ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಘೋಷಿತ ತುರ್ತುಪರಿಸ್ಥಿತಿ ಜಾರಿ: ಮರುಳಸಿದ್ದಪ್ಪ

Last Updated 7 ಡಿಸೆಂಬರ್ 2017, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ಈಗ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿದೆ. ಘೋಷಿತ ತುರ್ತುಪರಿಸ್ಥಿತಿ ಇದ್ದಾಗ ಕಾನೂನಿನ ಚೌಕಟ್ಟಿನಲ್ಲಿಯೇ ಶಿಕ್ಷೆಯಾಗುತ್ತಿತ್ತು. ಆದರೆ, ಈಗ ಕೊಲೆ ಶಿಕ್ಷೆಯ ಸ್ವರೂಪವಾಗಿದೆ’ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರುಳಸಿದ್ದಪ್ಪ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಅಕಾಡೆಮಿಯ ಐದು ಯೋಜನೆಗಳ ಪ್ರಾರಂಭೋತ್ಸವ’ದಲ್ಲಿ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಹಣಬಲ, ತೋಳ್ಬಲ ಮತ್ತು ಮಾಧ್ಯಮ ಬಲ ಹೊಂದಿದ್ದವರಿಗೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯವಿರುತ್ತದೆ. ನಮ್ಮಂತಹ ಬಡಪಾಯಿ ಸಾಹಿತಿಗಳು ಏನಾದರೂ ಮಾತನಾಡಿದರೆ ದೇಶದ್ರೋಹಿಗಳಾಗುತ್ತೇವೆ’ ಎಂದು ಹೇಳಿದರು.

‘ಸಾಹಿತ್ಯ ಸಮ್ಮೇಳನದಲ್ಲಿ ಚಂಪಾ ಅವರು ರಾಜಕೀಯ ಭಾಷಣ ಮಾಡಿದರು ಎಂದು ಸಾಕಷ್ಟು ಚರ್ಚೆಗಳು ನಡೆದವು. ಸಮ್ಮೇಳನದಲ್ಲಿ ಆ ರೀತಿ ಭಾಷಣ ಸರಿಯಲ್ಲ ಎನ್ನುವುದನ್ನು ಒಪ್ಪುತ್ತೇನೆ. ನಾನೂ ನೇರವಾಗಿ ಕಾಂಗ್ರೆಸ್‌ ಪರ ಪ್ರಚಾರ ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ. ಅದನ್ನು ಹೇಳುವುದಕ್ಕೆ ಯಾವುದೇ ಅಂಜಿಕೆ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಚಂಪಾ ಅವರ ಹೇಳಿಕೆ ವ್ಯಾಪಕ ಟೀಕೆಗೆ ಒಳಗಾಯಿತು. ಆದರೆ, ಅದೇ ವೇಳೆ ಉಡುಪಿಯಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ಯತಿಗಳು ಎಲ್ಲರ ಮನೆಗಳಿಗೆ ಸರ್ಕಾರ ಕಡ್ಡಾಯವಾಗಿ ಬಂದೂಕು ಒದಗಿಸಬೇಕು ಎಂಬ ಕ್ರೌರ್ಯ ತುಂಬಿದ ಮಾತುಗಳನ್ನು ಪ್ರತಿಪಾದಿಸಿದರು. ಅದಕ್ಕೆ ಯಾವುದೇ ವಿರೋಧಗಳು ಬರಲಿಲ್ಲ. ಇದು ಇಂದಿನ ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ, ‘ಸಾಂಸ್ಕೃತಿಕ ಲೋಕ ಪ್ರವೇಶಿಸಿರುವ ಹುಸಿ ಸಾಂಸ್ಕೃತಿಕ ವೀರರು, ಹುಸಿ ಕ್ರಾಂತಿ ವೀರರು ಸಾಹಿತ್ಯದ ಅನನ್ಯತೆಗೆ ಭಂಗ ತರುತ್ತಿದ್ದಾರೆ. ಇವರಿಂದ ಸಾಹಿತ್ಯ ಲೋಕದಲ್ಲಿ ಪುಡಾರಿ ಭಾಷೆ ಸೃಷ್ಟಿಯಾಗಿದೆ. ಸಾಹಿತಿಗಳ ಭಾಷೆ ಬೀದಿ ರಂಪ ಆಗಬಾರದು’ ಎಂದು ಕಿವಿಮಾತು ಹೇಳಿದರು.

ಕವಿ ಎಲ್‌. ಹನುಮಂತಯ್ಯ, ‘ರಾಮಮಂದಿರ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ. ತೀರ್ಪು ಬರುವ ಮೊದಲೇ ರಾಮಮಂದಿರ ಕಟ್ಟೇ ಕಟ್ಟುತ್ತೇವೆ ಎಂದು ಹೇಳುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಎಲ್ಲರಿಗೂ ಧರ್ಮ ಬೋಧಿಸುವವರು ನ್ಯಾಯಾಲಯಕ್ಕೆ ಕಿಂಚಿತ್ತು ಗೌರವ ತೋರದೆ ಹೇಳಿಕೆ ನೀಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು, ‘ಕೋಮುವಾದಿಗಳಿಗಿಂತ ವಿಚಾರವಾದಿಗಳ ಸಂಖ್ಯೆ ಹೆಚ್ಚಿದೆ. ಆದರೆ, ಸಾಕಷ್ಟು ಪ್ರಗತಿಪರರು ಮಾತನಾಡದೆ ಮೌನವಾಗಿರುವುದರಿಂದ ನಾವು ಅಲ್ಪಸಂಖ್ಯಾತರಂತೆ ಕಾಣುತ್ತಿದ್ದೇವೆ’ ಎಂದರು.

‘ಸಾಹಿತ್ಯ ಅಕಾಡೆಮಿ ಉನ್ನತೀಕರಿಸಿ’

‘ಸಾಹಿತ್ಯದ ಭಾಗವಾಗಿರುವ ನಾಟಕ, ಜಾನಪದ, ಶಿಲ್ಪಕಲೆ, ಯಕ್ಷಗಾನ...ಹೀಗೆ ಪ್ರಾದೇಶಿಕ ಅಕಾಡೆಮಿಗಳಿಗೆ ನೀಡಿರುವ ಪ್ರಾಮುಖ್ಯತೆಯಷ್ಟೇ ಎಲ್ಲವನ್ನೂ ಪ್ರತಿನಿಧಿಸುವ ಸಾಹಿತ್ಯ ಅಕಾಡೆಮಿಗೂ ನೀಡಲಾಗುತ್ತಿದೆ. ಇದು ಸರಿಯಲ್ಲ. ಸಾಹಿತ್ಯ ಅಕಾಡೆಮಿಯ ಉನ್ನತೀಕರಣ ಸ್ವರೂಪದ ಬಗ್ಗೆ ನಿರ್ಧಾರ ಆಗಬೇಕು’ ಎಂದು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅರವಿಂದ ಮಾಲಗತ್ತಿ ಒತ್ತಾಯಿಸಿದರು.

‘ಇಲಾಖೆಯಿಂದ ಬರುತ್ತಿದ್ದ ಯೋಜನೇತರ ಅನುದಾನವನ್ನು ನಿಲ್ಲಿಸಲಾಗಿದೆ. ಇದರಿಂದ ಯೋಜನೆಗಳ ಅನುಷ್ಠಾನಕ್ಕೆ ತೊಡಕಾಗುತ್ತದೆ. ಯೋಜನೇತರ ಅನುದಾನದ ಹಣವನ್ನು ಯೋಜನಾ ಅನುದಾನದಲ್ಲಿಯೇ ನೀಡಬೇಕು’ ಎಂದು ಕೋರಿದರು.

* ಅಭಿವ್ಯಕ್ತಿ ಸ್ವಾಂತ್ರ್ಯದ ಮೇಲೆ ನಡೆಯುತ್ತಿರುವ ಹಲ್ಲೆ ವಿರೋಧಿಸದಿದ್ದರೆ ಅಪಾಯ ಖಂಡಿತ. ಹೀಗಿದ್ದರೂ ಹೆದರುವ ಅಗತ್ಯವಿಲ್ಲ

– ಉಮಾಶ್ರೀ, ಕನ್ನಡ ಮತ್ತು ಸಂಸ್ಕೃತಿ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT