7

ಸೈನಿಕರಂತೆ ದೇಶಪ್ರೇಮ ಬೆಳಸಿಕೊಳ್ಳಿ: ರಾಜ್ಯಪಾಲ

Published:
Updated:
ಸೈನಿಕರಂತೆ ದೇಶಪ್ರೇಮ ಬೆಳಸಿಕೊಳ್ಳಿ: ರಾಜ್ಯಪಾಲ

ಬೆಂಗಳೂರು: ‘ದೇಶಕ್ಕೆ ಬಲಿದಾನ ನೀಡುವ ಸೈನಿಕರಂತೆ ರಾಷ್ಟ್ರಪ್ರೇಮವನ್ನು ಪ್ರತಿಯೊಬ್ಬ ಪ್ರಜೆಯೂ ಬೆಳಸಿಕೊಳ್ಳಬೇಕು’ ಎಂದು ರಾಜ್ಯಪಾಲ ವಜುಭಾಯಿ ವಾಲ ಹೇಳಿದರು.

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ರಾಜಭವನದಲ್ಲಿ ಗುರುವಾರ ಏರ್ಪಡಿಸಿದ್ದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಎಲ್ಲರೂ ಹಣದ ಹಿಂದೆ ಬಿದ್ದಿರುವ ಕಾರಣ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಸೈನಿಕರಂತೆ ದೇಶ ಭಕ್ತಿಯನ್ನು ಎಲ್ಲರೂ ಬೆಳಸಿಕೊಂಡರೆ ಭ್ರಷ್ಟಾಚಾರವೂ ಕಡಿಮೆಯಾಗುತ್ತದೆ’ ಎಂದೂ ಅವರು ಅಭಿಪ್ರಾಯಪಟ್ಟರು.

‘ದೇಶ ರಕ್ಷಣೆಗಾಗಿ ಸೈನಿಕರು ಜೀವದ ಹಂಗು ತೊರೆದು ಗಡಿಯಲ್ಲಿ ನಿಂತಿದ್ದಾರೆ. ಸಂದರ್ಭ ಬಂದರೆ ಬಲಿದಾನವನ್ನೂ ನೀಡುತ್ತಿದ್ದಾರೆ. ಅವರ ಕುಟುಂಬಕ್ಕೆ ಸರ್ಕಾರ  ಹಣಕಾಸಿನ ನೆರವು ನೀಡಬಹುದೆ ಹೊರತು ಜೀವ ತಂದು ಕೊಡಲು ಸಾಧ್ಯವಿಲ್ಲ. ಹೀಗಾಗಿ ಸೈನಿಕರು ಮತ್ತು ಅವರ ಕುಟುಂಬವನ್ನು ಎಲ್ಲರೂ ಗೌರವಿಸಬೇಕು’ ಎಂದು ಹೇಳಿದರು.

‘ಸೈನಿಕನ ಪತ್ನಿಗೆ ತನ್ನ ಪತಿ ವಾಪಸ್ ಬರುವ ಖಚಿತ ಇರುವುದಿಲ್ಲ. ಅನಿಶ್ಚಿತತೆಯಲ್ಲೇ ಜೀವನ ನಡೆಸುವ ಸೈನಿಕರ ಪತ್ನಿಯರನ್ನು ಗೌರವದಿಂದ ಕಾಣುವುದು ಕೂಡ ಸಮಾಜದ ಜವಾಬ್ದಾರಿ. ಸೈನಿಕರ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದೇಟು ಹಾಕಬಾರದು ಎಂದೂ ಅವರು ಹೇಳಿದರು.

ಹುತಾತ್ಮ ಸೈನಿಕರಾದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಪತ್ನಿ ಸಂಗೀತಾ ಮತ್ತು ಸಿಪಾಯಿ ಡಿ.ಪಿ. ಸಂದೀಪ್‌ಕುಮಾರ್ ತಂದೆ ಪುಟ್ಟರಾಜು ಅವರಿಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ಅನುದಾನ ವಿತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry