ಗುರುವಾರ , ಫೆಬ್ರವರಿ 25, 2021
29 °C

ಸಾಹಿತ್ಯ ಜಾತ್ರೆಗೆ ಸಖರಾಯಪಟ್ಟಣ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಹಿತ್ಯ ಜಾತ್ರೆಗೆ ಸಖರಾಯಪಟ್ಟಣ ಸಜ್ಜು

ಕಡೂರು: ಇಂದಿನಿಂದ ಆರಂಭವಾಗಲಿರುವ ಜಿಲ್ಲಾ ಮಟ್ಟದ 14ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಸಖರಾಯಪಟ್ಟಣ ಕನ್ನಡತನದಿಂದ ಕಂಗೊಳಿಸುತ್ತಿದೆ. ಇಡೀ ಪಟ್ಟಣದಲ್ಲಿ ಕನ್ನಡಧ್ವಜ ರಾರಾಜಿಸುತ್ತಿದೆ. ಪ್ರಮುಖ ರಸ್ತೆಗಳಲ್ಲಿ ಫ್ಲೆಕ್ಸ್‌ಗಳನ್ನು ಕಟ್ಟಲಾಗಿದ್ದು. ಕಟ್ಟಡಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ.

ಸಮ್ಮೇಳನ ನಡೆಯಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ವಿಶಾಲವಾದ ಬಲ್ಲಾಳೇಶ್ವರ ಮಂಟಪ ಸಿದ್ಧವಾಗುತ್ತಿದೆ. 3 ಸಾವಿರ ಜನ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ವೇದಿಕೆಯ ಪಕ್ಕದಲ್ಲಿ ಅತಿಗಣ್ಯರ ಮತ್ತು ಪತ್ರಕರ್ತರ ಗ್ಯಾಲರಿ ಮಾಡಲಾಗಿದೆ. ಪ್ರಧಾನ ವೇದಿಕೆಗೆ ಮಹಾಕವಿ ಲಕ್ಷ್ಮೀಶನ ಹೆಸರಿಡಲಾಗಿದೆ. ವೇದಿಕೆ 30x40 ವಿಸ್ತೀರ್ಣವಿದ್ದು, ಮಂಟಪದ ಪಕ್ಕದಲ್ಲಿ 40ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. 30ಕ್ಕೂ ಹೆಚ್ಚು ಪುಸ್ತಕಗಳಿಗೆ ಮೀಸಲಾಗಿದೆ. ಕಾಲೇಜು ಆವರಣದ ಎಡಭಾಗದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಮಹಿಳೆಯರಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಗಣ್ಯರು ಮತ್ತು ವಿಶೇಷ ಅತಿಥಿಗಳಿಗೆ ಪ್ರತ್ಯೇಕವಾಗಿ ಸ್ಥಳ ನಿಗದಿಪಡಿಸಲಾಗಿದೆ.

ಪಟ್ಟಣದ ಕಲ್ಮರುಡಿಮಠದ ದ್ವಾರದಿಂದ ಜಾನ್‍ಸಾಲೆ ಎಸ್ಟೇಟ್‌ತನಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕನ್ನಡ ಧ್ವಜಗಳನ್ನು ಮತ್ತು ಕೆಂಪು ಹಳದಿ ತೋರಣಗಳನ್ನು ಕಟ್ಟಲಾಗಿದೆ. ಸಮ್ಮೇಳನದಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳು, ರಂಗಭೂಮಿ, ಜನಪದ ವೈಭವ, ವರ್ತಮಾನದ ತಲ್ಲಣಗಳು, ಸ್ತ್ರೀಸಂವೇದನೆ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಹಿರಿಯ ಸಾಹಿತಿ ಪ್ರೊ. ಪಿಳ್ಳೇನಹಳ್ಳಿ ಓಂಕಾರಪ್ಪ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ.

ಹಿರಿಯ ರಂಗನಟ ಮಾಸ್ಟರ್ ಹಿರಣ್ಣಯ್ಯನವರ ಪುತ್ರ ಬಾಬುಹಿರಣ್ಣಯ್ಯ, ನಟ ‘ಮುಖ್ಯಮಂತ್ರಿ ಚಂದ್ರು’, ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಬಿ.ಎಲ್. ಶಂಕರ್, ಶಾಸಕ ಸಿ.ಟಿ. ರವಿ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮುಂತಾದ ಗಣ್ಯರು ಎರಡು ದಿನಗಳ ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಎರಡೂ ದಿನಗಳ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಮ್ಮೇಳನದ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆಯನ್ನು ಸಖರಾಯಪಟ್ಟಣದ ಶಾಲಾ ಕಾಲೇಜು ಮತ್ತು ಹಾಸ್ಟೆಲ್‌ಗಳಲ್ಲಿ ಮಾಡಲಾಗಿದೆ. ಶಿಕ್ಷಕರಿಗೆ ಒಒಡಿ ನೀಡಲು ಪ್ರತ್ಯೇಕ ವ್ಯವಸ್ಥೆಯಾಗಿದೆ. ಅದರ ಜತೆಯಲ್ಲಿ ಸ್ಥಳದಲ್ಲಿ ಪ್ರತಿನಿಧಿ ಶುಲ್ಕ ನೀಡಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಐತಿಹಾಸಿಕ ಮಹತ್ವದ ಸಖರಾಯಪಟ್ಟಣದ ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರು ಇಲ್ಲಿರುವ ಶಕುನ ರಂಗನಾಥಸ್ವಾಮಿ ದೇವಾಲಯ, ಕಲ್ಮರಡಿಮಠ, ಅಯ್ಯನಕೆರೆ, ಶಕುನಗಿರಿಬೆಟ್ಟ, ಅವಧೂತ ಸದ್ಗುರು ವೆಂಕಟಾಚಲ ಗುರುಗಳ ವೇದಿಕೆ, ಮತ್ತು ಪಟ್ಟಣದ ಕೋಟೆಯ ಬತೇರಿಗಳನ್ನು ವೀಕ್ಷಿಸಬಹುದಾಗಿದೆ.

ಜಿಲ್ಲಾ ಕಸಾಪದ ಅಧ್ಯಕ್ಷರಾದ ಕುಂದುರು ಅಶೋಕ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ ಎನ್ ರವಿಪ್ರಕಾಶ್, ಹಣಕಾಸು ಸಮಿತಿಯ ಅಧ್ಯಕ್ಷರಾದ ಮಹಡಿಮನೆ ಸತೀಶ್, ಆಹಾರ ಸಮಿತಿಯ ಅಧ್ಯಕ್ಷರಾದ ಕಲ್ಮರುಡಪ್ಪ, ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿಜಯಕುಮಾರ್, ವೇದಿಕೆ ಸಮಿತಿಯ ಅಧ್ಯಕ್ಷರಾದ ಆನಂದನಾಯ್ಕ್, ಮೆರವಣಿಗೆ ಸಮಿತಿಯ ಅಧ್ಯಕ್ಷರಾದ ಯೋಗೀಂದ್ರ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಲೋಕೇಶ್, ನೋಂದಣಿ ಸಮಿತಿಯ ಅಧ್ಯಕ್ಷ ಜಗದೀಶ್, ಪುಸ್ತಕ ಸಮಿತಿಯ ರವಿ, ಸತ್ಕಾರ ಸಮಿತಿಯ ಮಂಜುನಾಥ್ 3 ದಿನಗಳಿಂದ ಸಮ್ಮೇಳನದ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗೆ ಭೂರಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ ಉಪ್ಪಿಟ್ಟು, ಕೇಸರಿಬಾತ್, ಚಟ್ನಿ ಮಧ್ಯಾಹ್ನದ ಊಟಕ್ಕೆ ಅನ್ನ, ಸಾಂಬರ್, ತಿಳಿಸಾರು, ಎರಡು ತರದ ತರಕಾರಿ ಪಲ್ಯ, ಗೋಧಿ ಪಾಯಸ, ಉಪ್ಪಿನಕಾಯಿ, ಹಪ್ಪಳ, ಮಜ್ಜಿಗೆ, ಸಂಜೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದ್ದು, ಇದರ ಜತೆಯಲ್ಲಿ ಸಖರಾಯಪಟ್ಟಣದ ಸುಪ್ರಸಿದ್ಧ ಖಾರದ ರುಚಿಯೂ ಸಾಹಿತ್ಯಾಸಕ್ತರಿಗೆ ದೊರೆಯಲಿದೆ.

ಶಾಸಕ ದತ್ತ ಸಿದ್ಧತೆಗಳ ಪರಿಶೀಲನೆ

ಪಾದಯಾತ್ರೆ ನಡೆಸುತ್ತಿರುವ ಕಡೂರು ಶಾಸಕ ವೈ.ಎಸ್.ವಿ. ದತ್ತ ಗುರುವಾರ ಸಮ್ಮೇಳನ ಮಂಟಪಕ್ಕೆ ಭೇಟಿ ನೀಡಿ, ‘ಸಾಹಿತ್ಯ ಮತ್ತು ಜೀವನ ಎರಡೂ ಒಂದಕ್ಕೊಂದು ಪೂರಕವಾಗಿದೆ. ಸಾಹಿತ್ಯ ಒಂದೇ ಅಲ್ಲದೇ ಸ್ಥಳೀಯ ಜ್ವಲಂತ ಸಮಸ್ಯೆಗಳನ್ನು ಚರ್ಚಿಸುವ ಮತ್ತು ಪರಿಹಾರ ಕಂಡುಕೊಳ್ಳುವ ವೇದಿಕೆಯಾಗಿಯೂ ಸಾಹಿತ್ಯ ಸಮ್ಮೇಳನಗಳು ಬಳಕೆಯಾಗುತ್ತಿರುವುದು ಗಮನಾರ್ಹ ಸಂಗತಿ.

ಸಮ್ಮೇಳನದ ಸಿದ್ಧತೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿರುವುದಕ್ಕೆ ವಿಷಾದವಿದೆ. ಆದರೆ, ಎರಡನೇ ದಿನ ಪೂರ್ತಿ ಸಾಹಿತ್ಯ ಜಾತ್ರೆಯಲ್ಲಿ ಸಕ್ರಿಯವಾಗಿರುತ್ತೇನೆ’ ಎಂದು ತಿಳಿಸಿದ ದತ್ತ ಅವರು ಸಾಹಿತ್ಯ ಸಮ್ಮೇಳನಕ್ಕೆ ಅಹರ್ಶಿನಿ ದುಡಿಯುತ್ತಿರುವ ಸಾಹಿತ್ಯ ಪರಿಷತ್ ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನು ಅಭಿನಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.