ಮಂಗಳವಾರ, ಮಾರ್ಚ್ 9, 2021
31 °C

ಚಿಕ್ಕೋಡಿ: ತ್ಯಾಜ್ಯ ಸಮಸ್ಯೆಗೆ ‘ವಾಟ್ಸ್‌ಆ್ಯಪ್‌’ ಪರಿಹಾರ

ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ತ್ಯಾಜ್ಯ ಸಮಸ್ಯೆಗೆ ‘ವಾಟ್ಸ್‌ಆ್ಯಪ್‌’ ಪರಿಹಾರ

ಚಿಕ್ಕೋಡಿ: ನಿಮ್ಮ ಪರಿಸರದಲ್ಲಿ ತ್ಯಾಜ್ಯ ಸಂಗ್ರಹವಾಗಿದೆಯೇ?, ಚರಂಡಿ ತುಂಬಿ ದುರ್ನಾತ ಹರಡುತ್ತಿದೆಯೇ?, ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲವೇ?...

ಹಾಗಾದರೆ, ಇನ್ನು ಮುಂದೆ ಸಮಸ್ಯೆ ಪರಿಹಾರಕ್ಕಾಗಿ ಪುರಸಭೆಗೆ ಎಡತಾಕುವ ಅಗತ್ಯವಿಲ್ಲ. ಅವ್ಯವಸ್ಥೆ, ಅಸ್ವಚ್ಛತೆಯ ಕುರಿತು ನಿಮ್ಮ ಮೊಬೈಲ್‌ನಲ್ಲೊಂದು ಫೋಟೊ ಕ್ಲಿಕ್ಕಿಸಿ, ಸ್ಥಳದ ಮಾಹಿತಿಯೊಂದಿಗೆ ಪುರಸಭೆಯ ಸಂಖ್ಯೆಗೆ ವಾಟ್ಸ್‌ಆ್ಯಪ್‌ ಮಾಡಿದರೆ, ಸಾಕು ಕೆಲವೇ ನಿಮಿಷಗಳಲ್ಲಿ ಆ ಪ್ರದೇಶ ಸ್ವಚ್ಛಗೊಳ್ಳುತ್ತಿದೆ. ಹೌದು. ಚಿಕ್ಕೋಡಿ ಪುರಸಭೆ ಮುಖ್ಯಾಧಿಕಾರಿ ಜಗದೀಶ ಹುಲಿಗೆಜ್ಜಿ ಇಂಥದೊಂದು ಹೊಸ ಪರಿಕಲ್ಪನೆಗೆ ಚಾಲನೆ ನೀಡಿದ್ದಾರೆ.

ಪುರಸಭೆ ಪರಿಸರ ಎಂಜಿನಿಯರ್ ಸೇರಿದಂತೆ ಮೂರು ಜನ ಅಧಿಕಾರಿಗಳನ್ನು ಒಳಗೊಂಡು ‘ಕ್ಲೀನ್ ಸಿಟಿ ಚಿಕ್ಕೋಡಿ’ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡಿದ್ದಾರೆ. ಆ ಗ್ರೂಪ್‌ಗೆ ಪಟ್ಟಣದ ನಿವಾಸಿಗಳು ಗಲೀಜು ಇರುವ ಪ್ರದೇಶ ಕುರಿತು ಮಾಹಿತಿ ನೀಡಿದರೇ, ಅಧಿಕಾರಿಗಳು ಪೌರನೌಕರರ ಮೂಲಕ ಅಂಥ ಪ್ರದೇಶಗಳನ್ನು ಸ್ವಚ್ಛ ಮಾಡಿಸಲಿದ್ದಾರೆ. ಮಾತ್ರವಲ್ಲ ಸ್ವಚ್ಛತೆ ಕೈಗೊಂಡಿರುವ ಕುರಿತು ದೂರುದಾರರಿಗೆ ವಾಟ್ಸ್‌ಆ್ಯಪ್‌ ಮೂಲಕವೇ ಮತ್ತೆ ಮಾಹಿತಿಯನ್ನೂ ನೀಡಲಿದ್ದಾರೆ.

ಪುರಸಭೆಯ ಈ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ. ‘ಪುರಸಭೆಯು ಜಾರಿಗೊಳಿಸಿರುವ ಕ್ಲೀನ್ ಸಿಟಿ ಚಿಕ್ಕೋಡಿ ಪರಿಕಲ್ಪನೆ ಚೆನ್ನಾಗಿದೆ. ಆದರೆ, ಕೇವಲ ಪುರಸಭೆಯಿಂದಲೇ ಪಟ್ಟಣದ ನೈರ್ಮಲೀಕರಣವನ್ನು ಅಪೇಕ್ಷಿಸಿದೇ ತಮ್ಮ ಸುತ್ತಲಿನ ಪರಿಸರದ ಸ್ವಚ್ಛತೆಗೆ ಸಾರ್ವಜನಿಕರೂ ಗಮನ ಹರಿಸಬೇಕು’ ಎನ್ನುತ್ತಾರೆ ಪಟ್ಟಣದ ನಿವಾಸಿ ಚಂದ್ರಕಾಂತ ಹುಕ್ಕೇರಿ.

ತ್ಯಾಜ್ಯ ಸಂಗ್ರಹಕ್ಕೆ ಒತ್ತು: ಮತ್ತೊಂದೆಡೆ, ಪಟ್ಟಣದ ಆಯಕಟ್ಟಿನ ಸ್ಥಳದಲ್ಲಿ ಸುಧಾರಿತ ತ್ಯಾಜ್ಯ ಸಂಗ್ರಹಣಾ ಘಟಕಗಳನ್ನೂ ಪುರಸಭೆ ಅಳವಡಿಸಿದೆ. ಅಲ್ಲಿಯೂ ಸಾರ್ವಜನಿಕರು ಮನೆಯ ತ್ಯಾಜ್ಯಗಳನ್ನು ಹಾಕಬಹುದು.

ಈ ಮೊದಲು ಪುರಸಭೆ ವ್ಯಾಪ್ತಿಯಲ್ಲಿ ಅಳವಡಿಸಿದ್ದ ತ್ಯಾಜ್ಯ ಸಂಗ್ರಹಿಸುವ ಬ್ಯಾರೆಲ್‌ಗಳನ್ನು ಬಿಡಾಡಿ ದನ–ಕರುಗಳು ಉರುಳಿಸುತ್ತಿದ್ದವು. ಅದರಿಂದ ಕಸ–ಚೆಲ್ಲಾಪಿಲ್ಲಿಯಾಗಿ ದುರ್ನಾತ ಹರಡುತ್ತಿತ್ತು. ಆದರೆ, ಇದೀಗ ಹೊಸ ಬಗೆಯ ಡಬ್ಬಿಗಳನ್ನು ಪಟ್ಟಣದ ಒಂಬತ್ತು ಆಯಕಟ್ಟಿನ ಸ್ಥಳಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಿದೆ.

‘ಚಿಕ್ಕೋಡಿ ಪಟ್ಟಣದ ಸ್ವಚ್ಛತೆಗಾಗಿ ‘ಕ್ಲೀನ್ ಸಿಟಿ ಚಿಕ್ಕೋಡಿ’ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಲಾಗಿದೆ. ಅದರ ಯಶಸ್ವಿಗಾಗಿ ಸಾರ್ವಜನಿಕರು ಸಹಕರಿಸಬೇಕು. ಅಲ್ಲದೇ, ಪಟ್ಟಣದಲ್ಲಿ ಪ್ರಾಯೋಗಿಕವಾಗಿ ಒಂಬತ್ತು ಕಡೆಗಳಲ್ಲಿ ಆಧುನಿಕ ತ್ಯಾಜ್ಯ ಸಂಗ್ರಹಣಾ ಡಬ್ಬಿ ಅಳವಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹಲವೆಡೆ ಇಂಥ ಡಬ್ಬಿಗಳನ್ನು ಅಳವಡಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಜಗದೀಶ ಹುಲಿಗೆಜ್ಜಿ ಹೇಳಿದ್ದಾರೆ.

* * 

ಜನರು ತಮ್ಮ ಪ್ರದೇಶಗಳ ಬಗ್ಗೆ ಅಸ್ವಚ್ಛತೆ ಬಗ್ಗೆ ವಾಟ್ಸ್‌ಆ್ಯಪ್‌ ಮೂಲಕ ಮಾಹಿತಿ ನೀಡಿದರೆ, ಸ್ವಚ್ಛತೆ ಕ್ರಮವಹಿಸಲಾಗುವುದು

ಜಗದೀಶ ಹುಲಿಗೆಜ್ಜಿ

ಮುಖ್ಯಾಧಿಕಾರಿ, ಚಿಕ್ಕೋಡಿ ಪುರಸಭೆ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.