6

ಜಪಾನ್‌ ನಿಯೋಗದೊಂದಿಗೆ ಚರ್ಚೆ

Published:
Updated:

ಬೆಂಗಳೂರು: ದಶಕದಿಂದ ನನೆಗುದಿಗೆ ಬಿದ್ದಿರುವ ನಗರದ 65 ಕಿ.ಮೀ ಉದ್ದದ ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಯೋಜನೆ ಅನುಷ್ಠಾನದ ಸಂಬಂಧ ಜಪಾನ್‌ ನಿಯೋಗದ ಜತೆಗೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಮತ್ತೊಂದು ಸಭೆ ನಡೆಸಿದ್ದಾರೆ.

ಜಪಾನ್‌ ರಾಯಭಾರಿ ಕೆಂಜಿ ಹಿರಮತ್ಸು ನೇತೃತ್ವದ ನಿಯೋಗದೊಂ

ದಿಗೆ ನಡೆದ ಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಜಲಮಂಡಳಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

‘ಈ ಯೋಜನೆಯ ಭೂಸ್ವಾಧೀನಕ್ಕೆ ಕೇಂದ್ರ ನೆರವು ನೀಡುವುದಾಗಿ ಪ್ರಕಟಿಸಿತ್ತು. ಆದರೆ, ಈವರೆಗೂ ನೆರವು ಸಿಕ್ಕಿಲ್ಲ. ಈ ಬಗ್ಗೆ ನಿಯೋಗ ಅಚ್ಚರಿ ವ್ಯಕ್ತಪಡಿಸಿತು’ ಎಂದು ಮೂಲಗಳು ತಿಳಿಸಿವೆ.

100 ಮೀಟರ್‌ ಅಗಲದ ಪಿಆರ್‌ಆರ್‌ ನಿರ್ಮಾಣಕ್ಕೆ 2006ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಭೂಸ್ವಾಧೀನ ವಿಚಾರದಲ್ಲಿ ಗೊಂದಲ ಇದ್ದುದರಿಂದ ಈ ಯೋಜನೆ ಅನುಷ್ಠಾನಗೊಂಡಿರಲಿಲ್ಲ.

ರೈತರಿಗೆ ನಗದು ರೂಪದಲ್ಲಿ ಪರಿಹಾರ ನೀಡುವುದರಿಂದ ಆಗುವ ಆರ್ಥಿಕ ಹೊರೆ ಕಡಿಮೆ ಮಾಡುವ ಸಲುವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಯೋಜನೆಯಲ್ಲಿ ಮಾರ್ಪಾಡು ಮಾಡಿತ್ತು. 100 ಮೀಟರ್‌ ಅಗಲದ ರಸ್ತೆ ನಿರ್ಮಿಸುವ ಬದಲು 75 ಮೀಟರ್‌ ಅಗಲದಲ್ಲಿ ರಸ್ತೆ ನಿರ್ಮಿಸಲು ಹಾಗೂ ಉಳಿದ 25 ಮೀಟರ್‌ ಅಗಲದ ಜಾಗವನ್ನು ಅಭಿವೃದ್ಧಿಪಡಿಸಿ, ಜಾಗ ಕಳೆದುಕೊಂಡ ರೈತರಿಗೆ ಮರಳಿಸಲು ಬಿಡಿಎ ಮುಂದಾಗಿತ್ತು.

ಈ ಪರಿಷ್ಕೃತ ಯೋಜನೆಗೆ ಸಚಿವ ಸಂಪುಟ ಕಳೆದ ವರ್ಷ ಜೂನ್‌ನಲ್ಲಿ ತಾತ್ವಿಕ ಒಪ್ಪಿಗೆ ನೀಡಿತ್ತು. ಆದರೆ, ಈ ಪ್ರಸ್ತಾವಕ್ಕೆ ರೈತರಿಂದ ವಿರೋಧ ವ್ಯಕ್ತವಾಗಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ಕಳೆದ ವರ್ಷ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಷ್ಠಾನ ಮಾಡಬೇಕು ಎಂದು ಮನವಿ ಸಲ್ಲಿಸಿದ್ದರು. ಸಚಿವರ ಸೂಚನೆಯ ಮೇರೆಗೆ ಪ್ರಾಧಿಕಾರದ ಅಧಿಕಾರಿಗಳು ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದಾರೆ.

ಈ ಯೋಜನೆಗೆ ಅಧಿಸೂಚನೆ ಹೊರಡಿಸುವಾಗ ಅಂದಾಜು ವೆಚ್ಚ ₹ 500 ಕೋಟಿ ಇತ್ತು. 2013ರಲ್ಲಿ ಇದು ₹ 5,000 ಕೋಟಿಗೆ ಹೆಚ್ಚಿತ್ತು. ಪರಿಷ್ಕೃತ ಅಂದಾಜಿನ ಪ್ರಕಾರ ಈ ಯೋಜನೆಗೆ ₹ 11,950 ಕೋಟಿ ಬೇಕಾಗುತ್ತದೆ. ಈ ಪೈಕಿ ರಸ್ತೆ ನಿರ್ಮಾಣಕ್ಕೆ ₹ 3,850 ಕೋಟಿ, ಭೂಸ್ವಾಧೀನಕ್ಕೆ ₹ 8,000 ಕೋಟಿ ವೆಚ್ಚವಾಗಲಿದೆ. ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ರಸ್ತೆ ನಿರ್ಮಾಣಕ್ಕೆ ₹ 3,850 ಕೋಟಿ ಸಾಲ ನೀಡಲು ಆಸಕ್ತಿ ತೋರಿದೆ.

ಈ ಯೋಜನೆಯನ್ನು 2031ರ ಪರಿಷ್ಕೃತ ಮಹಾಯೋಜನೆಯ ಕರಡಿನಲ್ಲಿ ಬಿಡಿಎ ಸೇರಿಸಿದೆ. ಈ ಹಿಂದಿನ ಎರಡು ಮಹಾಯೋಜನೆಗಳಲ್ಲಿ ಪಿಆರ್‌ಆರ್‌ ಸೇರಿದ್ದರೂ ಅನುಷ್ಠಾನ ಆಗಿರಲಿಲ್ಲ.

ಕಾರಿಡಾರ್‌ ಬಗ್ಗೆಯೂ ಚರ್ಚೆ: ನಗರದಲ್ಲಿ ಅನುಷ್ಠಾನ ಮಾಡಲು ಉದ್ದೇಶಿಸಿರುವ ಎತ್ತರಿಸಿದ ಉತ್ತರ– ದಕ್ಷಿಣ ಕಾರಿಡಾರ್‌ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಈ ಯೋಜನೆಗಾಗಿ ಜೈಕಾದಿಂದ ಸಾಲ ಪಡೆಯಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

ನಗರಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಕಾವೇರಿ ಐದನೇ ಹಂತದ ಯೋಜನೆಯ ಬಗ್ಗೆ ಚರ್ಚಿಸಲಾಯಿತು.

ಪೆರಿಫೆರಲ್‌ ವರ್ತುಲ ರಸ್ತೆಯನ್ನು ಸಂಧಿಸುವ ಪ್ರಮುಖ ರಸ್ತೆಗಳು

ತುಮಕೂರು ರಸ್ತೆ , ಬಳ್ಳಾರಿ ರಸ್ತೆ, ಹಳೆ ಮದ್ರಾಸ್‌ ರಸ್ತೆ, ಹೊಸೂರು ರಸ್ತೆ , ದೊಡ್ಡಬಳ್ಳಾಪುರ ರಸ್ತೆ, ಹೆಣ್ಣೂರು ರಸ್ತೆ, ಹೆಸರಘಟ್ಟ ರಸ್ತೆ, ಹೊಸಕೋಟೆ– ಆನೇಕಲ್‌ ರಸ್ತೆ, ವೈಟ್‌ಫೀಲ್ಡ್‌ ರಸ್ತೆ, ಸರ್ಜಾಪುರ ರಸ್ತೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry