂಪಗೊಳಿಸಿ ಚಿತ್ರಿ ಬಿಡಿಸಲಾಗಿದೆ. ಅಲ್ಲದೆ ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್‌ ವಿರುದ್ಧ ಬರೆದಿರುವ ಘೋಷಣೆಗಳನ್ನು ಪ್ಯಾಲೆಸ್ಟೈನ್‌ ಮಕ್ಕಳು ವೀಕ್ಷಿಸಿದರು –ಎಎಫ್‌ಪಿ ಚಿತ್ರ)

ಟ್ರಂಪ್ ಘೋಷಣೆಯಿಂದಾಗಿ ಸೌದಿ ಅರೇಬಿಯಾ ಹಾಗೂ ಅಮೆರಿಕದ ನಡುವೆ ಇರುವ ಬಾಂಧವ್ಯದ ಮೇಲೆ ಪರಿಣಾಮ ಬೀರುವ ಸಂಭವ ಇದೆ. ಅಮೆರಿಕ–ಸೌದಿ ಅರೇಬಿಯಾ ದೀರ್ಘ ಕಾಲದಿಂದ ಮೈತ್ರಿ ಹೊಂದಿವೆ. ಟ್ರಂಪ್ ಅವರು ಅಧ್ಯಕ್ಷರಾದ ಬಳಿಕ ತಮ್ಮ ಮೊದಲ ಸಾಗರೋತ್ತರ ಭೇಟಿಗೆ ಸೌದಿ ಅರೇಬಿಯಾವನ್ನು ಆಯ್ಕೆ ಮಾಡಿಕೊಂಡಿದ್ದರು. ಇಸ್ರೇಲ್ ಹಾಗೂ ಸೌದಿ ಅರೇಬಿಯಾ ಅಧಿಕೃತವಾಗಿ ರಾಜತಾಂತ್ರಿಕ ಸಂಬಂಧ ಹೊಂದಿಲ್ಲ.

ರಷ್ಯಾ ಕಳವಳ ವ್ಯಕ್ತ: ಅಮೆರಿಕದ ನಿರ್ಣಯ ತೀವ್ರ ಕಳವಳ ಉಂಟುಮಾಡುವಂತಹದ್ದು ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆಗೊಳಿಸಿದೆ.

ಪಾಕಿಸ್ತಾನ ಖಂಡನೆ: ಮಧ್ಯ ಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಟ್ರಂಪ್ ನಿರ್ಣಯ ತೀವ್ರ ಹಿನ್ನಡೆ ಉಂಟು ಮಾಡಿದೆ ಎಂದು ಪಾಕಿಸ್ತಾನ ಖಂಡಿಸಿದೆ.

ಸ್ಥಳಾಂತರ ಪ್ರಕ್ರಿಯೆ ಆರಂಭ: ಟೆಲ್ಅವಿವ್‌ನಿಂದ ಜೆರುಸಲೇಂಗೆ ಅಮೆರಿಕದ ರಾಯಭಾರ ಕಚೇರಿಯನ್ನು ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಅಮೆರಿಕದ ಕಾರ್ಯದರ್ಶಿ ಟಿಲ್ಲರ್‌ಸನ್ ಹೇಳಿದ್ದಾರೆ.

ಜೆರುಸಲೇಂ ಪಟ್ಟಣವನ್ನು ಇಸ್ರೇಲ್‌ ರಾಜಧಾನಿಯಾಗಿ ಟ್ರಂಪ್ ಘೋಷಿಸಿದ ಬಳಿಕ ಈ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಜೆರುಸಲೇಂ ಕುರಿತು ಇರುವ ಅಂತರರಾಷ್ಟ್ರೀಯ ನೀತಿ ಬದಲಿಸಲು ಟ್ರಂಪ್‌ ಮುಂದಾಗಿದ್ದಾರೆ ಎಂದರು.

**

ಜೆರುಸಲೇಂ ಘೋಷಣೆ ‘ಐತಿಹಾಸಿಕ ನಿರ್ಧಾರ’

ಜೆರುಸಲೇಂ: ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿಯಾಗಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆ ‘ಐತಿಹಾಸಿಕ ಮತ್ತು ಸ್ಥೈರ್ಯದ ನಿರ್ಧಾರ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ.

ಟ್ರಂಪ್ ಅವರ ಈ ನಿರ್ಧಾರ ‘ಶಾಂತಿ ಸ್ಥಾಪನೆ ಯತ್ನ ಹೆಚ್ಚಿಸಲು’ ಸಹಾಯವಾಗುತ್ತದೆ. ‘ಪುರಾತನವಾದ ಆದರೆ ಅಚಲವಾದ ಸತ್ಯಕ್ಕೆ’ ಇರುವ ಟ್ರಂಪ್ ಅವರ ಬದ್ಧತೆಯನ್ನು ಈ ನಿರ್ಧಾರ ತೋರಿಸುತ್ತದೆ ಎಂದು ಹೇಳಿದ್ದಾರೆ.

ಮೂರು ಶತಮಾನಗಳಿಂದ ಜೆರುಸಲೇಂ ನಮ್ಮ ಭರವಸೆ, ಕನಸು, ಪ್ರಾರ್ಥನೆಗಳ ಕೇಂದ್ರಬಿಂದುವಾಗಿದೆ. ಇದು 3 ಸಾವಿರ ವರ್ಷಗಳಿಂದ ಯಹೂದಿಗಳ ರಾಜಧಾನಿ ಆಗಿದೆ. ನಮ್ಮ ದೇಗುಲಗಳು ಇದ್ದುದು, ರಾಜರು ಆಳ್ವಿಕೆ ಮಾಡಿದ್ದು, ಧರ್ಮಗುರುಗಳು ಬೋಧಿಸಿದ್ದು ಇಲ್ಲಿ’ ಎಂದು ತಿಳಿಸಿದ್ದಾರೆ.

**

ತೆರೇಸಾ ಮೇ ಅಸಮ್ಮತಿ

ಲಂಡನ್: ಟ್ರಂಪ್ ಅವರ ನಿರ್ಧಾರ ಇಸ್ರೇಲ್‌ನಲ್ಲಿನ ಶಾಂತಿಸ್ಥಾಪನೆ ಪ್ರಕ್ರಿಯೆಗೆ ‘ಸಹಾಯಕವಾಗಿಲ್ಲ’ ಎಂದು ಬ್ರಿಟನ್ ಪ್ರಧಾನಿ ತೆರೇಸಾ ಮೇ ಹೇಳಿದ್ದು, ಈ ನಿರ್ಧಾರಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

‘ಅಮೆರಿಕದ ರಾಯಭಾರ ಕಚೇರಿಯನ್ನು ಜೆರುಸಲೇಂಗೆ ಸ್ಥಳಾಂತರಿಸುವ ಹಾಗೂ ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿಯಾಗಿ ಗುರುತಿಸುವ ಕ್ರಮವನ್ನು ಒಪ್ಪುವುದಿಲ್ಲ’ ಎಂದು ಅವರು ಹೇಳಿಕೆ ನೀಡಿದ್ದಾರೆ.

**

ಪ್ಯಾಲೆಸ್ಟೈನ್‌ ಕುರಿತ ಭಾರತದ ನಿಲುವು ಸ್ವತಂತ್ರ ಮತ್ತು ಸ್ಥಿರವಾದುದು. ಮೂರನೇ ರಾಷ್ಟ್ರದಿಂದ ಅದು ನಿರ್ಧಾರವಾಗುವುದಿಲ್ಲ.

–ರವೀಶ್ ಕುಮಾರ್, ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ

**

ಟ್ರಂಪ್ ನಿರ್ಧಾರದಿಂದ ಪ್ರತಿಕೂಲ ಪರಿಣಾಮ ಉಂಟಾಗಬಹುದು ಹಾಗೂ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು.

–ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ, ಕತಾರ್ ರಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT