ಸೋಮವಾರ, ಮಾರ್ಚ್ 8, 2021
22 °C
ಮೂರನೇ ಏಕದಿನ ಪಂದ್ಯದಲ್ಲಿ ಒಂಬತ್ತು ವಿಕೆಟ್‌ ಜಯ

ಭಾರತದ ‘ಕ್ಲೀನ್‌ ಸ್ವೀಪ್‌’ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ ‘ಕ್ಲೀನ್‌ ಸ್ವೀಪ್‌’ ಸಾಧನೆ

ಹುಬ್ಬಳ್ಳಿ: ಚುರುಕಿನ ಬೌಲಿಂಗ್‌ನಿಂದ ಬಾಂಗ್ಲಾದೇಶ ‘ಎ’ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಭಾರತ ‘ಎ’ ಮಹಿಳಾ ತಂಡ ಮೂರನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧಿಸಿತು.

ರಾಜನಗರದಲ್ಲಿರುವ ಕೆ.ಎಸ್‌.ಸಿ.ಎ. ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಪ್ರವಾಸಿ ತಂಡ ಮೊದಲು ಬ್ಯಾಟ್‌ ಮಾಡಿ 42 ಓವರ್‌ಗಳಲ್ಲಿ 116 ರನ್‌ ಗಳಿಸಿತ್ತು. ಆತಿಥೇಯರು 32.3 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿದರು.

ಬಾಂಗ್ಲಾ ತಂಡ 55 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಂತರ ಚೇತರಿಸಿಕೊಳ್ಳಲು ಭಾರತದ ಬೌಲರ್‌ಗಳು ಅವಕಾಶ ಕೊಡಲಿಲ್ಲ.

ಹಿಂದಿನ ಎರಡೂ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್‌ ಮಾಡಿದ್ದ ಆರಂಭಿಕ ಆಟಗಾರ್ತಿ ವಿ.ಆರ್‌. ವನಿತಾ ಅವರಿಗೆ ಕೊನೆಯ ಪಂದ್ಯದಿಂದ ವಿಶ್ರಾಂತಿ ನೀಡಲಾಗಿತ್ತು. ಈ ಪಂದ್ಯಕ್ಕೂ ಮೊದಲೇ ಸರಣಿ ಜಯಿಸಿದ್ದರಿಂದ ಹೊಸ ಆಟಗಾರ್ತಿಯರಿಗೆ ಅವಕಾಶ ಲಭಿಸಿತ್ತು.

ಮುಂಬೈನ 19 ವರ್ಷದ ಒಳಗಿನವರ ತಂಡದ ನಾಯಕಿ ಜೆ. ರೋಡ್ರಿಗಸ್‌ (ಔಟಾಗದೆ 56, 87ಎಸೆತ, 6 ಬೌಂಡರಿ, 1 ಸಿಕ್ಸರ್‌) ಅರ್ಧಶತಕ ಗಳಿಸಿ ಗೆಲುವು ಸುಲಭ ಮಾಡಿದರು. ಇವರು ಮೊದಲ ವಿಕೆಟ್ ಜೊತೆಯಾಟದಲ್ಲಿ ತಿರುಷ್‌ ಕಾಮಿನಿ ಜೊತೆ 58 ರನ್ ಗಳಿಸಿ ಗಟ್ಟಿ ಅಡಿಪಾಯ ಹಾಕಿಕೊಟ್ಟಿದ್ದರು. ಡಿ. 12ರಿಂದ ಉಭಯ ತಂಡಗಳು ಬೆಳಗಾವಿಯಲ್ಲಿ ಮೂರು ಪಂದ್ಯಗಳ ಟಿ–20 ಸರಣಿ ಆಡಲಿವೆ.

ಸಂಕ್ಷಿಪ್ತ ಸ್ಕೋರು

ಬಾಂಗ್ಲಾದೇಶ ‘ಎ’: 42 ಓವರ್‌ಗಳಲ್ಲಿ 116 (ಮುರ್ಷಿದಾ ಕಾತೂನ್‌ 21, ರುಮಾನ ಅಹ್ಮದ್ 42, ಸುಲ್ತಾನ್‌ ಜೂಟಿ 11, ಶೈಲಾ ಶರ್ಮಿನ್‌ 15; ಮಾನ್ಸಿ ಜೋಶಿ 6ಕ್ಕೆ1, ಕವಿತಾ 34ಕ್ಕೆ2, ಅನುಜಾ ಪಾಟೀಲ್‌ 11ಕ್ಕೆ2, ಪ್ರೀತಿ ಬೋಸ್‌ 16ಕ್ಕೆ2, ದೇವಿಕಾ ವೈದ್ಯ 19ಕ್ಕೆ1, ಶಿವಾಂಗಿ ರಾಜ್‌ 18ಕ್ಕೆ2).

ಭಾರತ ‘ಎ’: 32.3 ಓವರ್‌ಗಳಲ್ಲಿ 1 ವಿಕೆಟ್‌ಗೆ 118 (ತಿರುಷ್‌ ಕಾಮಿನಿ 26, ಜೆ. ರೋಡ್ರಿಗಸ್‌ ಔಟಾಗದೆ 56, ದೇವಿಕಾ ವೈದ್ಯ ಔಟಾಗದೆ 30; ಖಾದಿಜಾ ಕುಬ್ರಾ 22ಕ್ಕೆ1). ಫಲಿತಾಂಶ: ಭಾರತಕ್ಕೆ 9 ವಿಕೆಟ್‌ ಜಯ. 3–0ರಲ್ಲಿ ಸರಣಿ ಜಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.